ಮೋಸದಾಟದ ಸರಪಳಿ

7

ಮೋಸದಾಟದ ಸರಪಳಿ

Published:
Updated:

ಮೋಸದಾಟವಿಲ್ಲದೇ ಕ್ರಿಕೆಟ್ ಇಲ್ಲ ಎಂಬಂಥ ಸ್ಥಿತಿ ನಿರ್ಮಾಣವಾಗಿದೆಯೇ? ಕ್ರಿಕೆಟ್ ಜೂಜಿನ ಪಾತ್ರಧಾರಿಗಳೆಲ್ಲ ರಂಗೋಲಿ ಕೆಳಗೆ ನುಸುಳುವಷ್ಟು ಚಾಣಾಕ್ಷರಾಗಿ, ಇಡೀ ಕ್ರಿಕೆಟ್ ವ್ಯವಸ್ಥೆಗೆ ಮಂಕುಬೂದಿ ಎರಚುತ್ತಿದ್ದಾರೆಯೇ?

 

ಶ್ರೀಲಂಕಾದಲ್ಲಿ ನಡೆದ ಟ್ವೆಂಟಿ-20 ವಿಶ್ವ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಜಯಭೇರಿ ಬಾರಿಸಿದ ವೆಸ್ಟ್‌ಇಂಡೀಸ್ ತಂಡದ ವಿಜಯೋತ್ಸವ ಮುಗಿಯುವ ಮೊದಲೇ ಮೋಸದಾಟದ ಸುದ್ದಿ ಸ್ಫೋಟಗೊಂಡದ್ದು ಅಂತರರಾಷ್ಟ್ರೀಯ ಕ್ರಿಕೆಟ್ ಇನ್ನೂ ಶುದ್ಧಗೊಂಡಿಲ್ಲ ಎಂಬುದಕ್ಕೆ ಉದಾಹರಣೆ.ಆದರೆ, ಈ ಹಣದಾಟದಲ್ಲಿ ಆಟಗಾರರ ಬದಲು ಅಂಪೈರುಗಳ ಹೆಸರು ಕೇಳಿಬಂದದ್ದು ಆಶ್ಚರ್ಯ. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಶ್ರೀಲಂಕಾದ ಆರು ಮಂದಿ ಅಂಪೈರುಗಳು ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿದ್ದ ಅಂಶವನ್ನು ಖಾಸಗಿ ವಾಹಿನಿಯೊಂದು ಮಾರುವೇಷದ ಕಾರ್ಯಾಚರಣೆ ನಡೆಸಿ ಪತ್ತೆ ಹಚ್ಚಿದೆ.ಭಾರತ-ಪಾಕಿಸ್ತಾನ ನಡುವಣ ಅಭ್ಯಾಸ ಪಂದ್ಯವೂ ಮೋಸದಾಟದ ಭಾಗವಾಗುತ್ತದೆಯೆಂದರೆ, ಅದು ಉಪಖಂಡದ ಕ್ರಿಕೆಟ್‌ನಲ್ಲಿ ಭ್ರಷ್ಟಾಚಾರ ಇನ್ನೂ ಹೆಚ್ಚುತ್ತಲೇ ಇರುವುದರ ಸೂಚನೆಯಾಗಿದೆ.ಕ್ರಿಕೆಟ್‌ನಲ್ಲಿಯ ಮೋಸದಾಟವನ್ನು ನಿಗ್ರಹಿಸಲು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರೂ ಕ್ರಿಕೆಟ್ ಜೂಜಿನ ಸೂತ್ರಧಾರರು, ಆಟಗಾರರು ಮತ್ತು ಈಗ ಅಂಪೈರುಗಳು ಹಣದಾಸೆಗೆ ಬಲಿಯಾಗುತ್ತಿದ್ದಾರೆ. ಪ್ರತಿಯೊಂದು ಪಂದ್ಯದ ಸಮಯದಲ್ಲಿ ಐಸಿಸಿಯ ಭ್ರಷ್ಟಾಚಾರ ನಿಗ್ರಹ ದಳ ಎಲ್ಲರ ಮೇಲೆ ಕಣ್ಣಿಟ್ಟಿರುತ್ತದೆ.ಇದರಿಂದ ಹೇಗೋ ಪಾರಾಗುವ ಆಟಗಾರರು ಮತ್ತು ಇತರರು ವಾಹಿನಿಯೊಂದರ ಮಾರುವೇಷದ ಕಾರ್ಯಾಚರಣೆಯಲ್ಲಿ ಸಿಕ್ಕಿಬೀಳುವುದು ಹಾಸ್ಯಾಸ್ಪದವೆನಿಸುತ್ತದೆ. ಐಸಿಸಿ ಈ ನಿಟ್ಟಿನಲ್ಲಿ ವಿಫಲವಾಗಿದೆಯೆಂದೇ ಹೇಳಬಹುದು. ಮೋಸದಾಟದಲ್ಲಿ ಹಲವು ಆಟಗಾರರಿಗೆ ಶಿಕ್ಷೆ ವಿಧಿಸಲಾಗಿದೆಯಾದರೂ ಮೂಲದಲ್ಲೇ ಅದನ್ನು ಚಿವುಟಿ ಹಾಕಲು ಐಸಿಸಿಗೆ ಸಾಧ್ಯವಾಗಿಲ್ಲ.

 

ಐಸಿಸಿಯ ಆರ್ಥಿಕ ಶಕ್ತಿ ಭಾರತವನ್ನೇ ಅವಲಂಬಿಸಿರುವುದರಿಂದ, ಇಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಐಸಿಸಿಗೆ ಧೈರ್ಯ ಇಲ್ಲ ಎಂದೇ ಹೇಳಬಹುದು. ಖಾಸಗಿ ವಾಹಿನಿಯಿಂದ ಅಂಪೈರುಗಳ ಮೋಸದಾಟದ ವಿವರಗಳನ್ನು ಕೇಳಿರುವ ಐಸಿಸಿ ಪ್ರಕರಣದ ತನಿಖೆ ನಡೆಸುವುದಾಗಿ ಹೇಳಿದೆ. ಇಂಥ ತನಿಖೆಗಳು ಹಿಂದೆಯೂ ನಡೆದಿವೆ.ಆದರೆ ಎಲ್ಲರೂ ಕಂಡರೂ ಕಾಣದಂತೆ ನಟಿಸುತ್ತಿದ್ದಾರೆ ಎಂಬ ಅನುಮಾನ ಮೂಡುತ್ತದೆ. ಆಟಗಾರರೇ ಆಗಲಿ ಅಂಪೈರುಗಳೇ ಆಗಲಿ ಮೋಸದಾಟದಲ್ಲಿ ಭಾಗಿಯಾದಾಗ, ಅವರ ಜೊತೆ ಅವರು ಪ್ರತಿನಿಧಿಸುವ ಮಂಡಳಿಗಳಿಗೂ ಶಿಕ್ಷೆ ವಿಧಿಸಿದರೆ ಎಲ್ಲರೂ ಎಚ್ಚೆತ್ತುಕೊಳ್ಳಬಹುದು. ಮೋಸದಾಟದ ಸರಪಳಿ ಬಹಳ ಉದ್ದವಾಗಿದೆ.

 

ಕ್ರೀಡೆಯಲ್ಲಿ ಜೂಜಾಟ ಸಾಮಾನ್ಯವೇ ಆದರೂ, ಕ್ರಿಕೆಟ್‌ನಲ್ಲಿ ಅದರಲ್ಲೂ ಉಪಖಂಡದ ಕ್ರಿಕೆಟ್‌ನಲ್ಲಿ ಇದರ ಪ್ರಮಾಣ ಊಹೆಗೂ ನಿಲುಕದಷ್ಟು ಹೆಚ್ಚಾಗಿದೆ. ಇದರಲ್ಲಿ ಕೋಟಿಗಳಿಗೆ ಲೆಕ್ಕವಿಲ್ಲ. ಇದರಿಂದಾಗಿಯೇ ಅಕ್ರಮಗಳೂ ಹೆಚ್ಚಾಗಿ, ಆಟಗಾರರು ಮತ್ತು ಅಂಪೈರುಗಳು ಆಮಿಷಗಳಿಗೆ ಬಲಿಯಾಗುತ್ತಿದ್ದಾರೆ.ಹಣ ಮಾಡಲು ಇದಕ್ಕಿಂತ ಸುಲಭದ ದಾರಿ ಮತ್ತೊಂದಿಲ್ಲ. ಟ್ವೆಂಟಿ-20 ಎಂಬ ಚುಟುಕು ಕ್ರಿಕೆಟ್ ಆಟದ ಮೂಲ ಕೌಶಲಕ್ಕೇ ಪೆಟ್ಟುಕೊಟ್ಟಿದ್ದರೂ ಮನರಂಜನೆಯ ನಿಟ್ಟಿನಲ್ಲಿ ಅತ್ಯಂತ ಜನಪ್ರಿಯವಾಗಿದೆ. ಈ ಕ್ರಿಕೆಟ್ ಹುಚ್ಚಿನಲ್ಲಿ ಜನರೇ ಮೋಸಹೋಗಿರುವಾಗ ಅದರ ಲಾಭ ಪಡೆಯುವವರ ಸಂಖ್ಯೆ ಹೆಚ್ಚುತ್ತಲೇ ಇರುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry