ಮೌನ ಕಣಿವೆಯಲ್ಲಿ ಪಿರಮಿಡ್ ಧ್ಯಾನ

7

ಮೌನ ಕಣಿವೆಯಲ್ಲಿ ಪಿರಮಿಡ್ ಧ್ಯಾನ

Published:
Updated:

ಬೆಂಗಳೂರಿನ ಬಗಲಲ್ಲೇ ಇರುವ ಪಿರಮಿಡ್ ವ್ಯಾಲಿಯಲ್ಲಿನ ಬೃಹತ್ `ಪಿರಮಿಡ್ ಧ್ಯಾನ ಮಂದಿರ~ ನೋಡುಗರಿಗೊಂದು ಅಚ್ಚರಿ. ಎಂಥವರನ್ನೂ ಒಂದರೆಕ್ಷಣ ಅದ್ಭುತ ಲೋಕಕ್ಕೆ ಕರೆದುಕೊಂಡ ಹೋಗಬಲ್ಲ ಚುಂಬಕಶಕ್ತಿಯ ತಾಣ.ಕನಕಪುರ ರಸ್ತೆಯಲ್ಲಿರುವ ಪಿರಮಿಡ್ ವ್ಯಾಲಿಗೆ ಮೆಜೆಸ್ಟಿಕ್‌ನಿಂದ 35 ಕಿ.ಮೀ.ದೂರ. ಇದು ನಿಸರ್ಗದ ಮಡಿಲಲ್ಲಿ ಸ್ವಚ್ಛಂದವಾಗಿ ಹರಡಿಕೊಂಡಿದೆ. ಇಲ್ಲಿರುವ ಪಿರಮಿಡ್ ಆಕಾರದ 104 ಅಡಿ ಎತ್ತರದ ಧ್ಯಾನ ಮಂದಿರವೇ `ಮೈತ್ರೇಯ ಬುದ್ಧ ಪಿರಮಿಡ್~.ಇದರ ವಿಸ್ತಾರ 25,600 ಚದರ ಅಡಿ. ಒಳಗೆ ಐದು ಸಾವಿರ ಜನರು ಒಟ್ಟಿಗೇ ಕುಳಿತು ಧ್ಯಾನ ಮಾಡಬಹುದಾದ ಈ ಪಿರಮಿಡ್‌ನಲ್ಲಿ ದೊರಕುವ ಅನುಭೂತಿ ವಿಶೇಷವಾದದ್ದು. ಮೆಟ್ಟಿಲು ಹತ್ತಿ ಮೇಲೇರಿ ವಿಶಾಲ ಧ್ಯಾನ ಮಂದಿರದಲ್ಲಿ ಬೇಕೆನಿಸುವಷ್ಟು ಹೊತ್ತು ಧ್ಯಾನ ಮಾಡಬಹುದು. ಆಶ್ರಮದ ಒಳಗೆ ಹೆಜ್ಜೆಯಿಡುತ್ತಾ ಹೋದಂತೆ ನಮಗೇ ಗೊತ್ತಿಲ್ಲದ ನಿಶ್ಯಬ್ದ ಲೋಕವೊಂದು ಮೌನವಾಗಿ ತೆರೆದುಕೊಳ್ಳುತ್ತದೆ.ಈ ಪಿರಮಿಡ್ ವ್ಯಾಲಿ ಸುಭಾಷ್ ಪತ್ರೀಜಿ ಅವರ ಕನಸಿನ ಕೂಸು. ಪತ್ರೀಜಿ ಧ್ಯಾನ ಮತ್ತು ಸಸ್ಯಾಹಾರ ಬೋಧನೆಗೆ ಒತ್ತು ನೀಡುವ ಸರಳ ಪದ್ಧತಿಯನ್ನು ಪ್ರಚುರಪಡಿಸುತ್ತಿದ್ದು ಅದನ್ನು ವಿಶ್ವದಾದ್ಯಂತ ಎಲ್ಲರಿಗೂ ತಲುಪಿಸುವ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

`ಪಿರಮಿಡ್ ಸ್ಪಿರಿಚುವಲ್ ಸೊಸೈಟಿ ಮೂವ್‌ಮೆಂಟ್~ ಸ್ಥಾಪಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದಾರೆ. `ಜಗತ್ತಿನಲ್ಲಿ ಮನುಷ್ಯನ ಎಲ್ಲ ದುಃಖಗಳಿಗೆ ಧ್ಯಾನದಿಂದ ಮಾತ್ರವೇ ಪರಿಹಾರ~ ಎಂಬ ದೃಢ ನಂಬಿಕೆ ಹೊಂದಿರುವ ಸಾಧಕ ಅವರು.

ಏನಿದು ಪಿರಮಿಡ್`ಪಿರಮಿಡ್ ಎಂಬುದು ಪೈರಾ ಮತ್ತು ಅಮಿಡ್ ಎಂಬ ಎರಡು ಪದಗಳಿಂದ ಸಂಯೋಜಿತವಾಗಿದೆ. ಪೈರಾ ಎಂದರೆ ಅಗ್ನಿ ಹಾಗೂ ಅಮಿಡ್ ಎಂಬುದು ಬ್ರಹ್ಮಾಂಡದ ಒಳಗಿನ ಶಕ್ತಿಯನ್ನು ತನ್ನೆಡೆಗೆ ಆವಾಹಿಸಿಕೊಳ್ಳುವ ಭಾವಾರ್ಥ ಹೊಂದಿದೆ.ಜ್ಯಾಮಿತಿಯ ಕರಾರುವಾಕ್ಕು ಸ್ವರೂಪದ ಇಂಥ ಸ್ಥಳದ ಕೆಳಗೆ ಕುಳಿತು ಧ್ಯಾನ ಮಾಡುವುದರಿಂದ ಅಗೋಚರ ಶಕ್ತಿ ನಮಗೆ ಲಭ್ಯವಾಗುತ್ತದೆ~ ಎನ್ನುತ್ತಾರೆ ಪತ್ರೀಜಿ.

ಇಡೀ ಕ್ಯಾಂಪಸ್‌ನಲ್ಲಿ ಅಲೆದಾಡಿದರೆ ಮನಸ್ಸಿಗೆ ಮುದ ನೀಡುವ ಮೆಲುದನಿಯ ಸಂಗೀತ ನಿಮ್ಮನ್ನು ಮಂದ್ರ ಜಗತ್ತಿಗೆ ಕರೆದುಕೊಂಡು ಹೋಗುತ್ತದೆ.

ಕಲೆ, ವಿಜ್ಞಾನ, ಅಧ್ಯಾತ್ಮಗಳೆಲ್ಲ ತಳಕು ಹಾಕಿಕೊಂಡಿರುವ ಇಲ್ಲಿನ ಸೌಂದರ್ಯ ಎಂತಹ ನಿರಾಸಕ್ತರಲ್ಲೂ ಒಂದು ಬಗೆಯ ದಿವ್ಯ ಅನುಭೂತಿ ಉಂಟು ಮಾಡಬಲ್ಲದು. ಜಾತಿ ಮತ ಬೇಧಗಳಿಲ್ಲದೆ ಹಿಂದೂ, ಮುಸ್ಲಿಮ್, ಕ್ರೈಸ್ತರು, ಸಿಖ್ಖರು ಹೀಗೆ ದೇಶ ವಿದೇಶಗಳಿಂದ ಆಗಮಿಸುವ ಧ್ಯಾನಾಸಕ್ತರು ಇಲ್ಲಿ ನಿಮ್ಮ ಕಣ್ಣಿಗೆ ಗೋಚರವಾಗುತ್ತಾರೆ.ನೀರು, ಕಾಡು, ಏರಿಳಿವಿನ ಗುಡ್ಡ, ಸೊಗಸಾಗಿ ನಿರ್ಮಿಸಲಾದ ಕೃತಕ ಕಾಲು ಹಾದಿಗಳು, ಕೊಳದ ಬದಿಯಲ್ಲಿ ಮರಗಿಡಗಳ ಕೆಳಗೆ ಕುಳಿತರೆ ಕಿವಿಗೆ ಇಂಪೆನಿಸುವ ಸ್ತರದಲ್ಲಿ ಕೇಳುವ ಸಂಗೀತ ನಿಮ್ಮನ್ನು ಅಯಾಚಿತವಾಗಿ ಧ್ಯಾನಕ್ಕೆ ಪ್ರೇರೇಪಿಸುತ್ತದೆ.ಪ್ರಕೃತಿಯೊಂದಿಗೆ ಬದುಕನ್ನು ಮಿಳಿತ ಮಾಡುವ ಪಿರಮಿಡ್ ವ್ಯಾಲಿಯ ಪ್ರವೇಶಕ್ಕೆ ಬಡವ ಬಲ್ಲಿದರೆಂಬ ಭೇದವಿಲ್ಲ. ಉಸಿರನ್ನು ಎಳೆದು ಹೊರಗೆ ಬಿಡಲಿಕ್ಕೆ ಯಾರೂ ಕಾಸು ಕೊಡಬೇಕಾಗಿಲ್ಲ. ಇಡೀ ಪರಿಸರದಲ್ಲಿ ಬುದ್ಧ ನಿಮ್ಮ ಮೈಮನಗಳಲ್ಲಿ ಹರಿದಾಡುತ್ತಾನೆ.

ದೂರದಿಂದ ಬಂದವರು ತಂಗಲು ಉಳಿಯಲು ವ್ಯವಸ್ಥೆಯೂ ಉಂಟು. ಸರಳ ಸಸ್ಯಾಹಾರ ನಿಮ್ಮ ಉದರದ ಹಸಿವನ್ನು ತಣಿಸುತ್ತದೆ.

ಎಲ್ಲವನ್ನೂ ಕಂಡುಂಡ ಬದುಕು...1947ರಲ್ಲಿ ನಿಜಾಮಾಬಾದ್ ಜಿಲ್ಲೆಯ ಶಕ್ಕರ್ ನಗರದಲ್ಲಿ ಜನಿಸಿದ ಸುಭಾಷ್ ಪತ್ರೀಜಿ,1974ರಲ್ಲಿ ಆಂಧ್ರ ವಿವಿಯಿಂದ ಮಣ್ಣು ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು.ಪ್ರತಿಯೊಬ್ಬರಲ್ಲೂ ವೈಜ್ಞಾನಿಕ ಧೋರಣೆಯ ಧ್ಯಾನಾಸಕ್ತಿ ಹಾಗೂ ಸಸ್ಯಾಹಾರವನ್ನು ಉತ್ತೇಜಿಸುವುದು ಅವರ ಹೆಬ್ಬಯಕೆ. ಮಾನಸಿಕ, ಭೌತಿಕ ಹಾಗೂ ಬೌದ್ಧಿಕ ಶ್ರೀಮಂತಿಕೆಯನ್ನು ಹೊಂದಬೇಕೆಂಬುದು ಅವರ ಇರಾದೆ.

ಆಧ್ಯಾತ್ಮಿಕ ಸ್ಪರ್ಶದ ಮೂಲಕ ಮಾನವ ಸೇವೆಗೆ ತುಡಿಯುತ್ತಿದ್ದ ಇವರು 1979ರಲ್ಲಿ ತಮ್ಮದೇ ಆದ ಧ್ಯಾನದ ಸೂತ್ರವನ್ನು ಅಭಿವೃದ್ಧಿಪಡಿಸಿದರು.  ಅತ್ಯಂತ ಆಶ್ಚರ್ಯದ ಸಂಗತಿ ಎಂದರೆ ಪತ್ರೀಜಿ ಮೊದಲು ಮಾಂಸಾಹಾರಿ ಆಗಿದ್ದರು.

ಮದ್ಯ ಹಾಗೂ ಮಾದಕ ದ್ರವ್ಯಗಳ ಸೇವನೆ ಮಾಡಿದ್ದೂ ಉಂಟು. ಆದರೆ ಅದು ಕೆಟ್ಟದ್ದು ಎಂದು ಗೊತ್ತಾದ ಬಳಿಕ ಸಂಪೂರ್ಣವಾಗಿ ತ್ಯಜಿಸಿದರು. 1991ರಲ್ಲಿ ಕರ್ನೂಲ್‌ನ ಉರವಕೊಂಡದಲ್ಲಿ ಪಿರಮಿಡ್ ಧ್ಯಾನ ಕೇಂದ್ರ ಸ್ಥಾಪಿಸಿ ಎಲ್ಲರ ಮನೆ ಮಾತಾದರು.ಆಧ್ಯಾತ್ಮ, ವಿಜ್ಞಾನ ಹಾಗೂ ಇನ್ನಿತರೆ ಧ್ಯಾನದ ಸಮಕಾಲೀನ ವಿಷಯಗಳಿಗೆ ಸಂಬಂಧಿಸಿದಂತೆ ಸುಮಾರು 60 ಪುಸ್ತಕಗಳನ್ನು ಬರೆದಿದ್ದಾರೆ. ಇವರೊಳಗೊಬ್ಬ ಉತ್ತಮ ಕೊಳಲು ವಾದಕನೂ ಇದ್ದಾನೆ, ಅಂತೆಯೇ ಹಾಡುಗಾರಿಕೆಯಲ್ಲೂ ಸೈ. ಪತ್ನಿ ಸ್ವರ್ಣಮಾಲಾ.ಈ ದಂಪತಿಯ ಇಬ್ಬರು ಪುತ್ರಿಯರು ಕೂಡಾ ಧ್ಯಾನ ಸಾಧಕಿಯರು. ಪ್ರತಿ ಹುಣ್ಣಿಮೆಯ ಬೆಳದಿಂಗಳಿನಲ್ಲಿ ಕಾಡಿನ ಮಧ್ಯೆ ಧ್ಯಾನದ ಶಿಬಿರ ನಡೆಸುವುದು ಪತ್ರೀಜಿ ವಿಶೇಷ. ವಿವರಗಳಿಗೆ www.pssmovement.org  ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry