ಭಾನುವಾರ, ಆಗಸ್ಟ್ 25, 2019
21 °C

ಯಕ್ಷಸಂಜೆಯ ಮಿಂಚಿನಲ್ಲಿ ಹಾಸ್ಯದ ಹೊನಲು

Published:
Updated:
ಯಕ್ಷಸಂಜೆಯ ಮಿಂಚಿನಲ್ಲಿ ಹಾಸ್ಯದ ಹೊನಲು

ಹುಬ್ಬಳ್ಳಿ: ಎರಡು ವಾರಗಳಿಂದ ಸುರಿದ ಸತತ ಮಳೆ ಭಾನುವಾರ ರಜಾ ಹಾಕಿತ್ತು. ಸಂಜೆಯ ಹಿತವಾದ ವಾತಾವರಣದಲ್ಲಿ ನಗರದ ಆರ್.ಎನ್.ಶೆಟ್ಟಿ ಕಲ್ಯಾಣ ಮಂಟಪ ಯಕ್ಷಗಾನ ಪ್ರಿಯರಿಂದ ತುಂಬಿತ್ತು. ಅಲ್ಲಿ ಯಕ್ಷಸಂಜೆ ಕಾರ್ಯಕ್ರಮ ಏರ್ಪಾಟಾಗಿತ್ತು. ಸುಮಾರು ಆರು ತಾಸು ನಡೆದ ಎರಡು ಪ್ರಸಂಗಗಳು ಕಲಾರಸಿಕರನ್ನು ಆಸ್ವಾದನೆಯ ಉತ್ತುಂಗಕ್ಕೆ ಏರಿಸಿದವು.ನೀಲ್ಕೋಡ ಯಕ್ಷಸಂಜೆ ಸಂಸ್ಥೆಯು ಯಕ್ಷಾಭಿಮಾನಿ ಬಳಗ ಹುಬ್ಬಳ್ಳಿ-ಧಾರವಾಡದ ಜೊತೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮೊದಲು ಪ್ರಸ್ತುತಗೊಂಡದ್ದು `ಮಾರುತಿ ಪ್ರತಾಪ' ಪ್ರಸಂಗ. ಅಣ್ಣ ಬಲರಾಮನ ಅಹಂ ಮತ್ತು ಪತ್ನಿ ಸತ್ಯಭಾಮೆಯ `ಕೊಬ್ಬು' ಇಳಿಸುವುದಕ್ಕಾಗಿ ಕೃಷ್ಣನ ಪರಿತಾಪ, ಆತನಿಗೆ ಸಹಕಾರ ನೀಡುವ ನಾರದನ ತಂತ್ರಗಳು, ಕೃಷ್ಣನಿಗೆ ಪರೋಕ್ಷವಾಗಿ ಸಹಾಯ ಮಾಡಲು ಬರುವ ಹನುಮಂತನ ಸಾಹಸ ಇತ್ಯಾದಿಗಳ ಸುತ್ತ ಹೆಣೆದ ಕಥೆ ಇದು.

ಯುದ್ಧ-ಶೌರ್ಯ-ಪರಾಕ್ರಮ ಇತ್ಯಾದಿಗಳಿಗೆ ಹೆಚ್ಚು ಅವಕಾಶವಿಲ್ಲದ್ದರಿಂದ ಕಥೆಯೊಂದಿಗೆ ಹಾಸ್ಯವನ್ನು ಅಳವಡಿಸಿದ್ದು ಸುಂದರ ಸಂಜೆಯನ್ನು ಸೊಂಪಾಗಿಸಿತು. ನಿರಂತರವಾಗಿ ಹರಿದು ಬಂದ ಹಾಸ್ಯಕ್ಕೆ ಬಿದ್ದು ಬಿದ್ದು ನಕ್ಕ ರಸಿಕರು ಕೊನೆಕೊನೆಗೆ ನಕ್ಕು ನಕ್ಕು ಬಿದ್ದರು.ಪ್ರಸಂಗದ ಸುಮಾರು 75 ಭಾಗ ಹಾಸ್ಯವೇ ತುಂಬಿತ್ತು. ದ್ವಂದ್ವಾರ್ಥಗಳ ಬಾಣಗಳನ್ನು ಪದೇ ಪದೇ ಚುಚ್ಚಿಸಿಕೊಂಡ ಪ್ರೇಕ್ಷಕರು ಗಂಭೀರ ಸಂಭಾಷಣೆಯ ಮಧ್ಯದಲ್ಲಿ ಕೇಳಿಬಂದ ಕುಹಕದ ನುಡಿಗಳಿಗೆ ಮನಸೋತರು. ಭಟನ ಪಾತ್ರ ನಿರ್ವಹಿಸಿದ ರಮೇಶ ಭಂಡಾರಿ ಹಾಗೂ ನಾರದ ವೇಷದಲ್ಲಿ `ಪ್ರತ್ಯಕ್ಷ'ವಾದ ಚಪ್ಪರಮನೆ ಹಾಸ್ಯದ ಹೊನಲು ಹರಿಸಿದರೆ ತಾವೇನೂ ಕಡಿಮೆ ಇಲ್ಲ ಎಂಬಂತೆ ಸುಬ್ರಹ್ಮಣ್ಯ ಚಿಟ್ಟಾಣಿ (ಕೃಷ್ಣ), ಕೃಷ್ಣ ಯಾಜಿ (ಬಲರಾಮ) ಕೂಡ ತಮಾಷೆಯ ಝರಿ ಹರಿಸಿದರು. ಹನುಮಂತನ ಪಾತ್ರಧಾರಿ ಶ್ರೀಪಾದ ಹೆಗಡೆ ಹಡಿನಬಾಳ ಅವರಿಂದಲೂ ಹಾಸ್ಯದ ಹೊಳೆ ಹರಿಯಿತು.ಪ್ರಸಂಗದ ಆರಂಭದಲ್ಲಿ ಭಟನನ್ನು ಹಂಗಿಸುತ್ತ ಮಾತನಾಡುತ್ತಿದ್ದ ಬಲರಾಮನು ನಿನಗೆ ಅಶನ, ವಸನ, ವಸತಿ ನೀಡುತ್ತಿರುವುದು ಯಾರು ಎಂದು ಒಂದೊಂದಾಗಿ ಕೇಳಿದಾಗ ನೀವು...ನೀವು...ನೀವು... ಎಂದು ಹೇಳಿದ ಭಟ ಕೊನೆಗೆ ಬಲರಾಮನು ಮೂರ್ಖ ಎಂದು ಬೈದಾಗ ಅದಕ್ಕೂ ಭಟನು ನೀವು ಎಂದು ಹೇಳುತ್ತಿದ್ದಂತೆ ಸಭಾಂಗಣದಲ್ಲಿ ಆರಂಭವಾದ ನಗೆ ನಿಮಿಷಗಳ ಕಾಲ ನಿಲ್ಲಲೇ ಇಲ್ಲ.ಮೂರು ದಿನ `ತಲೆಮರೆಸಿಕೊಂಡು' ಬಂದ ಕೃಷ್ಣನಿಗೆ ಮನೆಗೆ ಪ್ರವೇಶ ನೀಡದೇ ಇದ್ದಾಗ ಸತ್ಯಭಾಮೆಯ ಮನೆಯ ಹೊರಗಿನ ರಂಗವೂ ನಿರಂತರ ನಗೆಗೆ ಕಾರಣವಾಯಿತು.ರಾಘವೇಂದ್ರ ಆಚಾರ್ಯ ಅವರ ಭಾವಪೂರ್ಣ ಭಾಗವತಿಕೆ ಇಡೀ ಪ್ರಸಂಗವನ್ನು ಸೊಗಸಾಗಿಸಿತು. `ರನ್ನ ಮಾಣಿಕದಂತೆ ಪೊಳೆವ' ಅಣ್ಣ ಬಲರಾಮನನ್ನು ಕೃಷ್ಣ ವರ್ಣಿಸಿದ ಸಂದರ್ಭ ಮನೋಜ್ಞ ನೃತ್ಯದ ಮೂಲಕ ನೆನಪಿನಲ್ಲಿ ಉಳಿಯುವಂತೆ ಮೂಡಿ ಬಂತು. ಸತ್ಯಭಾಮೆಯ ಮನೆಯಲ್ಲಿ ಭಟ ತನ್ನ ಪತ್ನಿಯನ್ನು ಓಲೈಸಿದ ಪರಿ, ಸತ್ಯಭಾಮೆಯ ಕೋಪ ತಣಿಸಲು ಕೃಷ್ಣ ಹೆಣಗಾಡಿದ ರೀತಿ, ನಾರದ, ಹನುಮಂತ ಮುಂತಾದ ಪಾತ್ರಗಳ ಪ್ರವೇಶ ಇತ್ಯಾದಿ ಎಲ್ಲವೂ ಒಂದನ್ನೊಂದು ಮೀರಿಸಿದ ರೀತಿಯಲ್ಲಿ ಮೂಡಿ ಬಂತು. ಸುನೀಲ ಭಂಡಾರಿ ಕಡತೋಕಾ, ಶಂಕರ ಭಾಗ್ವತ್ ಯಲ್ಲಾಪುರ  ಮತ್ತು ಗಣೇಶ ಗಾಂವ್ಕರ್ ಹಳವಳ್ಳಿ ಅವರು ಪ್ರಸಂಗಕ್ಕೆ ವಾದ್ಯಗಳ ಮೆರುಗು ನೀಡಿದರು.ನಂತರ ಪ್ರಸ್ತುತಗೊಂಡದ್ದು `ಕೀಚಕ ವಧೆ' ಪ್ರಸಂಗ. ಕೊಳಗಿ ಕೇಶವ ಹೆಗಡೆ ಅವರ ಭಾಗವತಿಕೆ ಇತ್ತು. ಕೊಂಡದ ಕುಳಿ ರಾಮಚಂದ್ರ ಹೆಗಡೆ ಕೀಚಕನ ಪಾತ್ರದಲ್ಲಿ ಮೆರೆದರೆ ಶಂಕರ ಹೆಗಡೆ ನೀಲ್ಕೋಡ, ನಾಗೇಂದ್ರ ಮೂರೂರು, ಸುಬ್ರಹ್ಮಣ್ಯ ಯಲಗುಪ್ಪ, ಶಶಿಕಾಂತ ಶೆಟ್ಟಿ, ನಾಗರಾಜ ದೇವಿಮಕ್ಕಿ ಮುಂತಾದವರು ಇತರ ಪಾತ್ರಗಳನ್ನು ನಿರ್ವಹಿಸಿದರು.

Post Comments (+)