ಮಂಗಳವಾರ, ನವೆಂಬರ್ 12, 2019
19 °C

`ಮೋಹಕ ಕ್ರಿಕೆಟ್' ಎಂಬ ಪ್ರೇಮಪಾಶದಲ್ಲಿ...

Published:
Updated:

ನೀವು ಎಲ್ಲಿಯಾದರೂ ಹೋಗಿ ಕೊಂಚ ಹೊತ್ತು ನಿಂತುಕೊಳ್ಳಿ, ಅಲ್ಲಿ ಐಪಿಎಲ್‌ನದ್ದೇ ಮಾತುಕತೆ. ಬೆಳಿಗ್ಗೆ ತಿಂಡಿ ತಿನ್ನಲು ದರ್ಶಿನಿಗೆ ಹೋದರೆ `ರಾಯಲ್ ಚಾಲೆಂಜರ್ಸ್ ಬೆಂಗಳೂರು ಇವತ್ತು ಗೆಲ್ಲಬಹುದು, ಇಲ್ಲ ಇಲ್ಲ ಮುಂಬೈ ಇಂಡಿಯನ್ಸ್ ತುಂಬಾ ಬಲಿಷ್ಠ' ಎಂಬ ಚರ್ಚೆ. ಸೆಲೂನ್‌ಗೆ ಹೋದರೆ ಅಲ್ಲೂ ಐಪಿಎಲ್ ರಂಗು, ಬಸ್ಸಿನಲ್ಲೂ ಚುಟುಕು ಕ್ರಿಕೆಟ್‌ನದ್ದೇ ಕಾರುಬಾರು. ಅಷ್ಟೇ ಏಕೆ, ಬಾರಿನಲ್ಲೂ. ಸಂಜೆಯಾಗುತ್ತಿದ್ದಂತೆ ಅಲ್ಲಿನ ಟಿವಿಗಳಲ್ಲಿ ಐಪಿಎಲ್‌ನದ್ದೇ ಚಿತ್ರಣ.



ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯಗಳನ್ನೇ ಉದಾಹರಣೆಗೆ ತೆಗೆದುಕೊಳ್ಳಿ. ಪ್ರತಿ ಪಂದ್ಯದ ವೇಳೆ ಕ್ರೀಡಾಂಗಣ ಭರ್ತಿಯಾಗುತ್ತಿದೆ. ಟಿಕೆಟ್‌ಗಳಿಗಂತೂ ಭಾರಿ ಬೇಡಿಕೆ.



ಇದಕ್ಕೆಲ್ಲಾ ಟ್ವೆಂಟಿ-20 ಕ್ರಿಕೆಟ್ ಸೃಷ್ಟಿಸಿರುವ ಕ್ರೇಜ್ ಕಾರಣ. ಕೇವಲ ಮೂರೂವರೆ ಗಂಟೆಯಲ್ಲಿ ಭರ್ತಿ ಮನರಂಜನೆ. ಒಂದು ಹಿಂದಿ ಸಿನಿಮಾ ನೋಡಿದಷ್ಟು ಸಮಯ ಅಷ್ಟೇ...!



ಕ್ರೀಡಾಂಗಣದೊಳಿಗೆ ಬರೀ ಕ್ರಿಕೆಟ್ ಮಾತ್ರವಲ್ಲ; ಮನರಂಜನೆಯ ಮಹಾಪೂರವೇ ಲಭಿಸುತ್ತಿದೆ. ತುಂಡುಡುಗೆಯ ಚಿಯರ್ ಬೆಡಗಿಯರ ಉಪಸ್ಥಿತಿ ಕ್ರೀಡಾಂಗಣದಲ್ಲಿ ಮಿಂಚಿನ ಸಂಚಾರ ಸೃಷ್ಟಿಸಿದೆ. ಇವರಿಂದಾಗಿ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಮನರಂಜನೆ. ಆಟಗಾರರಿಗೆ ಸ್ಫೂರ್ತಿ. ಅಬ್ಬರದ ಸಂಗೀತ, ಬಣ್ಣ ಬಣ್ಣದ ಬೆಳಕಿನ ಚಿತ್ತಾರ, ಸಿನಿಮಾ ತಾರೆಯರ ದರ್ಶನ, ಕ್ರಿಸ್ ಗೇಲ್ ಸಿಕ್ಸರ್, ಭಾರತ ಕ್ರಿಕೆಟ್‌ನ ಭವಿಷ್ಯದ ನಾಯಕ ಕೊಹ್ಲಿ ಅವರ ಆಟದ ನೋಟ ಕಣ್ತುಂಬಿಕೊಳ್ಳುವ ಅವಕಾಶ. ಹಾಗಾಗಿ ಈ ಕ್ರಿಕೆಟ್‌ಗೆ ಹೆಚ್ಚು ಬೇಡಿಕೆ.



ಯಾವುದೇ ಕ್ರೀಡೆ ನಡೆಯುತ್ತಿರಲಿ ಅದನ್ನು ವೀಕ್ಷಿಸುವ ಮಹಿಳೆಯರ ಸಂಖ್ಯೆ ಕಡಿಮೆ. ಇದು ವಾಸ್ತವ. ಆದರೆ ಐಪಿಎಲ್ ಆ ದೃಷ್ಟಿಕೋನ ಬದಲಾಯಿಸಿದೆ. ಮಹಿಳೆಯರೂ ಭಾರಿ ಸಂಖ್ಯೆಯಲ್ಲಿ ಈ ಚುಟುಕು ಕ್ರಿಕೆಟ್ ವೀಕ್ಷಿಸಲು ಕ್ರೀಡಾಂಗಣಕ್ಕೆ ಲಗ್ಗೆ ಇಡುತ್ತಿದ್ದಾರೆ. ತಮ್ಮ ಜೊತೆಗೆ ಮಕ್ಕಳನ್ನೂ ಕರೆತರುತ್ತಿದ್ದಾರೆ. ಅಂತಹ ವಾತಾವರಣ ಸೃಷ್ಟಿಸಿರುವ ಬಿಸಿಸಿಐ ಜಾಣ್ಮೆ ಮೆಚ್ಚುವಂಥದ್ದೆ. ಯುವ ಜನಾಂಗಕ್ಕೆ ಇದೇ ರೀತಿಯ ಕ್ರಿಕೆಟ್ ಇಷ್ಟವಾಗುತ್ತಿದೆ. ಶ್ರೀಮಂತರ ಮನೆಯ ಹುಡುಗ, ಹುಡುಗಿಯರಿಗೆ ಖುಷಿಯಿಂದ ಕಾಲ ಕಳೆಯಲು ಇದೊಂದು ಸುಂದರ ಅವಕಾಶ ಎನಿಸಿಬಿಟ್ಟಿದೆ.



ಕಾಳಸಂತೆಯಲ್ಲಿ ಸಾವಿರಾರು ರೂಪಾಯಿ ನೀಡಿ ಟಿಕೆಟ್ ಖರೀದಿಸಿ ಒಳಬರುತ್ತಿದ್ದಾರೆ. ಆದರೆ ಅವರು ನೀಡುವ ಹಣಕ್ಕೆ ಕೊಂಚವೂ ನಷ್ಟವಾಗುತ್ತಿಲ್ಲ. ಪಂದ್ಯಗಳು ಅಷ್ಟೊಂದು ರೋಚಕತೆಗೆ ಕಾರಣವಾಗುತ್ತಿವೆ. ಖರೀದಿಸಿದ ಟಿಕೆಟ್‌ಗೆ ತಕ್ಕ ಮನರಂಜನೆ ಲಭಿಸುತ್ತಿದೆ. ಅದರಲ್ಲೂ ರಾಯಲ್ ಚಾಲೆಂಜರ್ಸ್ ಹಾಗೂ ಡೆಲ್ಲಿ ಡೇರ್‌ಡೆವಿಲ್ಸ್ ನಡುವಿನ ಪಂದ್ಯ ಸೃಷ್ಟಿಸಿದ್ದ ಆ ರೋಚಕ, ರೋಮಾಂಚಕ ಕ್ಷಣ ಅಭಿಮಾನಿಗಳನ್ನು ಈ ಚುಟುಕು ಕ್ರಿಕೆಟ್ ತನ್ನ ಮೋಹಪಾಶದಲ್ಲಿ ಸಿಲುಕಿಸಿದೆ.



ಉಳಿದ ಸ್ಥಳಗಳಿಗೆ ಹೋಲಿಸಿದರೆ ಬೆಂಗಳೂರಿನ ಪಂದ್ಯಗಳಿಗೆ ಹೆಚ್ಚು ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇಲ್ಲಿ ನಡೆಯುತ್ತಿರುವ ಪಂದ್ಯ ವೀಕ್ಷಿಸಲು ಹೆಚ್ಚು ಪ್ರೇಕ್ಷಕರು ಬರುತ್ತಿದ್ದಾರೆ. ಪಂದ್ಯಕ್ಕೆ ಟಿಕೆಟ್ ಸಿಗದವರು ನಿರಾಶರಾಗುತ್ತಿಲ್ಲ. ದೊಡ್ಡ ದೊಡ್ಡ ಬಾರುಗಳು, ಪಬ್‌ಗಳಲ್ಲಿ ಬೃಹತ್ ಪರದೆ ಮೇಲೆ ಪಂದ್ಯ ನೋಡಿ ಖುಷಿ ಪಡುತ್ತಿದ್ದಾರೆ.



ಐಪಿಎಲ್ ಯಶಸ್ಸು ಈಗ ನಿಂತಿರುವುದು ಪ್ರೇಕ್ಷಕರಿಂದ. ಅಕಸ್ಮಾತ್ ಜನರು ಈ ಕ್ರಿಕೆಟ್ ಬಗ್ಗೆ ಒಲವು ತೋರದಿದ್ದರೆ ಐಪಿಎಲ್ ಮಾರುಕಟ್ಟೆ ಕುಸಿದು ಬೀಳುತ್ತದೆ ಎಂಬುವುದೂ ಸತ್ಯ. ಜನರು ಬಂದರೆ ಜಾಹೀರಾತುದಾರರು ಒಲವು ತೋರಿಸುತ್ತಾರೆ. ಬಿಸಿಸಿಐ ಅಂದುಕೊಂಡಂತೆ ಈಗ ಎಲ್ಲವೂ ನಡೆಯುತ್ತಿದೆ. ಈ ಟೂರ್ನಿಯನ್ನು ಪ್ರಸಾರ ಮಾಡುವ ಚಾನೆಲ್‌ನ ಟಿಆರ್‌ಪಿಯೂ ಏರುತ್ತಿದೆ. ಬಿಸಿಸಿಐಗೆ ಭರ್ಜರಿ ಲಾಭವೂ ಸಿಗುತ್ತಿದೆ.



2010ರಲ್ಲಿ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಯೇ ಉಗ್ರರು ಬಾಂಬ್ ಸ್ಫೋಟಿಸಿದ್ದರು. ಹೋದ ವಾರ ಉದ್ಯಾನ ನಗರಿಯಲ್ಲಿ ಮತ್ತೆ ಬಾಂಬ್ ಸ್ಫೋಟಗೊಂಡಿದೆ. ಆದರೆ ಉಗ್ರರ ಈ ಕೃತ್ಯ ಕ್ರಿಕೆಟ್ ಪ್ರೀತಿಗೆ ಯಾವುದೇ ಧಕ್ಕೆ ತರದು. ಅದು ಪ್ರೇಕ್ಷಕರ ಮೇಲೆ ಯಾವುದೇ ಪ್ರಭಾವ ಬೀರಲಿಲ್ಲ. ಪಂದ್ಯ ವೀಕ್ಷಿಸಲು ಆಗಮಿಸುವ ಪ್ರೇಕ್ಷಕರ  ಸಂಖ್ಯೆ ಮತ್ತಷ್ಟು ಹೆಚ್ಚಾಯಿತೇ ಹೊರತು ಕಡಿಮೆಯಾಗಿಲ್ಲ.



ಐಪಿಎಲ್ ಪಂದ್ಯಗಳಿಂದಾಗಿ ಕೆಲ ಧಾರಾವಾಹಿಗಳ ಟಿಆರ್‌ಪಿ ಕೂಡ ಕಡಿಮೆಯಾಗುತ್ತಿದೆ ಎಂಬ ಮಾತಿದೆ. ಜೊತೆಗೆ ದೊಡ್ಡ ಬಜೆಟ್‌ನ ಬಾಲಿವುಡ್ ಸಿನಿಮಾಗಳನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ಹಿಂದೇಟು ಹಾಕುತ್ತಿದ್ದಾರೆ. ಕ್ರಿಕೆಟ್ ನೋಡಲು ಇಷ್ಟಪಡದವರೂ ಈಗ ಐಪಿಎಲ್ ಮೋಹಬಂಧನಕ್ಕೆ ಸಿಲುಕಿದ್ದಾರೆ.



ಇದಷ್ಟೇ ಅಲ್ಲ; ಈ ಚುಟುಕು ಕ್ರಿಕೆಟ್ ಅದೆಷ್ಟೊ ಮಂದಿಯ ದುಡಿಮೆಗೆ ಸುಗ್ಗಿ ಕಾಲ ಕೂಡ. ಎಲ್ಲೆಲ್ಲಿಂದಲೋ ಬಂದು ಕ್ರಿಕೆಟ್ ಪ್ರೇಮಿಗಳ ಕೆನ್ನೆ, ಹಣೆಯ ಮೇಲೆ ಚಿತ್ರ ಬಿಡಿಸಿ, ಧ್ವಜ ಮಾರಿ ಜೀವನ ಸಾಗಿಸುವವರೂ ಇದ್ದಾರೆ. ಹಾಗೇ, ಕ್ರೀಡಾಂಗಣದ ಕೊಂಚ ದೂರದಲ್ಲಿ ಪ್ರೇಕ್ಷಕರು ನಿಲ್ಲಿಸುವ ಬೈಕ್, ಕಾರುಗಳನ್ನು ಕಾದು ಹಣ ಮಾಡಿಕೊಳ್ಳುತ್ತಿದ್ದಾರೆ.



ಸಾಮಾನ್ಯವಾಗಿ ರಾತ್ರಿ ಹನ್ನೊಂದೂವರೆಗೆ ಬೆಂಗಳೂರು ಮಲಗುತಿತ್ತು. ಆದರೆ ಐಪಿಎಲ್‌ನಿಂದಾಗಿ ಮಧ್ಯರಾತ್ರಿ ಹನ್ನೆರಡೂವರೆ ವರೆಗೆ ಕ್ರೀಡಾಂಗಣದ ಸುತ್ತಮುತ್ತಲಿನ ಪ್ರದೇಶ ಝಗಮಗಿಸುತ್ತಿರುತ್ತದೆ. ಮೊದಲೇ ಟ್ರಾಫಿಕ್‌ನಿಂದ ಕಿರಿ ಕಿರಿಯಾಗಿರುವ ನಗರಿಯಲ್ಲಿ ಪಂದ್ಯಗಳ ವೇಳೆ ಹೇಳತೀರದು.



`ಟೆಸ್ಟ್ ಕ್ರಿಕೆಟ್ ಸ್ಕಾಚ್ ಇದ್ದಂತೆ, ಏಕದಿನ ಕ್ರಿಕೆಟ್ ವಿಸ್ಕಿ ರೀತಿ, ಆದರೆ ಟ್ವೆಂಟಿ-20 ಸಾರಾಯಿ ಹಾಗೆ' ಎಂದು ರಾಹುಲ್ ದ್ರಾವಿಡ್ ಒಮ್ಮೆ ಹೇಳಿದ ಮಾತು ಸತ್ಯ. ಈ ಚುಟುಕು ಕ್ರಿಕೆಟ್‌ಗೆ ದ್ರಾವಿಡ್ ಕೊಟ್ಟ ಇನ್ನೊಂದು ಹೆಸರು ಬಿಕಿನಿ ಕ್ರಿಕೆಟ್!



ಈ `ಮೋಹಕ ಕ್ರಿಕೆಟ್' ಎಂಬ ಪ್ರೀತಿಗೆ ಬೀಳದಿದ್ದರೆ ಹೇಗೆ?

 

ಪ್ರತಿಕ್ರಿಯಿಸಿ (+)