ಯಡಿಯೂರಪ್ಪಗೆ ಡಿನೋಟಿಫಿಕೇಷನ್: ಕೋರ್ಟ್ ಸಮನ್ಸ್

7

ಯಡಿಯೂರಪ್ಪಗೆ ಡಿನೋಟಿಫಿಕೇಷನ್: ಕೋರ್ಟ್ ಸಮನ್ಸ್

Published:
Updated:

ಬೆಂಗಳೂರು:  ಕೆಲವು ಯೋಜನೆಗಳಿಗೆ ಸ್ವಾಧೀನ ಪಡಿಸಿಕೊಂಡಿರುವ ಜಮೀನುಗಳನ್ನು ಅಕ್ರಮವಾಗಿ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿರುವ (ಡಿನೋಟಿಫಿಕೇಷನ್) ವಿವಾದಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಲೋಕಾಯುಕ್ತ ವಿಶೇಷ ಕೋರ್ಟ್ ಗುರುವಾರ ಸಮನ್ಸ್ ಜಾರಿಗೆ ಆದೇಶಿಸಿದೆ.ಇವರ ವಿರುದ್ಧ ವಕೀಲ ಸಿರಾಜಿನ್ ಬಾಷಾ ಸಲ್ಲಿಸಿರುವ 4ನೇ ಖಾಸಗಿ ದೂರಿನ ಪ್ರಕರಣ ಇದಾಗಿದೆ. ಈ ಮೂಲಕ ಯಡಿಯೂರಪ್ಪನವರ ವಿರುದ್ಧ ಮತ್ತೊಂದು ಸುತ್ತಿನ ಕಾನೂನು ಸಮರ ಆರಂಭಗೊಂಡಿದೆ.ಈ ದೂರಿನಲ್ಲಿ, ಯಡಿಯೂರಪ್ಪನವರ ಪುತ್ರರಾದ ಸಂಸದ ಬಿ.ವೈ.ರಾಘವೇಂದ್ರ, ಬಿ.ವೈ. ವಿಜಯೇಂದ್ರ ಹಾಗೂ ಅಳಿಯ ಸೋಹನ್‌ಕುಮಾರ್ ಅವರೂ ಆರೋಪಿಗಳು. ಈ ಹಿನ್ನೆಲೆಯಲ್ಲಿ ಅವರಿಗೂ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಅವರು ಸಮನ್ಸ್ ಜಾರಿಗೆ ಆದೇಶಿಸಿದ್ದಾರೆ. ಎಲ್ಲ ಆರೋಪಿಗಳು ಮಾರ್ಚ್ 16ರಂದು ಕೋರ್ಟ್‌ನಲ್ಲಿ ಖುದ್ದು ಹಾಜರು ಇರಬೇಕು ಎಂದು ನ್ಯಾಯಾಧೀಶರು ಆದೇಶಿಸಿದ್ದಾರೆ.ದೂರಿಗೆ ಸಂಬಂಧಿಸಿದಂತೆ ಎಲ್ಲರೂ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡಿರುವ ಹಿನ್ನೆಲೆಯಲ್ಲಿ, ಸದ್ಯ ಬಂಧನದ ಭೀತಿ ಇಲ್ಲ.ಏನಿದು ಪ್ರಕರಣ: `ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಹೆಬ್ಬಾಳ ಅಮಾನಿಕೆರೆ ಹಾಗೂ ಶ್ರೀರಾಮಪುರದಲ್ಲಿ ಸುಮಾರು 20 ಎಕರೆ ಜಮೀನನ್ನು ಅಕ್ರಮವಾಗಿ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿರುವುದು, ಅವರ ಕುಟುಂಬದ ಸದಸ್ಯರ ಒಡೆತನದ ಧವಳಗಿರಿ ಪ್ರಾಪರ್ಟಿ ಡೆವಲಪರ್ಸ್ ಬಳಸಿಕೊಂಡು ಆರ್ಥಿಕ ಅನುಕೂಲ ಪಡೆದಿರುವುದು, ಶ್ರೀರಾಮಪುರ ಗ್ರಾಮದ ಸರ್ವೆ ನಂಬರ್ 15/1 ಮತ್ತು 15/2ರಲ್ಲಿ ಸ್ವಾಧೀನಪಡಿಸಿಕೊಂಡಿದ್ದ ಭೂಮಿಯನ್ನು ಬೆಸ್ಟೋ ಇನ್‌ಫ್ರಾಸ್ಟ್ರಕ್ಚರ್ ಬೆಂಗಳೂರು ಪ್ರೈವೇಟ್ ಲಿಮಿಟೆಡ್‌ಗೆ ಲಾಭ ಮಾಡಿಕೊಡಲು ಕಾನೂನುಬಾಹಿರವಾಗಿ ಡಿನೋಟಿಫೈ ಮಾಡಿರುವುದು ಹಾಗೂ ಆರ್‌ಎಂವಿ ಎರಡನೇ ಹಂತದ ಬಡಾವಣೆಯ 2 ಮತ್ತು 3ನೇ ಸಂಖ್ಯೆಯ ನಿವೇಶನಗಳನ್ನು ರಾಘವೇಂದ್ರ ಹಾಗೂ ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಅವರಿಗೆ ಅಕ್ರಮವಾಗಿ ಮಂಜೂರು ಮಾಡಿರುವುದು ಈ ದೂರಿನಲ್ಲಿ ಇರುವ ಪ್ರಮುಖ ಆರೋಪಗಳು.ವಿಚಾರಣೆ 27ಕ್ಕೆ ಮುಂದೂಡಿಕೆ: ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯಲ್ಲಿ ಅವ್ಯವಹಾರ ನಡೆಸಿರುವ ಆರೋಪ ಹೊತ್ತ ಯಡಿಯೂರಪ್ಪನವರ ವಿರುದ್ಧ ಜೆಡಿಎಸ್ ವಕ್ತಾರ ವೈಎಸ್‌ವಿ ದತ್ತ ಸಲ್ಲಿಸಿರುವ ಖಾಸಗಿ ದೂರಿನ ವಿಚಾರಣೆಯನ್ನು ಲೋಕಾಯುಕ್ತ ವಿಶೇಷ ಕೋರ್ಟ್ ಇದೇ 27ಕ್ಕೆ ಮುಂದೂಡಿದೆ.ಆರೋಪಗಳು ನಿರಾಧಾರ ಎಂದು ಲೋಕಾಯುಕ್ತ  ಪೊಲೀಸರು ಕೋರ್ಟ್‌ಗೆ ಸಲ್ಲಿಸಿರುವ `ಬಿ ರಿಪೋರ್ಟ್~ಗೆ ಆಕ್ಷೇಪಣೆ ಸಲ್ಲಿಸಲು ದತ್ತ ಅವರು ಕಾಲಾವಕಾಶ ಕೋರಿರುವ ಹಿನ್ನೆಲೆಯಲ್ಲಿ ನ್ಯಾಯಾಧೀಶ ಎನ್.ಕೆ.ಸುಧೀಂದ್ರರಾವ್ ವಿಚಾರಣೆ ಮುಂದೂಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry