ಮೌಢ್ಯಕ್ಕೆ ಬಲಿಯಾದ 12 ಜಾನುವಾರು!

7
ಜಿಲ್ಲೆಯ 58 ಹಳ್ಳಿಯಲ್ಲಿ 212 ರಾಸುಗಳಿಗೆ ಕಾಲುಬಾಯಿ ಜ್ವರ

ಮೌಢ್ಯಕ್ಕೆ ಬಲಿಯಾದ 12 ಜಾನುವಾರು!

Published:
Updated:

ಚಾಮರಾಜನಗರ: ಜಿಲ್ಲೆಯ 4 ತಾಲ್ಲೂಕಿನ 58 ಗ್ರಾಮಗಳಲ್ಲಿ 212 ರಾಸುಗಳಿಗೆ ಕಾಲುಬಾಯಿ ಜ್ವರ ಕಾಣಿಸಿಕೊಂಡಿದ್ದು, 12 ಜಾನುವಾರು ಮೃತಪಟ್ಟಿವೆ. ಕೊಳ್ಳೇಗಾಲ, ಯಳಂದೂರು, ಗುಂಡ್ಲುಪೇಟೆ ಹಾಗೂ ಚಾಮರಾಜನಗರ ತಾಲ್ಲೂಕಿನಲ್ಲಿ ರಾಸುಗಳಿಗೆ ಕಳೆದ ಒಂದು ವಾರದಿಂದ ಈ ರೋಗ ಕಾಣಿಸಿಕೊಂಡಿದ್ದು, ರೈತರು ಆತಂಕಗೊಂಡಿದ್ದಾರೆ.ಜಿಲ್ಲೆಯಲ್ಲಿ ಒಟ್ಟು 2.91 ಲಕ್ಷ ರಾಸುಗಳಿವೆ. ಕಳೆದ ಒಂದು ತಿಂಗಳ ಅವಧಿಯಲ್ಲಿ 1.93 ಲಕ್ಷ  ರಾಸುಗಳಿಗೆ ಲಸಿಕೆ ನೀಡಲಾಗಿದೆ. ಒಟ್ಟಾರೆ ಶೇ 62.5ರಷ್ಟು ಜಾನುವಾರುಗಳಿಗೆ ಮಾತ್ರವೇ ಲಸಿಕೆ ಹಾಕಲಾಗಿದೆ.ಕೇಂದ್ರ ಸರ್ಕಾರದ ಸೂಚನೆ ಅನ್ವಯ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ವರ್ಷದಲ್ಲಿ ಎರಡು ಬಾರಿ ರಾಸುಗಳಿಗೆ ಕಾಲುಬಾಯಿ ಜ್ವರದ ವಿರುದ್ಧ ಲಸಿಕೆ ಹಾಕಲಾಗುತ್ತದೆ. ಆದರೆ, ಈ ಲಸಿಕೆ ಹಾಕಿಸಿದರೆ ಮುಂದೆ ಹಸುಗಳು ಹಾಲು ನೀಡುವುದಿಲ್ಲ ಎಂಬ ಮೌಢ್ಯಕ್ಕೆ ಗ್ರಾಮೀಣರು ಜೋತುಬಿದ್ದಿದ್ದಾರೆ. ಜತೆಗೆ, ಆದಾಯ ಕಡಿಮೆಯಾಗುತ್ತದೆ ಎಂಬ ಭಯದಿಂದ ಲಸಿಕೆ ಹಾಕಿಸುವುದಿಲ್ಲ.ಲಸಿಕೆ ನೀಡಿದ ವೇಳೆ ಜಾನುವಾರುಗಳಿಗೆ ಸ್ವಲ್ಪ ಜ್ವರ ಬರುತ್ತದೆ. ಕೊಂಚ ಪ್ರಮಾಣದಲ್ಲಿ ಹಾಲು ನೀಡುವುದು ಕಡಿಮೆ ಯಾಗುತ್ತದೆ. ಅಲ್ಲದೆ, ಲಸಿಕೆ ನೀಡಿದ ಜಾಗದಲ್ಲಿ ಬಾವು ಬರುತ್ತದೆ. ಆದರೆ, ವಾರದೊಳಗೆ ಮಾಮೂಲಿನ ಸ್ಥಿತಿಗೆ ರಾಸುಗಳು ಮರಳುತ್ತವೆ. ರೈತರು ಮಾತ್ರ ಭಯದಿಂದ ಲಸಿಕೆ ಹಾಕಿಸುವುದಿಲ್ಲ. ಅಂತಹ ರಾಸುಗಳು ಈಗ ರೋಗಕ್ಕೆ ತುತ್ತಾಗಿವೆ. ಮೂಢನಂಬಿಕೆಯಿಂದ ರೈತರು ರಾಸುಗಳನ್ನು ಕಳೆದುಕೊಳ್ಳು ತ್ತಿದ್ದಾರೆ ಎನ್ನುತ್ತಾರೆ ಪಶುಪಾಲನಾ ಇಲಾಖೆಯ ಅಧಿಕಾರಿಗಳು.ಜಿಲ್ಲೆಯಲ್ಲಿ 1,43,017 ಮಿಶ್ರತಳಿ ಹಸುಗಳಿವೆ. ಈ ಹಸುವೊಂದು ಕನಿಷ್ಠ ₨ 20 ಸಾವಿರದಿಂದ ₨ 60 ಸಾವಿರಕ್ಕೂ ಹೆಚ್ಚು ಬೆಲೆ ಬಾಳುತ್ತದೆ. ಬಹುತೇಕ ಮಂದಿ ಹೈನುಗಾರಿಕೆ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಕಾಲುಬಾಯಿ ಜ್ವರ ಕಾಣಿಸಿಕೊಂಡಿರುವುದು ರೈತರಲ್ಲಿ ಆತಂಕ ಹೆಚ್ಚಿಸಿದೆ.ರೋಗದ ಲಕ್ಷಣ ಏನು?

ಈ ರೋಗಕ್ಕೆ ತುತ್ತಾಗುವ ರಾಸುಗಳು ಅತಿಯಾದ ಜ್ವರದಿಂದ ಬಳಲುತ್ತವೆ. ಬಾಯಲ್ಲಿ ಹುಣ್ಣು ಕಾಣಿಸಿಕೊಳ್ಳುತ್ತವೆ. ಇದರಿಂದ ಬಾಯಲ್ಲಿ ಜೊಲ್ಲು ಸೋರುತ್ತದೆ. ಕಾಲುಗಳಲ್ಲಿ ಗಾಯಗಳಾಗಿ, ರಾಸುಗಳು ಕುಂಟುತ್ತಾ ನಡೆಯುತ್ತವೆ.ರಾಸುಗಳ ಬಾಯಲ್ಲಿ ಜೊಲ್ಲಿನ ರಸ ಸೋರುವುದರಿಂದ ಮೇವು ತಿನ್ನಲು ಆಗುವುದಿಲ್ಲ. ಸಹಜವಾಗಿ ಜಾನುವಾರುಗಳು ಕೃಶವಾಗುತ್ತದೆ. ಸಾವಿರಾರು ರೂಪಾಯಿ ನೀಡಿ ಖರೀದಿಸಿ ತಂದಿರುವ ರಾಸುಗಳು ಮನೆಯ ಮುಂದೆಯೇ ನೋವು ಅನುಭವಿಸುವ ದೃಶ್ಯ ನೋಡುವ ಅನ್ನದಾತರ ಅಳಲು ಹೇಳತೀರದು.ರೋಗ ನಿಯಂತ್ರಣ ಹೇಗೆ?

ಈ ರೋಗವು ವೈರಾಣುಗಳಿಂದ ಬರುತ್ತದೆ. ರೋಗಗ್ರಸ್ತ ಪ್ರಾಣಿಗಳ ನೇರ ಸಂಪರ್ಕ, ವೈರಾಣು ಕಲುಷಿತ ಮೇವು, ನೀರು ಮತ್ತು ಗಾಳಿಯಿಂದ ಈ ರೋಗ ಹರಡುತ್ತದೆ. ಆರೋಗ್ಯವಂತ ಪ್ರಾಣಿಗಳನ್ನು ಇಂತಹ ಪ್ರಾಣಿಗಳಿಂದ ಬೇರ್ಪಡಿಸಿ ದೂರವಿಡಬೇಕು. ಪ್ರತ್ಯೇಕವಾಗಿ ಮೇವು, ನೀರು ನೀಡಬೇಕು.

ಬಾಯಿಯಲ್ಲಿರುವ ಹುಣ್ಣನ್ನು ಶೇ 0.5ರಷ್ಟು ಅಡುಗೆ ಸೋಡಾದಿಂದ ತೊಳೆದು ಶುಚಿಗೊಳಿಸಬೇಕು. ಮೃದು ಆಹಾರವಾದ ಜೇನುತುಪ್ಪ, ಗಂಜಿ, ರಾಗಿ ಅಂಬಲಿ ನೀಡಬೇಕಿದೆ.ಕೊಳ್ಳೇಗಾಲ: 8 ಜಾನುವಾರು ಸಾವು

ಕೊಳ್ಳೇಗಾಲ: ಕಾಲುಬಾಯಿ ಜ್ವರಕ್ಕೆ ತುತ್ತಾಗಿ 8 ಜಾನುವಾರುಗಳು ಕೊಳ್ಳೇಗಾಲ ತಾಲ್ಲೂಕಿನಲ್ಲಿ ಮೃತಪಟ್ಟಿವೆ.

ತಾಲ್ಲೂಕಿನ ಮಧುವನಹಳ್ಳಿ ಗ್ರಾಮದಲ್ಲಿ  ಮಹದೇವಸ್ವಾಮಿ, ಶಿವನಂಜಶೆಟ್ಟಿ, ಬಂಡಳ್ಳಿರಾಚಪ್ಪ, ಬಸವಣ್ಣ, ಮಹದೇವು ಅವರಿಗೆ ಸೇರಿದ 7 ಜಾನುವಾರು ಈ ಹಿಂದೆ ಮೃತಪಟ್ಟರೆ, ಬುಧವಾರ ಹೊಂಡರಬಾಳು ಗ್ರಾಮದಲ್ಲಿ ಪುಟ್ಟಯ್ಯ ಅವರ ಒಂದು ಹಸು ಮೃತಪಟ್ಟಿದೆ.ಕಾಲುಬಾಯಿ ಜ್ವರದಿಂದ ಜಾನುವಾರುಗಳು ಸಾವನ್ನಪ್ಪಿರುವ ವಿಚಾರ ತಿಳಿಯುತ್ತಿದ್ದಂತೆಯೇ ಪಶುವೈದ್ಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಪ್ರಕಾಶ್‌ ಅವರ ನೇತೃತ್ವದಲ್ಲಿ ಸಿಬ್ಬಂದಿ ರವಿಕುಮಾರ್‌, ಬಸವರಾಜು, ವಿಜಯಕುಮಾರ್‌ ಅವರು ಹೊಂಡರಬಾಳು ಮತ್ತು  ಮಧುವನಹಳ್ಳಿ ಗ್ರಾಮದಲ್ಲಿ ಮನೆಮನೆಗೆ ಭೇಟಿನೀಡಿ ಜಾನುವಾರುಗಳಿಗೆ ಕಾಲುಬಾಯಿ ಜ್ವರ ನಿಯಂತ್ರಣಕ್ಕೆ ಲಸಿಕೆ ನೀಡಿದರು.ಪರಿಹಾರಕ್ಕೆ ಮನವಿ: ಕಾಲುಬಾಯಿ ಜ್ವರದಿಂದ ಜಾನುವಾರುಗಳನ್ನು ಕಳೆದುಕೊಂಡ ಬಡ ಕುಟುಂಬ ಸಾಲದ ಸುಳಿಯಲ್ಲಿ ಸಿಲುಕಿ ಬೀದಿಪಾಲಾಗುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಪರಿಹಾರ ದೊರಕಿಸುವ ಮೂಲಕ ಹೈನುಗಾರಿಕೆಯನ್ನೇ ನಂಬಿದ್ದ ಕುಟುಂಬಗಳನ್ನು ರಕ್ಷಿಸಬೇಕು ಎಂದು ಮಹದೇವಮ್ಮ ಮನವಿ ಮಾಡಿದ್ದಾರೆ.ಯಳಂದೂರು: 123 ರಾಸುಗಳಿಗೆ ಕಾಯಿಲೆ

ಯಳಂದೂರು: ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಜಾನುವಾರುಗಳು ಕಾಲುಬಾಯಿ ಜ್ವರಕ್ಕೆ ತುತ್ತಾಗಿವೆ. ಕಾಯಿಲೆಗೆ ತುತ್ತಾದ ಹಸುಗಳ ನಾಲಿಗೆ ಹಾಗೂ ವಸುಡುಗಳ ಮೇಲಿನ ಗುಳ್ಳೆಗಳು ಒಡೆದು ಗಾಯಗಳಾಗಿವೆ. ಇದರಿಂದ ಜೊಲ್ಲು ಸೋರುವುದರಿಂದ ರಾಸುಗಳು ಆಹಾರ ತಿನ್ನದೆ ಹಾಲು ಕೊಡುವುದನ್ನು ಕ್ರಮೇಣ ನಿಲ್ಲಿಸುತ್ತವೆ. ಪಾದ ಇಲ್ಲವೇ ಗೊರಸು, ಬಾಯಿ, ಕೆಚ್ಚಲಿನ ಮೇಲೆ ನೀರು ಬೊಬ್ಬೆಗಳು ಕಾಣಿಸಿಕೊಂಡಿವೆ.ತಾಲ್ಲೂಕಿನಲ್ಲಿ ಹಸು,ಎಮ್ಮೆ ಸೇರಿದಂತೆ ಒಟ್ಟು 13,842 ಜಾನುವಾರುಗಳಿವೆ. 123 ಜಾನುವಾರುಗಳಿಗೆ ಈ ರೋಗ ಕಾಣಿಸಿಕೊಂಡಿದ್ದು ಇದಕ್ಕೆ ಚಿಕಿತ್ಸೆಯನ್ನೂ ನೀಡಲಾಗಿದೆ. ಈಗಾಗಲೇ 12,924 ಜಾನುವಾರುಗಳಿಗೆ ರೋಗ ನಿರೋಧಕ ಲಸಿಕೆ ನೀಡಲಾಗಿದ್ದು ಶೇ.93.6 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಪಶು ಇಲಾಖೆಯ ವರದಿ ತಿಳಿಸಿದೆ.ಸಂತೆಮರಹಳ್ಳಿ: 4 ಹಸುಗಳು ಸಾವು

ಸಂತೇಮರಹಳಿ್ಳ: ಜಾನುವಾರುಗಳಿಗೆ ತಗುಲಿರುವ ಕಾಲು ಬಾಯಿ ಜ್ವರದಿಂದ ಯಡಿಯೂರು ಗ್ರಾಮದಲಿ್ಲ 4 ಹಸುಗಳು ಮಂಗಳವಾರ ಮೃತಪಟಿ್ಟವೆ. ಕಳೆದ 4 ದಿನಗಳಿಂದ ರಾಸುಗಳಿಗೆ ರೋಗ ತಗುಲಿದ್ದು, ಕುಮಾರಸ್ವಾಮಿ ಎಂಬುವವರ 2 ಹಸುಗಳು ಹಾಗೂ ಮಲ್ಲಪ್ಪ, ದುಂಡಪ್ಪ ಎಂಬುವವರಿಗೆ ಸೇರಿದ ತಲಾ 1 ಹಸುಗಳು ಮೃತಪಟಿ್ಟವೆ. ಇನ್ನೂ ಕೆಲವು ಹಸುಗಳು ಅಸ್ವಸ್ಥಗೊಂಡಿವೆ. ಈಸಂಬಂಧ ಗ್ರಾಮಕ್ಕೆ ಪಶುವೈದಾ್ಯಧಿಕಾರಿಗಳು ಆಗಮಿಸಿ ರಾಸುಗಳಿಗೆ ಚಿಕಿತ್ಸೆ ನೀಡಿದ್ದಾರೆ.ಹಸುಗಳು ಚಿಕಿತೆ್ಸಯಲಿ್ಲ ಚೇತರಿಸಿಕೊಳು್ಳತಿ್ತದ್ದು, ಪ್ರತಿದಿನ ವೈದ್ಯರು ಗ್ರಾಮಕ್ಕೆ ಬೇಟಿನೀಡಿ ಹಸುಗಳಿಗೆ ಚಿಕಿತ್ಸೆ ನೀಡಬೇಕು. ಮೃತಪಟ್ಟಿರುವ ಹಸುಗಳ ಮಾಲೀಕರಿಗೆ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.ಗುಂಡ್ಲುಪೇಟೆ: 459 ರಾಸುಗಳಿಗೆ ಲಸಿಕೆ

ಗುಂಡ್ಲುಪೇಟೆ: ಕಾಲುಬಾಯಿ ಜ್ವರದಿಂದ ಶನಿವಾರ ಜಾನುವಾರು ಅಸುನೀಗಿದ ನಂತರ ಟೀಕೆಗೆ ಗುರಿಯಾಗಿದ್ದ, ಪಶುವೈದ್ಯ ಇಲಾಖೆಯ ಅಧಿಕಾರಿಗಳು ಬುಧವಾರ  ಹಂಗಳಾಪುರ ಗ್ರಾಮಕ್ಕೆ ತೆರಳಿ ಜಾನುವಾರುಗಳಿಗೆ ರೋಗ ನಿಯಂತ್ರಣಕ್ಕೆ ಲಸಿಕೆಯನ್ನು ನೀಡಿದರು.ಪಶುವೈದ್ಯ ಗುರುಮೂರ್ತಿಯವರು ಗ್ರಾಮಸ್ಥರ ಮನವೊಲಿಸಿ ಜಾನುವಾರುಗಳಿಗೆ ಲಸಿಕೆ ನೀಡಿದರು. ಒಟ್ಟು 459 ರಾಸುಗಳಿಗೆ ಲಸಿಕೆ ನೀಡಲಾಯಿತು. 

20 ದಿನಗಳ ಹಿಂದೆ 7 ಜಾನುವಾರುಗಳು ಮೃತಪಟ್ಟಿತ್ತು. ಆದರೆ, ಕಳೆದ ಶನಿವಾರ ನೀಲಮ್ಮ ಎಂಬುವವರಿಗೆ ಸೇರಿದ ಜಾನುವಾರು ಮೃತಪಟ್ಟ ನಂತರ ಟೀಕೆಗಳಿಂದ ಎಚ್ಚೆತ್ತ ಇಲಾಖೆ ಪರೀಕ್ಷೆಗಾಗಿ ಮೃತಪಟ್ಟ ರಾಸಿನ ಮಾದರಿ ಕಳಿಸಿದಾಗ ಅದು ಕಾಲು ಬಾಯಿ ರೋಗ ಎಂದು ಪ್ರಯೋಗಾಲಯದ ವರದಿ ಬಂದಿದೆ. ಬಳಿಕ ಕಾಯಿಲೆ ನಿಯಂತ್ರಣಕ್ಕೆ ಬೆಂಗಳೂರಿನಿಂದ ಲಸಿಕೆ ತರಿಸಿಕೊಂಡು ಇಂದು ಜಾನುವಾರುಗಳಿಗೆ ನೀಡಿದರು. ಡಾ.ವಿವೇಕ್‌, ಸಿಬ್ಬಂದಿಗಳಾದ ನಾಗೇಂದ್ರ , ಪ್ರಭುಸ್ವಾಮಿ, ಪಾರ್ವತಮ್ಮ, ಸಿದ್ದಶೆಟ್ಟಿ, ಮಹದೇವನಾಯಕ ಇದ್ದರು.ಬಿಆರ್‌ಟಿಯಲ್ಲೂ ಕಟ್ಟೆಚ್ಚರ

ಚಾಮರಾಜನಗರ: ಜಿಲ್ಲೆಯ ಯಳಂದೂರು ತಾಲ್ಲೂಕಿನ 128 ಹಳ್ಳಿಗಳಲ್ಲಿ ಕಾಲುಬಾಯಿ ಜ್ವರ ಕಾಣಿಸಿಕೊಂಡಿದೆ. ಇದರಲ್ಲಿ ಕೆಲವು ಹಳ್ಳಿಗಳು ಬಿಳಿಗಿರಿರಂಗನಾಥಸ್ವಾಮಿ ಹುಲಿ ರಕ್ಷಿತಾರಣ್ಯದ(ಬಿಆರ್‌ಟಿ) ಅಂಚಿನಲ್ಲಿದ್ದು, ರಾಸುಗಳು ಮೇಯಲು ನಿತ್ಯವೂ ಕಾಡಿಗೆ ತೆರಳುತ್ತವೆ. ಈ ಹಿನ್ನೆಲೆಯಲ್ಲಿ ರಕ್ಷಿತಾರಣ್ಯದಲ್ಲಿರುವ ವನ್ಯಜೀವಿಗಳಿಗೂ ರೋಗ ಹರಡುವ ಸಾಧ್ಯತೆಯಿದ್ದು, ಕಟ್ಟೆಚ್ಚರವಹಿಸಲಾಗಿದೆ.

‘ಕಾಡಂಚಿನ ಕೆಲವು ಗ್ರಾಮಗಳಲ್ಲಿ ಕಾಯಿಬಾಯಿ ಜ್ವರ ಹರಡಿರುವುದು ಗಮನಕ್ಕೆ ಬಂದಿದೆ. ಇಲಾಖೆಯಿಂದ ರಾಸುಗಳಿಗೆ ಲಸಿಕೆ ಹಾಕಲಾಗುತ್ತದೆ. ರೋಗಪೀಡಿತ ರಾಸುಗಳು ಅರಣ್ಯದೊಳಕ್ಕೆ ಪ್ರವೇಶಿಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ’ ಎಂದು ಬಿಆರ್‌ಟಿ ಹುಲಿ ರಕ್ಷಿತಾರಣ್ಯದ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕ ಎಸ್‌.ಎಸ್‌. ಲಿಂಗರಾಜ ‘ಪ್ರಜಾವಾಣಿ’ಗೆ ತಿಳಿಸಿದರು.ರೋಗ ತಡೆಗೆ ಕ್ರಮ: ಡಾ.ರಾಮಚಂದ್ರ

>ಚಾಮರಾಜನಗರ: ‘ಕಾಲುಬಾಯಿ ಜ್ವರ ತಡೆಗೆ ಕ್ರಮವಹಿಸಲಾಗಿದ್ದು, ರೋಗಪೀಡಿತ ರಾಸುಗಳಿಗೆ ಲಸಿಕೆ ನೀಡಲಾಗುತ್ತಿದೆ’ ಎಂದು ಜಿಲ್ಲಾ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ.ಆರ್‌. ರಾಮಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

ಇಲಾಖೆಯಿಂದ ಈ ರೋಗದ ವಿರುದ್ಧ ವರ್ಷಕ್ಕೆ ಎರಡು ಬಾರಿ ಪ್ರತಿ 6 ತಿಂಗಳ ಅಂತರದಲ್ಲಿ ಲಸಿಕೆ ನೀಡಲಾಗುತ್ತದೆ. ರೈತರು ಕಡ್ಡಾಯವಾಗಿ ರಾಸುಗಳಿಗೆ ಲಸಿಕೆ ಹಾಕಿಸಬೇಕು. ಜಿಲ್ಲೆಯಲ್ಲಿ ಆ. 15ರಿಂದ ಲಸಿಕೆ ಹಾಕುವ ಕಾರ್ಯಕ್ರಮ ಪ್ರಾರಂಭವಾಗಿದೆ ಎಂದು ಹೇಳಿದರು. ಈ ರೋಗ ಕಾಣಿಸಿಕೊಂಡ ರಾಸುಗಳ ಕಾಲುಗಳಲ್ಲಿ ಗಾಯಗಳಾಗುತ್ತವೆ. ಗಾಯದ ಮೇಲೆ ನೋಣಗಳು ಕುಳಿತುಕೊಂಡು ಮತ್ತಷ್ಟು ರೋಗ ಉಲ್ಬಣಿಸದಂತೆ ತಡೆಯಲು ಇಲಾಖೆಯಿಂದಲೇ ಬೇವಿನ ಎಣ್ಣೆ ತರಿಸಿದ್ದು, ರೈತರಿಗೆ ನೀಡಲಾಗುತ್ತಿದೆ ಎಂದರು.ಸಹಕರಿಸಲು ರೈತರಿಗೆ ಮನವಿ

>ಚಾಮರಾಜನಗರ: ‘ಚಾಮರಾಜನಗರ ತಾಲ್ಲೂಕಿನ ಕೆಂಪನಪುರ, ಜನ್ನೂರು, ಪಣ್ಯದಹುಂಡಿ, ಬಂದಿಗೌಡನಹಳ್ಳಿ, ಕೋಡಿಮೋಳೆ, ಚಂದುಕಟ್ಟೆಮೋಳೆ, ಇರಸವಾಡಿ, ಮಸಣಾಪುರ, ಯಡಿಯೂರು, ಸಂತೇಮರಹಳ್ಳಿ, ಕೂಡ್ಲೂರು, ಆಲೂರು, ಅಮ್ಮನಪುರ ಗ್ರಾಮದಲ್ಲಿ ಸುಮಾರು 116 ರಾಸುಗಳು  ಕಾಲುಬಾಯಿ ಜ್ವರಕ್ಕೆ ತುತ್ತಾಗಿವೆ. ತಾಲ್ಲೂಕಿನಲ್ಲಿ 7 ಕರುಗಳು ಮೃತಪಟ್ಟಿವೆ’ ಎಂದು ತಾಲ್ಲೂಕು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಶಿವಣ್ಣ ತಿಳಿಸಿದರು.

‘ಈಗಾಗಲೇ, ಇಲಾಖೆಯ ಸಿಬ್ಬಂದಿ ಗ್ರಾಮಗಳಿಗೆ ತೆರಳಿ ರೋಗಪೀಡಿತ ರಾಸುಗಳಿಗೆ ಲಸಿಕೆ ಹಾಕುತ್ತಿದ್ದಾರೆ. ರೈತರು ಮೌಢ್ಯಕ್ಕೆ ಜೋತುಬೀಳದೆ ರಾಸುಗಳಿಗೆ ಲಸಿಕೆ ಹಾಕಿಸಬೇಕು. ಲಸಿಕೆ ಹಾಕುವುದರಿಂದ ಹಾಲು ನೀಡುವ ಪ್ರಮಾಣದಲ್ಲಿ ಯಾವುದೇ ತೊಂದರೆಯಾಗುವುದಿಲ್ಲ. ರೋಗ ತಡೆಗೆ ಇಲಾಖೆಯೊಂದಿಗೆ ಸಹಕರಿಸಬೇಕು’ ಎಂದು ಕೋರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry