ಮೌಲ್ಯ ಅನುಷ್ಠಾನಕ್ಕೆ ಬರಲಿ: ಯೋಗಾನಂದಮಯಿ

7

ಮೌಲ್ಯ ಅನುಷ್ಠಾನಕ್ಕೆ ಬರಲಿ: ಯೋಗಾನಂದಮಯಿ

Published:
Updated:

ದಾವಣಗೆರೆ: ಸಮಾಜದಲ್ಲಿ ಮೌಲ್ಯಗಳಿವೆ. ಆದರೆ, ಅನುಷ್ಠಾನಕ್ಕೆ ಬರುತ್ತಿಲ್ಲ ಎಂದು ನಗರದ ಸಾಧನಾಶ್ರಮದ ಮಾತಾ ಯೋಗಾನಂದಮಯಿ ಹೇಳಿದರು.ನಗರದ ಎವಿಕೆ ಕಾಲೇಜಿನಲ್ಲಿ ಶುಕ್ರವಾರ ನಡೆದ ‘ಉನ್ನತ ಶಿಕ್ಷಣಕ್ಕೆ ಮಾನವೀಯ ಮೌಲ್ಯಗಳ ಸಂಬಂಧ’ ವಿಷಯದ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಸಮಾಜ ಬದಲಾದರೂ ಮೌಲ್ಯಗಳು ಬದಲಾಗುವುದಿಲ್ಲ. ಆದರೆ ಮನುಷ್ಯನ ಮನಸ್ಸು ಬದಲಾಗುತ್ತದೆ. ಸತ್ವ, ಶಕ್ತಿ ಇರುವುದನ್ನು ವ್ಯಕ್ತಿತ್ವ ಎನ್ನುತ್ತಾರೆ.ಲೌಕಿಕದ ಆಸೆಗೆ ಒಳಗಾದ ಮನುಷ್ಯ ಮೌಲ್ಯಗಳು ಮುಸುಕು ಹಾಕಿಕೊಳ್ಳುವಂತೆ ಮಾಡಿದ್ದಾನೆ. ಮಾನವೀಯ ಮೌಲ್ಯಗಳಿಗೋಸ್ಕರ ವಿಚಾರ ಸಂಕಿರಣ ಮಾಡಬೇಕಾದ ಪರಿಸ್ಥಿತಿ ಬಂದಿರುವುದು ವಿಷಾದನೀಯ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಬಾಪೂಜಿ ವಿದ್ಯಾಸಂಸ್ಥೆಯ ಖಜಾಂಚಿ ಎ.ಸಿ. ಜಯಣ್ಣ ಮಾತನಾಡಿ, ವಿದ್ಯಾವಂತ ಯುವಶಕ್ತಿಯಿಂದ ವಿದ್ವತ್‌ಪೂರ್ಣ ಸಮಾಜ ನಿರ್ಮಾಣವಾಗಬೇಕು. ನಮ್ಮಲ್ಲಿ ಚೀನಾ ದೇಶವನ್ನು ಮೀರಿಸುವ ಬುದ್ಧಿವಂತಿಕೆಯಿದೆ. ಆದರೆ, ಬಳಕೆಯಾಗುತ್ತಿಲ್ಲ. ಶಿಕ್ಷಣ ಪಡೆದು ಕೇವಲ ಉದ್ಯೋಗ ಪಡೆಯುವುದೊಂದೇ ಗುರಿ ಆಗಬಾರದು. ಮಾನವೀಯ ಮೌಲ್ಯಗಳೂ ಅಗತ್ಯ ಎಂದು ನುಡಿದರು.ಆಶಯ ಭಾಷಣ ಮಾಡಿದ ಕಾಲೇಜಿನ ಪ್ರಾಂಶುಪಾಲರಾದ ಜೆ.ಕೆ. ಇಂದುಮತಿ ಅವರು, ಮಾನವೀಯತೆಯಿಲ್ಲದ ಶಿಕ್ಷಣ ನಕ್ಷತ್ರವಿಲ್ಲದ ಆಗಸದಂತೆ. ಅಂಥ ಶಿಕ್ಷಣ ಪರಿಪೂರ್ಣ ಎನಿಸಲಾರದು. ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡ ವ್ಯಕ್ತಿ ಜಾಗತೀಕರಣದ ಸಂದರ್ಭದ ಹೊಸ ಸವಾಲುಗಳನ್ನು ಸಮರ್ಥವಾಗಿ ಎದುರಿಸಬಲ್ಲ. ಆ ಮೌಲ್ಯಗಳನ್ನು ಹೊರಗಿನಿಂದ ಪಡೆಯಲಾಗದು. ಅಂತರಂಗದಲ್ಲಿ ಬೆಳೆಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.ಕಾನೂನು ತಜ್ಞ ಪ್ರೊ.ಎಸ್.ಎಚ್. ಪಟೇಲ್ ಮಾತನಾಡಿ, 5 ಸಾವಿರ ವರ್ಷಗಳ ಹಿಂದೆ ವೇದ, ಉಪನಿಷತ್ತುಗಳಲ್ಲಿ ಸಂಪತ್ತು ಬೇರೆಯವರಿಗೆ ಉಪಯೋಗವಾಗಬೇಕು ಎಂದಿದೆ. ಆದರೆ, ಭಾರತೀಯರಿಗಿರುವಷ್ಟು ಬಂಗಾರದ ವ್ಯಾಮೋಹ ಬೇರೆಯವರಿಗಿಲ್ಲ. ಅದಕ್ಕಾಗಿ ನಾವು ಒಂದಿಷ್ಟು ಮೌಲ್ಯಗಳ ಬಗ್ಗೆ ಚಿಂತನೆ ನಡೆಸಬೇಕಿದೆ ಎಂದು ನುಡಿದರು.

ಕಿರುವಾಡಿ ಗಿರಿಜಮ್ಮ, ಪ್ರೊ.ಪಾಲಾಕ್ಷ, ಪ್ರೊ.ಸಿ.ಎಚ್. ಮುರಿಗೇಂದ್ರಪ್ಪ ಇತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry