ಬುಧವಾರ, ಅಕ್ಟೋಬರ್ 23, 2019
23 °C

ಯಂತ್ರದಂತಾದ ಮಾನವ; ಕಾಡುವ ಕಾಯಿಲೆ

Published:
Updated:

ಗುಲ್ಬರ್ಗ: ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ಎಲ್ಲರ ಕೈಗೆಟಕುವಂತೆ ನೀಡುವುದರಲ್ಲಿ ವೈದ್ಯರ ಜೀವನದ ಸಾರ್ಥಕತೆ ಅಡಗಿದೆ ಎಂದು ಅಂತರರಾಷ್ಟ್ರೀಯ ಖ್ಯಾತಿಯ ಹೃದ್ರೋಗ ಶಸ್ತ್ರಚಿಕಿತ್ಸಾ ತಜ್ಞ ಹಾಗೂ ಬೆಂಗಳೂರಿನ ಜಯದೇವ ಹೃದ್ರೋಗ ಚಿಕಿತ್ಸೆ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ. ಸಿ.ಎನ್.ಮಂಜುನಾಥ ಅಭಿಪ್ರಾಯಪಟ್ಟರು.ಭಾನುವಾರ ಇಲ್ಲಿನ ಎಸ್.ಎಂ.ಪಂಡಿತ ಏರ್ಪಡಿಸಲಾಗಿದ್ದ ಡಾ. ಪಿ.ಎಸ್.ಶಂಕರ ಪ್ರತಿಷ್ಠಾನದ 12ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿ, ಸಂಶೋಧನೆಯ ಲಾಭ ಜನತೆಗೆ ತಲುಪಿದರೆ ಮಾತ್ರ ಅದರ ಉದ್ದೇಶ ಈಡೇರಿದಂತೆ ಎಂದು ಹೇಳಿದರು.“ಅತ್ಯಾಧುನಿಕ ತಂತ್ರಜ್ಞಾನ ಹಾಗೂ ತೀವ್ರಗತಿಯ ಮಾರುಕಟ್ಟೆಯ ಮಧ್ಯೆ ರೋಗಿ ಸಿಕ್ಕು ನರಳುವಂತಾಗಿದೆ. ಅಗತ್ಯವಿಲ್ಲದೇ ಚಿಕಿತ್ಸೆ ನೀಡುವುದರಿಂದ ರೋಗಿಯ ಜೀವ ಅಪಾಯಕ್ಕೆ ಸಿಲುಕುವ ಅಪಾಯ ಇರುತ್ತದೆ; ಇದರಿಂದ ರೋಗಿಗೆ ಉಪಯೋಗವಿಲ್ಲ. ಸುರಕ್ಷತೆಯೊಂದಿಗೆ ರಾಜೀ ಮಾಡಿಕೊಳ್ಳದೇ ಒಂದೇ ಕಾಯಿಲೆಗೆ ಹಲವು ವಿಧದ ಚಿಕಿತ್ಸೆ ಲಭ್ಯವಿವೆ. ಆದರೆ ರೋಗಿಗಳ ಆರ್ಥಿಕ ಸ್ಥಿತಿ ಗಮನಿಸುವುದೂ ಬಹು ಮುಖ್ಯ” ಎಂದು ಅವರು ವೈದ್ಯರಿಗೆ ಸಲಹೆ ಮಾಡಿದರು.ಆಧುನಿಕ ಜಗತ್ತಿನ ಮಾನವ ಯಂತ್ರದಂತೆ ಕೆಲಸ ಮಾಡುತ್ತಿದ್ದಾನೆ. ಇದರಿಂದ ರಕ್ತದೊತ್ತಡ, ಮಧುಮೇಹ, ಕೊಲೆಸ್ಟ್ರಾಲ್ ಹಾಗೂ ಹೃದಯ ಸಂಬಂಧಿ ಕಾಯಿಲೆಗಳು ಕಾಡುತ್ತಿವೆ. ಈ ಸಮಸ್ಯೆಯಿಂದ ಪಾರಾಗಲು ಸಕಾರಾತ್ಮಕ ಮನೋಭಾವ ಹಾಗೂ ಚಿಂತೆರಹಿತ ಬದುಕು ನಮ್ಮದಾಗಬೇಕು ಎಂದು ಡಾ. ಮಂಜುನಾಥ ಕಿವಿಮಾತು ಹೇಳಿದರು.ಮಕ್ಕಳ ತಜ್ಞೆ ಡಾ. ಶಮಂತಕಮಣಿ ನರೇಂದ್ರನ್ ರಚಿಸಿದ `ಮಗುವಿನ ಬೆಳವಣಿಗೆ ಮತ್ತು ಆರೋಗ್ಯ ರಕ್ಷಣೆ~ ಕೃತಿಯನ್ನು ಗಂಗಾವತಿಯ ವೈದ್ಯ ಡಾ. ಮಾಣಿಕಪ್ಪ ಶೆಳ್ಳಗಿ ಬಿಡುಗಡೆ ಮಾಡಿದರು. ಡಾ. ಪಿ.ಎಸ್.ಶಂಕರ ರಚಿಸಿದ `ಪಲ್ಮನರಿ ಪರ್ಲ್ಸ್~, `ಪುರುಷ ಪ್ರಜನನ ವ್ಯವಸ್ಥೆ~, `ಜೀವನಶೈಲಿ ರೋಗಗಳು~ (ಉರ್ದು ಭಾಷೆಗೆ ಅನುವಾದಿತ) ಪುಸ್ತಕಗಳನ್ನು ಹೃದ್ರೋಗ ಶಸ್ತ್ರವೈದ್ಯ ಡಾ. ಕೆ.ಪೂರ್ಣೇಶ ಬಿಡುಗಡೆ ಮಾಡಿದರು.ವಿವಿಧ ಪ್ರಶಸ್ತಿಗಳಿಗೆ ಭಾಜನರಾದ ಡಾ. ವೀರಣ್ಣ ದಂಡೆ, ಎಸ್.ಆರ್.ಮಣೂರ, ಡಾ. ವಿಕ್ರಮ ವಿಸಾಜಿ ಹಾಗೂ ಡಾ. ಮುರುಗೇಶ ಪಸ್ತಾಪೂರ ಅವರನ್ನು ಸನ್ಮಾನಿಸಲಾಯಿತು. ಪ್ರತಿಷ್ಠಾನದ ಅಧ್ಯಕ್ಷೆ ಅಂಬಿಕಾ ಶಂಕರ, ಮಕ್ಕಳ ತಜ್ಞೆ ಡಾ. ಶಮಂತಕಮಣಿ, ಹೋಮಿಯೊಪಥಿ ತಜ್ಞ ಡಾ. ಬಿ.ಟಿ.ರುದ್ರೇಶ್ ಇದ್ದರು.ಮಾಲಾಶ್ರೀ ಕಣವಿ ಪ್ರಾರ್ಥಿಸಿದರು. ಉಪಾಧ್ಯಕ್ಷ ಡಾ. ಎಸ್.ಎಸ್.ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಪ್ರತಿಷ್ಠಾನದ ಕಾರ್ಯದರ್ಶಿ ಎಸ್.ಎಸ್.ಹಿರೇಮಠ ವಂದಿಸಿದರು. ಭಾರತಿ ಸಾಲಿಮಠ ನಿರೂಪಿಸಿದರು.ವಿವಿಧ ಕಡೆಗಳಿಂದ ವೈದ್ಯರು, ಡಾ. ಪಿ.ಎಸ್.ಶಂಕರ ಅವರ ಅಭಿಮಾನಿಗಳು, ಹಲವು ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)