ಮೋಹನಾಟ್ಟಂ!, ಚಿತ್ರ: ಗ್ರಾಂಡ್ ಮಾಸ್ಟರ್ (ಮಲಯಾಳಂ)

7

ಮೋಹನಾಟ್ಟಂ!, ಚಿತ್ರ: ಗ್ರಾಂಡ್ ಮಾಸ್ಟರ್ (ಮಲಯಾಳಂ)

Published:
Updated:
ಮೋಹನಾಟ್ಟಂ!, ಚಿತ್ರ: ಗ್ರಾಂಡ್ ಮಾಸ್ಟರ್ (ಮಲಯಾಳಂ)

ಮಲಯಾಳಂ ಸೂಪರ್ ಸ್ಟಾರ್ ಮೋಹನ್‌ಲಾಲ್ ಅವರಿಗೆ ಭಿನ್ನ ಇಮೇಜ್ ಸೃಷ್ಟಿಸಲೆಂದೇ ನಿರ್ಮಿಸಿದ ಚಿತ್ರ ಇದು. ಮೋಹನ್‌ಲಾಲ್ ಚಿತ್ರದ ಉದ್ದಕ್ಕೂ ಹರಡಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿ ಪಾತ್ರ ಅವರಿಗೆ ಹೊಸದಲ್ಲ. ಪಾತ್ರದ ಜತೆಯಲ್ಲಿ ತನ್ಮಯವಾಗುವ ಕಲೆಗಾರಿಕೆಯಿಂದ ಅವರ ಅಭಿನಯ ವಿಶಿಷ್ಟ. ಈ ಕಾರಣಕ್ಕಾಗಿ ಗ್ರಾಂಡ್ ಮಾಸ್ಟರ್ ಗಮನ ಸೆಳೆಯುತ್ತದೆ.ಚಿತ್ರದ ನಾಯಕ ಚಂದ್ರಶೇಖರ್ (ಮೋಹನ್‌ಲಾಲ್) ಪೊಲೀಸ್ ಅಧಿಕಾರಿ. ನಗರದಲ್ಲಿ ನೆತ್ತರು ಹರಿಯುವುದನ್ನು ತಡೆಯಲೆಂದು ನೇಮಕವಾದ ಅಧಿಕಾರಿ. ಮದುವೆಯಾದರೂ ಆತನದು ಒಂಟಿ ಬದುಕು. ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಕಾರಣಕ್ಕೆ ಪತ್ನಿ ದೀಪ್ತಿ (ಪ್ರಿಯಾಮಣಿ)ಯಿಂದ ವಿಚ್ಛೇದನ ಪಡೆದವ. ಮಗಳು ದಾಕ್ಷಾಯಿಣಿಯೊಂದಿಗೆ ಮಾತ್ರ ಅದೇ ವಾತ್ಸಲ್ಯ. ಹೀಗಿರುವಾಗ ಆಗಂತುಕನೊಬ್ಬನ ಪತ್ರ ಪೊಲೀಸ್ ಕಚೇರಿಗೆ ಬರುತ್ತದೆ.ಪತ್ರ ಬರೆದವನು ಕೊಲೆಗಾರ. ಪೊಲೀಸರಿಗೆ ಸವಾಲೆಸೆದು ನೆತ್ತರು ಹರಿಸುವ ಛಲಗಾರ. ಅವನ ಕೊಲೆಗಳಿಗೂ ಒಂದು ತರ್ಕವಿದೆ! ಎ ಬಿ ಸಿ ಡಿ ಇತ್ಯಾದಿ ಹೆಸರು ಹೊತ್ತಿರುವವರನ್ನೇ ಆಯ್ದು ಚೂರಿ ಝಳಪಿಸುತ್ತಾನೆ. ಕೆಫೆ ಮಾಲಕಿ, ಹಾಡುಗಾರ್ತಿ, ಸಿರಿವಂತೆ ಹೀಗೆ ಅವನ ಕೆಂಗಣ್ಣಿಗೆ ಗುರಿಯಾದವರೆಲ್ಲ ಮಹಿಳೆಯರು. ಎ ಬಿ ಸಿ ಹೆಸರಿನ ಮಹಿಳೆಯರನ್ನು ಕೊಂದು ಮುಗಿಸಿದ ಬಳಿಕ ಚಂದ್ರಶೇಖರ್ ಕುಟುಂಬವನ್ನೇ ಬಲಿಪಡೆಯಲು ಮುಂದಾಗುತ್ತಾನೆ.ದೀಪ್ತಿ ಹಾಗೂ ದಾಕ್ಷಾಯಿಣಿ `ಡಿ~ ಅಕ್ಷರದಿಂದ ಆರಂಭವಾಗುವ ಹೆಸರುಗಳು. ಈ ಕೊಲೆ ತಡೆಯುವ ಹಂತದಲ್ಲಿ ಒಂದು ವಾಸ್ತವ ನಾಯಕನ ಅರಿವಿಗೆ ಬರುತ್ತದೆ. ಅದು ಕೊಲೆಗಾರ ಮನೋರೋಗಿ ಎಂಬುದು. ಆದರೆ ಆ ಕೊಲೆ ಆತನೊಬ್ಬನೇ ಮಾಡಿದ್ದೇ? ಅಲ್ಲಿಂದ ಮುಂದೆ ಕತೆ ಮತ್ತೊಂದು ತಿರುವು ಪಡೆಯುತ್ತದೆ.ನಿರ್ದೇಶಕ ಬಿ.ಉನ್ನಿಕೃಷ್ಣನ್ ಸಾಕಷ್ಟು ಸಂಶೋಧನೆ ನಡೆಸಿ ಕತೆ ಬರೆದಿದ್ದಾರೆ. ಕರ್ನಾಟಕ, ತಮಿಳುನಾಡಿನಲ್ಲಿ ನಡೆದ ಸರಣಿ ಕೊಲೆಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಮನೋರೋಗದ ಎಳೆಯನ್ನು ತಂದು ಸಸ್ಪೆನ್ಸ್ ಥ್ರಿಲ್ಲರ್‌ಗೊಂದು ವಿಸ್ತಾರ ತಂದುಕೊಟ್ಟಿದ್ದಾರೆ. ನೆತ್ತರಿನ ಕತೆಗೆ ಸೆಂಟಿಮೆಂಟ್ ಎಳೆಯನ್ನು ಹದವಾಗಿ ಬೆರೆಸಿದ್ದಾರೆ.ಗ್ಲಾಮರ್ ಪಾತ್ರಗಳಲ್ಲಿ ಮಿಂಚುತ್ತಿದ್ದ ಪ್ರಿಯಾಮಣಿ ಗೃಹಿಣಿ ಪಾತ್ರದಲ್ಲಿ ಸೈ ಎನಿಸಿಕೊಂಡಿದ್ದಾರೆ. ಅಭಿನಯಕ್ಕೆ ಹೆಚ್ಚು ಅವಕಾಶಗಳಿಲ್ಲವಾದರೂ ಪತ್ನಿಯಾಗಿ, ತಾಯಿಯಾಗಿ ಅವರ ಪಾತ್ರಕ್ಕೆ ಉತ್ತಮ ಸ್ಥಾನವಿದೆ. ಪೊಲೀಸ್ ಅಧಿಕಾರಿಯಾಗಿ ಮೋಹನ್‌ಲಾಲ್‌ರ ಮಾಗಿದ ನಟನೆ ಇಷ್ಟವಾಗುತ್ತದೆ. ಅವರ ನಟನೆಯಲ್ಲಿ ಯುವಕರ ಉತ್ಸಾಹವಿದೆ. ಚಿತ್ರದಲ್ಲಿ ಚದುರಂಗದ ಮಣೆ ಸೆಣೆಸಾಟದ ರೂಪಕವಾಗಿ ಕೆಲಸ ಮಾಡಿದೆ.ಪೊಲೀಸ್ ಅಧಿಕಾರಿಗಳಾಗಿ ಹಿರಿಯ ನಟ ಜಗತಿ ಶ್ರೀಕುಮಾರ್ ಹಾಗೂ ನರೇನ್, ಮನಃಶಾಸ್ತ್ರಜ್ಞನಾಗಿ ಅನೂಪ್ ಮೆನನ್, ವಾಣಿಜ್ಯೋದ್ಯಮಿಯಾಗಿ ಅರ್ಜುನ್ ನಂದಕುಮಾರ್ ಅವರದು ನೆನಪಿನಲ್ಲಿ ಉಳಿಯುವಂಥ ಅಭಿನಯ. ಹಾಡು ಹಾಗೂ ದೃಶ್ಯವೊಂದರಲ್ಲಿ ಕಾಣಿಸಿಕೊಳ್ಳುವ ರೋಮಾ ನಟನೆ ಕೂಡ ಅಷ್ಟೇ ಗಮನಾರ್ಹ.ಖಳ ಪಾತ್ರಗಳಲ್ಲಿ ಬಾಬು ಆಂಟೋನಿ, ಮಣಿಕುಟ್ಟನ್ ಕತೆಯ ವರ್ಚಸ್ಸನ್ನು ಹೆಚ್ಚಿಸಿದ್ದಾರೆ. ಚಿತ್ರದಲ್ಲಿರುವ ಎರಡೂ ಹಾಡುಗಳು (ಸಂಗೀತ ನಿರ್ದೇಶನ- ದೀಪಕ್ ದೇವ್) ಇಂಪಾಗಿವೆ. ಛಾಯಾಗ್ರಹಣ (ವಿನೋದ್ ಎಲ್ಲಂಪಳ್ಳಿ) ಚಿತ್ರದ ಇನ್ನೊಂದು ಹೈಲೈಟ್. ಸಣ್ಣಪುಟ್ಟ ನ್ಯೂನತೆಗಳನ್ನು ಹೊರತುಪಡಿಸಿದರೆ ಚಿತ್ರಕ್ಕೊಂದು ಸುಂದರ ಚೌಕಟ್ಟಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry