ಶುಕ್ರವಾರ, ಮೇ 14, 2021
25 °C

ಮೌಲ್ಯಮಾಪನ ಬಹಿಷ್ಕಾರ: ರೈತ ಸಂಘ ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ದ್ವಿತೀಯ ಪಿಯು ಮೌಲ್ಯಮಾಪನ ಕಾರ್ಯವನ್ನು ಉಪನ್ಯಾಸಕರು ಬಹಿಷ್ಕರಿಸಿರುವುದನ್ನು ರೈತ ಸಂಘ ಹಾಗೂ ಹಸಿರು ಸೇನೆ ಖಂಡಿಸಿದೆ.ದೇಶದ ಆಹಾರ ಭದ್ರತೆಗೆ ದುಡಿಯುತ್ತಿರುವ ರೈತರಿಗೆ ಸರ್ಕಾರದ ಅನುದಾನವಿಲ್ಲದೆ ಬೆಳೆ ನಷ್ಟವಾಗಿ ಸಾಲ ಮಾಡಿ ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಯಲ್ಲಿದ್ದಾರೆ. ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದೆ. ಸರ್ಕಾರಿ ನೌಕರರಿಗೆ ಈಗ ಕೊಟ್ಟಿರುವ ಸಂಬಳವೇ ಜಾಸ್ತಿಯಾಗಿದ್ದು, ರಾಜ್ಯದಲ್ಲಿ ಜನರು ಅನ್ನವಿಲ್ಲದೆ ಸಾಯುತ್ತಿರುವಾಗ ಸರ್ಕಾರಿ ನೌಕರರು ಒಂದಲ್ಲ ಒಂದು ಕಾರಣಕ್ಕೆ ವಿನಾಕಾರಣ ಚಳವಳಿ ದಾರಿ ಹಿಡಿಯುತ್ತಿರುವುದಕ್ಕೆ ನೋಡಿದರೆ ಸರ್ಕಾರಕ್ಕೆ `ಬ್ಲಾಕ್‌ಮೇಲ್ ತಂತ್ರ~ ಅನುಸರಿಸುತ್ತಿರುವುದು ಖಂಡನೀಯ ಎಂದು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ರಾಜ್ಯ ಉಪಾಧ್ಯಕ್ಷ ಬಾಗೇನಾಳ್ ಕೊಟ್ರಬಸಪ್ಪ, ತಿಮ್ಮಪ್ಪಯ್ಯನಹಳ್ಳಿ ರಾಜಣ್ಣ, ನಿಜಲಿಂಗಪ್ಪ, ಡಿ. ಚಂದ್ರಶೇಖರ ನಾಯ್ಕ, ಬೆಳಗಲ್ ಈಶ್ವರಯ್ಯಸ್ವಾಮಿ ಮತ್ತಿತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಇಂದಿನ ಪರಿಸ್ಥಿತಿಯಲ್ಲಿ ಅಧಿಕಾರಿಗಳು, ರಾಜಕಾರಣಿಗಳು ಮಾತ್ರ ಸುಖವಾಗಿ ಬದುಕುತ್ತಿದ್ದು, ರೈತರು, ಕೂಲಿಕಾರರು ಮಾತ್ರ ಕಷ್ಟ ಅನುಭವಿಸುವಂತಾಗಿದೆ. ಉಪನ್ಯಾಸಕರಿಗೆ ಕೈತುಂಬಾ ಸಂಬಳ, ಸೌಲಭ್ಯಗಳನ್ನು ನೀಡುತ್ತಿದ್ದರೂ ಮತ್ತೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿರುವುದು ವಂಚನೆ ಮತ್ತು ದೇಶದ್ರೋಹವಾಗಿದೆ ಎಂದು ದೂರಿದ್ದಾರೆ.ಸರ್ಕಾರ ಈಗಾಗಲೇ ಸರ್ಕಾರಿ ನೌಕರರಿಗೆ ವೇತನ ಹೆಚ್ಚಿಸಿದೆ. ಸಂಬಳದ ತಾರತಮ್ಯ ನಿವಾರಿಸಲು ಸರ್ಕಾರ ಜತೆ ಕುಳಿತು ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು. ರೈತರು, ಕೂಲಿಕಾರರು ತಮ್ಮ ಮಕ್ಕಳ ಭವಿಷ್ಯಕ್ಕೆ ಹಗಲಿರುಳು ದುಡಿದು ವಿದ್ಯಾಭ್ಯಾಸಕ್ಕೆ ಸಾಲ ಮಾಡಿ ಮಕ್ಕಳ ಭವಿಷ್ಯದ ಬಗ್ಗೆ ಕನಸು ಕಾಣುತ್ತಾರೆ.ಆದರೆ, ಉಪನ್ಯಾಸಕರು ಮೌಲ್ಯಮಾಪನ ಬಹಿಷ್ಕರಿಸುವ ಸುದ್ದಿ ಬಡವರಿಗೆ ಬರಸಿಡಿಲು ಬಡಿದಂತಾಗಿದೆ. ಮಕ್ಕಳ ಭವಿಷ್ಯದ ಜತೆ ಚೆಲ್ಲಾಟ ಆಡುವುದನ್ನು ಉಪನ್ಯಾಸಕರು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.

ವಿದ್ಯಾರ್ಥಿಗಳು, ಪೊಷಕರು ಬೀದಿಗಿಳಿದು ಹೋರಾಟ ಆರಂಭಿಸುವ ಮುನ್ನವೇ ಮೌಲ್ಯಮಾಪನಕ್ಕೆ ಉಪನ್ಯಾಸಕರು ಚಾಲನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.ಸ್ಪಂದಿಸದ ಸರ್ಕಾರ

ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ವೇತನ ತಾರತಮ್ಯ ನಿವಾರಿಸುವಲ್ಲಿ ಸರ್ಕಾರ ಯಾವದೇ ರೀತಿಯಲ್ಲಿ ಕ್ರಮ ಕೈಗೊಂಡಿಲ್ಲ ಎಂದು ಆಗ್ನೇಯ ಶಿಕ್ಷಕರ ಪಕ್ಷೇತರ ಅಭ್ಯರ್ಥಿ ಆರ್. ರಾಜಣ್ಣ ಆರೋಪಿಸಿದ್ದಾರೆ.ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರಾಂಶುಪಾಲರ ಸಂಘ ಹಾಗೂ ಉಪನ್ಯಾಸಕರ ಸಂಘಗಳು ಮೌಲ್ಯಮಾಪನಕ್ಕೂ ಮುಂಚಿತವಾಗಿ ಸರ್ಕಾರದ ಗಮನಕ್ಕೆ ತಂದರೂ ಶಿಕ್ಷಣ ಸಚಿವರು ಸಮಸ್ಯೆ ಬಗೆಹರಿಸಿಲ್ಲ. ಈ ಸಮಸ್ಯೆಯನ್ನು ತಕ್ಷಣ ಬಗೆಹರಿಸಿ ಉಪನ್ಯಾಸಕರ ಬೇಡಿಕೆ ಈಡೇರಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.