ಸೋಮವಾರ, ಏಪ್ರಿಲ್ 19, 2021
28 °C

ಮ್ಯಾನ್‌ಹೋಲ್: ಕಾರ್ಮಿಕರ ಬಳಕೆಗೆ ಹೈಕೋರ್ಟ್ ಕಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಒಳಚರಂಡಿ ಮತ್ತು ಮ್ಯಾನ್‌ಹೋಲ್ ಶುಚಿಗೊಳಿಸಲು ಕಾರ್ಮಿಕರ ಬಳಕೆ ಮಾಡುವುದೇ ಇಲ್ಲ ಎಂದು ಹೈಕೋರ್ಟ್ ಮುಂದೆ ವಾಗ್ದಾನ ಮಾಡಿದ ಕೆಲವೇ ದಿನಗಳಲ್ಲಿಯೇ ಅದನ್ನು ಮೀರಿರುವ ಜಲಮಂಡಳಿ ಬುಧವಾರ ಕೋರ್ಟ್ ಕೆಂಗಣ್ಣಿಗೆ ಗುರಿಯಾಯಿತು.ಶುಚಿಗಾಗಿ ಕಾರ್ಮಿಕರ ಬಳಕೆ ಆಗುತ್ತಿರುವ ಬಗ್ಗೆ `ನಾಗರಿಕರ ಹಕ್ಕಿಗಾಗಿ ಜನರ ಚಳವಳಿ~ ಸಂಘಟನೆ ತೆಗೆದಿರುವ ಸಿ.ಡಿ ಹಾಗೂ ಛಾಯಾಚಿತ್ರಗಳನ್ನು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠಕ್ಕೆ ಒಪ್ಪಿಸಲಾಗಿದೆ.ಶುಚಿ ಕಾರ್ಯಕ್ಕೆ ಕಾರ್ಮಿಕರ ಬಳಕೆ ಮಾಡುತ್ತಿರುವುದರ ವಿರುದ್ಧ ಹಿರಿಯ ವಕೀಲ ಆರ್.ಎನ್.ನರಸಿಂಹಮೂರ್ತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ವಕೀಲರು ಈ ದಾಖಲೆಗಳನ್ನು ನೀಡಿದ್ದಾರೆ.`ಶುಚಿಗೊಳಿಸುವ ಯಂತ್ರವನ್ನು ಈ ಸ್ಥಳಕ್ಕೆ ಅಂದು ಮಧ್ಯಾಹ್ನ ಜಲಮಂಡಳಿ ಸಿಬ್ಬಂದಿ ತಂದಿದ್ದರು. ಆದರೆ ಅದು ಕಾರ್ಯ ನಿರ್ವಹಿಸಲಿಲ್ಲ. ಆದುದರಿಂದ ಮಣಿ ಎಂಬ ಕಾರ್ಮಿಕನನ್ನು ಕೆಳಕ್ಕೆ ಇಳಿಸಿ ಶುಚಿ ಕಾರ್ಯ ನಡೆಸಲಾಯಿತು. ಅದನ್ನು ನಾವು ಚಿತ್ರೀಕರಿಸಿಕೊಂಡಿದ್ದೇವೆ~ ಎನ್ನುವುದು ಸಂಘಟನೆಯ ಉಪಾಧ್ಯಕ್ಷ ವೈ.ಜೆ. ರಾಜೇಂದ್ರ ಅವರ ಹೇಳಿಕೆ.ಕೋರ್ಟ್ ಆದೇಶವಿದ್ದರೂ ಕಾರ್ಮಿಕರನ್ನು ಬಳಸಿಕೊಳ್ಳುತ್ತಿರುವ ಬಗ್ಗೆ ತಾವು ಇಲ್ಲಿನ ಸಂಪಂಗಿರಾಮನಗರ ಪೊಲೀಸರಲ್ಲಿ ದೂರು ದಾಖಲು ಮಾಡಿದ್ದರೂ, ಅವರು ತಪ್ಪಿತಸ್ಥರ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲು ಮಾಡಲಿಲ್ಲ ಎನ್ನುವುದು ಅವರ ಆರೋಪ. ಈ ಕುರಿತು ಅರ್ಜಿದಾರರ ಪರ ವಕೀಲ ಪ್ರೊ. ರವಿವರ್ಮ ಕುಮಾರ್ ಅವರು ನ್ಯಾಯಮೂರ್ತಿಗಳ ಗಮನಕ್ಕೆ ತಂದರು.ಕೆಲಸದಿಂದ ವಜಾ ಮಾಡಿ: ಸರ್ಕಾರದ ಲೋಪವನ್ನು ನ್ಯಾಯಮೂರ್ತಿಗಳು ಗಂಭೀರವಾಗಿ ಪರಿಗಣಿಸಿದರು. ಕೋರ್ಟ್‌ನಲ್ಲಿ ಹಾಜರು ಇದ್ದ ಜಲಮಂಡಳಿ ಅಧ್ಯಕ್ಷ ಗೌರವ ಗುಪ್ತಾ ಹಾಗೂ ಸರ್ಕಾರದ ಪರ ವಕೀಲರನ್ನು ಉದ್ದೇಶಿಸಿದ ಅವರು, `ನ್ಯಾಯಾಲಯಕ್ಕೆ ವಾಗ್ದಾನ ಮಾಡಿದ ಹೊರತಾಗಿಯೂ ಕಾರ್ಮಿಕರ ಬಳಕೆ ಮಾಡುತ್ತಿರುವ ಜಲಮಂಡಳಿಯ ನಡವಳಿಕೆ ನಮಗೆ ತೀವ್ರ ಬೇಸರ ತಂದಿದೆ. ನಾವು ಹೇಳುವಷ್ಟು ಹೇಳಿದ್ದೇವೆ.ನ್ಯಾಯಾಲಯದ ಆದೇಶವನ್ನೇ ಪಾಲನೆ ಮಾಡಲು ಜಲಮಂಡಳಿಯ ಉನ್ನತ ಹುದ್ದೆಯಲ್ಲಿ ಇರುವ ಅಧಿಕಾರಿಗಳಿಗೆ ಸಾಧ್ಯವಾಗದೇ ಹೋದರೆ ಅವರನ್ನು ಕೆಲಸದಿಂದ ತೆಗೆಯಬೇಕಿದೆ. ಕೆಲಸ ಮಾಡುವ ಅಧಿಕಾರಿಗಳನ್ನು ಮಾತ್ರ ಆ ಸ್ಥಾನಕ್ಕೆ ಹಾಕಬೇಕಿದೆ. ಜಲಮಂಡಳಿಯ ನಡವಳಿಕೆ ನೋಡಿದರೆ ಈ ಪ್ರಕರಣದ ದಿಕ್ಕನ್ನೇ ತಪ್ಪಿಸಲು ಅದು ಪ್ರಯತ್ನಿಸುತ್ತಿದೆ ಎಂದು ನಮಗೆ ಎನಿಸುತ್ತಿದೆ.

 

ಶುಚಿಗೊಳಿಸುವ ಯಂತ್ರಗಳನ್ನು ಖರೀದಿ ಮಾಡುವುದಾಗಿ ಕೋರ್ಟ್‌ಗೆ ಬಹಳ ಹಿಂದಿನಿಂದಲೂ ಮಂಡಳಿ ಹೇಳಿಕೊಂಡು ಬಂದಿದೆ. ಇದಕ್ಕೆ ನಾವು ಸಾಕಷ್ಟು ಕಾಲಾವಕಾಶವನ್ನೂ ನೀಡಿದ್ದೇವೆ. ಇದರ ಹೊರತಾಗಿಯೂ ಕಾರ್ಮಿಕರ ಬಳಕೆ ಆಗುತ್ತಿದೆ ಎಂದರೆ ನಾವು ಇನ್ನೇನು ಹೇಳುವುದು~ ಎಂದು ತರಾಟೆಗೆ ತೆಗೆದುಕೊಂಡರು.ಎಫ್‌ಐಆರ್ ದಾಖಲು ಮಾಡದೇ ಇರುವುದು ಕೂಡ ನ್ಯಾಯಮೂರ್ತಿಗಳ ಅಸಮಾಧಾನಕ್ಕೆ ಕಾರಣವಾಯಿತು. ಈ ಆರೋಪದ ಕುರಿತು ಪರಿಶೀಲನೆ ನಡೆಸುವುದಾಗಿ ಗುಪ್ತಾ ಅವರು ತಿಳಿಸಿದ ಕಾರಣದಿಂದ ವಿಚಾರಣೆಯನ್ನು ಪೀಠ 17ಕ್ಕೆ ಮುಂದೂಡಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.