ಬುಧವಾರ, ಮಾರ್ಚ್ 3, 2021
31 °C

ಯಕ್ಷರಂಗದಲ್ಲಿ ಮೊದಲ ಸೌಮ್ಯ ಹೆಜ್ಜೆ

ಕೋಡಿಬೆಟ್ಟು ರಾಜಲಕ್ಷ್ಮಿ Updated:

ಅಕ್ಷರ ಗಾತ್ರ : | |

ಯಕ್ಷರಂಗದಲ್ಲಿ ಮೊದಲ ಸೌಮ್ಯ ಹೆಜ್ಜೆ

ಮಂಗಳೂರ: ಹೆಣ್ಣು ಮಕ್ಕಳಿಗೆಲ್ಲ ಶಾಲೆ ಏಕೆ ಬೇಕು ಎಂಬ ಅಭಿಪ್ರಾಯ ಜನಜನಿತವಾಗಿದ್ದ ಕಾಲ ಅದು. ನರ್ಮದಾ ಶಿಬರೂರಾಯ ಅವರು ತಮ್ಮ ಅಣ್ಣಂದಿರೆಲ್ಲ ಶಾಲೆಗೆ ಹೋಗುವಾಗ ಆಸೆ ಕಣ್ಣುಗಳಿಂದ ನೋಡುತ್ತಿದ್ದರು. ‘ನಾನೂ ಶಾಲೆಗೆ ಹೋಗುತ್ತೇನೆ’ ಎಂದು ಅಪ್ಪನ ಬಳಿ, ಅಣ್ಣನ ಬಳಿ ಹೇಳಿಕೊಳ್ಳುತ್ತಿದ್ದರು. ಆದರೆ ಈ ಕೋರಿಕೆಗೆ ಅವರ ನಗುವೇ ಉತ್ತರವಾಗಿರುತ್ತಿತ್ತು.

ನರ್ಮದಾ ಅವರದು ಕಾಸರಗೋಡಿನ ಪುಂಡೂರು ಮನೆತನ. ಮನೆಯ ಪುರುಷರೆಲ್ಲರೂ ಕಲಾವಿದರಾಗಿ, ಸಂಗೀತಗಾರರಾಗಿ ಒಂದಲ್ಲಾ ಒಂದು ಕ್ಷೇತ್ರವನ್ನು ಸಾಧನೆಗೆ ಆಯ್ಕೆ ಮಾಡಿಕೊಂಡವರು. ಅಣ್ಣಂದಿರು ಕಲಿಯುವುದು ನೋಡಿಯೇ ನರ್ಮದಾ ಒಂದಿಷ್ಟು ಅಕ್ಷರಗಳನ್ನು ಕಲಿಯುತ್ತಿದ್ದರು.ಅದೇವೇಳೆ ಪುಂಡೂರು ಮನೆಯಲ್ಲಿಯೇ ಶಾಲೆ ತೆರೆಯಲು ನಿರ್ಧರಿಸಲಾಯಿತು. ಒದಗಿ ಬಂದ ಭಾಗ್ಯ ಎಂಬಂತೆ ನರ್ಮದಾ ಐದನೇ ತರಗತಿಗೆ ನೇರವಾಗಿ ಪ್ರವೇಶ ಪಡೆದರು. ಮತ್ತು ಐದನೇ ತರಗತಿ ಮುಗಿದ ಕೂಡಲೇ ಶಾಲೆ ಬಿಟ್ಟರು. ಅವರು ಹಾಗೆ ಕಲಿತ ಅಕ್ಷರಾಭ್ಯಾಸ ಅವರ ಗಾಯನ ಪ್ರೀತಿಗೆ ಇನ್ನಷ್ಟು ನೀರೆರೆಯಿತು.ನರ್ಮದಾ ಅವರ ದೊಡ್ಡಪ್ಪನ ಮಗ ಪುಂಡೂರು ಗೋಪಾಲ ಕೃಷ್ಣ ಪುಣ್ಚಿತ್ತಾಯರು ಮನೆಯಲ್ಲಿಯೇ ಅವರ ಮಗನಿಗೆ ತೆಂಕು ತಿಟ್ಟಿನ ಶೈಲಿಯಲ್ಲಿ ಭಾಗವತಿಕೆ ಹೇಳಿಕೊಡುತ್ತಿದ್ದಾಗ, ನರ್ಮದಾ ಭಾಗವತಿಕೆಯ ಸಾಹಿತ್ಯವನ್ನೂ ತಾಳವನ್ನೂ ಕಲಿತುಕೊಂಡರು. ತಂಗ್ಯಮ್ಮನ ಆಸಕ್ತಿ ಕಂಡು ‘ಹೆಣ್ಮಕ್ಕಳಿಗೆಲ್ಲ ಇದೆಂತಕೆ...’ ಎಂಬ ಉಡಾಫೆ ಮಾಡದೇ ಗೋಪಾಲಕೃಷ್ಣರು ಜಾಗಟೆಯನ್ನು ಕೈಗಿತ್ತರು.ಧ್ವನಿ ಪಳಗಿ, ಭಾಗವತಿಕೆಯ ಆಳ ವಿಸ್ತಾರವನ್ನು ನರ್ಮದಾ ವೇಗವಾಗಿ ಕಲಿತರು. ಹಾಗೆ ತಂಗ್ಯಮ್ಮನಿಗೆ ಸಾಥ್‌ ನೀಡಿದ ಗೋಪಾಲಕೃಷ್ಣರೇ ಒಂದು ದಿನ, ಮುಳ್ಳೇರಿಯಾ ಶಾಲೆಯಲ್ಲಿ ನಡೆಯುತ್ತಿದ್ದ ‘ರಾಜಸೂಯಾಧ್ವರ...’ ತಾಳಮದ್ದಳೆಗೆ  ನರ್ಮದಾ ಅವರನ್ನು ಕರೆದುಕೊಂಡು ಹೋಗಿ, ಮದ್ದಳೆ ಮತ್ತು ಚೆಂಡೆಯವರ ನಡುವೆ ಕೂರಿಸಿಬಿಟ್ಟರು.ಚೆಂಡೆಯಲ್ಲಿಯೂ ಮದ್ದಳೆಯಲ್ಲಿಯೂ ಅಣ್ಣಂದಿರೇ ಕುಳಿತಿದ್ದರಿಂದ ನರ್ಮದಾ ಧೃತಿಗೆಡಲಿಲ್ಲ. ಪುಂಡೂರು ಕುಟುಂಬವೇ ಯಕ್ಷಗಾನದ ವಿವಿಧ ಕ್ಷೇತ್ರದಲ್ಲಿ ಕಟಿಬದ್ಧರಾಗಿ ತೊಡಗಿಸಿಕೊಂಡಿದ್ದರಿಂದ ಅಂದು ಆ ತಾಳಮದ್ದಳೆಯಲ್ಲಿಯೂ ಸಂಬಂಧಿಕರೇ ಅರ್ಥಗಾರಿಕೆ ಮಾಡುತ್ತಿದ್ದರು. ರಾತ್ರಿಯಿಡೀ ತಾಳಮದ್ದಳೆ ನಡೆಯುತ್ತಿದ್ದ ಕಾಲವದು. ಅಂದು ನರ್ಮದಾ ಉತ್ಸಾಹದಿಂದ ಹಾಡಿದರು. ಆಗ ಅವರಿಗೆ ಕೇವಲ 15ರ ಹರೆಯ!ಯಕ್ಷಗಾನದ ಇತಿಹಾಸದಲ್ಲಿ ತಿರುವೊಂದಕ್ಕೆ ತಾನು ಸಾಕ್ಷಿಯಾಗುತ್ತಿದ್ದೇನೆ ಎಂಬ ಅರಿವು ಅವರಿಗಿತ್ತೋ ಇಲ್ಲವೋ... ಆ ರಾತ್ರಿಯ ಹಾಡುಗಾರಿಕೆಯೊಂದಿಗೆ ‘ಯಕ್ಷಗಾನದ ಮೊದಲ ಮಹಿಳಾ ಭಾಗವತರು’ ಎಂಬ ಹೆಗ್ಗಳಿಕೆ ನರ್ಮದಾ ಅವರದಾಯಿತು.ಅಂದಿನ ಪ್ರಸಿದ್ಧ ‘ಕರ್ನಾಟಕ ಮೇಳ’ದಲ್ಲಿ ಹಿರಿಯ ಭಾಗವತರಾದ ದಾಮೋದರ ಮಂಡೆಚ್ಚರು ನರ್ಮದಾ ಅವರಿಗೆ ಮೇಳದ ಆಟಗಳಲ್ಲಿ ಹಾಡುವ ಸೂಕ್ಷ್ಮತೆಯನ್ನು ಕಲಿಸಿದರು. ಅಂದಹಾಗೆ, ನರ್ಮದಾ ಅವರು ಹೆಚ್ಚಾಗಿ ಹಾಡಿದ್ದು ತಾಳಮದ್ದಳೆಗಳಲ್ಲಿ.ಪುರುಷೋತ್ತಮ ಶಿಬರೂರಾಯ ಅವರನ್ನು ಮದುವೆಯಾದ ಬಳಿಕ ಅವರು ಪುಂಡೂರು ಮನೆತನದಿಂದ ಸುಳ್ಯದ ಮಂಡೆಕೋಲಿಗೆ ಬಂದರು. ಆದರೆ ಸಂಸಾರದ ಜವಾಬ್ದಾರಿ, ಸಾಮಾಜಿಕ ಕಟ್ಟುಪಾಡುಗಳ ನಡುವೆ ನರ್ಮದಾ ಅವರ ಪ್ರತಿಭೆ ಅರಳಲು ಹೆಚ್ಚು ಅವಕಾಶ ಸಿಗಲಿಲ್ಲ. ಹಾಗಾಗಿ ವೃತ್ತಿಪರ ಯಕ್ಷಗಾನ ಕಲಾವಿದೆಯಾಗುವುದು ಅವರಿಗೆ ಸಾಧ್ಯವಾಗಲಿಲ್ಲ. ‘ಕೇರಳ ಕಡೆಯ ಜ್ಯೋತಿಷಿ ವಿಷ್ಣು ನಂಬೂದಿರಿ ಅವರು ಯಾವುದೋ ವಿಚಾರಕ್ಕೆ ನಮ್ಮ ಮನೆಗೆ ಬಂದಿದ್ದರು.ನಾನು ಹಾಡಲು ಅವಕಾಶ ಕೊಡಬೇಕು ಎಂದು ಮನೆಯಲ್ಲಿ ಅವರೇ ಹೇಳಿದರು... ಹಾಗಾಗಿ ಮತ್ತೆ ಭಾಗವತಿಕೆ ಮಾಡುವ ಅವಕಾಶ ಸಿಕ್ಕಿತು. ಚಿಕ್ಕಂದಿನಲ್ಲಿಯೇ ಕಲಾವಿದೆಯಾಗಬೇಕು ಎಂಬ ಆಸೆಯಿತ್ತು. ಅದು ತಡವಾಗಿಯಾದರೂ ಕೈಗೂಡಿತಲ್ಲ ಎಂಬ ತೃಪ್ತಿ ನನಗಿದೆ’ ಎಂದು ಸಂದರ್ಶನವೊಂದರಲ್ಲಿ ನರ್ಮದಾ ಅವರು ಹೇಳಿಕೊಂಡಿದ್ದಾರೆ.ಕಲಾಪೋಷಕರಾಗಿದ್ದ ಪುರುಷೋತ್ತಮ ಶಿಬರೂರಾಯರು ಪತ್ನಿಯನ್ನು ಭಾಗವತಿಕೆ ಇರುವ ಕಾರ್ಯಕ್ರಮಗಳಿಗೆ ಕರೆದುಕೊಂಡು ಹೋಗಿ ಪ್ರೋತ್ಸಾಹಿಸುತ್ತಿದ್ದರು. ತೋಟ,  ಹಸುಕರು, ಪೂಜೆ ಪುನಸ್ಕಾರಗಳು ನಡೆಯುವ ಮನೆಯವಾರ್ತೆಯನ್ನು ನಿಭಾಯಿಸಿಕೊಂಡು ಹೋಗಬೇಕಾದ ಜವಾಬ್ದಾರಿ ನರ್ಮದಾ ಅವರದಾಗಿತ್ತು.ಈ ಹೊಣೆಗಾರಿಕೆಯನ್ನು ನಿರ್ವಹಿಸುತ್ತಲೇ ಮನೆಯಲ್ಲಿ ತ್ರಿಕಾಲ ಪೂಜೆಯಿಂದ ಹಿಡಿದು, ನವರಾತ್ರಿ ಪೂಜೆಯಂತಹ ಬೃಹತ್‌ ಕಾರ್ಯಕ್ರಮಗಳಲ್ಲಿ ಕಲಾಸೇವೆ ನಡೆಯುವಾಗ ಅವರು ಭಾಗವತಿಕೆ ಮಾಡುತ್ತಿದ್ದರು. 300ಕ್ಕೂ ಹೆಚ್ಚು ತಾಳಮದ್ದಳೆಗಳಲ್ಲಿ ಭಾಗವತಿಕೆ ಮಾಡಿದವರು. ‘ಕಾಪಿರಾಗ, ಮೋಹನ ರಾಗ ಎಂದರೆ ಹಾಡುವುದಕ್ಕೆ ಇಷ್ಟ’ ಎಂದು ಮಕ್ಕಳೊಂದಿಗೆ ಆಗಾಗ ಹೇಳಿಕೊಳ್ಳುತ್ತಿದ್ದರಂತೆ.ಕೀರಿಕ್ಕಾಡು ಪ್ರಶಸ್ತಿ ಪಡೆದಿದ್ದ ಅವರು, ಬೆಂಗಳೂರು, ಮಂಗಳೂರು ಮತ್ತು ಕಲ್ಲಿಕೋಟೆ ಆಕಾಶವಾಣಿಯ ಕಲಾವಿದೆಯಾಗಿ ಗುರ್ತಿಸಿಕೊಂಡಿದ್ದರು. ಪುರುಷ ಪ್ರಧಾನ ಕಲಾಕ್ಷೇತ್ರದಲ್ಲಿ ಮಹಿಳಾಹೆಜ್ಜೆಯನ್ನು ಪ್ರಥಮ ಬಾರಿಗೆ ಸೌಮ್ಯವಾಗಿಯೇ ಊರಿದ ಹೆಗ್ಗಳಿಕೆ ಅವರದು. ಅವರ ಆ ಪ್ರಯತ್ನವೇ ಪ್ರಸ್ತುತ ಹಲವು ಮಹಿಳಾ ಪ್ರತಿಭೆಗಳು ಯಕ್ಷರಂಗ ಪ್ರವೇಶಿಸಲು ಪ್ರೇರಣೆಯಾಗಿದೆ.
ಯಕ್ಷಗಾನ ಹಿಮ್ಮೇಳ ಕಲಾವಿದೆ ನರ್ಮದಾ ಶಿಬರೂರಾಯ ನಿಧನ

ಮಂಗಳೂರು:  ತೆಂಕು ತಿಟ್ಟಿನ ಪ್ರಥಮ ಮಹಿಳಾ ಭಾಗವತರೆಂದೇ ಗುರುತಿಸಿಕೊಂಡಿರುವ ನರ್ಮದಾ ಶಿಬರೂರಾಯ (75) ಅವರು ಹೃದಯಾಘಾತದಿಂದ ಸೋಮವಾರ ನಸುಕಿನಲ್ಲಿ ಸುಳ್ಯದ ಕುರುಂಜಿ ಆಸ್ಪತ್ರೆಯಲ್ಲಿ  ನಿಧನರಾದರು. ಅವರಿಗೆ ಆರು ಮಂದಿ ಪುತ್ರರು ಇದ್ದಾರೆ.ಅವರ  ಪತಿ ಪುರುಷೋತ್ತಮ ಶಿಬರೂರಾಯ ಅವರು ಎರಡು ತಿಂಗಳ ಹಿಂದೆಯಷ್ಟೇ ನಿಧನರಾಗಿದ್ದರು. ಸುಳ್ಯ ಸಮೀಪದ ಮಂಡೆಕೋಲಿನಲ್ಲಿ ನೆಲೆಸಿದ್ದ ಅವರು ಹವ್ಯಾಸಿ ಭಾಗವತರಾಗಿ ಗುರುತಿಸಿಕೊಂಡಿದ್ದರು. ಯಕ್ಷಗಾನ ಕ್ಷೇತ್ರದಲ್ಲಿ ಪುರುಷರೇ ಹಿಮ್ಮೇಳ ಮತ್ತು ಮುಮ್ಮೇಳವನ್ನು ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಹಿಮ್ಮೇಳದಲ್ಲಿ ತಮ್ಮ 15ನೇ ವಯಸ್ಸಿನಲ್ಲಿಯೇ ಭಾಗವತರಾಗಿ ಪ್ರವೇಶ ಪಡೆದವರು.


 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.