ಸೋಮವಾರ, 4 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಕ್ಷಗಾನ ಅಕಾಡೆಮಿ ನಿರ್ಧಾರಕ್ಕೆ ಬೇಸರ

ಬೊಂಬೆಯಾಟದ ಕಲಾವಿದರಿಗೆ ‘ಪಾರ್ತಿಸುಬ್ಬ’ ಪ್ರಶಸ್ತಿ
Last Updated 13 ಮಾರ್ಚ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಯಕ್ಷಗಾನ ಕಲಾವಿದರಿಗೆ ನೀಡಬೇಕಾದ ‘ಪಾರ್ತಿಸುಬ್ಬ’ ಪ್ರಶಸ್ತಿಯನ್ನು ಬೊಂಬೆಯಾಟದ ಕಲಾವಿದರಿಗೆ ನೀಡಲಾಗುತ್ತಿದೆ’ ಎಂದು ಯಕ್ಷಗಾನ ಬಯಲಾಟ ಅಕಾಡೆಮಿ ಸದಸ್ಯ ಪಿ.ಕಿಶನ್‌ ಹೆಗ್ಡೆ ಬೇಸರ ವ್ಯಕ್ತಪಡಿಸಿದರು.

ಯಕ್ಷಗಾನ ಸಂಘಟಕ ದಿವಂಗತ ಕರ್ನೂರು ಕೊರಗಪ್ಪ ರೈ ಅವರ ಸ್ಮರಣಾರ್ಥ ಕರ್ನಾಟಕ ಕಲಾ ಸಂಪದ ಸಂಸ್ಥೆ ವತಿಯಿಂದ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಕರ್ನೂರು ಒಂದು ನೆನಪು’ ಎಂಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರತ್ಯೇಕ ಯಕ್ಷಗಾನ ಮಂಡಳಿರಚಿಸಬೇಕೆಂದು ನಾವು ಅನೇಕ ದಿನಗಳಿಂದ ಹೋರಾಡುತ್ತಲೇ ಬಂದಿದ್ದೇವೆ. ಆದರೆ ಈವರೆಗೆ ಫಲ ಸಿಕ್ಕಿಲ್ಲ. ಅದಕ್ಕಾಗಿ ನಾವೆಲ್ಲರೂ ಒಗ್ಗೂಡಿ ಹೋರಾಡುವ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.

ವಿಧಾನ ಪರಿಷತ್‌ ಸದಸ್ಯೆ ತಾರಾ ಅನೂರಾಧ ಮಾತನಾಡಿ, ‘ರಂಗಭೂಮಿಯಿಂದ ಬಂದವರೇ ನಿಜವಾದ ಕಲಾವಿದರು. ಸಿನಿಮಾಗಳಲ್ಲಿ ನಟರು ಮಾಡಿದ ತಪ್ಪುಗಳನ್ನು ತೆಗೆದು ಹಾಕಿ, ಒಪ್ಪಗೊಳಿಸಿ ತೋರಿಸಲಾಗುತ್ತದೆ. ಆದರೆ ರಂಗಭೂಮಿಯಲ್ಲಿ ಕಲಾವಿದರು ಹಾಗೆಲ್ಲ ಮಾಡಲು ಸಾಧ್ಯವಿಲ್ಲ. ನಿಜವಾದ ಕಲಾವಿದರನ್ನು ಗುರುತಿಸಿ ಗೌರವಿಸುವ ಈ ಕಾರ್ಯ ಜಿಲ್ಲಾಮಟ್ಟದಲ್ಲಿಯೂ ನಡೆಯಲಿ’ ಎಂದು ಹೇಳಿದರು.

ಎಂಆರ್‌ಜಿ ಸಮೂಹದ ಅಧ್ಯಕ್ಷ ಕೆ.ಪ್ರಕಾಶ್‌ ಶೆಟ್ಟಿ ಮಾತನಾಡಿ, ‘ಶಾಲಾ, ಕಾಲೇಜುಗಳು ಮಕ್ಕಳಿಗೆ ಶಿಕ್ಷಣ ಕೊಡಬಹುದೇ ವಿನಾ ಸಂಸ್ಕಾರವನ್ನಲ್ಲ. ಅದು ಪೋಷಕರಿಂದಲೇ ಬರಬೇಕಾದದ್ದು. ಆದರೆ ಇವತ್ತು ಎಷ್ಟೋ ಕುಟುಂಬಗಳಲ್ಲಿ ತಂದೆ–ಮಕ್ಕಳ ನಡುವೆ ಸಾಮರಸ್ಯವೇ ಇಲ್ಲವಾಗಿದೆ. ಉತ್ತಮ ಸಂಸ್ಕಾರವೇ ದೊರೆಯದ ಅನೇಕ ಪದವೀಧರರು ಉಗ್ರರಾಗಿ ಸಮಾಜ ಕಂಟಕರಾಗುತ್ತಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

ಯಕ್ಷಾಂಗಣದ ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ, ‘ತಮ್ಮ ಇಡೀ ಜೀವನವನ್ನು ಯಕ್ಷಗಾನಕ್ಕಾಗಿ ಮುಡುಪಿಟ್ಟ ಕರ್ನೂರು ಕೊರಗಪ್ಪ ರೈ ಅವರು ಭರತನಾಟ್ಯವನ್ನು ಯಕ್ಷಗಾನಕ್ಕೆ ಅಳವಡಿಸಿ, ಪರಿಶುದ್ಧ ನೃತ್ಯಗಾರಿಕೆ ಪರಿಚಯಿಸಿದರು. ಅನೇಕ ಕಲಾವಿದರನ್ನು ಬೆಳಕಿಗೆ ತಂದರು’ ಎಂದರು.

‘ಕದ್ರಿ ಮೇಳವನ್ನು ಪುನರುಜ್ಜೀವನಗೊಳಿಸಿ ನಡೆಸುವುದಕ್ಕಾಗಿ ತಮ್ಮ ಸ್ವಂತ ಮನೆ, ತೋಟ ಕಳೆದುಕೊಂಡರೂ ಕೊರಗದ ಕೊರಗಪ್ಪ ರೈ ಅವರು ಅನಾರೋಗ್ಯದಿಂದಾಗಿ ಕೊನೆಯ ದಿನಗಳಲ್ಲಿ ತುಂಬಾ ನೊಂದುಕೊಂಡರು’ ಎಂದರು.

ಯಕ್ಷಗಾನ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಎಂಟು ಕಲಾವಿದರಿಗೆ ‘ಕರ್ನಾಟಕ ಕಲಾಸಂಪದ ಪ್ರಶಸ್ತಿ 2016’ ನೀಡಿ ಸನ್ಮಾನಿಸಲಾಯಿತು. ‘ಬಲೆ ತೆಲಿಪುಲೆ’ ಎಂಬ ಹಾಸ್ಯ ಕಾರ್ಯಕ್ರಮ ಮತ್ತು ‘ಶಾಂಭವಿ ವಿಜಯ’ ಎಂಬ ಪೌರಾಣಿಕ ಕನ್ನಡ ಯಕ್ಷಗಾನ ಪ್ರದರ್ಶನಗೊಂಡವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT