ಬುಧವಾರ, ಮೇ 25, 2022
29 °C

ಯಡಿಯೂರಪ್ಪ ಆರೋಗ್ಯ ಸುಧಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನ್ಯಾಯಾಂಗ ಬಂಧನದಲ್ಲಿದ್ದು ಎದೆನೋವಿನ ಕಾರಣದಿಂದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ದಾಖಲಾಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮಂಗಳವಾರ ಮಧ್ಯಾಹ್ನದ ಬಳಿಕ ಬಿಡುಗಡೆ ಮಾಡಲು ವೈದ್ಯರು ನಿರ್ಧರಿಸಿದ್ದಾರೆ.ಈ ಕುರಿತು ಸೋಮವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್, `ಯಡಿಯೂರಪ್ಪ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ.ಅವರಿಗೆ ಆಂಜಿಯೊಗ್ರಾಮ್ ಪರೀಕ್ಷೆ ಮಾಡಲಾಗಿದ್ದು, ರಕ್ತನಾಳದಲ್ಲಿ ಯಾವುದೇ ಸಮಸ್ಯೆಗಳು (ಬ್ಲಾಕ್‌ಗಳು) ಕಂಡುಬಂದಿಲ್ಲ. ಹೃದಯದಲ್ಲಿ ರಕ್ತಸಂಚಾರ  ಸರಾಗವಾಗಿ ನಡೆಯುತ್ತಿದೆ. ಭಾನುವಾರ ರಾತ್ರಿ 11.20ರ ಸುಮಾರಿಗೆ ಉಸಿರಾಟ ಮತ್ತು ಎದೆಬಡಿತದಲ್ಲಿ ಕೊಂಚ ಏರುಪೇರು ಕಂಡು ಬಂದಿತ್ತು. ಪದೇ ಪದೇ ಮೂತ್ರ ವಿಸರ್ಜನೆ ಹೋಗುವ ಸಮಸ್ಯೆಯೂ ಇದೆ. ಅದಕ್ಕೆ ಚಿಕಿತ್ಸೆ ನೀಡಲಾಯಿತು~ ಎಂದರು.`ಯಡಿಯೂರಪ್ಪ ಅವರು ರಕ್ತದೊತ್ತಡ, ಬೆನ್ನು ಹುರಿ ನೋವು, ಮಧುಮೇಹದಿಂದ ಬಳಲುತ್ತಿದ್ದಾರೆ. ಅವೆಲ್ಲ ಈಗ ನಿಯಂತ್ರಣದಲ್ಲಿವೆ. ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಅವರು ಅನೇಕ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ಅತ್ಯಾಧುನಿಕ ಆಸ್ಪತ್ರೆಯಲ್ಲಿ ತಪಾಸಣೆಗೊಳಗಾಗುವ ಅಗತ್ಯವಿದೆ~ ಎಂದು ಅವರು ಅಭಿಪ್ರಾಯಪಟ್ಟರು.ಅನುಮತಿ ಬಳಿಕ ಪ್ರವೇಶ: ನೂರಾರು ಮಂದಿ ಬೆಂಬಲಿಗರು ಯಡಿಯೂರಪ್ಪ ಅವರ ಆರೋಗ್ಯ ವಿಚಾರಿಸಲು ಅವರ ವಾರ್ಡ್‌ಗೆ ಭೇಟಿ ನೀಡುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಅವರ ಬೆಂಬಲಿಗರು ಆಸ್ಪತ್ರೆಗೆ ಬಂದಿರಬಹುದಾದರೂ ಎಲ್ಲರಿಗೂ ವಾರ್ಡ್ ಒಳಗೆ ಪ್ರವೇಶ ನೀಡಿಲ್ಲ. ಆಸ್ಪತ್ರೆಯ ವೈದ್ಯರು ಅನುಮತಿ ನೀಡಿದ ಬಳಿಕವಷ್ಟೇ ಭೇಟಿಯಾಗಲು ಅವಕಾಶ ನೀಡಲಾಗುತ್ತಿದೆ~ ಎಂದು ಸ್ಪಷ್ಟನೆ ನೀಡಿದರು.ಮನೆ ಊಟ ಇಲ್ಲ: ಯಡಿಯೂರಪ್ಪ ಅವರು ಆಸ್ಪತ್ರೆಗೆ ದಾಖಲಾಗಿದ್ದ ದಿನದಿಂದಲೂ ಅವರಿಗೆ ಆಸ್ಪತ್ರೆಯ ಆಹಾರವನ್ನೇ ನೀಡಲಾಗುತ್ತಿದೆ. ಮನೆ ಊಟ ತೆಗೆದುಕೊಳ್ಳಲು ಅವಕಾಶ ನೀಡಲಾಗಿಲ್ಲ.ಇತರ ರೋಗಿಗಳಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಅವರಿಗಾಗಿಯೇ ಪ್ರತ್ಯೇಕ ಕೋಣೆಯೊಂದನ್ನು ತೀವ್ರ ನಿಗಾ ಘಟಕವಾಗಿ (ಐಸಿಯು) ಪರಿವರ್ತಿಸಲಾಗಿದೆ~ ಎಂದು ಮಂಜುನಾಥ್ ನುಡಿದರು.`ಮುಂದಿನ ವೈದ್ಯಕೀಯ ಪರೀಕ್ಷೆಗಳಿಗೆ ಅನುಕೂಲವಾಗಲು, ಅವರಿಗೆ ಚಿಕಿತ್ಸೆ ನೀಡಲಾದ ವಿವರಗಳನ್ನು ಮುಂದೆ ಚಿಕಿತ್ಸೆ ನೀಡಲಿರುವ ವೈದ್ಯರಿಗೆ ತಿಳಿಸಲಾಗುವುದು~ ಎಂದರು.ಡಾ.ಮಂಜುನಾಥ್ ಸೇರಿದಂತೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಟಿ.ಎಸ್.ಭೂಪಾಲ್, ಡಾ.ರವೀಂದ್ರನಾಥ್,  ಡಾ.ಎನ್.ಎಂ.ಪ್ರಸಾದ್, ಮಧುಮೇಹ ಆಸ್ಪತ್ರೆಯ ನಿರ್ದೇಶಕ ಡಾ.ನರಸಿಂಹಶೆಟ್ಟಿ, ಡಾ.ಜಗದೀಶ್ ಅವರು ಕಳೆದ ಮೂರು ದಿನಗಳಿಂದ ಯಡಿಯೂರಪ್ಪ ಅವರಿಗೆ ನಿರಂತರ ಚಿಕಿತ್ಸೆ ನೀಡುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.