ಮಂಗಳವಾರ, ಮೇ 11, 2021
25 °C

ಮೌಲ್ಯಧಾರಿತ ಶೈಕ್ಷಣಿಕ ವ್ಯವಸ್ಥೆ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಪನಹಳ್ಳಿ: ಮಾನವೀಯ ಮೌಲ್ಯಗಳನ್ನು ಉಳಿಸಿ-ಬೆಳಸಿಕೊಂಡು ಹೋಗುವಲ್ಲಿ ನಾವು ವಿಫಲರಾಗಿರುವುದರಿಂದ ಹಾಗೂ ಅವುಗಳನ್ನು ಕಾಪಾಡಿಕೊಂಡು ಹೋಗಲು ನಾವು ನಿಗಾವಹಿಸಲು ಮುಂದಾಗದಿರುವುದರಿಂದ ಮೌಲ್ಯಗಳ ಕುಸಿತ ಹೆಚ್ಚಾಗಿದೆ ಎಂದು ನಿವೃತ್ತ ನ್ಯಾಯಮೂರ್ತಿ ಹಾಗೂ ಕರ್ನಾಟಕ ಕಾನೂನು ಆಯೋಗದ ಅಧ್ಯಕ್ಷ ಡಾ.ವಿ.ಎಸ್. ಮಳೀಮಠ್ ಆತಂಕ ವ್ಯಕ್ತಪಡಿಸಿದರು.ಬುಧವಾರ ಪಟ್ಟಣದ ಎಸ್‌ಸಿಎಸ್ ಫಾರ್ಮಸಿ ಕಾಲೇಜಿನ ಜ್ಞಾನಗಂಗೋತ್ರಿ ಆವರಣದಲ್ಲಿನ ಚಂದ್ರಮೌಳೀಶ್ವರಸ್ವಾಮಿ ಬಯಲು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ತೆಗ್ಗಿನಮಠದ ಚಂದ್ರಮೌಳೀಶ್ವರ ಶಿವಾಚಾರ್ಯ ಸ್ವಾಮೀಜಿ ಅವರ 75 ವರ್ಷದ ಅಮೃತ ಮಹೋತ್ಸವದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.`ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ...~ ಎಂಬ  ಬಸವಾದಿ ಪ್ರಮಥರ ಸುಪ್ರಭಾತದೊಂದಿಗೆ ನಾವು ದೈನಂದಿನ ಜೀವನವನ್ನು ಆರಂಭಿಸುತ್ತಿದ್ದೇವೆ. ಭ್ರಷ್ಟಾಚಾರ, ಅನ್ಯಾಯ - ಅತ್ಯಾಚಾರ ಮಹಾಪಾಪ ಎಂಬ ಪೂರ್ಣಪ್ರಜ್ಞೆ ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೂ, ನಿತ್ಯವೂ ಅನೈತಿಕತೆ, ಮೋಸ-ವಂಚನೆಯಲ್ಲಿಯೇ ತೊಡಗಿಸಿಕೊಳ್ಳುತ್ತೇವೆ ಎಂದು ವಿಷಾದಿಸಿದ ಅವರು, ಪ್ರತಿಯೊಬ್ಬ ಮನುಷ್ಯನ ಅಂತರಂಗದಲ್ಲಿ ಅಡಗಿರುವ ಪಾಶವಿಗುಣ ಇಂತಹ ಅಚಾತುರ್ಯ ಘಟನೆಗಳಿಗೆ ಪ್ರೇರೇಪಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.ಇಂತಹ ಪಾಶವಿಗುಣವನ್ನು ಮನುಷ್ಯನ ಅಂತರಂಗದಿಂದ ಹೊಡೆದೊಡಿಸಲು ಶಿಕ್ಷಣದಿಂದ ಮಾತ್ರ ಸಾಧ್ಯ. ಹಾಗಾಗಿ, ನಮ್ಮ ಶೈಕ್ಷಣಿಕ ವ್ಯವಸ್ಥೆಯಲ್ಲಿ ಮೌಲ್ಯಗಳನ್ನು ಬೆಳೆಸುವಂತಹ ಪದ್ಧತಿ ಜಾರಿಯಾಗಬೇಕಾಗಿದೆ. ಅಂತಹ ಶೈಕ್ಷಣಿಕ ವ್ಯವಸ್ಥೆ ಮಠ -ಮಾನ್ಯಗಳಿಂದಲೇ ಆರಂಭವಾಗಬೇಕೇ ಹೊರತು, ಬೇರೆಯವರಿಂದ ಸಾಧ್ಯವಾಗದು ಎಂದರು.ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅಧ್ಯಕ್ಷತೆ ವಹಿಸಿದ್ದರು.

ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಹೊನ್ನಾಳಿ ಹಿರೇಕಲ್ಮಠದ ಒಡೆಯರ್ ಚಂದ್ರಶೇಖರ ಸ್ವಾಮೀಜಿ, ಗುಲ್ಬರ್ಗದ ಶರಣಬಸವೇಶ್ವರ ಸಂಸ್ಥಾನದ ಡಾ.ಶರಣಬಸಪ್ಪ ಅಪ್ಪ, ತೆಗ್ಗಿನಮಠದ ಚಂದ್ರಮೌಳೀಶ್ವರ ಸ್ವಾಮೀಜಿ, ಕರ್ನಾಟಕ ವಿಶ್ವವಿದ್ಯಾಲಯದ ತತ್ವಶಾಸ್ತ್ರ ಪ್ರಾಧ್ಯಾಪಕ ಡಾ.ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.ತೆಗ್ಗಿನಮಠದ ಕಾರ್ಯದರ್ಶಿ ಟಿ.ಎಂ. ಚಂದ್ರಶೇಖರಯ್ಯ, ಅಮೃತ ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ಎ.ಎಂ. ಮಲ್ಲಿಕಾರ್ಜುನಯ್ಯ, ಟಿ.ಎಂ. ಮಂಜುನಾಥ, ವಕೀಲರಾದ ಸಿ. ಚಂದ್ರಶೇಖರ್ ಭಟ್, ಪುರಸಭಾ ಮಾಜಿ ಅಧ್ಯಕ್ಷ ಎಂ. ರಾಜಶೇಖರ್ ಇತರರು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ. ವೀರಭದ್ರಯ್ಯ ಹಾಗೂ `ಸುಧಾ~ ವಾರಪತ್ರಿಕೆಯ ಸುದ್ದಿ ಸಂಪಾದಕ ಗುಡಿಹಳ್ಳಿ ನಾಗರಾಜ್ ಅವರಿಗೆ `ತೆಗ್ಗಿನಮಠ ಶ್ರೀ~ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.