ಮೋಹನಜ್ಜನಮೋಹಕ ಸೈಕಲ್ ಶಾಪ್

7

ಮೋಹನಜ್ಜನಮೋಹಕ ಸೈಕಲ್ ಶಾಪ್

Published:
Updated:
ಮೋಹನಜ್ಜನಮೋಹಕ ಸೈಕಲ್ ಶಾಪ್

ಈಗೀಗ ಸೈಕಲ್‌ಪೆಡಲ್ ತುಳಿಯುವವರು ಕಮ್ಮಿಯಾಗಿದ್ದಾರೆ. ಇನ್ನು ಸೈಕಲ್ ಶಾಪ್‌ಗಳಂತೂ ಕಣ್ಣಿಗೆ ಕಂಡರೂ ಅಲ್ಲಿ ಯಾವುದೋ ನಿಶ್ಯಬ್ದ ಮೌನ ಆವರಿಸಿಕೊಂಡಿರುತ್ತದೆ. ಮೈಗೆಲ್ಲಾ ಗ್ರೀಸ್ ಹರಡಿಕೊಂಡು ರಿಮ್ಮು, ಟಯರ‌್ರುಗಳ ಮಧ್ಯೆ ಹೂತುಹೋಗಿ ತಮ್ಮದೇ ರಿಪೇರಿ ಜಗತ್ತಲ್ಲಿ ಲೀನರಾಗುತ್ತಿದ್ದ ಸೈಕಲ್ ರಿಪೇರಿ ಮಾಡುವವರು, ಈಗ ಅಷ್ಟಾಗಿ ಕಣ್ಣಿಗೆ ಕಾಣಿಸುವುದಿಲ್ಲ. ನಗರದ ಕೆಲವು ಸೈಕಲ್ ಅಂಗಡಿಗಳಂತೂ ಯಾವುದೋ ಹಳೆ ವಸ್ತುಸಂಗ್ರಹಾಲಯದಂತೆಯೋ? ಅಟ್ಟಗಳಂತೆಯೋ ಕಾಣಿಸುತ್ತದೆ.

ಕಾಲ ಬದಲಾದರೂ ಕಾಯಕ ಬಿಡೆನು. ವಯಸ್ಸಾದರೂ ಸೈಕಲ್ಲು ಪೆಡಲುಗಳ ಸಾಂಗತ್ಯ ಬಿಡೆನು.. ಎನ್ನುವ ತತ್ವವನ್ನೇ ಹೊತ್ತುಕೊಂಡು ಏನೇ ಆದರೂ ವೃತ್ತಿಯನ್ನು ಬಿಡಲೊಲ್ಲದ ವ್ಯಾಪಾರಿಗಳು ಕೆಲವರಾದರೂ ಇದ್ದಾರು. ಹೀಗೆ ಸೈಕಲ್ ರಿಪೇರಿಯನ್ನೂ ಇಗಲೂ ಮುಂದುವರಿಸುತ್ತಾ, ವಯಸ್ಸಾದರೂ ಲವಲವಿಕೆಯಿಂದಲೇ ಬದುಕುತ್ತಾ, ಬಂದಿರುವ ಮೋಹನದಾಸ್ ಶೆಟ್ಟಿಗಾರ್ ಕಾರ್ಕಳದ ಅತ್ಯಂತ ಹಳೆವ್ಯಾಪಾರಿಗಳಲ್ಲೊಬ್ಬರು. ಇಲ್ಲಿನ ಕೋರ್ಟ್ ರೋಡಿನಲ್ಲಿ 60 ವರ್ಷಗಳಿಂದ ಸೈಕಲ್ ದುರಸ್ತಿ ಹಾಗೂ ಬಿಡಿಭಾಗಗಳ ವ್ಯಾಪಾರ ಮಾಡುತ್ತಿರುವ ಇವರಿಗೀಗ ಮುಪ್ಪು ಆವರಿಸಿದೆ. ಆದರೂ ಸೈಕಲ್ ಕಾಯಕವನ್ನು ಮಾತ್ರ ಬಿಡಲೊಲ್ಲರು.ಮೋಹನದಾಸ್ ಅವರ ಅಂಗಡಿಗೂ ಅವರಂತೆಯೇ ವಯಸ್ಸಾಗಿದೆ. ಸೈಕಲ್ ಚಕ್ರಗಳಂತೆಯೇ ಗಿರಕಿ ಹೊಡೆಯೋ ಅನುಭವದ ಪೆಡಲನ್ನು ತುಳಿಯುತ್ತಾ ಸಾಗುತ್ತಿರುವ ಮೋಹನದಾಸರ ಮೋಹಕ ಯಾತ್ರೆ ಮಾತ್ರ ನಿರಂತರವಾಗಿ ಸಾಗುತ್ತಲೇ ಇದೆ. ಸೈಕಲ್ಲಿನ ಅನಾರೋಗ್ಯವನ್ನು ತಮ್ಮ ಕೈಚಳಕದ ಮಾತ್ರೆ ಬಳಸಿ ರಾಮಬಾಣ ಬಿಡುವ ಇವರ ಚಾಕಚಕ್ಯತೆಗೆ ವಯಸ್ಸು ಅಡ್ಡಿಬಂದಿಲ್ಲ. ಅವರ ಬಳಿ ವ್ಯಾಪಾರಕ್ಕೆಂದು ಬರುವ ಮಂದಿ ಈ ಹಳೆ ಸಂಗ್ರಾಹಾಲಯದಂತಿರೋ ಅಂಗಡಿಯನ್ನು ಸೋಜಿಗದಿಂದ ನೋಡುತ್ತಾ ನಿಂತುಬಿಡುತ್ತಾರೆ.`ಈಗೀಗ ಸೈಕಲ್ ರಿಪೇರಿಗೆ ಅಷ್ಟಾಗಿ ಯಾರೂ ಬರುವುದಿಲ್ಲ. ಕೆಲವೊಮ್ಮೆ ಮಕ್ಕಳು ರಿಪೇರಿಗೆದಂದು ಬರುವುದುಂಟು. ಇನ್ನೂ ದುಡ್ಡು ಮಾಡಬೇಕು ಅನ್ನುವ ಆಸೆಯಿಲ್ಲ. ಆದರೂ ಈ ವೃತ್ತಿಯನ್ನು ಬಿಡಲು ಮನಸ್ಸು ಕೇಳುತ್ತಿಲ್ಲ~ ಎನ್ನುತ್ತ ಮೋಹನಜ್ಜ ತಾವು ಮೊದಲಾಗಿ ಕಾರ್ಕಳಕ್ಕೆ ತರಿಸಿ ಮಾರಿದ ಫಿಲ್ಲಿಪ್ಸು ಸೈಕಲ್ ನೆನಪು ಮಾಡಿಕೊಳ್ಳುತ್ತಾರೆ.ಅಂದಹಾಗೆ ಮೋಹನಜ್ಜ ಈ ವಯಸ್ಸಿನಲ್ಲೂ ಹತ್ತಾರು ಕಿ.ಮೀ. ಸೈಕಲ್ ಹೊಡೆದೇ ಅಂಗಡಿಯೇ ಬರುತ್ತಾರೆ. ಆದರೂ ಇವರ ಅಂಗಡಿ ಊರಮಂದಿಗೀಗ ಪಂಚಾತಿಕೆ ಕಟ್ಟೆಯಾಗಿದೆ. ಅವರ ಅಂಗಡಿಯಲ್ಲಿ ಹಾಸಿದ ಬೆಂಚಿನ ಮೇಲೆ ಕೂತು ಸುಸ್ತು ಕರಗಿಸಿಕೊಂಡು, ಬೀಡಿ ಸೇದಿ, ಬದುಕಿನ ಅವಲೋಕನದಲ್ಲಿ ಮುಳುಗೇಳುವ ಮಂದಿಗೆ ಇದೊಂದು ರಿಲ್ಯಾಕ್ಸೇಷನ್ ಸೆಂಟರೂ ಹೌದು.ಕಡೆಯದಾಗಿ ಸೈಕಲ್ ವೃತ್ತಿ ಮೋಹನಜ್ಜನಿಗೆ ಮೈಗಂಟಿದ ಚರ್ಮವೂ, ನಿವೃತ್ತಿ ಜೀವನದ ರಸಮಯ ಕ್ಪ್ಷೃಣಗಳನ್ನು ಮೆಲುಕು ಹಾಕೋ ಧ್ಯಾನಮಂದಿರವೂ ಆಗಿದೆ. ಅವರ ಸೈಕಲ್ ಪೆಡಲ್ ಸಾಂಗತ್ಯ ಮತ್ತಷ್ಟು ಉಲ್ಲಸಿತವಾಗಲಿ ಎನ್ನುವುದು ಹಾರೈಕೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry