ಮ್ಯಾದರಗೋಳ -ಅರಿಶಿಣಿಗಿ ಜನರ ಗೋಳು: ಸುಧಾರಣೆ ಕಾಣದ ರಸ್ತೆ

7

ಮ್ಯಾದರಗೋಳ -ಅರಿಶಿಣಿಗಿ ಜನರ ಗೋಳು: ಸುಧಾರಣೆ ಕಾಣದ ರಸ್ತೆ

Published:
Updated:

ದೇವದುರ್ಗ: ತಾಲ್ಲೂಕಿನಲ್ಲಿಯೇ ಅತಿ ಹಿಂದುಳಿದ ಗ್ರಾಮಗಳ ಪಟ್ಟಿಗೆ ಸೇರಿರುವ ಮ್ಯಾದರಗೋಳ, ಕರ್ಕಿಹಳ್ಳಿ, ಪರ್ತಪೂರ, ಹುನೂರು ಅರಣಿಶಿಣಿ ಗ್ರಾಮಗಳ ಜನರಿಗೆ ಅನುಕೂಲವಾಗಲೆಂದು 2009ರಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿಯಲ್ಲಿ ಸುಮಾರು 9ಕಿಮೀ ದೂರದ ರಸ್ತೆಗೆ ಹಣ ಮಂಜೂರಾಗಿದ್ದರೂ ಇಲ್ಲಿವರೆಗೂ ರಸ್ತೆ ಮಾತ್ರ ಸುಧಾರಣೆ ಕಂಡಿಲ್ಲ.ಸ್ವಾತಂತ್ರ್ಯ ನಂತರ 65 ವರ್ಷಗಳು ಕಳೆದರೂ ಮೇಲಿನ ಗ್ರಾಮಗಳಿಗೆ ರಸ್ತೆಯೇ ಇಲ್ಲ. 2009ರಲ್ಲಿ ಮ್ಯಾದರಗೋಳದಿಂದ ಅರಣಿಶಿಗಿ ಗ್ರಾಮದವರೆಗೂ ಸುಮಾರು 9ಕಿಮೀ ದೂರದ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಲಿಂಗಸೂಗೂರು ತಾಲ್ಲೂಕಿನ ಹಾಲಿ ಶಾಸಕ ಮಾನಪ್ಪ ವಜ್ಜಲ ಅವರ ಸಹೋದರ ನಾಗಪ್ಪ ವಡ್ಡರ ಪ್ರಥಮ ದರ್ಜೆ ಗುತ್ತೆಗೆದಾರರು.ಇವರ ಹೆಸರಿನಲ್ಲಿ ಟೆಂಡರ್ ಆಗಿದೆ. ಈ ಕಾಮಗಾರಿ 302. 50 ಲಕ್ಷ ರೂಪಾಯಿ ಹಣವನ್ನು ಭಾರತ ಸರ್ಕಾರದ ಗ್ರಾಮಿಣ ಅಭಿವೃದ್ಧಿ ಸಚಿವಾಲಯ ಅನುದಾನಿತ ಯೋಜನೆಯ ಅಡಿಯಲ್ಲಿ ಹಣ ಬಿಡುಗಡೆ ಮಾಡಲಾಗಿದೆ.ಕಾಮಗಾರಿ ಟೆಂಡರ್ ನಿಯಮಾವಳಿ ಪ್ರಕಾರ 18-8-2009ರಂದು ಆರಂಭವಾಗಿ 17-05-2010ರಂದು ಮುಕ್ತಾಯಗೊಳ್ಳಬೇಕಾಗಿದ್ದರೂ ಇಂದಿಗೂ ಕಾಮಗಾರಿ ಮಾತ್ರ ನೆನಗುದಿಗೆ ಬಿದ್ದಿದೆ. ಎರಡು ವರ್ಷಗಳಿಂದ ನೆನಗುದಿಗೆ ಬಿದ್ದರೂ ಈ ಬಗ್ಗೆ ಇಲಾಖೆ ಕ್ರಮಕ್ಕೆ ಮುಂದಾಗದೆ ಇರುವುದು ಅನುಮಾನಕ್ಕೆ ಕಾರಣವಾಗಿದೆ. ಈ ಮೊದಲೇ ರಸ್ತೆ ಇಲ್ಲದೇ ಮ್ಯಾರಗೋಳ, ಕರ್ಕಿಹಳ್ಳಿ, ಪರ್ತಪೂರ, ಹುನೂರು ಮತ್ತು ಅರಿಶಿಷಿಗಿ ಗ್ರಾಮದ ಜನರು ಬೆಳಗಾದರೆ ತೊಂದರೆ ಪಡುತ್ತಿದ್ದರೆ, ಇತ್ತ ಮಂಜೂರಾದ ರಸ್ತೆ ಎರಡು ವರ್ಷಗಳಿಂದ ನೆನಗುದಿಗೆ ಬಿದ್ದಿರುವುದು ಗ್ರಾಮಸ್ಥರ ದುರದೃಷ್ಟ ಎನ್ನುವಂತಿದೆ.ಮೇಲಿನ 9ಕಿಮೀ ರಸ್ತೆ ಕಾಮಗಾರಿ ಮುಗಿದ ನಂತರ 2010ರಿಂದ 2015ರವರೆಗೂ ಐದು ವರ್ಷದ ನಿರ್ವಹಣೆಗಾಗಿ 17.92 ಲಕ್ಷ ರೂಪಾಯಿ ನೀಡುವುದಾಗಿ ಟೆಂಡರ್‌ನಲ್ಲಿ ತಿಳಿಸಲಾಗಿದೆ. ಆದರೆ ರಸ್ತೆ ಸುಧಾರಣೆ ಕಾಣದೇ ಇರುವಾಗ ನಿರ್ವಹಣೆ ದೂರದ ಮಾತಾಗಿದೆ.ಕೊಪ್ಪರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸದ್ರಿ ಗ್ರಾಮಗಳು ಬರುತ್ತಿರುವುದರಿಂದ ಈ ಗ್ರಾಮಗಳ ಮಾರ್ಗವಾಗಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿಯಲ್ಲಿ ಮಂಜೂರಾದ ಕಾಮಗಾರಿ ನೆನಗುದಿಗೆ ಬಿದ್ದಿರುವ ಬಗ್ಗೆ ಗ್ರಾಪಂ ಅಧ್ಯಕ್ಷರು ಮತ್ತು ಸದಸ್ಯರು ಸಂಬಂಧಿಸಿದ ಗುತ್ತೆಗೆದಾರನಿಗೆ ಮತ್ತು ಇಲಾಖೆಯ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಪತ್ರ ಬರೆಯಲಾಗಿದ್ದರೂ ಇಂದಿಗೂ ಯಾವುದೇ ಪ್ರತಿಕ್ರಿಯೆ ಇಲ್ಲ ಎಂದು ಕೊಪ್ಪರ ಗ್ರಾಪಂ ಅಧ್ಯಕ್ಷ ಸಿದ್ದಲಿಂಗಪ್ಪಗೌಡ `ಪ್ರಜಾವಾಣಿ~ಗೆ ತಿಳಿಸಿದರು.ತೊಂದರೆ: ಈ ಗ್ರಾಮಗಳಿಗೆ ಹಗಲು ಹೊತ್ತು ಹೋಗುವುದೇ ತೀರ ದುಸ್ತರವಾಗಿದೆ. ಸಂಜೆಯಾದರೆ ಸಾಕು ಗ್ರಾಮಕ್ಕೆ ತಲುಪುವುದು ಕಷ್ಟಕರ. ಎರಡು ಕಡೆ ದಟ್ಟವಾದ ಜಾಲಿಮರಗಳು, ಇಕ್ಕಾಟ್ಟಾದ ಬಂಡಿದಾರಿಯಲ್ಲಿಯೇ ಕಾಲ್ನಡಿಗೆ ಮಾಡಬೇಕಾದ ಪರಿಸ್ಥಿತಿ ಇದೆ. ಮಳೆಗಾಲ ಬಂದರೆ ಸಾಕು, ತಿಂಗಳು ಗಟ್ಟಲೇ ಪಟ್ಟಣದ ಮುಖ ನೋಡದೇ ಇರುವುದು ಇಲ್ಲಿನ ಜನರಿಗೆ ಸಾಮಾನ್ಯವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry