ಮೌಲ್ಯಮಾಪನದ ಚೆಲ್ಲಾಟ ವಿದ್ಯಾರ್ಥಿಗೆ ಸಂಕಟ...

7

ಮೌಲ್ಯಮಾಪನದ ಚೆಲ್ಲಾಟ ವಿದ್ಯಾರ್ಥಿಗೆ ಸಂಕಟ...

Published:
Updated:

ಅಕ್ಕಿಆಲೂರ: ದ್ವಿತೀಯ ಪಿ.ಯು.ಸಿ. ಪರೀಕ್ಷೆಯ ಉತ್ತರ ಪತ್ರಿಕೆ ಮೌಲ್ಯಮಾಪನ ಸಂದರ್ಭದಲ್ಲಿ ಸಂಭವಿಸಿದ ಅಚಾತುರ್ಯದಿಂದಾಗಿ ಇಲ್ಲಿಯ ನರಸಿಂಗರಾವ್ ದೇಸಾಯಿ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಪ್ರವೀಣ ರಮೇಶ ಶೇಷಗಿರಿ ಕಣ್ಣೀರು ಹಾಕುವಂತಾಗಿದೆ.ಕಾಲೇಜಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಯಾದ ಪ್ರವೀಣ ಕನ್ನಡಕ್ಕೆ-92, ಇಂಗ್ಲಿಷ್-67, ಅರ್ಥಶಾಸ್ತ್ರ-90, ಭೂಗೋಳಶಾಸ್ತ್ರ-90, ಲೆಕ್ಕಶಾಸ್ತ್ರ-90 ಹೀಗೆ ಎಲ್ಲ ವಿಷಯಗಳಲ್ಲಿಯೂ ಚೆನ್ನಾಗಿ ಅಂಕ ಗಳಿಸಿದ್ದಾನೆ. ಆದರೆ, ವಾಣಿಜ್ಯ ಶಾಸ್ತ್ರಕ್ಕೆ ಈತನಿಗೆ ಅಂಕವನ್ನೇ ನೀಡದೆ ಸೊನ್ನೆ ಪ್ರಕಟಿಸಿ ಒಟ್ಟಾರೆ ಫಲಿತಾಂಶವನ್ನು ಅನುತ್ತೀರ್ಣಗೊಳಿಸಲಾಗಿದೆ.ಉತ್ತರ ಪತ್ರಿಕೆ ಮೌಲ್ಯಮಾಪನ ಮುಕ್ತಾಯಗೊಂಡ ಬಳಿಕ ಮೌಲ್ಯಮಾಪನ ಮಾಡಿದ ಉಪನ್ಯಾಸಕರು ಶೇಡಿಂಗ್ ವಿಧಾನದಲ್ಲಿ ಅಂಕಗಳನ್ನು ನಮೂದಿಸಬೇಕಾಗುತ್ತದೆ. ಈ ವೇಳೆಯಲ್ಲಿ ಅಚಾತುರ್ಯದಿಂದ ಅಂಕ ನೀಡದೆ ಸೊನ್ನೆ ಪ್ರಕಟಿಸಿರಬಹುದೆಂಬ ಅಭಿಪ್ರಾಯ ಉಪನ್ಯಾಸಕರಿಂದ ವ್ಯಕ್ತವಾಗಿದೆ.ವಾಣಿಜ್ಯ ಶಾಸ್ತ್ರ ಪರೀಕ್ಷೆಗೆ ಹಾಜರಾಗಿ ಸಾಕಷ್ಟು ಉತ್ತಮವಾಗಿಯೇ ಪರೀಕ್ಷೆ ಬರೆದಿರುವುದಾಗಿ ಹೇಳುವ ಪ್ರವೀಣ ತನಗೆ 90ಕ್ಕೂ ಹೆಚ್ಚು ಅಂಕಗಳು ಲಭಿಸಬೇಕಿತ್ತು. ಇದರಲ್ಲಿ 5-10 ಅಂಕಗಳು ವ್ಯತ್ಯಾಸವಾಗಿದ್ದರೂ ತೊಂದರೆ ಇರಲಿಲ್ಲ. ಆದರೆ ಒಂದೂ ಅಂಕವನ್ನು ನೀಡದೇ ಇರುವುದರಿಂದ ಆತಂಕ ಉಂಟಾಗಿದೆ. ಮೌಲ್ಯಮಾಪನದ ವೇಳೆಯಲ್ಲಿ ಕಣ್ತಪ್ಪಿನಿಂದ ತಪ್ಪು ಅಂಕ ನೀಡಿರಬಹುದು.  ಈ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ದೂರು ನೀಡುವೆ ಎಂದು ಹೇಳಿದ್ದಾನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry