ಯಂತ್ರ ಒಂದು: ಕಾರ್ಯ ಹಲವು

7

ಯಂತ್ರ ಒಂದು: ಕಾರ್ಯ ಹಲವು

Published:
Updated:

ವಿದ್ಯುತ್ ಉಳಿತಾಯದ ಜೊತೆಗೆ ಮನುಷ್ಯನ ಸ್ನಾಯುಬಲವನ್ನು ಹೆಚ್ಚಿಸುವ ವಿನೂತನ ಪ್ರಯೋಗವಿದು, ಒಂದೇ ಯಂತ್ರದಿಂದ ಹಲವು ಉಪಯೋಗಗಳನ್ನು ಪಡೆದುಕೊಳ್ಳುವ ವಿಶಿಷ್ಠ ಸಂಶೋಧನೆ, ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿನಿಯೊಬ್ಬಳು ಪ್ರಸ್ತುತಪಡಿಸಿದ ಪಾಂಡಿತ್ಯಪೂರ್ಣ ವಿಜ್ಞಾನ ಮಾದರಿಯಿದು, ಅಂತೆಯೇ ಇದಕ್ಕೆ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾದ ಹೆಮ್ಮೆ...,ಹೌದು, ಚಿಕ್ಕೋಡಿ ತಾಲ್ಲೂಕಿನ ಸದಲಗಾ ಪಟ್ಟಣದ ಸದಲಗಾ ಪೌಢಶಾಲೆಯಲ್ಲಿ 9ನೇ ತಗರತಿಯಲ್ಲಿ ಓದುತ್ತಿರುವ ನೇಹಾ ಅನೀಲಕುಮಾರ ಡೆಕ್ಕನ್ನವರ ಎಂಬ ವಿದ್ಯಾರ್ಥಿನಿಯು ಪ್ರಸ್ತುತಪಡಿಸಿದ `ಬಹುಪಯೋಗಿ ಯಂತ್ರ~ದ ವಿಜ್ಞಾನ ಮಾದರಿಯು 2011-12ನೇ ಸಾಲಿನ ರಾಷ್ಟ್ರಮಟ್ಟದ ಇನ್‌ಪ್ಯರ್ ಅವಾರ್ಡ್ ಸ್ಪರ್ಧೆಗೆ ಆಯ್ಕೆಯಾಗಿದೆ.ಮನೆಯ ಯಾವುದೋ ಮೂಲೆಯಲ್ಲಿ ಬಿದ್ದಿರಬಹುದಾದ ಕಬ್ಬಿಣದ ಸಲಾಖೆಗಳು, ಆರ್ಮಿಚರ್, ಕಟ್ಟಿಗೆಯನ್ನು ಕತ್ತರಿಸಬಹುದಾದ ಚಿಕ್ಕದಾದ ಕಟರ್ ಬ್ಲೇಡ್‌ಗಳು, ಫ್ಯಾನ್, ಪ್ಲಾಸ್ಟಿಕ್‌ನ ಚಿಕ್ಕದಾದ ಬಕೆಟ್‌ಗಳು, ಸೈಕಲ್ ರಿಮ್, ನೀರೆತ್ತುವ ಪಂಪ್, ಹಾಗೂ ಬೆಲ್ಟ್‌ಗಳನ್ನು ಬಳಸಿಕೊಂಡು ಸುಮಾರು ರೂ ನಾಲ್ಕು ಸಾವಿರ ವೆಚ್ಚದಲ್ಲಿ ತಯಾರಿಸಿರುವ ಬಹುಪಯೋಗಿ ಯಂತ್ರದ ಮಾದರಿ ವಿದ್ಯಾರ್ಥಿನಿಯ ವೈಜ್ಞಾನಿಕ ಮನೋಭಾವ ಮತ್ತು ಸೃಜನಶೀಲತೆಯನ್ನು ಪ್ರತಿಬಿಂಬಿಸುತ್ತದೆ. ಎಲ್ಲೆಡೆ ವಿದ್ಯುತ್ ಕ್ಷಾಮ ತಲೆದೋರುತ್ತಿರುವ ಇಂದಿನ ದಿನಗಳಲ್ಲಿ ಬಹುಪಯೋಗಿ ಯಂತ್ರದ ಅಗತ್ಯತೆ ಕುರಿತು ವಿದ್ಯಾರ್ಥಿನಿ ನೇಹಾ ಡೆಕ್ಕನ್ನವರ ನೀಡುವ ವಿವರಣೆ ಪರಿಣಾಮಕಾರಿಯಾಗಿದೆ. ಈ ಮಾದರಿ ತಯಾರಿಕೆಗೆ ವಿಜ್ಞಾನ ಶಿಕ್ಷಕ ಜೆ.ಡಿ. ಸಮಾಜೆ ಮತ್ತು ಇತರ ಶಿಕ್ಷಕರು ಮಾರ್ಗದರ್ಶನ ನೀಡಿದ್ದಾರೆ.`ನಿತ್ಯ ಜೀವನದಲ್ಲಿ ವಿದ್ಯುತ್ ಅನಿವಾರ್ಯ ಅಗತ್ಯತೆಗಳಲ್ಲಿ ಒಂದಾಗಿದೆ. ಆದರೆ, ವಿದ್ಯುತ್ ಕೊರತೆ ಕಾಡುತ್ತಿದೆ. ಇಂತಹ ಸಂದರ್ಭದಲ್ಲಿ ಈ ಬಹುಪಯೋಗಿ ಯಂತ್ರಕ್ಕೆ ಅಳವಡಿಸಿರುವ ಪೆಡೆಲ್‌ಅನ್ನು ತುಳಿಯುವ ಮೂಲಕ ಏಕಕಾಲಕ್ಕೆ ವಿದ್ಯುತ್ ಉತ್ಪಾದಿಸುವ ಜೊತೆಗೆ ಯಂತ್ರಕ್ಕೆ ಅಳವಡಿಸಿರುವ ವಿವಿಧ ಭಾಗಗಳಿಂದ ಕಬ್ಬಿಣ ಅಥವಾ ಉಕ್ಕಿನ ಸಲಕರಣೆಗಳಿಗೆ ಸಾನಿ ಹಚ್ಚಿ ಹರಿತ ಮಾಡಿಕೊಳ್ಳಬಹುದು. ಕಟರ್‌ನಿಂದ ಮೇವು ಕತ್ತರಿಸಬಹುದಾಗಿದೆ.ಕಟ್ಟಿಗೆ ತುಂಡು ಮಾಡಬಹುದು. ಕೊಬ್ಬರಿಯನ್ನು ಹೆಚ್ಚಲು ಸಾಧ್ಯ. ಫ್ಯಾನ್‌ನಿಂದ ಸೂಸುವ ಗಾಳಿಯಿಂದ ಧಾನ್ಯಗಳನ್ನೂ ಸ್ವಚ್ಛ ಮಾಡಿಕೊಳ್ಳಬಹುದು. ಸತತ ಎರಡು ಗಂಟೆಗಳ ಕಾಲ ಪೆಡೆಲ್ ತುಳಿದಾಗ ಅದರಿಂದ ಉತ್ಪಾದನೆಯಾಗುವ ವಿದ್ಯುತ್ ಅನ್ನು ಬ್ಯಾಟರಿಯಲ್ಲಿ ಸಂಗ್ರಹಿಸಿ ಸುಮಾರು ನಾಲ್ಕು ಗಂಟೆಗಳ ಕಾಲ ಮನೆಯಲ್ಲಿ ವಿದ್ಯುತ್‌ದೀಪ ಉರಿಸಿಕೊಳ್ಳಬಹುದಾಗಿದೆ. ಈ ಯಂತ್ರದಿಂದ ವಿದ್ಯುತ್ ಆಭಾವ ನಿವಾರಿಸಿಕೊಳ್ಳುವ ಜೊತೆಗೆ ಮನುಷ್ಯನ ದೇಹಕ್ಕೆ ವ್ಯಾಯಾಮವೂ ದೊರಕಿದಂತಾಗುತ್ತದೆ~ ಎಂದ ನೇಹಾ ಡೆಕ್ಕನ್ನವರ ವಿವರಣೆ ನೀಡುತ್ತಾರೆ.`ಅ.13 ರಿಂದ ಮೂರು ದಿನಗಳ ಕಾಲ ಕುಮಟಾದಲ್ಲಿ ನಡೆದ ರಾಜ್ಯಮಟ್ಟದ ಇನ್‌ಪ್ಯರ್ ಅವಾರ್ಡ್ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪ್ರದರ್ಶನವಾದ ರಾಜ್ಯದ ಒಟ್ಟು 945 ಮಾದರಿಗಳ ಪೈಕಿ ಒಟ್ಟು 66 ಮಾದರಿಗಳನ್ನು ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆ ಮಾಡಲಾಗಿದೆ. ಆ ಪೈಕಿ ಸದಲಗಾ ಪ್ರೌಢಾಶಾಲೆಯ ಬಹುಪಯೋಗಿ ಯಂತ್ರದ ಮಾದರಿಯೂ ಒಂದಾಗಿದೆ. ಬರುವ 21 ರಿಂದ ಮೂರು ದಿನಗಳ ಕಾಲ ದೆಹಲಿಯಲ್ಲಿ ರಾಷ್ಟ್ರಮಟ್ಟದ ಇನ್‌ಪ್ಯರ್ ಅವಾರ್ಡ್ ವಿಜ್ಞಾನ ವಸ್ತು ಪ್ರದರ್ಶನ ನಡೆಯಲಿದ್ದು, ಅಲ್ಲಿಯೂ ಈ ಮಾದರಿ ನಿರ್ಣಾಯಕರ ಗಮನ ಸೆಳೆಯಲಿದೆ~ ಎಂಬ ವಿಶ್ವಾಸವನ್ನು ವ್ಯಕ್ತಪಡಿಸುತ್ತಾರೆ ಶಿಕ್ಷಕ ಕೆ.ಬಿ.ಹೊನ್ನಾಯ್ಕ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry