ಮ್ಯಾನ್ಮಾರ್‌ಗೆ 50 ಕೋಟಿ ಡಾಲರ್ ಸಾಲ

7

ಮ್ಯಾನ್ಮಾರ್‌ಗೆ 50 ಕೋಟಿ ಡಾಲರ್ ಸಾಲ

Published:
Updated:
ಮ್ಯಾನ್ಮಾರ್‌ಗೆ 50 ಕೋಟಿ ಡಾಲರ್ ಸಾಲ

ನೇ ಪಿ ತೌ (ಮ್ಯಾನ್ಮಾರ್) (ಪಿಟಿಐ): ಮ್ಯಾನ್ಮಾರ್‌ಗೆ 50 ಕೋಟಿ ಡಾಲರ್‌ಗಳಷ್ಟು ಸಾಲ ನೀಡುವುದಾಗಿ ಭಾರತ ಘೋಷಿಸಿದ್ದು, ಈ ನಿಟ್ಟಿನಲ್ಲಿ ವಿವಿಧ ವಲಯಗಳಿಗೆ ಸಂಬಂಧಿಸಿದಂತೆ 15 ಒಪ್ಪಂದಗಳಿಗೆ ಸೋಮವಾರ ಸಹಿ ಹಾಕಿದೆ.ಭಾರತದ ರಫ್ತು ಮತ್ತು ಆಮದು ಬ್ಯಾಂಕ್ ಹಾಗೂ ಮ್ಯಾನ್ಮಾರ್‌ನ ವಿದೇಶಿ ವ್ಯಾಪಾರ ಬ್ಯಾಂಕ್‌ಗಳು 50 ಕೋಟಿ ಡಾಲರ್ ಸಾಲದ ಒಪ್ಪಂದಕ್ಕೆ ಸಹಿ ಹಾಕಿವೆ. ಮ್ಯಾನ್ಮಾರ್ ಅಧ್ಯಕ್ಷರು ಕಳೆದ ಅಕ್ಟೋಬರ್‌ನಲ್ಲಿ  ಭಾರತಕ್ಕೆ ಬಂದಿದ್ದಾಗಲೇ ಈ ನೆರವು ನೀಡುವುದಾಗಿ ಭಾರತ ಹೇಳಿತ್ತು.ಮೂರು ದಿನಗಳ ಭೇಟಿಗಾಗಿ ಇಲ್ಲಿಗೆ ಆಗಮಿಸಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರು, ಮ್ಯಾನ್ಮಾರ್ ಅಧ್ಯಕ್ಷ ಥೇನ್ ಸೇನ್ ಅವರೊಂದಿಗೆ  ಮಾತುಕತೆ ನಡೆಸಿದ್ದಾರೆ. ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಹೊಸ ಮುನ್ನುಡಿ ಬರೆದಿದ್ದಾರೆ.ವೈಮಾನಿಕ, ಇಂಧನ, ವಾಣಿಜ್ಯ ಮತ್ತು ಬಂಡವಾಳ ಹೂಡಿಕೆಗೆ ಜಂಟಿ ವೇದಿಕೆ ಸ್ಥಾಪನೆ, ಎರಡೂ ದೇಶಗಳ ಗಡಿಯಲ್ಲಿ ವ್ಯಾಪಾರ ಕೇಂದ್ರಗಳನ್ನು ತೆರೆಯುವುದು, ಗಡಿ ಪ್ರದೇಶ ಅಭಿವೃದ್ಧಿ, ರಸ್ತೆ- ರೈಲು, ಜಲ ಮಾರ್ಗ ಸಂಪರ್ಕ ಸೇರಿದಂತೆ ವಿವಿಧ ವಲಯಗಳ 15 ಒಡಂಬಡಿಕೆಗಳಿಗೆ ಉಭಯ ದೇಶಗಳ ಮುಖಂಡರು ಸಹಿ ಮಾಡಿದ್ದಾರೆ.`ದ್ವಿಪಕ್ಷೀಯ ಸಂಬಂಧ ಉತ್ತಮ ಪಡಿಸಿಕೊಳ್ಳುವ ನಿಟ್ಟಿನಲ್ಲಿ ನಾವು ಹೊಸದಾಗಿ ಮುನ್ನಡೆ ಇಟ್ಟಿದ್ದೇವೆ. ಪರಸ್ಪರ ಆರ್ಥಿಕ ಸದೃಢತೆ ಮತ್ತು ಅಭಿವೃದ್ಧಿ ಪಥದಲ್ಲಿ ಸಹಕರಿಸುವುದು ನಮ್ಮ ಉದ್ದೇಶ~ ಎಂದು ಪ್ರಧಾನಿ ಮನಮೋಹನ್ ಸಿಂಗ್ ಅವರು ಮ್ಯಾನ್ಮಾರ್ ಅಧ್ಯಕ್ಷ ಥೇನ್ ಸೇನ್ ಅವರಿಗೆ ಹೇಳಿದ್ದಾರೆ.`ಪ್ರಜಾಪ್ರಭುತ್ವ ಸ್ಥಾಪನೆ ಮೂಲಕ ದೇಶ ಕಟ್ಟುವ ಮತ್ತು ಆದರಿಂದ ಬದಲಾವಣೆ ತರಲು ಹೊರಟಿರುವ ಇವರಿಗೆ (ಮ್ಯಾನ್ಮಾರ್ ಸರ್ಕಾರ) ನಮ್ಮ ಶುಭಕಾಮನೆಗಳು. ಈ ನಿಟ್ಟಿನಲ್ಲಿ ಭಾರತವು ತನ್ನ (ಪ್ರಜಾಪ್ರಭುತ್ವದ) ಅನುಭವಗಳನ್ನು ಧಾರಾಳವಾಗಿ ಹಂಚಿಕೊಳ್ಳಲು ಸಿದ್ಧ~ ಎಂದು ಸಿಂಗ್ ನುಡಿದ್ದಾರೆ ಎಂದು ವಿದೇ ಶಾಂಗ ಇಲಾಖೆ  ವಕ್ತಾರರು ತಿಳಿಸಿದ್ದಾರೆ.ಬಹು ನಿರೀಕ್ಷಿತವಾಗಿದ್ದ ಇಂಫಾಲ- ಮಂಡಾಲೆ (ಮ್ಯಾನ್ಮಾರ್‌ನ ಎರಡನೇ ಅತಿ ದೊಡ್ಡ ನಗರ) ನಡುವಿನ ಬಸ್ ಸಂಚಾರ ಕುರಿತ ಒಪ್ಪಂದಕ್ಕೆ ಸಹಿ ಆಗಿಲ್ಲ. ಈ ಬಗ್ಗೆ ಮ್ಯಾನ್ಮಾರ್ ಸಚಿವ ಸಂಪುಟ ಇನ್ನೂ ತೀರ್ಮಾನ ಕೈಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.ಆಫ್ಘಾನಿಸ್ತಾನ, ಶ್ರೀಲಂಕಾ ಜೊತೆ ಅಭಿವೃದ್ಧಿಗೆ ಪೂರಕವಾದ ದ್ವಿಪಕ್ಷೀಯ ಒಪ್ಪಂದಗಳನ್ನು ಭಾರತ ಯಶಸ್ವಿಗಾಗಿ ಮುನ್ನಡೆಸುತ್ತಿದೆ. ಇಂತಹ ಮಾದರಿಯನ್ನೇ ಮ್ಯಾನ್ಮಾರ್ ಜೊತೆಗೂ ಅನುಸರಿಸಲು ಇಚ್ಛಿಸುತ್ತದೆ ಎಂದು ಭಾರತದ ಅಧಿಕಾರಿಗಳ ಮೂಲಗಳು ತಿಳಿಸಿವೆ.
ಸೂಕಿ ಭೇಟಿ ಇಂದು?

ಮ್ಯಾನ್ಮಾರ್‌ನ ವಿರೋಧ ಪಕ್ಷದ ನಾಯಕಿ ಆಂಗ್ ಸಾನ್ ಸೂ ಕಿ ಅವರನ್ನು ಪ್ರಧಾನಿ ಸಿಂಗ್ ಅವರು ಮಂಗಳವಾರ ಭೇಟಿಯಾಗುವ ಸಾಧ್ಯತೆ ಇದ್ದು, ಪ್ರಜಾಪ್ರಭುತ್ವ ಸ್ಥಾಪನೆಗಾಗಿ ಹೋರಾಡುತ್ತಿರುವ ಅವರಿಗೆ ಬೆಂಬಲ ಸೂಚಿಸಲಿದ್ದಾರೆ ಎಂದು ವಿದೇಶಾಂಗ ಇಲಾಖೆ ಮೂಲಗಳು ಹೇಳಿವೆ.
25 ವರ್ಷ ಬಳಿಕ ಭೇಟಿ

ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಮತ್ತು ಪತ್ನಿ ಗುರುಶರಣ್ ಕೌರ್ ಅವರೊಂದಿಗೆ ಆಗಮಿಸಿದ ಪ್ರಧಾನಿ ಸಿಂಗ್ ಅವರ ಭಾರತದ ನಿಯೋಗವನ್ನು ಮ್ಯಾನ್ಮಾರ್ ಸರ್ಕಾರ ಆತ್ಮೀಯವಾಗಿ ಬರಮಾಡಿಕೊಂಡಿತು. 25 ವರ್ಷಗಳ ಬಳಿಕ ಭಾರತದ ಪ್ರಧಾನಿ ಇಲ್ಲಿಗೆ ಭೇಟಿ ನೀಡಿದ್ದಾರೆ.

ಗಡಿ ಭಾಗದಲ್ಲಿ ಶಾಲೆ, ಆರೋಗ್ಯ ಕೇಂದ್ರ ಮತ್ತು ಸಮುದಾಯ ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸುವುದರಿಂದ ಗಡಿಯಲ್ಲಿ ನಡೆಯುವ ಅಕ್ರಮ ಚಟುವಟಿಕೆ, ಕಾನೂನು ಬಾಹಿರವಾಗಿ ಒಳನುಸುಳುವಿಕೆ ತಡೆಗಟ್ಟಬಹುದು. ಇದರಿಂದ ಭಯೋತ್ಪಾದನೆಯನ್ನು ನಿಯಂತ್ರಿಸುವುದರ ಜೊತೆಗೆ ಗಡಿ ಪ್ರದೇಶದಲ್ಲಿ ಆರ್ಥಿಕ ಸ್ಥಿತಿಯು ಉತ್ತಮವಾಗುತ್ತದೆ ಎಂಬ ಉದ್ದೇಶ ಇದೆ ಮೂಲಗಳು ಹೇಳಿವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry