ಯಡಿಯೂರಪ್ಪಗೆ ಜಾಮೀನು

7

ಯಡಿಯೂರಪ್ಪಗೆ ಜಾಮೀನು

Published:
Updated:

ಬೆಂಗಳೂರು (ಪಿಟಿಐ) : ಅಕ್ರಮ ಗಣಿಗಾರಿಕೆಗಾಗಿ ಕಂಪೆನಿಗಳಿಂದ ಲಂಚ ಪಡೆದ (ಕಿಕ್‌ಬ್ಯಾಕ್) ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹಾಗೂ ಅವರ ಪುತ್ರರಾದ ಸಂಸದ ರಾಘವೇಂದ್ರ ಮತ್ತು ವಿಜಯೇಂದ್ರ ಹಾಗೂ ಅಳಿಯ ಸೋಹನ ಕುಮಾರ್ ಸೇರಿದಂತೆ ಒಂಬತ್ತು ಮಂದಿಗೆ ಸಿಬಿಐ ವಿಶೇಷ ನ್ಯಾಯಾಲಯವು ಸೋಮವಾರ ಇಲ್ಲಿ ಷರತ್ತು ಬದ್ಧ ಜಾಮೀನು ನೀಡಿತು.

ಸಿಬಿಐ ನ್ಯಾಯಾಲಯದ ನ್ಯಾಯಾಧೀಶ ಎಂ. ಸಿ. ಬಿರಾದಾರ್ ಅವರು 2 ಲಕ್ಷ ರೂಪಾಯಿ ಮೌಲ್ಯದ ಭದ್ರತೆ ಮತ್ತು ಅಷ್ಟೇ ಮೊತ್ತದ ಖಾತರಿ ನೀಡುವಂತೆ ಆರೋಪಿಗಳಿಗೆ ಸೂಚಿಸಿದರು.ಇದೇ ವೇಳೆ ವಿಚಾರಣೆ ಸಂದರ್ಭದಲ್ಲಿ ತಪ್ಪದೇ ನ್ಯಾಯಾಲಯದ ಎದುರು ಹಾಜರಾಗುವಂತೆ ಆರೋಪಿಗಳಿಗೆ ನ್ಯಾಯಾಲಯವು ಸೂಚಿಸಿದ್ದು, ಅನುಮತಿ ಇಲ್ಲದೆ ದೇಶ ಬಿಟ್ಟು ಹೋಗದಂತೆ ಷರತ್ತು ವಿಧಿಸಿತು.ಪಾಸ್‌ಪೋರ್ಟ್‌ಗಳನ್ನು ನ್ಯಾಯಾಲಯದ ವಶಕ್ಕೆ ಒಪ್ಪಿಸುವಂತೆಯೂ ಎಲ್ಲಾ ಆರೋಪಿಗಳಿಗೂ ನ್ಯಾಯಾಲಯವು ಆದೇಶಿಸಿತು.

ಡಿಸೆಂಬರ್ 10ರಂದು ನ್ಯಾಯಾಲಯದ ಎದುರು ಹಾಜರಾಗುವಂತೆ ನವೆಂಬರ್ 9ರಂದು ಸಿಬಿಐ ನ್ಯಾಯಾಲಯವು ಎಲ್ಲಾ ಆರೋಪಿಗಳಿಗೂ ಸಮನ್ಸ್ ನೀಡಿತ್ತು. ಈ ಆದೇಶದಂತೆ ಯಡಿಯೂರಪ್ಪ, ಅವರ ಪುತ್ರರಾದ ರಾಘವೇಂದ್ರ ಮತ್ತು ವಿಜಯೇಂದ್ರ, ಅಳಿಯ ಸೋಹನ್ ಕುಮಾರ್ ಹಾಗೂ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಸೋಮವಾರ ಕೋರ್ಟ್ ಎದುರು ಹಾಜರಾದರು.ಈ ವೇಳೆ ವಿಚಾರಣೆ ನಡೆಸಿದ ಸಿಬಿಐ ನ್ಯಾಯಾಧೀಶ ಎಂ. ಸಿ. ಬಿರಾದಾರ್ ಅವರು, ಆರೋಪಿಗಳು ಸಾಕ್ಷ್ಯ ನಾಶಪಡಿಸುವ ಅಥವಾ ತಲೆಮರೆಸಿಕೊಳ್ಳುವ ಸಾಧ್ಯತೆ ಇಲ್ಲ ಎಂಬುದನ್ನು ಪರಿಗಣಿಸಿ ಜಾಮೀನು ನೀಡಲು ನಿರ್ಧರಿಸಿದರು. ಮುಂದಿನ ವಿಚಾರಣೆಯನ್ನು ಜನವರಿ 29ಕ್ಕೆ ಮುಂದೂಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry