ಮ್ಯಾನ್‌ಹೋಲ್‌ಗಳಿಗೆ ಹೊಸ ತಂತ್ರಜ್ಞಾನದ ಜಟ್ಟಿಂಗ್ ಯಂತ್ರಗಳನ್ನು ಬಳಕೆ

ಬುಧವಾರ, ಜೂಲೈ 24, 2019
24 °C

ಮ್ಯಾನ್‌ಹೋಲ್‌ಗಳಿಗೆ ಹೊಸ ತಂತ್ರಜ್ಞಾನದ ಜಟ್ಟಿಂಗ್ ಯಂತ್ರಗಳನ್ನು ಬಳಕೆ

Published:
Updated:

ಬೆಂಗಳೂರು: ಮುಂದಿನ ದಿನಗಳಲ್ಲಿ ಹೊಸ ತಂತ್ರಜ್ಞಾನದ ಜಟ್ಟಿಂಗ್ ಯಂತ್ರಗಳನ್ನು ಬಳಸುವ ಮೂಲಕ ಮ್ಯಾನ್‌ಹೋಲ್‌ಗಳಿಗೆ ಪೌರ ಕಾರ್ಮಿಕರನ್ನು ಇಳಿಸುವುದನ್ನು ತಡೆಯಲಾಗುವುದು ಜಲಮಂಡಳಿ ಅಧ್ಯಕ್ಷ ಗೌರವ್‌ಗುಪ್ತ ಸೋಮವಾರ ಇಲ್ಲಿ ಹೇಳಿದರು.ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಪೌರ ಕಾರ್ಮಿಕರಿಗೆ ಹಮ್ಮಿಕೊಂಡಿದ್ದ `ಒಳಚರಂಡಿ ನಿರ್ವಹಣೆಯಲ್ಲಿ ಸುರಕ್ಷತಾ ಕ್ರಮಗಳು~ ಕುರಿತ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.`ನಗರದ ಹಳೇ ಪ್ರದೇಶದಲ್ಲಿ 1.25 ಲಕ್ಷ ಮ್ಯಾನ್‌ಹೋಲ್‌ಗಳಿವೆ. ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಯಾದಂತಹ ನಗರಸಭೆ ಹಾಗೂ ಪುರಸಭೆ ವ್ಯಾಪ್ತಿಯಲ್ಲಿ ಇನ್ನೂ 78 ಸಾವಿರ ಮ್ಯಾನ್‌ಹೋಲ್‌ಗಳನ್ನು ನಿರ್ಮಿಸಲಾಗುವುದು. ಹೀಗಾಗಿ, ನಗರದಲ್ಲಿ ಮ್ಯಾನ್‌ಹೋಲ್‌ಗಳ ಸಂಖ್ಯೆ 2 ಲಕ್ಷ ದಾಟಲಿದೆ. ಇಷ್ಟೊಂದು ಮ್ಯಾನ್‌ಹೋಲ್‌ಗಳನ್ನು ನಿರ್ವಹಣೆ ಮಾಡುವಾಗ ಪೌರ ಕಾರ್ಮಿಕರ ಸುರಕ್ಷತೆಗೂ ಒತ್ತು ನೀಡುವುದು ಜಲಮಂಡಳಿಯ ಜವಾಬ್ದಾರಿಯಾಗಿದೆ~ ಎಂದರು.`ಮ್ಯಾನ್‌ಹೋಲ್‌ಗಳನ್ನು ಶುಚಿಗೊಳಿಸಲು ಪೌರ ಕಾರ್ಮಿಕರನ್ನು ಇಳಿಸುವುದಿಲ್ಲ ಎಂದು ಜಲಮಂಡಳಿ ನ್ಯಾಯಾಲಯಕ್ಕೆ ಮುಚ್ಚಳಿಕೆ ಬರೆದುಕೊಟ್ಟಿದೆ. ಅದನ್ನು ಮೀರಿದಲ್ಲಿ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದಂತಾಗುತ್ತದೆ.ಹೀಗಾಗಿ, ಪೌರ ಕಾರ್ಮಿಕರಿಗೆ ನೀಡಿರುವ ಉಪಕರಣಗಳು ಹಾಗೂ ಯಂತ್ರಗಳನ್ನು ಬಳಸುವ ಮೂಲಕ ಮ್ಯಾನ್‌ಹೋಲ್‌ಗಳನ್ನು ನಿರ್ವಹಣೆ ಮಾಡಲಾಗುತ್ತದೆ~ ಎಂದು ಅವರು ತಿಳಿಸಿದರು.`ಮಂಡಳಿಯಲ್ಲಿ ಪ್ರಸ್ತುತ 76 ಜಟ್ಟಿಂಗ್ ಯಂತ್ರಗಳಿವೆ. ದೆಹಲಿ ಹೊರತುಪಡಿಸಿದರೆ ಬೇರೆ ಯಾವ ನಗರದಲ್ಲೂ ಇಷ್ಟೊಂದು ಸಂಖ್ಯೆಯ ಯಂತ್ರಗಳಿಲ್ಲ. ಇಂತಹ ಇನ್ನೂ 50 ಯಂತ್ರಗಳನ್ನು ಖರೀದಿಸಲಾಗುತ್ತಿದ್ದು, ಈ ಪೈಕಿ ಈಗಾಗಲೇ 12 ವಾಹನಗಳು ಬಂದಿಳಿದಿವೆ~ ಎಂದರು.ಗುತ್ತಿಗೆ ಪೌರ ಕಾರ್ಮಿಕರ ಸೇವೆ ಮುಂದುವರಿಕೆ:

ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರ ಸೇವೆಯನ್ನು ಮುಂದುವರಿಸಲಾಗುವುದು. ಅಂತೆಯೇ, ಇನ್ನಷ್ಟು ಪೌರ ಕಾರ್ಮಿಕರನ್ನು ನೇಮಿಸಿಕೊಳ್ಳಲು ಜಲಮಂಡಳಿ ಮುಂದಾಗಲಿದೆ ಎಂದು ಅವರು ಹೇಳಿದರು.`ಪೌರ ಕಾರ್ಮಿಕರ ಸುರಕ್ಷತೆ ದೃಷ್ಟಿಯಿಂದ ಒಂದು ವಾಹನಕ್ಕೆ ಮೂರು ಜತೆ ಸುರಕ್ಷತಾ ಜಾಕೆಟ್ ಹಾಗೂ ಕಿಟ್‌ಗಳನ್ನು ನೀಡಲಾಗುತ್ತಿದೆ~ ಎಂದು ಅವರು ತಿಳಿಸಿದರು.ಜಲಮಂಡಳಿಯ ಪ್ರಧಾನ ಮುಖ್ಯ ಎಂಜಿನಿಯರ್ ವೆಂಕಟರಾಜು ಮಾತನಾಡಿ, `ಎಂತಹುದೇ ಸಂದರ್ಭದಲ್ಲಿ ಪೌರ ಕಾರ್ಮಿಕರು ಅನುಮತಿ ಇಲ್ಲದೆ ಮ್ಯಾನ್‌ಹೋಲ್‌ಗಳಿಗೆ ಇಳಿಯಬಾರದು.ಹಾಗೇನಾದರೂ ಮಾಡಿದಲ್ಲಿ ಅದಕ್ಕೆ ಮೇಸ್ತ್ರಿ ಹಾಗೂ ವಾಹನ ಚಾಲಕ ಜವಾಬ್ದಾರರಾಗುತ್ತಾರೆ. ಸಂಭವಿಸಬಹುದಾದ ಪ್ರಮಾದಗಳಿಗೆ ಸಹಾಯಕ ಎಂಜಿನಿಯರ್ ಹಾಗೂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಹೊಣೆಗಾರರಾಗುತ್ತಾರೆ~ ಎಂದು ಎಚ್ಚರಿಕೆ ನೀಡಿದರು.ಕಾರ್ಯಾಗಾರದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಮ್ಯಾನ್‌ಹೋಲ್‌ಗಳಿಗೆ ಪೌರ ಕಾರ್ಮಿಕರನ್ನು ಇಳಿಸುವುದನ್ನು ತಡೆಯಲು ಶೇ 99ರಷ್ಟು ಪ್ರಯತ್ನ ಮಾಡುತ್ತೇವೆ. ಆದರೆ, ಶೇ 1ರಷ್ಟು ಅನಿವಾರ್ಯ ಸಂದರ್ಭಗಳಲ್ಲಿ ಪೌರ ಕಾರ್ಮಿಕರನ್ನು ಬಳಸಿಕೊಳ್ಳುವುದು ಅನಿವಾರ್ಯವಾಗಲಿದೆ~ ಎಂದು ಹೇಳಿದರು.`ಪ್ರಸ್ತುತ ಜಲಮಂಡಳಿಯಲ್ಲಿ 185 ಮಂದಿ ಕಾಯಂ ಪೌರ ಕಾರ್ಮಿಕರು ಹಾಗೂ 165 ಮಂದಿ ಹೊರಗುತ್ತಿಗೆ ಸಹಾಯಕರು ಕೆಲಸ ನಿರ್ವಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ವಲಯವಾರು ಜಟ್ಟಿಂಗ್ ಯಂತ್ರಗಳನ್ನು ಬಳಸಿ ಸಾಮೂಹಿಕವಾಗಿ ಮ್ಯಾನ್‌ಹೋಲ್‌ಗಳನ್ನು ಸ್ವಚ್ಛಗೊಳಿಸಲಾಗುತ್ತದೆ. ಸದ್ಯದಲ್ಲಿಯೇ ಇದರ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು~ ಎಂದರು.ಇದಕ್ಕೂ ಮುನ್ನ ಜಲಮಂಡಳಿಯ ದಕ್ಷಿಣ, ಪೂರ್ವ, ಪಶ್ಚಿಮ, ಕೇಂದ್ರ ಹಾಗೂ ಉತ್ತರ ವಲಯಗಳ ಪೌರ ಕಾರ್ಮಿಕರಿಗೆ ಸಾಕ್ಷ್ಯಚಿತ್ರ ಪ್ರದರ್ಶನದ ಮೂಲಕ ಸುರಕ್ಷತಾ ಕ್ರಮಗಳ ಬಗ್ಗೆ ಮನವರಿಕೆ ಮಾಡಿಕೊಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry