ಮಂಗಳವಾರ, ಏಪ್ರಿಲ್ 13, 2021
25 °C

ಯಡಿಯೂರಪ್ಪ ತಂತ್ರಕ್ಕೆ ಬಿಜೆಪಿ ಪ್ರತಿತಂತ್ರ..!

ಪ್ರಜಾವಾಣಿ ವಾರ್ತೆ ವಿಜಯ್ ಹೂಗಾರ Updated:

ಅಕ್ಷರ ಗಾತ್ರ : | |

ಹಾವೇರಿ: ಬಿಜೆಪಿ ತೊರೆದು ಪ್ರಾದೇಶಿಕ ಪಕ್ಷ ಸ್ಥಾಪಿಸಲು ಹೊರಟಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ತಮ್ಮ ನೂತನ ಪಕ್ಷದ ಘೋಷಣೆಗೆ ಬಿಜೆಪಿಯ ಭದ್ರಕೋಟೆಯಾದ ಹಾವೇರಿ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ಘಟಕವು ಪಕ್ಷದ ಸಂಘಟನೆಗೆ ಒತ್ತು ನೀಡುವ ಮೂಲಕ ಯಡಿ ಯೂರಪ್ಪ ತಂತ್ರಕ್ಕೆ ಪ್ರತಿತಂತ್ರ ಹೆಣೆಯಲು ಸಜ್ಜಾಗಿದೆ. ಹಾವೇರಿಯಲ್ಲಿ ಪ್ರಾದೇಶಿಕ ಪಕ್ಷವನ್ನು ಘೋಷಿಸುವುದರ ಜತೆಗೆ ಯಡಿಯೂರಪ್ಪ, ಬಿಜೆಪಿಯಿಂದ ಆಯ್ಕೆಯಾದ ಜಿಲ್ಲೆಯ ಬಹುತೇಕ ಜನಪ್ರತಿನಿಧಿಗಳನ್ನು (ಶಾಸಕರು, ಸಚಿವರು) ತಮ್ಮತ್ತ ಸೆಳೆದುಕೊಳ್ಳುವುದು ಖಚಿತವಾಗಿದೆ. ಹಾಗಾಗಿ, ಜಿಲ್ಲಾ ಬಿಜೆಪಿ ಘಟಕದಲ್ಲಿ ಕೇವಲ ಒಬ್ಬಿಬ್ಬರು ಜನಪ್ರತಿನಿಧಿಗಳು ಮಾತ್ರ ಉಳಿಯುವ ಸಾಧ್ಯತೆ ಇದ್ದು ಪಕ್ಷವನ್ನು ಮತ್ತೆ ಸಂಘಟಿಸುವ ಹೊಣೆ ಅವರ ಹೆಗಲೇರಲಿದೆ.ಜಿಲ್ಲೆಯ ಬಹುತೇಕ ಜನತಾ ಪರಿವಾರದ ಮುಖಂಡರು ಬಿಜೆಪಿಗೆ ಸೇರ್ಪಡೆಗೊಂಡಾಗ ಜಿಲ್ಲೆಯ ಮೂಲ ಬಿಜೆಪಿ ಮುಖಂಡರು ಹಾಗೂ ಹೊಸಬರ ಬಲದಿಂದಾಗಿ 2004 ಮತ್ತು 2008 ರ ವಿಧಾನಸಭಾ ಚುನಾವಣೆಗಳಲ್ಲಿ  ಬಿಜೆಪಿಯ ಹೆಚ್ಚಿನ ಶಾಸಕರು ಆಯ್ಕೆಯಾದರು. ಜತೆಗೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಚುನಾ ವಣೆಯಲ್ಲೂ ಬಿಜೆಪಿಯೇ ಅಧಿಕಾರಕ್ಕೇರಿತು.ಈಗ ಜಿಲ್ಲೆಯ ಜನಪ್ರತಿನಿಧಿಗಳಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ಹೊರತು ಪಡಿಸಿದರೆ, ಸಚಿವರಾದ ಸಿ.ಎಂ.ಉದಾಸಿ, ಬಸವರಾಜ ಬೊಮ್ಮಾಯಿ, ಶಾಸಕರಾದ ನೆಹರೂ ಓಲೇಕಾರ, ಜಿ.ಶಿವಣ್ಣ, ಸುರೇಶಗೌಡ ಪಾಟೀಲ ಹಾಗೂ ವಿಧಾನಪರಿಷತ್ ಸದಸ್ಯ ಶಿವರಾಜ ಸಜ್ಜನರ ಅವರು ಬೇರೆ ಪಕ್ಷದಿಂದಲೇ ಬಿಜೆಪಿಗೆ ಬಂದವರಾಗಿದ್ದಾರೆ.ಬೇವಿನಮರದ ಬಿಟ್ಟು ಉಳಿದವರೆಲ್ಲರು ಯಡಿಯೂರಪ್ಪನವರ ಜತೆ ಗುರುತಿಸಿಕೊಂಡಿದ್ದು, ಅವರ ಜತೆಯಲ್ಲಿ ಹೋಗುವುದು ಬಹುತೇಕ ಖಚಿತವಾಗಿದೆ.ಇದರಿಂದ ಜಿಲ್ಲಾ ಬಿಜೆಪಿಯಲ್ಲಿ ಕೇವಲ ಮೂಲ ಬಿಜೆಪಿ ಮುಖಂಡರು, ಕಾರ್ಯಕರ್ತರು ಉಳಿಯಲಿದ್ದು, ಪಕ್ಷವನ್ನು ಮತ್ತೆ ಬೇರು ಮಟ್ಟದಿಂದ ಸಂಘಟಿಸುವ ಅನಿವಾರ್ಯತೆ ಅಳಿದುಳಿದ ಕಾರ್ಯಕರ್ತರ, ಮುಖಂಡರ ಮೇಲೆ ಬೀಳಲಿದೆ ಎನ್ನುತ್ತಾರೆ ಮೂಲ ಬಿಜೆಪಿ ಮುಖಂಡರಲ್ಲಿ ಒಬ್ಬರಾದ ಡಾ.ಮಲ್ಲೇಶಪ್ಪ ಹರಿಜನ.ಯಡಿಯೂರಪ್ಪ ಗುರುವಾರ ನಗರದಲ್ಲಿ ತಮ್ಮ ಅಭಿಮಾನಿಗಳ ಸಭೆ ನಡೆಸಿದರೆ, ಜಿಲ್ಲಾ ಬಿಜೆಪಿ ಘಟಕವು ಈಶ್ವರಪ್ಪ ಅವರನ್ನು ಶನಿವಾರ ( ನ.3) ಜಿಲ್ಲೆಗೆ ಕರೆಸಿ ಮೂಲ ಬಿಜೆಪಿ ಮುಖಂಡರು, ಕಾರ್ಯಕರ್ತರನ್ನು ಒಂದೆಡೆ ಸೇರಿಸುವುದರ ಜತೆಗೆ ಪಕ್ಷದ ಸಂಘಟನೆಗೆ ಚಾಲನೆ ನೀಡಲು ಸಭೆ ನಡೆಸಲಿದೆ.ಅಷ್ಟೇ ಅಲ್ಲದೇ ಕಳೆದ ನಾಲ್ಕೂವರೆ ವರ್ಷಗಳಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದೆ. ಆದರೆ, ಜಿಲ್ಲಾ ಕೇಂದ್ರವಾದ ಹಾವೇರಿ ನಗರದಲ್ಲಿ ಪಕ್ಷದ ಕಚೇರಿ ಇರಲಿಲ್ಲ.ಶನಿವಾರ ಪಕ್ಷದ ಜಿಲ್ಲಾ ಕಾರ್ಯಾಲಯವನ್ನು ಸಹ ಈಶ್ವರಪ್ಪ ಉದ್ಘಾಟಿಸಲಿರುವುದನ್ನು ಗಮನಿಸಿದರೆ ಜಿಲ್ಲೆಯಲ್ಲಿ ಪಕ್ಷದ ಸಂಘಟನೆಗೆ         ರಾಜ್ಯ ಘಟಕ ಹೆಚ್ಚಿನ ಮುತುವರ್ಜಿ ವಹಿಸುವುದರೊಂದಿಗೆ ಯಡಿಯೂರಪ್ಪ ನವರ ಬಲ ಕುಗ್ಗಿಸುವ            ಪ್ರಯತ್ನದ ಆರಂಭ ಎಂದೇ ಹೇಳಲಾಗುತ್ತದೆ.ಅದೇ ಕಾರಣಕ್ಕಾಗಿ ಶುಕ್ರವಾರ ಸೋಮಣ್ಣ ಬೇವಿನಮರದ, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಭೋಜರಾಜ ಕರೂದಿ ಹಾಗೂ ಕೆಲವು ಮುಖಂಡರು ಸ್ವತಃ ತಾವೇ ನಿಂತು ಪಕ್ಷದ ಧ್ವಜ ಹಾಗೂ ಕಟೌಟ್‌ಗಳನ್ನು ಕಟ್ಟಿಸುವ ಕಾರ್ಯದಲ್ಲಿ ತೊಡಗಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.