ಮೋಸದಾಟದ ವರದಿ ಸುಳ್ಳು: ಲಾರ್ಗಟ್
ಅಹಮದಾಬಾದ್: ‘ಆಸ್ಟ್ರೇಲಿಯ ಮತ್ತು ಜಿಂಬಾಬ್ವೆ ನಡುವೆ ಅಹಮದಾಬಾದ್ನಲ್ಲಿ ನಡೆದ ‘ಎ’ ಗುಂಪಿನ ಲೀಗ್ ಪಂದ್ಯದಲ್ಲಿ ಮೋಸದಾಟ (ಸ್ಪಾಟ್ ಫಿಕ್ಸಿಂಗ್) ನಡೆದಿತ್ತು’ ಎಂಬ ವರದಿ ಸಂಪೂರ್ಣ ಸುಳ್ಳು ಹಾಗೂ ಆಧಾರರಹಿತ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಮುಖ್ಯಾಧಿಕಾರಿ ಹರೂನ್ ಲಾರ್ಗಟ್ ಬುಧವಾರ ಹೇಳಿದರು.
ಇಲ್ಲಿಯ ಇಂಗ್ಲಿಷ್ ಪತ್ರಿಕೆಯೊಂದರಲ್ಲಿ ಮಂಗಳವಾರ ಪ್ರಕಟವಾಗಿರುವ ವರದಿಯಲ್ಲಿ, ದಾವೂದ್ ಇಬ್ರಾಹಿಂ ಕಂಪೆನಿಯ ಮೂವರು ಆಸ್ಟ್ರೇಲಿಯ ತಂಡ ಉಳಿದುಕೊಂಡಿದ್ದ ಹೋಟೆಲ್ನಲ್ಲಿ ಇದ್ದರು ಹಾಗೂ ಅವರು ಆಟಗಾರರೊಡನೆ ಸ್ಪಾಟ್ ಫಿಕ್ಸಿಂಗ್ ಬಗ್ಗೆ ಚರ್ಚಿಸಿದ್ದರು ಎಂದು ಬರೆಯಲಾಗಿತ್ತು.
‘ಈ ವಿಶ್ವ ಕಪ್ ಅಭೂತಪೂರ್ವ ಯಶಸ್ಸು ಸಾಧಿಸಿದೆ. ಕೋಟ್ಯಂತರ ಜನ ಪಂದ್ಯಗಳನ್ನು ಆನಂದಿಸಿದ್ದಾರೆ. ಜನರಿಗೆ ಹೆಚ್ಚು ಟಿಕೆಟ್ಗಳು ಸಿಕ್ಕಿಲ್ಲ ಎಂಬುದು ನಿಜ. ಕಾಳಸಂತೆಯಲ್ಲಿ ಟಿಕೆಟ್ಗಳು ಮಾರಾಟವಾಗದಂತೆ ಐಸಿಸಿ ಕ್ರಮ ತೆಗೆದುಕೊಂಡಿದೆ. ಉದ್ದೀಪನ ಮದ್ದು ಸೇವನೆ ಪರೀಕ್ಷೆ ನಡೆಸಲಾಗುತ್ತಿದ್ದು, ಇದುವರೆಗೆ ಯಾರೂ ಸಿಕ್ಕಿಬಿದ್ದಿಲ್ಲ’ ಎಂದು ಅವರು ಹೇಳಿದರು.
‘ಪಾಕಿಸ್ತಾನ ತಂಡ ಚಂಡೀಗಢದಲ್ಲಿ ಅಥವಾ ಮುಂಬೈನಲ್ಲಿ ಆಡಲು ಯಾವ ತೊಂದರೆಯೂ ಇಲ್ಲ. ಎಲ್ಲ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಜನರೂ ಹೆದರುವ ಕಾರಣ ಇಲ್ಲ’ ಎಂದೂ ಅವರು ತಿಳಿಸಿದರು.
‘ಸಚಿನ್ ತೆಂಡೂಲ್ಕರ್ ತಮ್ಮ ನೂರನೇ ಶತಕ ಗಳಿಸಿದ ಮೇಲೆ, ಅವರನ್ನು ಹೇಗೆ ಸತ್ಕರಿಸಬೇಕು ಎಂಬ ಬಗ್ಗೆ ನಿರ್ಧರಿಸಲಾಗುವುದು’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.