ಮೌಲ್ಯಮಾಪಕರ ಸೆಳೆಯುವುದು ಹೇಗೆ?

7

ಮೌಲ್ಯಮಾಪಕರ ಸೆಳೆಯುವುದು ಹೇಗೆ?

Published:
Updated:
ಮೌಲ್ಯಮಾಪಕರ ಸೆಳೆಯುವುದು ಹೇಗೆ?

ಎರಡನೇ ತರಗತಿಯ ಪುಟ್ಟ ರೇಣುವಿನ ತಾಯಿ ನನಗೆ ಹೇಳಿದರು, `ದಿನಾ ನಮ್ಮ ರೇಣು ಹೋಂವರ್ಕ್ ಮಾಡುವಾಗ ಕೈ ನೋಯತ್ತೆ ಅಂತ ಒಂದೇ ಸಮನೆ ಕಣ್ಣೀರು ಹಾಕ್ತಾಳೆ'.ಮಕ್ಕಳ ಅಧಿಕೃತ ಶಿಕ್ಷಣ ಓದು ಮತ್ತು ಬರಹದಿಂದ ಆರಂಭವಾಗುತ್ತದೆ. ಸುಮಾರು 24 ವರ್ಷ ಆಗುವವರೆಗೂ ವಿದ್ಯಾರ್ಥಿ ಅವಧಿಯಲ್ಲಿ ಅವರು ಬರೆಯುತ್ತಲೇ ಇರಬೇಕಾಗುತ್ತದೆ. ಮುಂದೆ ಕೆಲವು ನೌಕರಿ ಮಾಡುವಾಗಲೂ ಬರೆಯುವುದನ್ನು ಮುಂದುವರಿಸ ಬೇಕಾಗುತ್ತದೆ. ಉದಾಹರಣೆಗೆ ಪ್ರಿಸ್ಕ್ರಿಪ್ಷನ್ ಬರೆಯುವುದು ವೈದ್ಯರ ಕೆಲಸದ ಒಂದು ಭಾಗವಲ್ಲವೇ? ಒಟ್ಟಿನಲ್ಲಿ ಬರವಣಿಗೆ ಒಂದು ಬಹು ಮುಖ್ಯ ಶೈಕ್ಷಣಿಕ ಚಟುವಟಿಕೆ. ವಿಶ್ವದಾದ್ಯಂತ `ಪೇಪರ್‌ಲೆಸ್ ಶಿಕ್ಷಣ' ಅಥವಾ `ಆನ್‌ಲೈನ್ ಶಿಕ್ಷಣ' ಬರಲು ಇನ್ನೂ ಒಂದು ಶತಮಾನವಾದರೂ ಬೇಕಾಗಬಹುದು. ಅಲ್ಲಿಯವರೆಗೆ ಬರವಣಿಗೆ ತಪ್ಪುವುದಿಲ್ಲ.ಸಾಮಾನ್ಯವಾಗಿ 9ನೇ ತರಗತಿಯವರೆಗೂ ವಿದ್ಯಾರ್ಥಿಗಳಿಗೆ ಪಾಠ ಕಲಿಸುವ ಶಿಕ್ಷಕರೇ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡುತ್ತಾರೆ. ಅವರಿಬ್ಬರ ನಡುವೆ ಒಂದು `ಭಾವನಾತ್ಮಕ ಸಂಬಂಧ' ಇರುತ್ತದೆ. ಒಬ್ಬ ವಿದ್ಯಾರ್ಥಿಯ ಉತ್ತರ ಪತ್ರಿಕೆ ಶಿಕ್ಷಕರ ಕೈಗೆ ಬಂದೊಡನೆ, ಕೈಬರಹದ ಪರಿಚಯದಿಂದಾಗಿ ಅವನ ಚಿತ್ರವು ಹಿನ್ನೆಲೆಯಲ್ಲಿ ಮೂಡುತ್ತದೆ. ಅವನು ತರಗತಿಯಲ್ಲಿ ಹೇಗೆ ನಡೆದುಕೊಳ್ಳುತ್ತಿದ್ದ, ಅವನ ಸ್ವಭಾವ ಎಂತಹುದು, ಅವನ ಸಮಯ ಪಾಲನೆ, ಅವನು ತಪ್ಪಿಲ್ಲದೆ ಹೋಂವರ್ಕ್ ಮಾಡುತ್ತಿದ್ದನೇ ಇತ್ಯಾದಿ ಸಂಗತಿಗಳು ನೆನಪಿಗೆ ಬರುತ್ತವೆ. ಹೀಗಾಗಿ ಅವರು ವಸ್ತುನಿಷ್ಠವಾಗಿ ಮೌಲ್ಯಮಾಪನ ಮಾಡಲು ಸಾಧ್ಯವಾಗುವುದಿಲ್ಲ.ಎಸ್ಸೆಸ್ಸೆಲ್ಸಿ ಮತ್ತು ಉನ್ನತ ಪರೀಕ್ಷೆಗಳಲ್ಲಿ ಕೇಂದ್ರೀಕೃತ ಮೌಲ್ಯಮಾಪನ ಇರುತ್ತದೆ. ಅಂದರೆ ವಿದ್ಯಾರ್ಥಿಯು ಪರೀಕ್ಷೆಯಲ್ಲಿ ಬರೆದ ಉತ್ತರಗಳನ್ನು ಯಾರೋ ಅಜ್ಞಾತ ಶಿಕ್ಷಕರು ಮೌಲ್ಯಮಾಪನ ಮಾಡುತ್ತಾರೆ. ಅವರಿಗೆ ಒಂದು ಉತ್ತರ ಪತ್ರಿಕೆ ಹುಡುಗನದೋ ಅಥವಾ ಹುಡುಗಿಯದೋ ಎಂದು ಸಹ ತಿಳಿದಿರುವುದಿಲ್ಲ.ಮೌಲ್ಯಮಾಪನ ಕೆಲಸದ ಬಗ್ಗೆ ಬಹುತೇಕ ಶಿಕ್ಷಕರಿಗೆ ತುಂಬಾ ಪ್ರೀತಿಯೇನೂ ಇರುವುದಿಲ್ಲ. ಬೆಳಗಿನಿಂದ ಸಂಜೆಯವರೆಗೆ ಒಂದೇ ಸಮನೆ ಉತ್ತರ ಪತ್ರಿಕೆಗಳನ್ನು ನೋಡುತ್ತಾ ಕೂಡುವ ಕೆಲಸವನ್ನು ಯಾರು ತಾನೇ ಇಷ್ಟಪಡುತ್ತಾರೆ? ಅಕ್ಷರಗಳು ಕೆಟ್ಟದಾಗಿದ್ದರಂತೂ ಶಿಕ್ಷಕರ `ತಲೆನೋವು' ಇನ್ನಷ್ಟು ಹೆಚ್ಚಾಗುತ್ತದೆ. ಅಲ್ಲೊಂದು ಇಲ್ಲೊಂದು ಸುಂದರ ಕೈಬರಹದ ಉತ್ತರ ಪತ್ರಿಕೆಗಳು ಮರಳುಗಾಡಿನಲ್ಲಿ ಓಯಸಿಸ್‌ನಂತೆ ಕಾಣಿಸಿದರೆ ಅವರ ಮನಸ್ಸು ಉಲ್ಲಸಿತವಾಗುತ್ತದೆ. ಸುಂದರ ಕೈಬರಹದಿಂದ ತಮ್ಮ ಕೆಲಸವನ್ನು ಹಗುರ ಮಾಡುವ ವಿದ್ಯಾರ್ಥಿಗಳ ಬಗ್ಗೆ ಅವರು ಧಾರಾಳ ಮನೋಭಾವ ತೋರುವುದು ಸ್ವಾಭಾವಿಕ ಅಲ್ಲವೇ?ನನ್ನ ಪ್ರಕಾರ, ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತರಗಳನ್ನು `ಬರೆಯಬೇಕು' ಎಂಬುದೇ ಸರಿಯಲ್ಲ. `ಅಜ್ಞಾತ ಮೌಲ್ಯಮಾಪಕರ ಮನ ಗೆಲ್ಲುವಂತೆ ಉತ್ತರಗಳನ್ನು ಪ್ರೆಸೆಂಟ್ (ನಿವೇದನೆ) ಮಾಡಬೇಕು' ಎಂಬುದೇ ಸರಿ. ಆದರೆ ಉತ್ತರಗಳನ್ನು ನಿವೇದನೆ ಮಾಡುವ ಈ ಕೌಶಲ ಇದ್ದಕ್ಕಿದ್ದಂತೆ ಉನ್ನತ ಪರೀಕ್ಷೆಗಳಲ್ಲಿ ಬಂದುಬಿಡುವುದಿಲ್ಲ. ಅದನ್ನು ಮೊದಲಿನಿಂದಲೇ ಪ್ರಯತ್ನಪೂರ್ವಕವಾಗಿ ಸಾಧಿಸಬೇಕಾಗುತ್ತದೆ. ತರಗತಿಗಳಲ್ಲಿ ಪ್ರತಿ ದಿನ ಶಿಕ್ಷಕರಿಗೆ ಹೋಂವರ್ಕನ್ನು ಕಾಟಾಚಾರಕ್ಕೆ ಮಾಡಿ ತೋರಿಸುವ ಬದಲು, ಅದನ್ನು ನಿವೇದನೆ ಮಾಡುವುದು ವಿದ್ಯಾರ್ಥಿಗಳಿಗೆ ಶ್ರೇಯಸ್ಕರ. ನಾವು ಬರೆದುದನ್ನು ನೋಡಿ `ವ್ಹಾ! ಅದೆಷ್ಟು ಚೆನ್ನಾಗಿದೆ, ವೆರಿಗುಡ್' ಎಂದು ಶಿಕ್ಷಕರು ಉದ್ಗರಿಸುವಂತೆ ಇರಬೇಕು.ಬರವಣಿಗೆ ಕೂಡ ನಮ್ಮ ಭಾವನೆಗಳ, ವ್ಯಕ್ತಿತ್ವದ ಪ್ರಕಟಣೆ. `ಇತರರಿಗೆ ನಮ್ಮನ್ನು ನೋಡಿ ಒಳ್ಳೆಯ ಭಾವನೆ ಬರಲಿ' ಎಂದು ನಾವು ಚೆನ್ನಾಗಿ ಡ್ರೆಸ್ ಮಾಡಿಕೊಳ್ಳುವ ಮನಃಸ್ಥಿತಿಯನ್ನು ಬರೆಯುವಾಗಲೂ ಹೊಂದಿರಬೇಕು. ಉನ್ನತ ಪರೀಕ್ಷೆಗಳಲ್ಲಂತೂ ಇದು ತೀರಾ ಅಗತ್ಯ.

ಮಹಾತ್ಮ ಗಾಂಧೀಜಿ ಅವರು `ಒಳ್ಳೆಯ ಕೈಬರಹವು ಶಿಕ್ಷಣದ ಅವಶ್ಯಕ ಭಾಗ' ಎಂದಿದ್ದಾರೆ. ಬಹು ಹಿಂದೆಯೇ ಫ್ರಾನ್ಸಿಸ್ ಬೇಕನ್ ಕೂಡ `ಬರವಣಿಗೆಯು ಮನುಷ್ಯನನ್ನು ಪರಿಪೂರ್ಣನನ್ನಾಗಿ ಮಾಡುತ್ತದೆ' ಎಂದಿದ್ದಾರೆ.(ಮುಂದಿನ ವಾರ: ಪೆನ್ಸಿಲ್/ಪೆನ್ ಹಿಡಿದುಕೊಳ್ಳುವುದು ಹೇಗೆ?)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry