ಮಂಗಳವಾರ, ಏಪ್ರಿಲ್ 13, 2021
28 °C

ಮ್ಯಾಮ್‌ಕೋಸ್‌ನಿಂದ 20 ಸಾವಿರ ಚೀಲ ಅಡಿಕೆ ಮಾರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮ್ಯಾಮ್‌ಕೋಸ್‌ನಿಂದ 20 ಸಾವಿರ ಚೀಲ ಅಡಿಕೆ ಮಾರಾಟ

ತರೀಕೆರೆ: ವಾರ್ಷಿಕ 20 ಸಾವಿರ ಚೀಲ ಅಡಿಕೆ ಮಾರಾಟ ನಡೆಸಿ ತರೀಕೆರೆ ಮ್ಯಾಮ್‌ಕೋಸ್ ಕೇಂದ್ರ ಅತ್ಯುತ್ತಮ ವಹಿವಾಟು  ಕೇಂದ್ರ ಎನಿಸಿದೆ ಎಂದು ಮ್ಯಾಮ್‌ಕೋಸ್ ಉಪಾಧ್ಯಕ್ಷ ಕೆ.ನರಸಿಂಹ ನಾಯಕ್ ತಿಳಿಸಿದರು.ಪಟ್ಟಣದ ಮ್ಯಾಮ್‌ಕೋಸ್ ಕಚೇರಿಯಲ್ಲಿ ಮಂಗಳವಾರ ನಡೆದ ಷೇರುದಾರರ ಸಮಾಲೋಚನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೀರೂರು ಕೇಂದ್ರ ಹೊರತುಪಡಿಸಿ ಮಿಕ್ಕೆಲ್ಲ ಮ್ಯಾಮ್‌ಕೋಸ್ ಕೇಂದ್ರಗಳು ಉತ್ತಮವಾಗಿ ವಹಿವಾಟು ನಡೆಸುತ್ತಿವೆ ಎಂದು ತಿಳಿಸಿದರು.ಸರ್ಕಾರದ ಯಾವುದೇ ಅನುದಾನ ಪಡೆಯದೆ ಷೇರುದಾರರ ವಹಿವಾಟಿನಿಂದ ನಡೆಯುವ ಮ್ಯಾಮ್‌ಕೋಸ್, ಕಳೆದ 70 ವರ್ಷದಿಂದಲೂ ಲಾಭದಲ್ಲಿ ನಡೆಯುತ್ತಿದೆ. ಪ್ರತಿವರ್ಷ ಶೇ 15ರಷ್ಟು ಲಾಭಾಂಶವನ್ನು ಷೇರುದಾರರಿಗೆ ನೀಡುತ್ತಿದೆ. ಪ್ರಸ್ತುತ ವರ್ಷದಲ್ಲಿ 125 ಕೋಟಿ ಹಣವನ್ನು ಸಾಲದ ರೂಪದಲ್ಲಿ ಷೇರುದಾರರಿಗೆ  ನೀಡಲಾಗಿದೆ. ಅಡಿಕೆ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಕೃಷಿ ಕಾರ್ಮಿಕರಿಗೆ ರೂ ಒಂದು ಲಕ್ಷ ಉಚಿತ ವಿಮೆಯನ್ನು ಸಂಸ್ಥೆ ಒದಗಿಸುತ್ತಿದೆ.  ಅಸ್ತ್ರ ಒಲೆಗೆ ಅಧಿಕ ಸಬ್ಸಿಡಿ ದರವನ್ನು ಮತ್ತು ಷೇರುದಾರರು ಮೃತಪಟ್ಟಲ್ಲಿ  ಅವರ ಅಂತ್ಯಸಂಸ್ಕಾರಕ್ಕೆ ಐದು ಸಾವಿರ ಹಣ ನೀಡಲಾಗುತ್ತಿದೆ ಎಂದರು.ಅಡಿಕೆ ಬೆಳೆಗಾರ ಜಿ.ಎಚ್.ಶ್ರೀನಿವಾಸ್ ಮಾತನಾಡಿ, ವಿದೇಶಗಳಿಂದ ಭಾರತಕ್ಕೆ ಆಮದು ಮಾಡಿಕೊಳ್ಳುವ ಅಡಿಕೆಗೆ ಹೆಚ್ಚು ಸುಂಕ ವಿಧಿಸಿದಲ್ಲಿ ದೇಶೀಯ ಅಡಿಕೆಗೆ ಉತ್ತಮ ಬೆಲೆ ಸಿಗುತ್ತದೆ ಎಂದರು.ಬೆಳೆಗಾರರಾದ ಟಿ.ವಿ.ಶಿವಶಂಕರಪ್ಪ, ಗಂಗಾಧರಪ್ಪ, ತಿಪ್ಪೇಶಪ್ಪ, ಅನಂತರಾಮ್ ಅವರು  ಮಾತನಾಡಿ, ಗೋರಕ್‌ಸಿಂಗ್ ವರದಿ ಜಾರಿಗೊಳಿಸುವಂತೆ ಸಂಸ್ಥೆ ಒತ್ತಡ ಹೇರಬೇಕು ಎಂದರು.ಮ್ಯಾಮ್‌ಕೋಸ್ ವ್ಯವಸ್ಥಾಪಕ ನಿರ್ದೇಶಕ ಪ್ರಸನ್ನ ಕುಮಾರಸ್ವಾಮಿ, ತರೀಕೆರೆಯ ವ್ಯವಸ್ಥಾಪಕ ಎಚ್. ವಿ. ಸುರೇಶ್, ನಿರ್ದೇಶಕ ಆರ್.ದೇವಾನಂದ್ ಮತ್ತು ಸಂಸ್ಥೆಯ ನಿರ್ದೇಶಕರು  ಸಭೆಯಲ್ಲಿ ಭಾಗವಹಿಸಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.