ಮಂಗಳವಾರ, ಮೇ 17, 2022
24 °C

ಯಡಿಯೂರಪ್ಪ, ಪುತ್ರರಿಂದ ಅಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಕೀಲರಾದ ಸಿರಾಜಿನ್ ಬಾಷಾ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಸಲ್ಲಿಸಿರುವ ಮೊದಲನೇ ಖಾಸಗಿ ದೂರಿನಲ್ಲಿರುವ ಆರೋಪಗಳ ಕುರಿತು ವಿಚಾರಣೆ ನಡೆಸಿರುವ ಲೋಕಾಯುಕ್ತ ಪೊಲೀಸರು ಸೋಮವಾರ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ.

 

ಯಡಿಯೂರಪ್ಪ ಅವರ ಪುತ್ರರು, ಅಳಿಯ ಮತ್ತು ಶಾಸಕ ಎಸ್.ಎನ್.ಕೃಷ್ಣಯ್ಯ ಶೆಟ್ಟಿ ಗಂಭೀರ ಸ್ವರೂಪದ ಅಕ್ರಮಗಳನ್ನು ನಡೆಸಿರುವುದನ್ನು ಈ ವರದಿ ದೃಢಪಡಿಸಿದೆ.ಜನವರಿ 22ರಂದು ಸಿರಾಜಿನ್ ಬಾಷಾ ಅವರು `ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ~ (ಲೋಕಾಯುಕ್ತ) ವಿಶೇಷ ನ್ಯಾಯಾಲಯದಲ್ಲಿ ಯಡಿಯೂರಪ್ಪ ವಿರುದ್ಧ ಮೂರು ಆರೋಪಗಳಿಗೆ ಸಂಬಂಧಿಸಿದಂತೆ ಖಾಸಗಿ ದೂರು ಸಲ್ಲಿಸಿದ್ದರು. ಈ ದೂರನ್ನು ವಿಚಾರಣೆಗೆ ಅಂಗೀಕರಿಸಿದ್ದ ವಿಶೇಷ ನ್ಯಾಯಾಲಯ, ಅದರಲ್ಲಿ ಉಲ್ಲೇಖವಾಗಿರುವ ಆರೋಗಳ ಬಗ್ಗೆ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿತ್ತು.ಬೆಂಗಳೂರಿನ ರಾಚೇನಹಳ್ಳಿಯ ಸರ್ವೆ ನಂಬರ್ 55/2 ಹಾಗೂ 56ರಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸ್ವಾಧೀನಪಡಿಸಿಕೊಂಡಿದ್ದ ಭೂಮಿಯನ್ನು ಅಧಿಸೂಚನೆಯಿಂದ ಕೈಬಿಟ್ಟಿರುವುದು ಮತ್ತು ವೈಯಾಲಿಕಾವಲ್ ಗೃಹ ನಿರ್ಮಾಣ ಸಹಕಾರ ಸಂಘದ ನಾಗವಾರ ಬಡಾವಣೆಯಲ್ಲಿ ಯಡಿಯೂರಪ್ಪ ಕುಟುಂಬದ ಸದಸ್ಯರ ಒಡೆತನದ ಧವಳಗಿರಿ ಡೆವಲಪರ್ಸ್ ಕಂಪೆನಿಗೆ ಅನುಕೂಲವಾಗುವಂತೆ ರಸ್ತೆಯನ್ನೇ ನಿವೇಶನವನ್ನಾಗಿ ಪರಿವರ್ತಿಸಿರುವ ಆರೋಪ ಈ ದೂರಿನಲ್ಲಿತ್ತು.ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಕಲಂ 202ರ ಅಡಿಯಲ್ಲಿ ನ್ಯಾಯಾಲಯ ನೀಡಿದ್ದ ಆದೇಶದಂತೆ ಬೆಂಗಳೂರು ನಗರ ಲೋಕಾಯುಕ್ತ ಎಸ್‌ಪಿ ಪಿ.ಕೆ.ಶಿವಶಂಕರ್, ಡಿವೈಎಸ್‌ಪಿ ಅಬ್ದುಲ್ ಅಹದ್ ತನಿಖೆ ನಡೆಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ 200 ಪುಟಗಳ ತನಿಖಾ ವರದಿ ಮತ್ತು ಸುಮಾರು 4,500 ಪುಟಗಳಷ್ಟು ದಾಖಲೆಗಳನ್ನು ಸೋಮವಾರ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಅವರಿಗೆ ಸಲ್ಲಿಸಿದ್ದಾರೆ.ಗಂಭೀರ ಅಕ್ರಮ: ರಾಚೇನಹಳ್ಳಿಯ ಎರಡು ಸರ್ವೆ ನಂಬರ್‌ಗಳಲ್ಲಿನ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆ ಅಧಿಸೂಚನೆಯಿಂದ ಕೈಬಿಟ್ಟಿರುವ ಪ್ರಕರಣದಲ್ಲಿ ಮಾಲೂರು ಶಾಸಕ ಎಸ್.ಎನ್.ಕೃಷ್ಣಯ್ಯ ಶೆಟ್ಟಿ ಪ್ರಮುಖ ಪಾತ್ರ ವಹಿಸಿರುವುದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. ಮೊದಲೇ ಬಿಡಿಎ ಸ್ವಾಧೀನಪಡಿಸಿಕೊಂಡಿದ್ದ ಭೂಮಿಯನ್ನು ಸತ್ಯಾಂಶ ಮುಚ್ಚಿಟ್ಟು ಡಿನೋಟಿಫಿಕೇಷನ್ ಮಾಡಿಸಿರುವುದರಲ್ಲಿ ಇವರ ಪಾತ್ರವೇ ಪ್ರಮುಖ ಎಂಬುದು ದಾಖಲೆ ಪರಿಶೀಲನೆಯಲ್ಲಿ ದೃಢಪಟ್ಟಿದೆ.ಈ ಪ್ರಕರಣಗಳಲ್ಲಿ ಬಿಡಿಎ ಸ್ವಾಧೀನದಲ್ಲಿದ್ದ ಭೂಮಿಯಲ್ಲಿ ಕೆಲ ಭಾಗವನ್ನು ಅಧಿಸೂಚನೆಯಿಂದ ಕೈಬಿಡುವ ಮುನ್ನ ಯಡಿಯೂರಪ್ಪ ಅವರ ಪುತ್ರರಾದ ಸಂಸದ ಬಿ.ವೈ.ರಾಘವೇಂದ್ರ, ಬಿ.ವೈ.ವಿಜಯೇಂದ್ರ ಮತ್ತು ಅಳಿಯ ಆರ್.ಎನ್. ಸೋಹನ್‌ಕುಮಾರ್ ಒಡೆತನದ ಧವಳಗಿರಿ ಪ್ರಾಪರ್ಟೀಸ್ ಅಂಡ್ ಡೆವಲಪರ್ಸ್ ಕಂಪೆನಿ ಖರೀದಿಸಿದೆ. ಬಳಿಕ ಭೂಮಿಯ ಮೂಲ ಮಾಲೀಕರ ಹೆಸರಿನಲ್ಲಿ ಸಲ್ಲಿಕೆಯಾದ ಅರ್ಜಿ ಆಧಾರದಲ್ಲಿ ಅಧಿಸೂಚನೆಯಿಂದ ಕೈಬಿಟ್ಟಿರುವುದು ದೃಢಪಟ್ಟಿರುವ ಅಂಶ ಪೊಲೀಸರು ಸಲ್ಲಿಸಿರುವ ವರದಿಯಲ್ಲಿದೆ.ಅಧಿಸೂಚನೆಯಿಂದ ಕೈಬಿಡುವ ಮುನ್ನ ಒಂದು ಎಕರೆ ಭೂಮಿಯನ್ನು ಖರೀದಿಸಿದ ಧವಳಗಿರಿ ಡೆವಲಪರ್ಸ್ ನಂತರ ಅದನ್ನು ಜಿಂದಾಲ್ ಸಮೂಹದ ಸೌತ್ ವೆಸ್ಟ್ ಮೈನಿಂಗ್ ಕಂಪೆನಿಗೆ 20 ಕೋಟಿ ರೂಪಾಯಿಗೆ ಮಾರಾಟ ಮಾಡಿದೆ. ಹಲವು ಕಾನೂನುಗಳನ್ನು ಉಲ್ಲಂಘಿಸಿ ನಡೆದ ಈ ಪ್ರಕ್ರಿಯೆಯಲ್ಲಿ ಯಡಿಯೂರಪ್ಪ ಪುತ್ರರು ಮತ್ತು ಅಳಿಯನಿಗೆ 19.60 ಕೋಟಿ ರೂಪಾಯಿ ಲಾಭವಾಗಿದೆ ಎಂಬ ಗಂಭೀರ ವಿಷಯ ವರದಿಯಲ್ಲಿದೆ ಎಂದು ಉನ್ನತ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.ಶಾಸಕರ ಪಾಲು ದೊಡ್ಡದು: ಈ ಪ್ರಕರಣದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಕೃಷ್ಣಯ್ಯ ಶೆಟ್ಟಿ ದೊಡ್ಡ ಮಟ್ಟದ ಲಾಭ ಮಾಡಿಕೊಂಡಿರುವುದೂ ಲೋಕಾಯುಕ್ತ ಪೊಲೀಸರ ವಿಚಾರಣೆಯಲ್ಲಿ ಬಹಿರಂಗವಾಗಿದೆ. ಧವಳಗಿರಿ ಡೆವಲಪರ್ಸ್ ಖರೀದಿಸಿದ ಭೂಮಿ ಸೇರಿದಂತೆ ಹೆಚ್ಚಿನ ವಿಸ್ತೀರ್ಣದ ಭೂಮಿಯನ್ನು ಅಧಿಸೂಚನೆಯಿಂದ ಕೈಬಿಡಲಾಗಿತ್ತು. ಈ ಪೈಕಿ ಕಡಿಮೆ ಭೂಮಿಯನ್ನು ಧವಳಗಿರಿ ಡೆವಲಪರ್ಸ್ ಖರೀದಿಸಿದ್ದರೆ, ಹೆಚ್ಚಿನ ಭೂಮಿಯನ್ನು ತಾವೇ ಉಳಿಸಿಕೊಳ್ಳುವ ಮೂಲಕ ಕೃಷ್ಣಯ್ಯ ಶೆಟ್ಟಿ ಹೆಚ್ಚಿನ ಲಾಭ ಮಾಡಿಕೊಂಡಿದ್ದಾರೆ ಎಂಬ ವಿವರಗಳೂ ಈ ವರದಿಯಲ್ಲಿವೆ.`ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ~, ಭಾರತೀಯ ದಂಡ ಸಂಹಿತೆ, ಕರ್ನಾಟಕ ಭೂ ಕಂದಾಯ ಕಾಯ್ದೆಯ ವ್ಯಾಪ್ತಿಯಲ್ಲಿ ದಾಖಲಿಸಬಹುದಾದ ಅಕ್ರಮಗಳು ಪತ್ತೆಯಾಗಿರುವುದನ್ನು ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಕಾನೂನು ಉಲ್ಲಂಘನೆಯ ನಿರ್ಧಾರ ಕೈಗೊಳ್ಳುವಂತೆ ಸರ್ಕಾರದ ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗಿತ್ತು ಎಂಬುದನ್ನೂ ವರದಿ ತಿಳಿಸಿದೆ.

 

ಲೋಕಾಯುಕ್ತ ಪೊಲೀಸರು ವರದಿ ಸಲ್ಲಿಸಿರುವ ವರದಿಯ ಪ್ರತಿ ನೀಡುವಂತೆ ಸಿರಾಜಿನ್ ಪರ ವಕೀಲ ಸಿ.ಎಚ್.ಹನುಮಂತರಾಯ ಮಂಗಳವಾರ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರು. ನ್ಯಾಯಾಧೀಶ ಎನ್.ಕೆ. ಸುಧೀಂದ್ರರಾವ್ ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 17ಕ್ಕೆ ಮುಂದೂಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.