`ಮೌಢ್ಯತೆ ಬಿತ್ತುವ ಚಿಮೂ, ಭೈರಪ್ಪ'

7

`ಮೌಢ್ಯತೆ ಬಿತ್ತುವ ಚಿಮೂ, ಭೈರಪ್ಪ'

Published:
Updated:
`ಮೌಢ್ಯತೆ ಬಿತ್ತುವ ಚಿಮೂ, ಭೈರಪ್ಪ'

ರಾಮನಗರ: `ಜನರಿಗೆ ಭಗವದ್ಗೀತೆ ಹಂಚುವ ಬದಲು ವಚನ ಸಾಹಿತ್ಯ ಹಂಚಿದರೆ ಉತ್ತಮ ಸಮಾಜ ನಿರ್ಮಿಸಲು ಸಹಕಾರಿಯಾಗುತ್ತದೆ' ಎಂದು ಸಾಹಿತಿ ಡಾ. ಕಾಳೇಗೌಡ ನಾಗವಾರ ಅಭಿಪ್ರಾಯಪಟ್ಟರು.ಜಾನಪದ ಲೋಕದ ಸರಸ್ವತಿ ಮಂದಿರದಲ್ಲಿ ಭಾನುವಾರ ನಡೆದ `ಜಾನಪದ ಮುನ್ನೋಟ' ಕುರಿತ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, `ವಚನ ಸಾಹಿತ್ಯವನ್ನು ಅರ್ಥಮಾಡಿಕೊಳ್ಳಲು ಯಾವುದೇ ಶಬ್ದಕೋಶದ ಅವಶ್ಯಕತೆಯಿಲ್ಲ' ಎಂದರು.

`ಐವತ್ತು ವರ್ಷಗಳಿಂದ ಬಸವಣ್ಣನವರ ಬಗ್ಗೆ ಅಭ್ಯಾಸ ಮಾಡುತ್ತಿರುವ ಸಂಶೋಧಕ ಡಾ. ಎಂ.ಚಿದಾನಂದಮೂರ್ತಿ ಅವರು ಭಗವದ್ಗೀತೆ ಹಂಚುವಂತೆ ಹೇಳುವ ಮೂಲಕ ಮೌಢ್ಯತೆ ಬಿತ್ತುತ್ತಿದ್ದಾರೆ.

ಕಾದಂಬರಿಕಾರ ಎಸ್.ಎಲ್.ಭೈರಪ್ಪನವರಂತಹ ಸಾಹಿತಿಗಳು ಸಮಾಜದಲ್ಲಿ ಮೌಢ್ಯ ಬಿತ್ತುವುದನ್ನೇ ತಮ್ಮ ಕುಲಕಸುಬನ್ನಾಗಿ ಮಾಡಿಕೊಂಡಿದ್ದಾರೆ' ಎಂದು ಆರೋಪಿಸಿದರು. `ಇಂದು ನಮ್ಮಲ್ಲಿರುವ ವೈವಿಧ್ಯತೆ ನಾಶವಾಗುತ್ತಿದೆ. ನೇಕಾರರು, ಮೇದರು, ಕುಂಬಾರರು ತಯಾರಿಸುತ್ತಿರುವ ವಸ್ತುಗಳಿಗೆ ಬೇಡಿಕೆ ಇಲ್ಲದಂತಾಗಿದೆ. ಎಲ್ಲೆಲ್ಲೂ ಪ್ಲಾಸ್ಟಿಕ್ ವಸ್ತುಗಳು ರಾರಾಜಿಸುತ್ತಿವೆ. ಬಡವರ ಹಣ ಹರಕೆ ರೂಪದಲ್ಲಿ ದೊಡ್ಡ ದೇವಾಲಯಗಳನ್ನು ಸೇರುತ್ತಿದೆ. ದೇಶದಲ್ಲಿ ಶೌಚಾಲಯಗಳಿಗಿಂತ ದೇವಾಲಯಗಳೇ ಹೆಚ್ಚಿವೆ. ಜನರಲ್ಲಿ ಜಾಗೃತಿ ಮೂಡಿಸಬೇಕಾದ ಮಾಧ್ಯಮಗಳು ಕೂಡಾ ಮೌಢ್ಯತೆ ಬಿತ್ತುತ್ತಿವೆ. ದಿನದಿಂದ ದಿನಕ್ಕೆ ಅಸಮಾನತೆ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಜನಪದ ಮಹತ್ವ ಎದ್ದು ಕಾಣುತ್ತಿದೆ' ಎಂದರು.`ಪ್ರತಿ ತಾಲ್ಲೂಕುಗಳಲ್ಲಿ ಜನಪದ ಕಲೆಗಳು ಪ್ರಸರಿಸಬೇಕು. ಇದನ್ನು ಜಾರಿಗೊಳಿಸುವಲ್ಲಿ ಸರ್ಕಾರ ಗಮನ ನೀಡಬೇಕು. 60 ವರ್ಷ ತುಂಬಿರುವ ಜನಪದ ಕಲಾವಿರ ಆತ್ಮಕಥೆಯನ್ನು ಪ್ರಕಟಿಸಬೇಕು' ಎಂದು  ಒತ್ತಾಯಿಸಿದರು. ಜಾನಪದ ಮಹಾವಿದ್ಯಾಲಯದ ನಿರ್ದೇಶಕ ಡಾ.ಹಿ.ಶಿ. ರಾಮಚಂದ್ರೇಗೌಡ ಮಾತನಾಡಿ, `ಇಂದು ಎಲ್ಲೆಡೆ ಮಾರಿಕೊಳ್ಳುವ ಸಂಸ್ಕೃತಿ ಬೆಳೆಯುತ್ತಿದೆ. ಸಾಂಸ್ಕೃತಿಕ ಮತ್ತು ಸಾಮಾಜಿಕವಾಗಿ ದಿವಾಳಿಯಾಗಿರುವ ನಾವು ನಮ್ಮನ್ನು ಮಾರಿಕೊಳ್ಳುವ ಹಂತಕ್ಕೆ ತಲುಪಿದ್ದೇವೆ. ಅದ್ದೂರಿ ವೆಚ್ಚದಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನಗಳು ಬಜಾರ್‌ಗಳಾಗಿ ಮಾರ್ಪಾಡಾಗುತ್ತಿವೆ. ಸಮ್ಮೇಳನಗಳೆಂದರೆ ಕೇವಲ ಮೆರವಣಿಗೆ, ತಮಗೆ ಬೇಕಾದವರನ್ನು ಮೆರೆಸುವ ಜಾತ್ರೆಗಳಾಗುತ್ತಿವೆ'ಎಂದು ಟೀಕಿಸಿದರು.ಜನಪದ ಮಹತ್ವ ತಿಳಿಸಲು ಒತ್ತಾಯ:

ಆರ್ಥಿಕವಾಗಿ ದುರ್ಬಲರಾಗಿರುವ ಕಲಾವಿದರಿಗೆ ಸಹಾಯಧನ ನೀಡಲು ಕರ್ನಾಟಕ ಪರಿಷತ್ತಿನಲ್ಲಿ ಕಲಾವಿದರ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಬೇಕು. ಶಾಲಾ ಪಠ್ಯಕ್ರಮದಲ್ಲಿ ಜನಪದ ಕಲೆಗಳನ್ನು ಅಳವಡಿಸಬೇಕು. ಪ್ರಾಥಮಿಕ ಶಿಕ್ಷಕರಿಗೆ ಜನಪದ ಕಲೆಗಳ ತರಬೇತಿ ನೀಡಬೇಕು. ಜನಪದ ಸಾಹಿತ್ಯ ಮತ್ತು ಕಲೆಗಳಿಗೆ ಸಂಬಂಧಿಸಿದಂತೆ ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳಿಗೆ ರಸ ಪ್ರಶ್ನೆ, ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಬೇಕು.ಪದವಿ ಪೂರ್ವ ಹಂತದ ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಜನಪದವನ್ನು ಕಡ್ಡಾಯವಾಗಿ ಅಭ್ಯಾಸ ಮಾಡುವಂತೆ ಪಠ್ಯಕ್ರಮ ರೂಪಿಸಬೇಕು ಎಂಬ ಒತ್ತಾಯ ಸಂವಾದದಲ್ಲಿ ಮೂಡಿಬಂದಿತು.  ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ.ತಿಮ್ಮೇಗೌಡ ಮಾತನಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry