ಬುಧವಾರ, ಮೇ 18, 2022
27 °C

ಯಡಿಯೂರಪ್ಪ ಪಾದಕ್ಕೆ ಈಶ್ವರಪ್ಪ ಶರಣು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಡಿಯೂರಪ್ಪ ಪಾದಕ್ಕೆ ಈಶ್ವರಪ್ಪ ಶರಣು

ಶಿವಮೊಗ್ಗ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕಾಲು ಮುಟ್ಟಿ ನಮಸ್ಕರಿಸಿದ ಘಟನೆಗೆ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣ ಉದ್ಘಾಟನಾ ಸಮಾರಂಭದ ವೇದಿಕೆ ಗುರುವಾರ ಸಾಕ್ಷಿಯಾಯಿತು.ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ ಶಾಸಕರೂ ಆದ ಕೆ.ಎಸ್. ಈಶ್ವರಪ್ಪ ತಮ್ಮ ಭಾಷಣದಲ್ಲಿ, `ಶಿವಮೊಗ್ಗ ಇರುವವರೆಗೂ ಯಡಿಯೂರಪ್ಪ ಅವರ ಹೆಸರು ಇರುತ್ತದೆ. ಅವರು ಮಾಡಿದಷ್ಟು ಅಭಿವೃದ್ಧಿ ಕೆಲಸವನ್ನು ಇಡೀ ದೇಶದಲ್ಲಿ ಯಾರೂ ಮಾಡಿಲ್ಲ. ಕ್ಷೇತ್ರದ ಶಾಸಕನಾಗಿ ಅವರಿಗೆ ಸಾಷ್ಟಾಂಗ ನಮಸ್ಕರಿಸುತ್ತೇನೆ~ ಎಂದು ಯಡಿಯೂರಪ್ಪ ಅವರನ್ನು ಬಾಯಿತುಂಬಾ ಹೊಗಳಿದರು.`ಯಡಿಯೂರಪ್ಪ ಅವರು ಈಗ ತೊಂದರೆಯಲ್ಲಿದ್ದಾರೆ. ಅವರು ಅದರಿಂದ ಮುಕ್ತರಾಗಿ, ಹೊರಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ~ ಎಂದರು.ಇಷ್ಟೆಲ್ಲಾ ಕೆಲಸ ಮಾಡಿದ ಯಡಿಯೂರಪ್ಪ ಅವರಿಗೆ ನಗರಸಭೆ ಕೃತಜ್ಞತೆ ಸಲ್ಲಿಸಲಿದೆ. ಅವರು ಸ್ವೀಕರಿಸಬೇಕು ಎಂದು ಹೇಳಿದ ಈಶ್ವರಪ್ಪ, ಸನ್ಮಾನಕ್ಕೆ ತಮ್ಮ ಸ್ಥಾನದಿಂದ ಎದ್ದುನಿಂತ ಯಡಿಯೂರಪ್ಪ ಅವರ ಬಳಿಗೆ ಬಂದು, ಬಾಗಿ ಅವರ ಕಾಲನ್ನು ಮುಟ್ಟಿ ನಮಸ್ಕರಿಸಿದರು. ತಕ್ಷಣಕ್ಕೆ ಯಡಿಯೂರಪ್ಪ, ಈಶ್ವರಪ್ಪ ಅವರ ಕೈಹಿಡಿದು ಅವರನ್ನು ಮೇಲಕ್ಕೆ ಎತ್ತಿದರು.ಹಾಗೆಯೇ ಕಾರ್ಯಕ್ರಮದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಉದ್ಘಾಟಿಸಿದ್ದು ವಿಶೇಷವಾಗಿತ್ತು. ಈ ಕುರಿತಂತೆ, ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಡಿ.ವಿ. ಸದಾನಂದಗೌಡ ಮಾತನಾಡಿ, ಈ ಎಲ್ಲಾ ಕಾಮಗಾರಿಗಳ ಕಾರಣಕರ್ತರು ಯಡಿಯೂರಪ್ಪ; ಅವರೇ ಉದ್ಘಾಟಿಸಿದ್ದು ಔಚಿತ್ಯಪೂರ್ಣ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.