ಯಡಿಯೂರಪ್ಪ ಬೆಂಬಲಿಗರ ವಿರುದ್ಧ ಕ್ರಮ: ಬುಧವಾರ ಬಿಜೆಪಿ ವರಿಷ್ಠರ ನಿರ್ಧಾರ

7

ಯಡಿಯೂರಪ್ಪ ಬೆಂಬಲಿಗರ ವಿರುದ್ಧ ಕ್ರಮ: ಬುಧವಾರ ಬಿಜೆಪಿ ವರಿಷ್ಠರ ನಿರ್ಧಾರ

Published:
Updated:

ಬೆಳಗಾವಿ (ಪಿಟಿಐ): ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೂತನ ಕರ್ನಾಟಕ ಜನತಾ ಪಕ್ಷದ ಉದ್ಘಾಟನೆ ಸಂದರ್ಭದಲ್ಲಿ ಅವರೊಂದಿಗೆ ವೇದಿಕೆ ಹಂಚಿಕೊಂಡ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಬಿಜೆಪಿ ವರಿಷ್ಠ ನಾಯಕರು ಡಿಸೆಂಬರ್ 12ರಂದು ನಿರ್ಧಾರ ಕೈಗೊಳ್ಳುವರು ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರು ಸೋಮವಾರ ಇಲ್ಲಿ ಹೇಳಿದರು.ಹಾವೇರಿಯಲ್ಲಿ ನಡೆದ ಕೆಜೆಪಿ ಸಮಾವೇಶದಲ್ಲಿ ಯಡಿಯೂರಪ್ಪ ಜೊತೆಗೆ 13 ಶಾಸಕರು ವೇದಿಕೆ ಹಂಚಿಕೊಂಡ ಒಂದು ದಿನದ ಬಳಿಕ ಇಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತಿದ್ದ ಮುಖ್ಯಮಂತ್ರಿ 'ಬಿಜೆಪಿ ವರಿಷ್ಠ ನಾಯಕರು ಡಿಸೆಂಬರ್ 12ರ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವರು' ಎಂದು ಹೇಳಿದರು.ಶಿಸ್ತುಕ್ರಮದ ಎಚ್ಚರಿಕೆಯ ಹೊರತಾಗಿಯೂ, ಯಡಿಯೂರಪ್ಪ ಅವರ ನೂತನ ಪಕ್ಷ ಸ್ಥಾಪನಾ ಸಮಾವೇಶದಲ್ಲಿ ಪಾಲ್ಗೊಳ್ಳುವ ಮೂಲಕ ಈ ಶಾಸಕರು ಇದೀಗ ಶೆಟ್ಟರ ಸರ್ಕಾರದ ಸ್ಥಿರತೆ ಬಗ್ಗೆ ಗುಮಾನಿ ಹುಟ್ಟಿಸಿದ್ದಾರೆ. ಈ ಬೆಳವಣಿಗೆ ಪರಿಣಾಮವಾಗಿ ಬಿಜೆಪಿ ಇಕ್ಕಟ್ಟಿನಲ್ಲಿ ಸಿಲುಕಿದೆ.ವಿಧಾನಸಭೆ ವಿಸರ್ಜಿಸುವಂತೆ ವಿರೋಧ ಪಕ್ಷಗಳು ಮಾಡುತ್ತಿರುವ ಒತ್ತಾಯ ಬಗ್ಗೆ ಪ್ರಸ್ತಾಪಿಸಿದ ಶೆಟ್ಟರ 'ಅಂತಹ ಪ್ರಶ್ನೆ ಇಲ್ಲವೇ ಇಲ್ಲ' ಎಂದು ಹೇಳಿದರು.'ಯಡಿಯೂರಪ್ಪ ಅವರು ಕಾಂಗ್ರೆಸ್ ಜೊತೆಗೆ 'ಗುಪ್ತ ಒಪ್ಪಂದ' ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ವಿರುದ್ಧ ಅವರು ತುಟಿ ಬಿಚ್ಚಿಲ್ಲ' ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಆಪಾದಿಸಿದರು.'ಕೆಜೆಪಿ ಸ್ಥಾಪನೆಯಿಂದ ಬಿಜೆಪಿ ಭವಿಷ್ಯಕ್ಕೆ ಧಕ್ಕೆ ಉಂಟಾಗುವುದಿಲ್ಲ. ಬಿಜೆಪಿಯನ್ನು ಯಾರೊಬ್ಬರೂ (ಪಕ್ಷ ಬಿಟ್ಟು ಹೋಗುವವರು) ದುರ್ಬಲಗೊಳಿಸಲಾಗದು' ಎಂದೂ ರವಿ ನುಡಿದರು.ಯಡಿಯೂರಪ್ಪ ಅವರನ್ನು ಒಬ್ಬ  'ಅಹಂ ಸಮಸ್ಯೆಯಿಂದ ನರಳುತ್ತಿರುವ ಸ್ವಾರ್ಥಿ' ಎಂಬುದಾಗಿ ಬಣ್ಣಿಸಿದ ರವಿ, ಮೂವತ್ತು ಶಾಸಕರು ಯಡಿಯೂರಪ್ಪ ಅವರನ್ನು ಬೆಂಬಲಿಸುತ್ತಿದ್ದಾರೆ ಎಂಬುದು 'ಮಾಧ್ಯಮ ಸೃಷ್ಟಿ' ಎಂದು ಹೇಳಿದರು.'ಪ್ರಸ್ತುತ ವಿಧಾನಸಭೆಯಲ್ಲಿ ಶೆಟ್ಟರ ಸರ್ಕಾರಕ್ಕೆ ಬಹುಮತ ಇಲ್ಲವಾದ್ದರಿಂದ ವಿಧಾನಸಭೆಯನ್ನು ವಿಸರ್ಜಿಸಿ ಹೊಸದಾಗಿ ಜನಾದೇಶ ಕೋರಿ' ಎಂದು ಯಡಿಯೂರಪ್ಪ ಭಾನುವಾರ ಬಿಜೆಪಿಗೆ ಸವಾಲು ಹಾಕಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry