ಸೋಮವಾರ, ಏಪ್ರಿಲ್ 19, 2021
32 °C

ಯಡಿಯೂರಪ್ಪ ಬರ ಪ್ರವಾಸ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಡಿಯೂರಪ್ಪ ಬರ ಪ್ರವಾಸ ಆರಂಭ

ತುಮಕೂರು: ಸಿದ್ದಗಂಗಾ ಮಠದ ಅಂಗಳದಿಂದ ಮಂಗಳವಾರ ಆರಂಭಗೊಂಡ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬರ ಅಧ್ಯಯನ ಪ್ರವಾಸಕ್ಕೆ ಮುಖ್ಯಮಂತ್ರಿ ಜಗದೀಶ್‌ಶೆಟ್ಟರ್, ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಸಚಿವೆ ಶೋಭಾ ಕರಂದ್ಲಾಜೆ ಕೈದಾಳ ಚನ್ನಕೇಶವ ದೇವಸ್ಥಾನದಿಂದ ಶುಭ ಹಾರೈಸಿ ಬೀಳ್ಕೊಟ್ಟರು.ಬರ ಅಧ್ಯಯನ ಪ್ರವಾಸಕ್ಕೂ ಮುನ್ನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಡಾ.ಶಿವಕುಮಾರ ಸ್ವಾಮೀಜಿ ಆಶೀರ್ವಾದ ಪಡೆದರು. ನಂತರ ಹಾಲಿ, ಮಾಜಿ ಮುಖ್ಯಮಂತ್ರಿಗಳಿಬ್ಬರು ಜೊತೆಯಾಗಿಯೇ ತುಮಕೂರು ಸಮೀಪದ ಕೈದಾಳ ಗೋಶಾಲೆಗೆ ಭೇಟಿ ನೀಡಿದರು. ಇಲ್ಲಿನ ಚನ್ನಕೇಶವ ಸ್ವಾಮಿಗೆ ಎಲ್ಲರೂ ಒಟ್ಟಾಗಿ ಪೂಜೆ ಸಲ್ಲಿಸಿದ ಬಳಿಕ ಗೋಶಾಲೆ ವೀಕ್ಷಿಸಿದರು. ಮುಖ್ಯಮಂತ್ರಿ ಶೆಟ್ಟರ್, ಜಿಲ್ಲಾಧಿಕಾರಿಯಿಂದ ಬರದ ಪರಿಹಾರ ಕಾರ್ಯದ ಮಾಹಿತಿ ಪಡೆದರು.ಗೋಶಾಲೆ ವೀಕ್ಷಣೆ ಬಳಿಕ ಜಗದೀಶ್‌ಶೆಟ್ಟರ್ ಬೆಂಗಳೂರಿಗೆ ತೆರಳಿದರು. ಅಲ್ಲೇ ಇದ್ದ ಶೋಭಾ ಕರಂದ್ಲಾಜೆ, ತಾರಾ, ಭಾರತಿ ಶೆಟ್ಟಿ ಅವರು ಯಡಿಯೂರಪ್ಪ ಅವರತ್ತ ನಗೆಸೂಸಿ ಪ್ರವಾಸಕ್ಕೆ ಶುಭ ಕೋರಿದರು. ಕೆ.ಎಸ್.ಈಶ್ವರಪ್ಪ ಅವರು ಯಡಿಯೂರಪ್ಪ ಕೈಕುಲುಕಿ ಬೀಳ್ಕೊಟ್ಟರು.ನಂತರ ಯಡಿಯೂರಪ್ಪ ಪ್ರವಾಸ ಆರಂಭಿಸಿದರು. ತುಮಕೂರು ತಾಲ್ಲೂಕಿನ ಚಿಕ್ಕತೊಟ್ಲುಕೆರೆ, ಕೊರಟಗೆರೆ, ಮಧುಗಿರಿ, ಪಾವಗಡ ತಾಲ್ಲೂಕಿನ ಗೋಶಾಲೆಗಳಿಗೆ ಭೇಟಿ ನೀಡಿದರು. ಕೊರಟಗೆರೆಗೆ ಸಾಗುವ ಮಾರ್ಗ ಮಧ್ಯೆ ದಾಸಾಲುಕುಂಟೆ, ದೇವಲಾಪುರ, ತೋವಿನಕೆರೆ ಗ್ರಾಮಸ್ಥರು ಯಡಿಯೂರಪ್ಪ ಅವರನ್ನು ತಡೆದು ಗೋಶಾಲೆ, ಕುಡಿಯುವ ನೀರು ಒದಗಿಸುವಂತೆ ಆಗ್ರಹಿಸಿದರು.ಕೆಲವು ಕಡೆಗಳಲ್ಲಿ ರೈತರನ್ನು ಕರೆದು ಕಷ್ಟ ಸುಖ ವಿಚಾರಿಸಿಕೊಂಡ ಯಡಿಯೂರಪ್ಪ ಕೂಲಿ ಕೆಲಸ ಕೊಟ್ಟರೆ ಯಾಕೆ ಬರುತ್ತಿಲ್ಲ ಎಂದು ಕೇಳಿದರು. ಉದ್ಯೋಗಖಾತ್ರಿ ಯೋಜನೆಯಡಿ ಕೂಲಿ ಕಡಿವೆು ಎಂದು ರೈತರು ದೂರಿದರು. ಉದ್ಯೋಗ ಖಾತ್ರಿಯ ಕೂಲಿ ಹೆಚ್ಚು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವುದಾಗಿ ಭರವಸೆ ನೀಡಿದರು.ಗೋಶಾಲೆಗೆ ಬರುವ ರೈತರಿಗೆ ರಾತ್ರಿ ಊಟದ ವ್ಯವಸ್ಥೆ ಮಾಡುವಂತೆ ಚಿಕ್ಕತೊಟ್ಲುಕೆರೆ ಗೋಶಾಲೆಯ ರೈತರೊಬ್ಬರ ಮನವಿಗೆ ಸ್ಪಂದಿಸಿದರು. ನಾಳೆಯಿಂದಲೇ ಗೋಶಾಲೆಗಳಲ್ಲಿ ರಾತ್ರಿ ಊಟ ಆರಂಭಿಸಲಾಗುವುದು. ಈ ಬಗ್ಗೆ ಸಂಜೆಯೇ ಮುಖ್ಯಮಂತ್ರಿ ಜತೆ ಮಾತನಾಡುವ ಭರವಸೆ ನೀಡಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.