ಶುಕ್ರವಾರ, ಮೇ 20, 2022
23 °C

ಮೌಲ್ಯಗಳ ಕುಸಿತ ಸಮಸ್ಯೆಗಳಿಗೆ ಕಾರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೌಲ್ಯಗಳ ಕುಸಿತ ಸಮಸ್ಯೆಗಳಿಗೆ ಕಾರಣ

ಬೆಂಗಳೂರು: `ಮೌಲ್ಯಗಳ ಕುಸಿತವೇ ದೇಶದ ಎಲ್ಲಾ ಸಮಸ್ಯೆಗಳಿಗೆ ಕಾರಣ~ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಅಭಿಪ್ರಾಯಪಟ್ಟರು.ನಗರದಲ್ಲಿ ಬುಧವಾರ ರಂಭಾಪುರಿ ಜಗದ್ಗುರುಗಳ ಆಷಾಢ ಮಾಸದ ಪೂಜಾ ಸಮಿತಿಯು ಆಯೋಜಿಸಿದ್ದ ದಶಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.`ಇಂದು ದೇಶದ ಬಗ್ಗೆ ಯೋಚಿಸುವವರು ಕಡಿಮೆಯಾಗುತ್ತಿದ್ದಾರೆ. ಎಲ್ಲರೂ ವೈಯಕ್ತಿಕ ಹಿತಾಸಕ್ತಿಗಳ ಬಗ್ಗೆ ಯೋಚಿಸುತ್ತಾರೆಯೇ ಹೊರತು ಸಮಾಜದ ಬಗ್ಗೆ ಯಾರಿಗೂ ಕಾಳಜಿ ಇಲ್ಲ. ಸಮಾಜದಲ್ಲಿ ಜಾತಿ, ಅಪರಾಧ, ಭ್ರಷ್ಟಾಚಾರಗಳಿಂದಾಗಿ ಸಹಿಷ್ಣುತೆ ಕಡಿಮೆಯಾಗುತ್ತಿದೆ. ವಿಮರ್ಶೆ ಹಾಗೂ ನಿಂದನೆಗಳ ನಡುವಿನ ಗೆರೆ ಮಾಯವಾಗುತ್ತಿದೆ~ ಎಂದು ಅವರು ಅಭಿಪ್ರಾಯಪಟ್ಟರು.`ವೈವಿಧ್ಯಗಳ ನಡುವೆ ವಿಶೇಷವಾಗಿ ಬೆಳೆದು ಬಂದ ಸಂಸ್ಕೃತಿ ಭಾರತದ್ದು. ನಮ್ಮ ದೇಶದಲ್ಲಿ ಭಕ್ತಿಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತಿದೆ. ಜನರಿಗೆ ಸನ್ಮಾರ್ಗ ತೋರುವ ಕೆಲಸವನ್ನು ಮಠ ಮಂದಿರಗಳು ಮಾಡುತ್ತಾ ಬಂದಿವೆ~ ಎಂದರು.ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯ ಮಾತನಾಡಿ, `ನಮ್ಮ ದೇಶದಲ್ಲಿ ಯಾವುದೇ ಧರ್ಮವನ್ನು ಸ್ವೀಕರಿಸಬಹುದು. ಆದರೆ ಯಾವುದೇ ಜಾತಿಯನ್ನು ಸ್ವೀಕರಿಸಲು ಸಾಧ್ಯವಿಲ್ಲ. ಜಾತಿಗಳ ವಿಚಾರದಲ್ಲಿ ನಮ್ಮ ದೇಶ ಸಂಕುಚಿತವಾಗಿದೆಯೇ ಹೊರತು ಧರ್ಮದ ವಿಚಾರದಲ್ಲಿ ಅಲ್ಲ. ವೀರಶೈವ ಧರ್ಮ ಉದಾತ್ತ ಧ್ಯೇಯವನ್ನು ಹೊಂದಿದೆ. ಕಾಯಕ ಹಾಗೂ ದಾಸೋಹ ತತ್ವಕ್ಕೆ ಹೆಚ್ಚಿನ ಆದ್ಯತೆಯನ್ನು ವೀರಶೈವ ಧರ್ಮದಲ್ಲಿ ನೀಡಲಾಗಿದೆ~ ಎಂದರು.ಬಾಳೆಹೊನ್ನೂರು ರಂಭಾಪುರಿ ಮಠದ ವೀರ ಸೋಮೇಶ್ವರ ಸ್ವಾಮೀಜಿ, ಯಡಿಯೂರು ಕ್ಷೇತ್ರದ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಸಿದ್ದರಬೆಟ್ಟದ ಶಾಖಾ ಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಸಮಿತಿಯ ಅಧ್ಯಕ್ಷ ನಟೇಶ್ವರಯ್ಯ ಮತ್ತಿತರರು ದಶಮಾನೋತ್ಸವ ಸಮಾರಂಭದಲ್ಲಿ ಉಪಸ್ಥಿತರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.