ಮೌಂಟ್ ಅಬು ಮರುಭೂಮಿಯ ಓಯಸಿಸ್

7

ಮೌಂಟ್ ಅಬು ಮರುಭೂಮಿಯ ಓಯಸಿಸ್

Published:
Updated:

ಸೂರ್ಯ ಕಿರಣಗಳ ಹೆಜ್ಜೆ ಮೂಡುವ ಮುನ್ನವೇ `ಮೌಂಟ್ ಅಬು~ವಿನತ್ತೆ ಹೊರಟಿದ್ದೆ. ಹಚ್ಚಹಸಿರನ್ನು ಹೊದ್ದು ನಯನ ಮನೋಹರವಾಗಿ ಕಾಣಿಸುತ್ತಿತ್ತು ಅಬು ಪರ್ವತ. ಬೆಟ್ಟಗುಡ್ಡಗಳನ್ನು ಕಡಿದು ನಿರ್ಮಿಸಿದ ಕಿರಿದಾದ ದಾರಿಯಲ್ಲಿ, ಕಾರು ಚಲಿಸುವ ವೇಗದ ರಭಸಕ್ಕೆ ಬರುತ್ತಿದ್ದ ತಂಗಾಳಿ ಮನಸ್ಸಿಗೆ ಮುದನೀಡುತ್ತಿತ್ತು. ಮಳೆ, ಗಾಳಿ, ಬಿಸಿಲು ಹಾಗೂ ಬೀಸುವ ಗಾಳಿಯ ಬದಲಾವಣೆಯಿಂದಾಗಿ ಕ್ಷಣ ಕ್ಷಣಕ್ಕೂ ನಿಸರ್ಗದ ರಮಣೀಯತೆಯ ಚಿತ್ರಗಳ ರಂಗು ಬದಲಾಗುತ್ತಿತ್ತು. ಈ ಪ್ರಕೃತಿಯ ರಮಣೀಯತೆ ಅದೆಷ್ಟು ಆಕರ್ಷಕವಾಗಿತ್ತೆಂದರೆ, ನೋಟಕ್ಕೆ ಮನಸೋಲುವ ಕಣ್ಣುಗಳು ಮಿಟುಕಿಸುವುದನ್ನೇ ಮರೆತುಬಿಡಬೇಕು! ಸಾಲು ಬೆಟ್ಟಗಳನ್ನು ಮರೆಮಾಚುವ ಬಿಳಿ ಮೋಡಗಳು, ಆಗಾಗ್ಗೆ ಮಳೆಹನಿಗಳ ಸಿಂಚನ. ಪ್ರವಾಸಿಗರಿಗೆ ನಿರಾಸೆ ಮಾಡದೆ ನಿಯಮಿತವಾಗಿ ಇಳಿದುಬರುವ ಸೂರ್ಯನ ಕಿರಣಗಳು ಬೆಟ್ಟಗಳ ಹಸಿರು ಹೊದಿಕೆಗೆ ಜೀವಸ್ಪರ್ಶ ಮಾಡುವಂತೆ ಕಾಣಿಸುತ್ತವೆ.

`ಗುರು ಶಿಖರ~ದ ಬೆಟ್ಟದ ತುದಿಯಿಂದ ದೃಷ್ಟಿ ಹರಿಸಿದರೆ ದೂರದಲ್ಲಿ ಭಾರತ ಹಾಗೂ ಪಾಕಿಸ್ತಾನದ ಗಡಿ ಪ್ರದೇಶ ಕಂಡುಬರುತ್ತದೆ. ಶುಭ್ರ ಮೋಡಗಳ ಹಾಸಿಗೆ ಬಹುದೂರದವರೆಗೆ ಹಾಸಿಟ್ಟಂತಿದೆ. ಬೆಟ್ಟಗುಡ್ಡಗಳ ಈ ಸಾಲು `ಸ್ವರ್ಗಕ್ಕೆ ಮೂರೇ ಗೇಣು~ ಎನ್ನುವ ಭಾವ ಉಂಟುಮಾಡುತ್ತದೆ.

ಅನನ್ಯ ಗಿರಿಧಾಮ

ರಾಜಸ್ತಾನದಲ್ಲಿರುವ ಮೌಂಟ್ ಅಬು ಪರ್ವತವು ಕರಾವಳಿ ಪರ್ವತ ಶ್ರೇಣಿಗಳಲ್ಲಿ ಅತ್ಯಂತ ಎತ್ತರದ ಶಿಖರ. ಈ ಪರ್ವತವು 22 ಕಿ.ಮೀ ಉದ್ದ ಮತ್ತು 9 ಕಿ.ಮೀ ವಿಸ್ತಾರವಿರುವ ಅಪರೂಪದ ಕಲ್ಲುಬಂಡೆಗಳಿಂದ ಕೂಡಿದ ಶಿಖರವಾಗಿದ್ದು ಸಮುದ್ರ ಮಟ್ಟದಿಂದ 1722 ಮೀಟರ್ ಎತ್ತರದಲ್ಲಿದೆ.

ಈ ಪರ್ವತ ಶ್ರೇಣಿಯು ಹಲವಾರು ಜಲಪಾತ, ನದಿ, ಸರೋವರಗಳ ತವರುಮನೆಯಾಗಿದೆ. ನಿತ್ಯ ಹರಿದ್ವರ್ಣದ ಕಾಡು ಹೊಂದಿರುವುದರಿಂದ, ಮೌಂಟ್ ಅಬುವನ್ನು `ಮರುಭೂಮಿಯಲ್ಲಿರುವ ಓಯಸಿಸ್~ ಎಂದು ಕರೆಯುತ್ತಾರೆ. ಇದರ ಪ್ರಾಚೀನ ಹೆಸರು `ಅರ್ಬುದಾಂಚಲ್~.

ಪುರಾಣ, ಇತಿಹಾಸಗಳಲ್ಲಿ ಇದನ್ನು ಅರ್ಬುದಾರಣ್ಯ ಎಂದು ಉಲ್ಲೇಖಿಸಲಾಗಿದೆ. ಮಹಾತಪಸ್ವಿಗಳಾದ ವಸಿಷ್ಠರಿಗೂ ವಿಶ್ವಾಮಿತ್ರರಿಗೂ ವೈಮನಸ್ಯ ಉಂಟಾಗಿ, ವಸಿಷ್ಠರು ಮೌಂಟ್ ಅಬುವಿನ ದಕ್ಷಿಣ ಭಾಗಕ್ಕೆ ತೆರಳಿ ಪರ್ವತದಂಚಿನಲ್ಲಿ ಕುಳಿತು ತಪಸ್ಸು ಮಾಡಿದರೆಂಬ ಪ್ರತೀತಿ ಇದೆ.

ರಾಜಸ್ತಾನ ಮತ್ತು ಗುಜರಾತ್ ರಾಜ್ಯದ ಜನರಿಗೆ ಬೇಸಿಗೆ ಧಗೆಯಿಂದ ಮೈಮರೆಸಿಕೊಳ್ಳಲು ಈ ಪರ್ವತ ಉತ್ತಮ ತಾಣ. 1960ರಲ್ಲಿ ಈ ಪರ್ವತ ಪರಿಸರವನ್ನು `ವನ್ಯಜೀವಿ ವಿಭಾಗ~ವೆಂದು ಘೋಷಿಸಿದ್ದು, 290 ಚ.ಕಿ. ವ್ಯಾಪ್ತಿಯ ಈ ಪ್ರದೇಶದಲ್ಲಿ ಹಾವು, ಕರಡಿ, ಚಿರತೆ, ಆನೆ, ಕೋತಿ, ವಿವಿಧ ಪಕ್ಷಿಗಳು ಸೇರಿದಂತೆ ಬಹುವೈವಿಧ್ಯದ ಜೀವಸಂಕುಲವಿದೆ.

ಮಂದಿರಗಳ ಊರು

ಮೌಂಟ್ ಅಬು ಮಂದಿರಗಳ ಊರು ಕೂಡ ಹೌದು. 11 ಮತ್ತು 13ನೇ ಶತಮಾನಗಳಲ್ಲಿ ನಿರ್ಮಾಣವಾಗಿರುವ ಜೈನ ದೇವಾಲಯಗಳು ಬಿಳಿ ಅಮೃತಶಿಲೆ ಕಲ್ಲಿನಿಂದ ನಿರ್ಮಾಣವಾಗಿವೆ. `ದಿಲ್‌ವಾರ ಮಂದಿರ~ ಸೂಕ್ಷ್ಮ, ಕಲಾತ್ಮಕ ಕೆತ್ತನೆಗಳಿಂದ ಗಮನಸೆಳೆಯುತ್ತದೆ. 1031ರಲ್ಲಿ ವಿಮಲ್‌ಷಾ ಎಂಬುವರು ಮೊದಲ ಜೈನ ತೀರ್ಥಂಕರರಾದ ವೃಷಭನಾಥನ ನೆನಪಿನಲ್ಲಿ ನಿರ್ಮಿಸಿರುವ `ವಿಮಲ್ ವಾಸಾಹಿ~ ಮಂದಿರ ಆಸ್ತಿಕರ ಶ್ರದ್ಧಾಸ್ಥಳಗಳಲ್ಲೊಂದು.

`ಲುನವಾಸಹಿ~ ಮಂದಿರ, ಅಚಲ್‌ಗರ್ ಕೋಟೆ, ಕಾಂತಿನಾಥ ದೇವಾಲಯ, ಮಕ್ಕಳಿಗಾಗಿ ನಿರ್ಮಾಣಗೊಂಡ ಪೀಸ್ ಪಾರ್ಕ್, ಬ್ರಹ್ಮಕುಮಾರಿ ಮ್ಯೂಸಿಯಂ, ಓಂಶಾಂತಿ ಭವನ, ಮತ್ತು ಇನ್ನೂ ಅನೇಕ ಗುಡಿ ಗೋಪುರಗಳು ಪ್ರವಾಸಿಗರನ್ನು ಸೆಳೆಯುತ್ತವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry