ಯಕೃತ್ತಿನ ಮರು ಜೋಡಣೆ ಶಸ್ತ್ರ ಚಿಕಿತ್ಸೆ:ಬೆಂಚ್ ಸರ್ಜರಿ ಯಶಸ್ವಿ

7

ಯಕೃತ್ತಿನ ಮರು ಜೋಡಣೆ ಶಸ್ತ್ರ ಚಿಕಿತ್ಸೆ:ಬೆಂಚ್ ಸರ್ಜರಿ ಯಶಸ್ವಿ

Published:
Updated:

ಬೆಂಗಳೂರು: ಬೆಂಚ್ ಸರ್ಜರಿ ಮೂಲಕ ಯಕೃತ್ತಿನ ಮರು ಜೋಡಣೆ ಶಸ್ತ್ರ ಚಿಕಿತ್ಸೆಯನ್ನು ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ.ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಾ.ಸಂಜಯ್ ಗೋವಿಲ್, `ಬೆಂಚ್ ಸರ್ಜರಿ ಮೂಲಕ ಯಕೃತ್ತಿನ ಶಸ್ತ್ರ ಚಿಕಿತ್ಸೆ ನಡೆಸಿರುವುದು ಕರ್ನಾಟಕದಲ್ಲಿ ಇದೇ ಮೊದಲು.ಈ ಹಿಂದೆ ದೇಹದ ಇತರ ಭಾಗಗಳ ಬೆಂಚ್ ಸರ್ಜರಿ ನಡೆದಿದ್ದರೂ, ಯಕೃತ್ತನ್ನು ಬೆಂಚ್ ಸರ್ಜರಿ ಮೂಲಕ ಮರು ಜೋಡಣೆ ಮಾಡಿರುವ ಪ್ರಯೋಗ ಇದೇ ಮೊದಲು. ಏ.24 ರಂದು ನಡೆಸಿದ ಶಸ್ತ್ರ ಚಿಕಿತ್ಸೆಯ ಮೊದಲ ಪ್ರಯೋಗದಲ್ಲೇ ನಾವು ಯಶಸ್ವಿಯಾಗಿದ್ದೇವೆ~   ಎಂದು ತಿಳಿಸಿದರು.`ರೋಗಿಯ ಯಕೃತ್ತಿನ ಭಾಗ ಹಾಗೂ ಹೃದಯದ ನಡುವೆ ಕ್ಯಾನ್ಸರ್‌ನ ಗಡ್ಡೆಯೊಂದು ಬೆಳೆದಿತ್ತು. ಯಕೃತ್ತು ಇರುವಂತೆಯೇ ಗಡ್ಡೆ ತೆಗೆಯುವ ಶಸ್ತ್ರ ಚಿಕಿತ್ಸೆಗೆ ಮುಂದಾಗಿದ್ದರೆ ಹೆಚ್ಚಿನ ರಕ್ತ ಸ್ರಾವದಿಂದ ರೋಗಿಯ ಜೀವಕ್ಕೇ ಅಪಾಯವಾಗುವ ಸಾಧ್ಯತೆ ಇತ್ತು.ಹೀಗಾಗಿ ಯಕೃತ್ತನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಹೊರ ತೆಗೆದು `ಎಚ್‌ಟಿಕೆ~ ದ್ರಾವಣದಲ್ಲಿ ಶುದ್ಧಗೊಳಿಸಿ ಮಂಜುಗಡ್ಡೆಯಲ್ಲಿ ಸಂರಕ್ಷಿಸಿ ಇಡಲಾಯಿತು. ನಂತರ ಕ್ಯಾನ್ಸರ್‌ನ ಗಡ್ಡೆಯನ್ನು ಶಸ್ತ್ರ ಚಿಕಿತ್ಸೆ ಮೂಲಕ ತೆಗೆದು, ಯಕೃತ್ತನ್ನು ಮರು ಜೋಡಣೆ ಮಾಡಲಾಯಿತು.    ಇದೊಂದು ಅಪರೂಪದ ಶಸ್ತ್ರ ಚಿಕಿತ್ಸೆಯಾಗಿತ್ತು~   ಎಂದು  ಅವರು ಹೇಳಿದರು. `ಶಸ್ತ್ರ ಚಿಕಿತ್ಸೆಯ ನಂತರ ರೋಗಿಯ ಆರೋಗ್ಯ ಸುಧಾರಿಸುತ್ತಿದೆ. ಚಿಕಿತ್ಸೆಗೆ ಅವರ ದೇಹ ಉತ್ತಮವಾಗಿ ಸ್ಪಂದಿಸಿದೆ. ಇನ್ನೆರಡು ದಿನಗಳಲ್ಲಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು~ ಎಂದರು.

ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಳ್ಳುತ್ತಿರುವ ತಿಮ್ಮೇಗೌಡ ಮಾತನಾಡಿ, `ಕೆಲವು ತಿಂಗಳಿಂದ ಹಸಿವಿನ ಅನುಭವವೇ ಆಗುತ್ತಿರಲಿಲ್ಲ. ಹೊಟ್ಟೆಯೊಳಗೆ ವಿಚಿತ್ರವಾದ ನೋವಾಗುತ್ತಿತ್ತು. ಶಸ್ತ್ರ ಚಿಕಿತ್ಸೆಯ ನಂತರ ಆರೋಗ್ಯದಲ್ಲಿ ಸುಧಾರಣೆ ಕಾಣುತ್ತಿದೆ~ ಎಂದರು.

ಏನಿದು `ಬೆಂಚ್ ಸರ್ಜರಿ~

`ರೋಗಿಯ ದೇಹದಿಂದ ಚಿಕಿತ್ಸೆ ಅಗತ್ಯವಿರುವ ಭಾಗವನ್ನು ಹೊರತೆಗೆದು ಶಸ್ತ್ರ ಚಿಕಿತ್ಸೆ ಮಾಡುವ ವಿಧಾನ `ಬೆಂಚ್ ಸರ್ಜರಿ~ ಎನಿಸಿಕೊಂಡಿದೆ. ರೋಗಿಯ ದೇಹದಲ್ಲೇ ಚಿಕಿತ್ಸೆ ಅಗತ್ಯವಿರುವ ಭಾಗವೊಂದರ ಶಸ್ತ್ರ ಚಿಕಿತ್ಸೆ ನಡೆಯುವುದು ಸಾಮಾನ್ಯ.ಆದರೆ ಶಸ್ತ್ರ ಚಿಕಿತ್ಸೆ ನಡೆಯಬೇಕಾಗಿರುವ ಭಾಗವನ್ನು ದೇಹದಿಂದ ಬೇರ್ಪಡಿಸಿ ಅದರ ಶಸ್ತ್ರ ಚಿಕಿತ್ಸೆ ಮಾಡುವುದು `ಬೆಂಚ್ ಸರ್ಜರಿ~ಯ ವಿಶೇಷ. ಚಿಕಿತ್ಸೆ ನೀಡಬೇಕಿರುವ ದೇಹದ ಭಾಗವನ್ನು ದೇಹದಿಂದ ಬೇರ್ಪಡಿಸಿ ಪಕ್ಕದ `ಬೆಂಚ್~ನ ಮೇಲಿಟ್ಟು ಶಸ್ತ್ರ ಚಿಕಿತ್ಸೆ ಮಾಡುವುದರಿಂದ `ಬೆಂಚ್ ಸರ್ಜರಿ~ ಎಂಬ ಹೆಸರು ಬಂದಿದೆ~ ಎಂದು ಡಾ.ಡಾ.ಸಂಜಯ್ ಗೋವಿಲ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry