ಭಾನುವಾರ, ಜನವರಿ 26, 2020
21 °C

ಯಡಿಯೂರಪ್ಪ ಪ್ರವಾಸಕ್ಕೆ ಸಮಜಾಯಿಷಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಶಾಸಕರ ಆಹ್ವಾನದ ಮೇರೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದು, ತುಮಕೂರಿನಲ್ಲಿ ಗುರುವಾರ ನಡೆಯಲಿರುವ ಕಾರ್ಯಕ್ರಮ ಕೂಡ ಅದರ ಒಂದು ಭಾಗ~ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಬುಧವಾರ ಇಲ್ಲಿ ಹೇಳಿದರು.ಪಕ್ಷದ ನಗರ ಘಟಕದ ಕಾರ್ಯಕಾರಿಣಿ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು `ತುಮಕೂರಿನ ಕಾರ್ಯಕ್ರಮದ ಬಗ್ಗೆ ಮಾಹಿತಿ ಇಲ್ಲ. ಆದರೂ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಮಂಜೂರು ಮಾಡಿದ್ದ ಯೋಜನೆಗಳ ಶಂಕುಸ್ಥಾಪನೆ/ ಉದ್ಘಾಟನೆಗೆ ಅವರನ್ನು ಶಾಸಕರು ಆಹ್ವಾನಿಸಿದ್ದು, ಇದೊಂದು ಸಹಜವಾದ ಪ್ರಕ್ರಿಯೆ~ ಎಂದು ಹೇಳಿದರು.ಯಾವ ಕಾರ್ಯಕ್ರಮಗಳಿಗೆ ಯಾರು ಹೋಗಬೇಕು ಎಂಬುದರ ಬಗ್ಗೆ ಮುಂದಿನ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಿ, ಸೂಕ್ತ ನಿರ್ಧಾರಕ್ಕೆ ಬರಲಾಗುವುದು ಎಂದರು.ಯಡಿಯೂರಪ್ಪ ಮತ್ತು ಅವರ ಬೆಂಬಲಿಗ ಸಚಿವರು, ಶಾಸಕರ ಹೇಳಿಕೆಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಈಶ್ವರಪ್ಪ ನಿರಾಕರಿಸಿದರು. `ಈ ಸಂದರ್ಭದಲ್ಲಿ ಯಾವುದಕ್ಕೂ ಉತ್ತರ ಇಲ್ಲ. ಸೂಕ್ತ ಸಂದರ್ಭದಲ್ಲಿ ಆ ಬಗ್ಗೆ ವಿವರಣೆ ನೀಡುವೆ~ ಎಂದಿದ್ದಾರೆ.ಹಿರಿಯರ ವೇದಿಕೆ ಇಲ್ಲ: `ಬಿಜೆಪಿಯಲ್ಲಿ ಯಾವ ಹಿರಿಯರ ವೇದಿಕೆಯೂ ಇಲ್ಲ. ವೇದಿಕೆ ಹೆಸರಿನಲ್ಲಿ ಮುಜುಗರದ ಹೇಳಿಕೆಗಳನ್ನು ನೀಡುತ್ತಿರುವ ಬಿ.ಬಿ.ಶಿವಪ್ಪ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ಏಳು ದಿನಗಳಲ್ಲಿ ಉತ್ತರ ನಿರೀಕ್ಷಿಸಲಾಗಿದೆ. ಉತ್ತರ ಬಂದ ನಂತರ ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು~ ಎಂದು ಈಶ್ವರಪ್ಪ ಹೇಳಿದರು.ಯಡಿಯೂರಪ್ಪ ಅವರನ್ನು ಪಕ್ಷದಿಂದ ವಜಾ ಮಾಡಬೇಕೆನ್ನುವ ಹಿರಿಯರ ವೇದಿಕೆಯ ಆಗ್ರಹದ ಕುರಿತು ಕೇಳಿದ ಪ್ರಶ್ನೆಗೆ ಅವರು ಈ ಉತ್ತರ ನೀಡಿದರು.ಸದ್ಯದಲ್ಲೇ ಅಭ್ಯರ್ಥಿ ಅಂತಿಮ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯ ಹುಡುಕಾಟ ಆರಂಭಿಸಿದೆ. ಸದ್ಯದಲ್ಲೇ ಎರಡೂ ಜಿಲ್ಲೆಗಳ ಪಕ್ಷದ ಮುಖಂಡರ ಸಭೆ ಕರೆದು ಚರ್ಚಿಸಲಾಗುವುದು. ಅಂತಿಮವಾಗಿ ಒಬ್ಬರನ್ನು ಆಯ್ಕೆ ಮಾಡಲಾಗುವುದು. ಒಂದೆರಡು ದಿನಗಳಲ್ಲಿ ಈ ಕುರಿತು ಅಂತಿಮ ನಿರ್ಧಾರವಾಗಲಿದೆ ಎಂದರು.ಕುಂದಾಪುರ ಶಾಸಕ ಶ್ರೀನಿವಾಸ ಶೆಟ್ಟಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸುನಿಲ್ ಕುಮಾರ್, ಉದಯ್ ಕುಮಾರ್ ಶೆಟ್ಟಿ, ಚಿಕ್ಕಮಗಳೂರು ಜಿಲ್ಲಾ ಘಟಕದ ಅಧ್ಯಕ್ಷ ಪ್ರಾಣೇಶ್, ಕೇಶವ್ ಸೇರಿದಂತೆ ಇತರರ ಹೆಸರುಗಳು ಕೇಳಿಬರುತ್ತಿದೆ ಎಂದು ಈಶ್ವರಪ್ಪ ಹೇಳಿದರು.

 

ಪ್ರತಿಕ್ರಿಯಿಸಿ (+)