ಯಕ್ಷಗಾನವೇ ನನ್ನ ಉಸಿರು: ಚಿಟ್ಟಾಣಿ

ಶನಿವಾರ, ಜೂಲೈ 20, 2019
24 °C

ಯಕ್ಷಗಾನವೇ ನನ್ನ ಉಸಿರು: ಚಿಟ್ಟಾಣಿ

Published:
Updated:

ಮೈಸೂರು: `ಏಳು ದಶಕಗಳಿಂದ ಯಕ್ಷಗಾನ ಮಾಡುತ್ತಿದ್ದೇನೆ. ಯಕ್ಷಗಾನವೇ ನನ್ನ ಉಸಿರಾಗಿದ್ದು, ಇಡೀ ಜೀವನವನ್ನು ಕಲೆಗಾಗಿ ಮೀಸಲಾಗಿಟ್ಟಿದ್ದೇನೆ. ರಂಗಭೂಮಿಯಿಂದ ನಿವೃತ್ತಿ ಪಡೆದರೆ ಚಿಟ್ಟಾಣಿ ಮಾಡುವು ದಾದರೂ ಏನನ್ನು? ದೇಹದಲ್ಲಿ ಪ್ರಾಣ ಇರುವವರೆಗೂ ವೇಷ ಹಾಕುತ್ತೇನೆ; ರಂಗದ ಮೇಲೆ ಕುಣಿಯುತ್ತೇನೆ...~-ಹೀಗೆ ಅಂತರಂಗ ಬಿಚ್ಚಿಟ್ಟಿದ್ದು ಅಭಿಜಾತ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ. ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿ ಯಿಂದ ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಇರುವ ಕಾರ್ಯಾಲಯದಲ್ಲಿ ಭಾನುವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮ ದಲ್ಲಿ ಮನತುಂಬಿ ಮಾತನಾಡಿದರು.`ಏಳನೇ ವಯಸ್ಸಿನಲ್ಲಿ ಯಕ್ಷಗಾನಕ್ಕೆ ಪದಾರ್ಪಣೆ ಮಾಡಿದಾಗ ಮನೆಯಲ್ಲಿ ಬಡತನವಿತ್ತು. ಕಲಾವಿದನಾಗಬೇಕು ಎಂಬ ಹಪಹಪಿಕೆ ಪದ್ಮಶೀ ಪ್ರಶಸ್ತಿ ವರೆಗೂ ಬೆಳೆಸಿದೆ. ಹಲವು ಏಳು- ಬೀಳುಗಳ ನಡುವೆ ಜೀವ ಗಟ್ಟಿ ಕೊಂಡಿದೆ. ಹಾಗಂತ ಚಿಟ್ಟಾಣಿ ಯಕ್ಷ ಗಾನದ ಸರ್ವಸ್ವವನ್ನು ತಿಳಿದಿಲ್ಲ. ಕಲಾವಿದನಾಗಿ ಎಲ್ಲ ಪಾತ್ರಗಳಿಗೂ ಜೀವ ತುಂಬುವ ಕೆಲಸ ಮಾಡಿದ್ದೇನೆ. ಭಸ್ಮಾಸುರ, ಕೀಚಕ, ದುರ್ಯೋದನ ಪಾತ್ರಗಳಲ್ಲಿ ನವರಸಗಳನ್ನು ಸೇರಿಸಿ ಅಭಿನಯಿಸಿದ್ದೇನೆ. ಆದರೆ ಗದಾಯುದ್ಧದ ಕೌರವ ತೀರಾ ಇಷ್ಟವಾದ ಪಾತ್ರ~ ಎಂದರು.`ಚಿಟ್ಟಾಣಿ ಖಳನಾಯಕನ ಪಾತ್ರ ಮಾಡಬೇಕು ಎಂಬುದು ಪ್ರೇಕ್ಷಕರ ಅಪೇಕ್ಷೆಯೇ ಹೊರತು ಇಷ್ಟಪಟ್ಟು ಮಾಡಿದ್ದಲ್ಲ. ಅವರಿಗೆ ಚಿಟ್ಟಾಣಿಯನ್ನು ಕೀಚಕನನ್ನಾಗಿ ಕಾಣುವ ಬಯಕೆ. ಹೀಗಾಗಿ ಬಹುಪಾಲು ಪ್ರಸಂಗಗಳಲ್ಲಿ ಖಳನಾಯಕನ ಪಾತ್ರ ಲಭಿಸಿದೆ. ಯಕ್ಷಗಾನಕ್ಕೆ ಪೌರಾಣಿಕ ಪ್ರಸಂಗಗಳೇ ಸೂಕ್ತ. ಇಲ್ಲಿ ಅಭಿನಯಿಸಿದಷ್ಟು ಅದ್ಭು ತವಾಗಿ ಹೊಸ ಪ್ರಸಂಗದ ಪಾತ್ರಗಳಿಗೆ ನ್ಯಾಯ ಒದಗಿಸಲು ಸಾಧ್ಯವಿಲ್ಲ.

 

ಆದರೆ ಕಾಲದ ಬದಲಾವಣೆಗೆ ಕಲೆ ಹೊಂದಿಕೊಳ್ಳದೇ ಇದ್ದರೆ ಅದರ ಅಸ್ತಿತ್ವಕ್ಕೆ ದಕ್ಕೆ ಉಂಟಾಗುತ್ತದೆ. ಪ್ರೇಕ್ಷಕರನ್ನು ಆಟದ ಕಡೆ ಸೆಳೆಯುವ ಉದ್ದೇಶದಿಂದ ಅನಿವಾರ್ಯವಾಗಿ ಯಕ್ಷಗಾನದಲ್ಲಿ ಕೆಲ ಬದಲಾವಣೆ ಮಾಡಿಕೊಳ್ಳ ಲಾಗಿದೆ. ದಿನವಿಡೀ ನಡೆಯುತ್ತಿದ್ದ ಪ್ರಸಂಗಗಳನ್ನು ಒಂದು ಗಂಟೆಗೆ ಇಳಿಸಲಾಗಿದೆ~ ಎಂದು ಅಭಿಪ್ರಾಯಪಟ್ಟರು.`ಗುರು ಇಲ್ಲದೆ ವಿದ್ಯೆ ಇಲ್ಲ ಎಂಬ ಮಾತು ಸತ್ಯ. ಕೆರೆಮನೆ ಶಂಭು ಹೆಗಡೆ ಅವರು ಅಂತರಂಗದಲ್ಲಿ ನೆಲೆಸಿದ್ದಾರೆ. ರಾಮಕೃಷ್ಣ ಭಟ್ಟ ಅವರ ಶಿಷ್ಯನಾಗಿದ್ದೆ. ಯಕ್ಷಗಾನದಲ್ಲಿ ಪೂರ್ವ ತಯಾರಿ ಮಾಡಿಕೊಳ್ಳುವುದು ಕಡಿಮೆ. ಎಲ್ಲವೂ ರಂಗದ ಮೇಲೆ ಪ್ರಯೋಗವಾಗುತ್ತವೆ. ಎಲ್ಲ ಪ್ರಸಂಗದ ಪದ್ಯಗಳನ್ನು ಕಲಿಯಲು ಈವರೆಗೂ ಸಾಧ್ಯವಾಗಿಲ್ಲ. ಯಕ್ಷಗಾನ ಕನ್ನಡದ ಕಲೆ ಎಂಬುದನ್ನು ಚಿಟ್ಟಾಣಿ ತೀರ್ಮಾನಿಸಲು ಆಗದು. ಯಾವ ಕಲೆಯೂ ಕಲಾವಿದನ ಸ್ವತ್ತಲ್ಲ. ಹೀಗಾಗಿ ಯಕ್ಷಗಾನ ಕನ್ನಡದ ಕಲೆ ಎಂಬ ಸಾಮೂಹಿಕ ಅಭಿಪ್ರಾಯ ರೂಪುಗೊಳ್ಳಬೇಕು~ ಎಂದು ಪ್ರಶ್ನೆಗೆ ಉತ್ತರಿಸಿದರು.`ಯಕ್ಷಗಾನ ಶಾಲೆ ತೆರೆಯುವ ಬಯಕೆ ಇರುವುದು ನಿಜ. ಆದರೆ ಕೆರೆಮನೆ, ಉಡುಪಿಗಳಲ್ಲಿ ಇರುವ ಶಾಲೆಗಳಲ್ಲಿಯೇ ವಿದ್ಯಾರ್ಥಿಗಳಿಲ್ಲ. ಇಂಥ ಪರಿಸ್ಥಿತಿಯಲ್ಲಿ ಶಾಲೆ ತೆರೆಯುವುದಾದರೂ ಹೇಗೆ? ಕರಾವಳಿಗೆ ಸೀಮಿತವಾಗಿದ್ದ ಯಕ್ಷಗಾನ ಈಗ ಸೀಮೋಲ್ಲಂಘನ ಮಾಡಿದೆ. ದೇಶ-ವಿದೇಶಗಳಲ್ಲಿ ಪಸರಿಸುತ್ತಿರುವುದು ಭವಿಷ್ಯದ ಬಗೆಗೆ ಭರವಸೆ ಮೂಡಿಸಿದೆ.ಈ ಕಲೆಯ ವೇಷಭೂಷಣಕ್ಕೆ ಸಂಬಂಧಿಸಿದ ವಸ್ತುಸಂಗ್ರಹಾಲಯ ನಿರ್ಮಿಸುವ ತುಡಿತ ಹೆಚ್ಚಾಗುತ್ತಿದೆ. ಆದರೆ ಹಣಕಾಸಿನ ಸಮಸ್ಯೆಯಿಂದಾಗಿ ಯೋಚನೆ ಮಾಡುತ್ತಿದ್ದೇನೆ~ ಎಂದು ತಮ್ಮ ಮನದಾಳದ ಬಯಕೆಯನ್ನು ಹಂಚಿಕೊಂಡರು.ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಅಧ್ಯಕ್ಷ ಎಂ.ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಇನೊವೇಟಿವ್ ಸಂಸ್ಥೆ ಅಧ್ಯಕ್ಷ ಪ್ರೊ.ಜಿ.ಎಸ್.ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry