ಶನಿವಾರ, ಮೇ 8, 2021
26 °C

ಮ್ಯಾಳಕ್ಕ ಬರದಿದ್ರ ಮರಗತಿದ್ವಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: `ಹೊಲದಾಗ ಕಸ ಬಹಳ ಬಂದೈತಿ. ಕಸ ತಗಸಬೇಕಂದ್ರ ಆಳ್ ಸಿಗವಲ್ರು. ಅದ್ರಾಗ ಕೃಷಿ ಮೇಳಕ್ಕ ಇವತ್ತ ಕೊನೆ ದಿನ ಅಂತ ಗೊತ್ತಾತು. ಏನಾರ ಮಾಡಿ ಹೋಗ ಬರಬೇಕಂತ ನಿರ್ಧಾರ ಮಾಡಿ ಮ್ಯಾಳಕ್ಕ ಬಂದೆ.  ಇಲ್ಲಿ ಬಂದದಕ್ಕ  ಚಲೋನ ಆತು. ಕಳೆ ತೆಗೆಯೊ  ಚಿಂತ್ಯಾಗ ಇದ್ದ ನಮಗ ಯಂತ್ರಾನು ಸಿಕ್ತು. ನಮ್ಮ ಸಮಸ್ಯೆನೂ ಬಗಿ ಹರಿದ್ಹಂಗ ಆತು.~`ಮ್ಯಾಳದಾಗ ಮಾಹಿತಿನೂ ಸಿಕ್ತು, ಯಂತ್ರಾನೂ ಸಿಕ್ತು. ಮ್ಯಾಳಕ್ಕ ಬರದಿದ್ರ ಇಡಿ ವರ್ಷ ಮರಗತಿದ್ವಿ. ಕೂಲಿ ಕಾರ್ಮಿಕರು  ಇಲ್ದೆ ಒದ್ದಾಡೋದು ತಪ್ತ್  ನೋಡ್ರಿ~ ಎಂದು  ಕಳೆ ತೆಗೆಯುವ ಯಂತ್ರ ಖರೀದಿಸಿದ ಖುಷಿಯಲ್ಲಿ ರೈತರು  ಮಾತನಾಡುತ್ತ  ಮನೆಯತ್ತ  ಸಾಗುತ್ತಿದ್ದರು. ಕೃಷಿಕರಿಗೆ  ತುರ್ತು ಅಗತ್ಯವಿದ್ದ ಯಂತ್ರಗಳು,  ಕೃಷಿ ಕಾರ್ಯಕ್ಕೆ ಪೂರಕವಾದ ಉಪಕರಣಗಳು ಮತ್ತು ಅದಕ್ಕೆ ಸಂಬಂಧಪಟ್ಟ ಮಾಹಿತಿ ಮೇಳದಲ್ಲಿ ಲಭ್ಯವಿತ್ತು. ಅದೆಲ್ಲವನ್ನು ಕೈಚೀಲದಲ್ಲಿ ತುಂಬಿಕೊಂಡು

ಮೇಳದಲ್ಲಿ ರೈತರು ಹೆಚ್ಚು ವಿಚಾರಿಸಿದ್ದು ಕಳೆಯ ಕೀಳುವ ಯಂತ್ರ.

 

ಕಳೆ ತೆಗೆಯುವ ಯಂತ್ರಗಳ ಮಾರಾಟ ಮಳಿಗೆಯ ಎದುರು ಭಾರಿ ಸಂಖ್ಯೆಯಲ್ಲಿ ರೈತರು ನೆರೆದಿದ್ದೇ ಇದಕ್ಕೆ ಸಾಕ್ಷಿಯಾಗಿತ್ತು. ಭಾನುವಾರ ಲಕ್ಷಾಂತರ ಜನ ಮಳಿಗೆಗೆ ಭೇಟಿ ನೀಡಿದ್ದರಿಂದ ಮಳಿಗೆಯಲ್ಲಿದ್ದ ಮಾಹಿತಿಗಾರರು ಮಾಹಿತಿ ಕೊಟ್ಟು ಕೊಟ್ಟು ಸುಸ್ತಾಗಿದ್ದರು. ಸೋಮವಾರವೂ ರೈತರು ಮಳಿಗೆಗಳಿಗೆ  ತಂಡೋಪ ತಂಡವಾಗಿ ಬರುತ್ತಲೇ ಇದ್ದರು.ಮೇಳದಲ್ಲಿ ಪ್ರದರ್ಶನಕ್ಕೆ ಇಡಲಾಗಿದ್ದ ಅನೇಕ ಯಂತ್ರಗಳು ರೈತರಿಗೆ  ಭರವಸೆ ಮೂಡಿಸಿದವು. ಮಳಿಗೆಯಲ್ಲಿ 1,200 ರೂಪಾಯಿ ಬೆಲೆಯ ಕಳೆ ತೆಗೆಯುವ ಯಂತ್ರ ರೈತರನ್ನು ಆಕರ್ಷಿಸಿತು. ಒಬ್ಬ ಕೂಲಿಕಾರನಿಗೆ ದಿನಕ್ಕೆ 150 ರಿಂದ 200 ರೂಪಾಯಿ ಕೂಲಿ ಕೊಡಬೇಕು.ಈ ಯಂತ್ರ ಬಳಸಿದಲ್ಲಿ ದಿನವೊಂದಕ್ಕೆ 1 ರಿಂದ ಒಂದೂವರೆ ಎಕರೆ ಪ್ರದೇಶದಲ್ಲಿನ ಕಳೆಯನ್ನು  ಸುಲಭವಾಗಿ ತೆಗೆಯಬಹುದು. ಇದನ್ನು ವೀಕ್ಷಿಸಿದ ಬಹಳಷ್ಟು ರೈತರು ಮಳಿಗೆಯಲ್ಲಿ ತಮ್ಮ ಹೆಸರು  ನೋಂದಣಿ ಮಾಡಿ,  ಬೇಡಿಕೆ ಸಲ್ಲಿಸಿದ್ದು ಕಂಡು ಬಂದಿತು. ಶೇಂಗಾ ಸುಲಿಯುವ ಯಂತ್ರ: ಭೋಪಾಲದ ಕೃಷಿ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ ಶೇಂಗಾ ಸಿಪ್ಪೆ ತೆಗೆಯುವ ಯಂತ್ರವನ್ನು  ಕೃಷಿ ವಿಶ್ವವಿದ್ಯಾಲಯದ ಗ್ರಾಮೀಣ ಗೃಹ ವಿಜ್ಞಾನ ಕ ಕಾಲೇಜಿನ  ವಿದ್ಯಾರ್ಥಿಗಳು ಮೇಳದಲ್ಲಿ ಪರಿಚಯಿಸಿದ್ದರು. ಕೇವಲ 45 ನಿಮಿಷದಲ್ಲಿ ಒಂದು ಚೀಲ ಶೇಂಗಾ ಸಿಪ್ಪೆ ಸುಲಿಯುವ  ಕೈಯಂತ್ರವನ್ನು ರೈತರು ಕುತೂಹಲದಿಂದ ವೀಕ್ಷಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.