ಸೋಮವಾರ, ಏಪ್ರಿಲ್ 12, 2021
23 °C

ಯಂತ್ರಕ್ಕೆ ಖಾತ್ರಿ ; ಕಾರ್ಮಿಕರಿಗೆ ದೋಖಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಡ್ಲಘಟ್ಟ:  ‘ಉದ್ಯೋಗ ಖಾತ್ರಿ ಯೋಜನೆಗೆ ಬಿಡುಗಡೆಯಾದ ಕಾಮಗಾರಿಗಳಲ್ಲಿ ಜಾಬ್ ಕಾರ್ಡ್ ಉಳ್ಳವರಿಗೆ ಕೆಲಸ ನೀಡದೇ ಜೆಸಿಬಿ ಬಳಸಿ ಕಾಮಗಾರಿ ನಡೆಸುತ್ತಿದ್ದಾರೆ. ಕೆಲಸಕ್ಕೆ ತಕ್ಕಂತೆ ಸಮರ್ಪಕವಾಗಿ ಕೂಲಿ ನೀಡದೇ ಶೋಷಣೆ ಮಾಡುತ್ತಿದ್ದಾರೆ’ ಎಂದು ಗ್ರಾಮಸ್ಥರು ಆರೋಪಿಸಿದರು.ತಾಲ್ಲೂಕಿನ ಗಂಜಿಗುಂಟೆ ಪಂಚಾಯಿತಿ ಕಚೇರಿಗೆ ಮಂಗಳವಾರ ಭೇಟಿ ನೀಡಿದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ವೇಣುಗೋಪಾಲ್ ಮತ್ತು ಕಾರ್ಯ ನಿರ್ವಾಹಣಾಧಿಕಾರಿ ಅಮರನಾಥ್ ಅವರಿಗೆ ಗ್ರಾಮಸ್ಥರು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಆಗುತ್ತಿರುವ ಅವ್ಯವಹಾರ, ತೊಂದರೆ ಬಗ್ಗೆ ದೂರು ನೀಡಿದರು. ಒಂದು ವರ್ಷಕ್ಕೂ ಹಳೆಯದಾದ 8 ಲಕ್ಷ ರೂಪಾಯಿ ಬಿಲ್‌ಗಳನ್ನು ಪಾವತಿಸದೇ ಇತ್ತೀಚಿನ ಬಿಲ್‌ಗಳನ್ನು ಪಾವತಿಸುತ್ತಿದ್ದಾರೆ. ಅಧಿಕಾರಿಗಳು ಆಡಳಿತ ಪಕ್ಷದೊಂದಿಗೆ ಸೇರಿಕೊಂಡು ಬಡವರಿಗೆ ಮತ್ತು ಕೂಲಿಕಾರ್ಮಿಕರಿಗೆ ಅನ್ಯಾಯ ಮಾಡುತ್ತಿದ್ದಾರೆ. ಉದ್ಯೋಗ ಖಾತ್ರಿ ಯೋಜನೆ ಗುತ್ತಿಗೆದಾರರ ಅನುಕೂಲಕ್ಕೆ ಬಳಸುತ್ತಿದ್ದಾರೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.ಅನೇಕ ಕಾಮಗಾರಿ ಆರಂಭವೂ ಮಾಡದೇ ಹದಿನೈದು ದಿನಗಳ ಕಾಲ ಜನರಿಗೆ ಕೆಲಸ ಕೊಟ್ಟಿರುವುದಾಗಿ ಕಾಗದ ಪತ್ರ ತಯಾರಿಸಿದ್ದಾರೆ. ರೈತರೇ ನಿರ್ಮಿಸಿಕೊಂಡಿರುವ ಕಾಲುವೆಯನ್ನು ‘ಆಕ್ಷನ್ ಪ್ಲಾನ್’ನಲ್ಲಿ ಸೇರಿಸಿದ್ದಾರೆ. ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು. ‘ಮಾರ್ಚ್ 25ರೊಳಗೆ ಎಲ್ಲ ಹಳೆಯ ಬಿಲ್ ಚುಕ್ತಾ ಮಾಡುವಂತೆ ನಿರ್ದೇಶಿಸಲಾಗಿದೆ. ಹಳೆಯ ಬಿಲ್ ಪಾವತಿಸದೆ ಹೊಸದಾಗಿ ಪಾವತಿಸಬೇಕು. ಕಾಮಗಾರಿ ಸಮರ್ಪಕವಾಗಿರದಿದ್ದಲ್ಲಿ ತಕ್ಷಣ ಅದನ್ನು ಬರೆದು ಸಂಬಂಧಿಸಿದ ಇಲಾಖೆಗೆ ಕಳಿಸಬೇಕಾದುದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕರ್ತವ್ಯ. ಕಾಮಗಾರಿ ಖುದ್ದಾಗಿ ವೀಕ್ಷಿಸದೇ ಫೋಟೋ ಮೂಲಕ ದಾಖಲಿಸುವುದೇ  ಅಪರಾಧ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಅಮರನಾಥ್ ತಿಳಿಸಿದರು. ಉದ್ಯೋಗ ಖಾತ್ರಿ ಕಾಮಗಾರಿಗಳಲ್ಲಿ ಜಾಬ್ ಕಾರ್ಡ್ ಇರುವವರು ಕೆಲಸ ಕೊಡಿ ಎಂದು ಅರ್ಜಿ ಕೊಡಬೇಕು. ಗುತ್ತಿಗೆದಾರರ ಆಮಿಷಕ್ಕೆ ಒಳಗಾಗುವುದೂ ತಪ್ಪಾಗುತ್ತದೆ. ಲಿಖಿತವಾಗಿ ನೀಡಿರುವ ದೂರನ್ನು ಪರಿಶೀಲಿಸಿ. ಜೆಸಿಬಿ ಮೂಲಕ ಮಾಡಿರುವ ಕೆಲಸಗಳಿಗೆ ಹಣ ಬಿಡುಗಡೆ ಮಾಡುವುದಿಲ್ಲ’ ಎಂದರು.ತಾಲ್ಲೂಕು ಪಂಚಾಯಿತಿ ಸದಸ್ಯ ನರಸಿಂಹಮೂರ್ತಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಮಾಂಜಿನಪ್ಪ, ಲಕ್ಕೇನಹಳ್ಳಿ ಶ್ರೀರಾಮ್, ಹಕ್ಕಿಪಿಕ್ಕಿ ಕಾಲೋನಿಯ ರಾಮಬಾಬು, ಲಕ್ಕೇನಳ್ಳಿ ವೆಂಕಟರಮಣಪ್ಪ, ಗ್ರಾ.ಪಂ.ಸದಸ್ಯ ಛಲಪತಿ, ವೆಂಕಟೇಶ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.