ಮೋಹಕ ಮೊನಾಕೊ

7

ಮೋಹಕ ಮೊನಾಕೊ

Published:
Updated:
ಮೋಹಕ ಮೊನಾಕೊ

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತಿಗೆ ಮೊನಾಕೊ ಅತ್ಯುತ್ತಮ ಉದಾಹರಣೆ.

ಇಟಲಿ, ಫ್ರಾನ್ಸ್ ಮಧ್ಯೆ ಮೆಡಿಟರೇನಿಯನ್ ಸಾಗರಕ್ಕೆ ಹೊಂದಿಕೊಂಡ ಇದು ವ್ಯಾಟಿಕನ್ ನಂತರ ವಿಶ್ವದಲ್ಲಿಯೇ ಎರಡನೇ ಅತಿ ಪುಟ್ಟ ದೇಶ. ಒಟ್ಟೂ ವಿಸ್ತೀರ್ಣ 1.98 ಚದರ ಕಿಮಿ. ಅಂದರೆ ನಮ್ಮ ಗಾಂಧಿನಗರಕ್ಕಿಂತ ಸಣ್ಣದು. ಜನಸಂಖ್ಯೆ 35 ಸಾವಿರ. ಆದರೆ ತಲಾ ಆದಾಯ ಜಗತ್ತಿನಲ್ಲೇ ಅತ್ಯಧಿಕ (75 ಲಕ್ಷ ರೂಗೂ ಹೆಚ್ಚು).

ವಿಶೇಷ ಎಂದರೆ ಸುಮಾರು 4.5 ಕಿಮಿ ಸಮುದ್ರ ತೀರ ಹೊಂದಿರುವ ಈ ದೇಶ ಪ್ರವಾಸಿಗಳ ಸ್ವರ್ಗ. ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗಳನ್ನು ಆಕರ್ಷಿಸುತ್ತದೆ. ಅದರ ಒಟ್ಟೂ ರಾಷ್ಟ್ರೀಯ ಆದಾಯದ ಶೇ 37 ಪ್ರವಾಸೋದ್ಯಮದ ಗಳಿಕೆ,

ಇಂಥ ಸಣ್ಣ ದೇಶ ಪ್ರವಾಸಿಗಳನ್ನು ಆಕರ್ಷಿಸಲು ಬೆಂಗಳೂರಲ್ಲೂ ರೋಡ್ ಶೊ ನಡೆಸಿತು. ಅದರ ಪ್ರಚಾರಕ್ಕೆಂದೇ ಬಂದಿದ್ದರು ಮೊನಾಕೊ ಸರ್ಕಾರದ ಪ್ರವಾಸೋದ್ಯಮ ಪ್ರಾಧಿಕಾರದ ಅಧ್ಯಕ್ಷ ಗಿಲೌಮೆ ರೋಸ್. ಈ ಸಂದರ್ಭದಲ್ಲಿ ಮೆಟ್ರೊ ಜತೆ ಮಾತನಾಡಿದರು.

ರೋಡ್ ಶೊ ಉದ್ದೇಶ?

ನಮ್ಮ ದೇಶದಲ್ಲಿನ ಪ್ರವಾಸಿ ಸ್ಥಳಗಳು, ಸುಂದರ ತಾಣಗಳನ್ನು ಬೆಂಗಳೂರಿಗರಿಗೂ ಪರಿಚಯಿಸುವುದು. ಏಕೆಂದರೆ ಇಲ್ಲಿ ಮತ್ತು ವಿಶೇಷವಾಗಿ ಭಾರತದಲ್ಲಿ ಮೇಲ್ಮಧ್ಯಮ ವರ್ಗದ ಸಂಖ್ಯೆ ಅಧಿಕ. ಇವರೆಲ್ಲ ಪ್ರವಾಸಪ್ರಿಯರು, ಖರ್ಚು ಮಾಡುವ ಶಕ್ತಿ ಉಳ್ಳವರು.

ಪ್ರವಾಸಿಗಳಿಗೆ ಅಲ್ಲಿ ಏನು ಆಕರ್ಷಣೆ ಇದೆ?

ವಿಶ್ವವಿಖ್ಯಾತ ಮಾಂಟೆಕಾರ್ಲೊ ಕಸೀನೊದಲ್ಲಿ ಮೋಜು ಮಾಡಬಹುದು. ಗ್ರಾನ್ ಫ್ರೀ ಮೋಟಾರ್ ರೇಸ್, ಅನೇಕ ಕ್ರೀಡೆಗಳಿಗೆ ನಮ್ಮದು ಹೆಸರುವಾಸಿ. ಅದನ್ನೆಲ್ಲ ನೋಡಬಹುದು. ಇಡೀ ದೇಶವನ್ನು ಕಾಲ್ನಡಿಗೆಯಲ್ಲೇ ಸುತ್ತಬಹುದು. ಮೊನಾಕೊವನ್ನು ಕೇಂದ್ರವಾಗಿ ಇಟ್ಟುಕೊಂಡು ಫ್ರಾನ್ಸ್, ಇಟಲಿ, ಸ್ವಿಜರ್ಲೆಂಡ್‌ಗೆ ಹೋಗಿ ಬರಬಹುದು. ನಮ್ಮದು ಕಡಿಮೆ ಖರ್ಚಿನ ಸುಂದರ ಪ್ರವಾಸಿ ತಾಣ.

ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಪೊಲೀಸರು ಅತ್ಯಂತ ಸ್ನೇಹಪರರು. ನಿಮ್ಮ ಸಹಾಯಕ್ಕೆ ಸದಾ ಸಿದ್ಧರಾಗಿರುತ್ತಾರೆ. ಯಾವುದೇ ಗಲಾಟೆ, ಗದ್ದಲವಿಲ್ಲದ ಅತ್ಯಂತ ಸುರಕ್ಷಿತ ದೇಶ ನಮ್ಮದು, ಹವಾಗುಣ ಕೂಡ ವರ್ಷದ ಬಹು ಭಾಗ ಬೆಂಗಳೂರಿನ ಥರವೇ ಇರುತ್ತದೆ,

ಭಾಷೆ, ಊಟೋಪಚಾರ...

ಭಾರತೀಯರಿಗೆ ನಮ್ಮಲ್ಲಿ ಏನೂ ತೊಂದರೆ ಇಲ್ಲ. ಏಕೆಂದರೆ ಇಂಗ್ಲಿಷ್‌ನಲ್ಲಿ ಸುಲಭವಾಗಿ ವ್ಯವಹರಿಸಬಹುದು. ಎರಡು ಭಾರತೀಯ ರೆಸ್ಟೊರೆಂಟ್‌ಗಳು, ಚೀನಾ, ಥಾಯ್ ರೆಸ್ಟೊರೆಂಟ್‌ಗಳಿವೆ.

ತಂಗಲು ವಿವಿಧ ಶ್ರೇಣಿಯ ಹೋಟೆಲ್‌ಗಳಿವೆ. 2500ಕ್ಕೂ ಹೆಚ್ಚು ಕೊಠಡಿಗಳು ಲಭ್ಯ. ದರ ಕೂಡ ದುಬಾರಿಯೇನಲ್ಲ. ಐರೋಪ್ಯ ವೀಸಾದಲ್ಲಿಯೇ ನಮ್ಮಲ್ಲಿಗೂ ಬರಬಹುದು. ಈ ವರ್ಷದ ಆರಂಭದಲ್ಲಿ ಭಾರತದ ಕುಟುಂಬವೊಂದು ನಮ್ಮಲ್ಲಿ ಬಂದು ಅದ್ದೂರಿ ಮದುವೆ ಮಾಡಿತ್ತು. ಅಂಥಹ ಇನ್ನಷ್ಟು ಅವಕಾಶಕ್ಕೆ ಎದುರು ನೋಡುತ್ತಿದ್ದೇವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry