ಯಡಿಯೂರಪ್ಪ, ಪುತ್ರಿ ವಿರುದ್ಧ ಎಫ್‌ಐಆರ್

7

ಯಡಿಯೂರಪ್ಪ, ಪುತ್ರಿ ವಿರುದ್ಧ ಎಫ್‌ಐಆರ್

Published:
Updated:

ಶಿವಮೊಗ್ಗ: ಪತ್ರಕರ್ತರ ಕೋಟಾದಡಿ ಕರ್ನಾಟಕ ಗೃಹ ಮಂಡಳಿ ನಿವೇಶನ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಪುತ್ರಿ ಎಸ್.ವೈ. ಅರುಣಾದೇವಿ ಸೇರಿದಂತೆ ಎಂಟು ಜನರ ವಿರುದ್ಧ ಶನಿವಾರ ಸ್ಥಳೀಯ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 13(1), ಭಾರತೀಯ ದಂಡ ಸಂಹಿತೆ 420 ಹಾಗೂ ಸಂಚು ರೂಪಿಸಿದ್ದಕ್ಕೆ 120 (ಬಿ)ರ ಅಡಿ ಎಫ್‌ಐಆರ್ ದಾಖಲು ಮಾಡಲಾಗಿದೆ.ವಕೀಲ ಬಿ. ವಿನೋದ್, ಈಚೆಗೆ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಈ ಪ್ರಕರಣ ಕುರಿತಂತೆ ತನಿಖೆಗೆ ಕೋರಿ ದೂರು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಧೀಶರಾದ ಮಹಾಲಕ್ಷ್ಮೀ ನೆರಳೆ ಅವರು, ಪ್ರಕರಣದ ವಿಚಾರಣೆ ನಡೆಸಿ ಮಾರ್ಚ್ 14ರ ಒಳಗೆ ವರದಿ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿದ್ದರು.ಇದರ ಅನ್ವಯ ಲೋಕಾಯುಕ್ತ ಪೊಲೀಸರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಮೊದಲ ಆರೋಪಿಯಾಗಿ, ಪುತ್ರಿ ಅರುಣಾದೇವಿ ಅವರನ್ನು ಎರಡನೇ ಆರೋಪಿಯಾಗಿ ತದನಂತರ ಕ್ರಮವಾಗಿ ಕರ್ನಾಟಕ ಗೃಹ ಮಂಡಳಿಯ ಆಗಿನ ಆಯುಕ್ತರಾಗಿದ್ದ ದ್ಯಾಬೇರಿ ಮತ್ತು ಶಿವಮೊಗ್ಗ ಕರ್ನಾಟಕ ಗೃಹ ಮಂಡಳಿಯ ಸಹಾಯಕ ಎಂಜಿನಿಯರ್ ಹಾಲೇಶಪ್ಪ, ಉಳಿದಂತೆ ಯಡಿಯೂರಪ್ಪ ಸಹಾಯಕರಾದ ಶಿವಶಂಕರ, ಕೃಷ್ಣ, ಸಂದೇಶಗೌಡ ಮತ್ತು ಮಂಜುನಾಥ್  ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.ಹಿನ್ನೆಲೆ: ಬಿ.ಎಸ್. ಯಡಿಯೂರಪ್ಪ ಉಪ ಮುಖ್ಯಮಂತ್ರಿಯಾಗಿದ್ದಾಗ ಪುತ್ರಿ ಎಸ್.ವೈ. ಅರುಣಾದೇವಿ ಅವರಿಗೆ ಅನುಕೂಲ ಮಾಡಿಕೊಡಲು ತಮ್ಮ ಸಹಾಯಕರಿಗೆ ಪತ್ರಕರ್ತರ ಹೆಸರಿನಲ್ಲಿ ನಿವೇಶನ ನೀಡುವಂತೆ ಶಿಫಾರಸು ಮಾಡಿದ್ದರು. ತದನಂತರ ನಿವೇಶನ ಕ್ರಯ ಮಾಡಿಕೊಳ್ಳುವ ಮುನ್ನವೇ ಈ ಸಹಾಯಕರು ಅರುಣಾದೇವಿಗೆ ನಿವೇಶನಗಳನ್ನು ಮಾರಾಟ ಮಾಡಿದ್ದರು ಎಂದು ವಕೀಲ ಬಿ. ವಿನೋದ್ ದಾಖಲೆ ಸಮೇತ ದೂರು ಸಲ್ಲಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry