ಬುಧವಾರ, ಏಪ್ರಿಲ್ 14, 2021
23 °C

ಮೌಲ್ಯಮಾಪನದಲ್ಲಿ ಡಿಜಿಟಲ್‌ತಂತ್ರಜ್ಞಾನ

ಬಸವರಾಜ ಹವಾಲ್ದಾರ Updated:

ಅಕ್ಷರ ಗಾತ್ರ : | |

ರಾಜ್ಯದ ಏಕೈಕ ತಾಂತ್ರಿಕ ವಿಶ್ವವಿದ್ಯಾಲಯವಾದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಈಗಾಗಲೇ ಶೈಕ್ಷಣಿಕ ಚಟುವಟಿಕೆಯ ವಿವಿಧ ವಿಭಾಗಗಳಲ್ಲಿ ತಂತ್ರಜ್ಞಾನ ಬಳಸಿಕೊಂಡಿದೆ. ಈಗ ಮೌಲ್ಯಮಾಪನದಲ್ಲಿಯೂ ಡಿಜಿಟಲ್ ತಂತ್ರಜ್ಞಾನ ಬಳಸಿಕೊಳ್ಳುವ ಮೂಲಕ ಮತ್ತೊಂದು ಮೈಲಿಗಲ್ಲು ಸ್ಥಾಪಿಸಲು ಮುಂದಾಗಿದೆ.ಡಿಜಿಟಲ್ ಮೌಲ್ಯಮಾಪನ ಆರಂಭಿಸಲಾಗುತ್ತಿದ್ದು, ಇದರಿಂದ ಮೌಲ್ಯಮಾಪನದ ವಿವಿಧ ಹಂತದಲ್ಲಿ ಆಗುತ್ತಿದ್ದ ಮಾನವ ತಪ್ಪುಗಳಿಗೆ ತಡೆ ಬೀಳಲಿದೆ. ನಿಖರತೆ ಹೆಚ್ಚಾಗಲಿದೆ. ಜತೆಗೆ ಶೀಘ್ರದಲ್ಲಿ ಫಲಿತಾಂಶ ನೀಡಲು ಸಾಧ್ಯವಾಗುತ್ತದೆ.ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ 186 ಎಂಜಿನಿಯರಿಂಗ್ ಕಾಲೇಜಿನ 60 ಸಾವಿರ ವಿದ್ಯಾರ್ಥಿಗಳು ಬರುತ್ತಾರೆ. ಜತೆಗೆ 28 ಯುಜಿ ಪ್ರೋಗ್ರಾಂ ಹಾಗೂ 71 ಪಿಜಿ ಪ್ರೋಗ್ರಾಂ, ಸಂಶೋಧನಾ ವಿಭಾಗದ 20 ಸಾವಿರ ವಿದ್ಯಾರ್ಥಿಗಳಿದ್ದಾರೆ.ಈ ಎಲ್ಲ ವಿದ್ಯಾರ್ಥಿಗಳ ಪ್ರವೇಶದಿಂದ ಹಿಡಿದು ಪರೀಕ್ಷೆ ಮುಗಿಸುವವರೆಗಿನ ಎಲ್ಲ ಪ್ರಕ್ರಿಯೆಯನ್ನು ತಂತ್ರಜ್ಞಾನದ ಮೂಲಕ ನಿಭಾಯಿಸಲು ಯೋಜಿಸಲಾಗಿದೆ. ಈಗಾಗಲೇ ಪಿಎಚ್.ಡಿ, ಎಂಬಿಎ, ಎಂಸಿಎ ವಿದ್ಯಾರ್ಥಿಗಳ 20 ಸಾವಿರದಷ್ಟು ಉತ್ತರ ಪತ್ರಿಕೆಗಳನ್ನು ಡಿಜಿಟಲ್ ತಂತ್ರಜ್ಞಾನದ ಮೂಲಕ ಮೌಲ್ಯಮಾಪನ ಮಾಡಲಾಗಿದೆ. 2011-12ನೇ ಸಾಲಿನಿಂದ ಎಂಜಿನಿಯರಿಂಗ್ ಕೋರ್ಸ್‌ಗೂ ವಿಸ್ತರಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎನ್ನುತ್ತಾರೆ ವಿಟಿಯು ಕುಲಪತಿ ಡಾ.ಎಚ್. ಮಹೇಶಪ್ಪ.ಹೊಸದಾಗಿ ತಯಾರಿಸುವ ಸಾಫ್ಟವೇರ್‌ನಲ್ಲಿ ಆನ್‌ಲೈನ್ ಮೂಲಕ ವಿದ್ಯಾರ್ಥಿಗಳು ಪರೀಕ್ಷೆ ಫಾರ್ಮ್ ಭರ್ತಿ ಮಾಡಬಹುದಾಗಿದೆ. ಅವರಿಗೆ ಹಾಲ್ ಟಿಕೆಟ್ ಸಹ ಅಲ್ಲಿಯೇ ಲಭ್ಯವಾಗುತ್ತದೆ. ಅದರ ಪ್ರಿಂಟ್ ಪ್ರತಿಯೊಂದಿಗೆ ಅಭ್ಯರ್ಥಿ ಪರೀಕ್ಷೆಗೆ ಹಾಜರಾಗಬಹುದು. ಇಂಟರ್ನಲ್ ಅಸೆಸ್‌ಮೆಂಟ್ ಅಂಕಗಳನ್ನು ನೇರವಾಗಿ ಸರ್ವರ್‌ಗೆ ಹಾಕಲಾಗುತ್ತದೆ.ಹಿರಿಯ ಉಪನ್ಯಾಸಕ ವರ್ಗದ ಸಹಾಯದಿಂದ ಪ್ರಶ್ನೆಪತ್ರಿಕೆಗಳನ್ನು ತಯಾರಿಸಲಾಗುತ್ತದೆ. ಅವುಗಳನ್ನು ನೂತನ ಸಾಫ್ಟವೇರ್‌ನಲ್ಲಿ ಕೋಡಿಂಗ್ ಮಾಡಿ ಅಪ್‌ಲೋಡ್ ಮಾಡಲಾಗುತ್ತದೆ.ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲ ಕಾಲೇಜುಗಳಿಗೂ ರಾಜ್ಯ ಸರ್ಕಾರದ ಸಹಾಯದಿಂದ ವಿಪಿನ್ (ವರ್ಚ್ಯೂವಲ್ ಪ್ರೈವೇಟ್  ನೆಟವರ್ಕ್) ಅಳವಡಿಸಲಾಗುತ್ತಿದೆ. ಆ ಮೂಲಕವೇ ಪರೀಕ್ಷೆಯ ಆರಂಭದ ಹದಿನೈದು ನಿಮಿಷಕ್ಕೂ ಮೊದಲು ಆಯಾ ಕಾಲೇಜುಗಳನ್ನು ತೆಗೆದುಕೊಳ್ಳುವ ವ್ಯವಸ್ಥೆ ಮಾಡಲಾಗುತ್ತದೆ.ಪರೀಕ್ಷೆ ನಂತರ ಬರುವ ಉತ್ತರ ಪತ್ರಿಕೆಗಳನ್ನು ಕೋಡಿಂಗ್ ಮಾಡಿ ವಿಪಿಎನ್ (ವರ್ಚ್ಯೂವಲ್ ಪ್ರೈವೇಟ್  ನೆಟ್‌ವರ್ಕ್) ಮೂಲಕ ಎಂಜಿನಿಯರಿಂಗ್ ಕಾಲೇಜುಗಳಿಗೆ ಕಳುಹಿಸಲಾಗುತ್ತದೆ. ಮೌಲ್ಯಮಾಪಕರು ಅಲ್ಲಿಯೇ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಬಹುದಾಗಿದೆ.ಡಿಜಿಟಲ್ ಮೌಲ್ಯಮಾಪನ ತಂತ್ರಜ್ಞಾನ ಅಳವಡಿಸಿರುವ ಕಂಪ್ಯೂಟರ್‌ನಲ್ಲಿ ಮೌಲ್ಯಮಾಪಕರಿಗೆ ನೀಡಿರುವ ಕೋಡ್ ಸಂಖ್ಯೆ ಒತ್ತುತ್ತಿದ್ದಂತೆಯೇ ಸ್ಕ್ರೀನ್ ಮೇಲೆ ಉತ್ತರ ಪತ್ರಿಕೆ ಕಾಣಿಸಿಕೊಳ್ಳುತ್ತದೆ. ಆ ಸ್ಕ್ರೀನ್‌ನ ಒಂದು ಬದಿ ಪ್ರಶ್ನೆಪತ್ರಿಕೆಯ ಉತ್ತರಗಳು, ಇನ್ನೊಂದು ಬದಿ ಅಂಕಗಳನ್ನು ನೀಡುವ ಪಟ್ಟಿ ಕಾಣಿಸಿಕೊಳ್ಳುತ್ತದೆ.

ಅಂಕಗಳನ್ನು ನೀಡುತ್ತಿದ್ದಂತೆಯೇ ಅವುಗಳನ್ನು ಟೋಟಲ್ ಮಾಡಿ ಅಂಕಪಟ್ಟಿಯಲ್ಲಿ ಕಂಪ್ಯೂಟರ್ ಹಾಕುತ್ತದೆ. ನೂತನ ತಂತ್ರಜ್ಞಾನದಿಂದಾಗಿ ಮೌಲ್ಯಮಾಪನ ಸಂದರ್ಭದಲ್ಲಾಗುತ್ತಿದ್ದ ಹಲವಾರು ಲೋಪ, ದೋಷಗಳು ಕಾಣೆಯಾಗಲಿವೆ.

ಉತ್ತರ ಪತ್ರಿಕೆಯಲ್ಲಿ ಕೆಲ ಪುಟ ಬಿಟ್ಟು ಬರೆದ ಉತ್ತರಗಳನ್ನು ಮೌಲ್ಯಮಾಪಕರು ನೋಡದೇ ಇರುತ್ತಿದ್ದರು. ಅದು ಇಲ್ಲಿ ಆಗುವುದಿಲ್ಲ. ಕೂಡುವಿಕೆಯಲ್ಲಿ ಕೆಲವು ಬಾರಿ ತಪ್ಪುಗಳಾಗುತ್ತಿದ್ದವು. ಡಿಜಿಟಲ್ ಮೌಲ್ಯಮಾಪನದಲ್ಲಿ ಅಂಕಗಳನ್ನು ನೀಡುತ್ತಿದ್ದಂತೆಯೇ ಕಂಪ್ಯೂಟರೇ ಎಲ್ಲ ಅಂಕಗಳನ್ನು ಒಂದೆಡೆ ಕೂಡಿಸುತ್ತದೆ.ಮೌಲ್ಯಮಾಪಕರು ವಿಶ್ವವಿದ್ಯಾಲಯಕ್ಕೆ ಬರುವ ಶ್ರಮ ತಪ್ಪುತ್ತದೆ. ಅವರ ಕಾಲೇಜಿನಲ್ಲಿಯೇ ಮೌಲ್ಯಮಾಪನ ಕೈಗೊಳ್ಳಬಹುದು. ಪ್ರಶ್ನೆಪತ್ರಿಕೆಗಳ ಸಾಗಾಟ ಮಾಡುವುದು ನಿಲ್ಲುತ್ತದೆ. ಹೀಗಾಗಿ ಈ ತಂತ್ರಜ್ಞಾನದಿಂದ ವಿಶ್ವವಿದ್ಯಾಲಯಕ್ಕೆ ಆರ್ಥಿಕ ವಾಗಿಯೂ ಉಳಿತಾಯವಾಗಲಿದೆ. ತಂತ್ರಜ್ಞಾನದಿಂದಾಗಿ ನಿಖರ ಫಲಿತಾಂಶ ಸಿಗುತ್ತದೆ. ಇದು ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ವಿಶ್ವವಿದ್ಯಾಲಯ ನೀಡುತ್ತಿರುವ ಕೊಡುಗೆಯಾಗಿದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.