ಯಡಿಯೂರಪ್ಪ ಮತ್ತೆ ಗಡುವು

7

ಯಡಿಯೂರಪ್ಪ ಮತ್ತೆ ಗಡುವು

Published:
Updated:

ಬೆಂಗಳೂರು: ಮುಖ್ಯಮಂತ್ರಿ ಸ್ಥಾನವನ್ನು ತಮಗೆ ಬಿಟ್ಟುಕೊಡುವ ಸಂಬಂಧ ತೀರ್ಮಾನ ತೆಗೆದುಕೊಳ್ಳಲು ಬಿ.ಎಸ್. ಯಡಿಯೂರಪ್ಪ ಅವರು ಪಕ್ಷದ ಹೈಕಮಾಂಡ್‌ಗೆ ಇದೇ 27ರ ಗಡುವು ನೀಡಿದ್ದಾರೆ. ಅಂದು ತಮ್ಮ ಹುಟ್ಟುಹಬ್ಬ. ಆ ವೇಳೆಗೆ ಸಮಾಧಾನ ತರುವ ನಿರ್ಧಾರ ಪಕ್ಷದ ಕಡೆಯಿಂದ ಆಗಬೇಕು. ಇಲ್ಲದಿದ್ದರೆ ಮುಂದಿನ ತೀರ್ಮಾನ ಬೇರೆಯದೇ ಆಗಿರುತ್ತದೆ ಎಂದು ಪಕ್ಷದ ಹೈಕಮಾಂಡ್‌ಗೆ ಅವರು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಇಲ್ಲಿನ ರೇಸ್‌ಕೋರ್ಸ್ ರಸ್ತೆಯ ತಮ್ಮ ನಿವಾಸದಲ್ಲಿ ಗುರುವಾರ ಕರೆದಿದ್ದ ಪಕ್ಷದ ಶಾಸಕರು ಮತ್ತು ಸಂಸದರ ಸಭೆಯಲ್ಲಿ ಅವರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಯಡಿಯೂರಪ್ಪ ಗಡುವಿನ ಬಗ್ಗೆ ಪ್ರಸ್ತಾಪಿಸಿದ ಕೂಡಲೇ ಬೆಂಬಲಿಗರು `ಪಕ್ಷ ಬಿಡುವ ತೀರ್ಮಾನ ಮಾಡಬಾರದು. ಪಕ್ಷದಲ್ಲಿದ್ದೇ ಹೋರಾಟ ಮಾಡಬೇಕು~ ಎಂದು ಒಕ್ಕೊರಲಿನಿಂದ ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯೆ ರೂಪದಲ್ಲಿ `ನನಗೆ ಹೆಚ್ಚು ಶಾಸಕರ ಬೆಂಬಲ ಇದೆ. ನಾನೇಕೆ ಪಕ್ಷ ಬಿಡಲಿ? 27ರ ನಂತರ ನನ್ನ ನಡೆ ಗೊತ್ತಾಗಲಿದೆ. ಆಸಕ್ತಿ ಇರುವವರು ಹುಟ್ಟುಹಬ್ಬಕ್ಕೆ ಬಂದು ಆಶೀರ್ವದಿಸಿ~ ಎಂದು ಸೂಚ್ಯವಾಗಿ ಶಾಸಕರಿಗೆ ಹೇಳಿದರು ಎನ್ನಲಾಗಿದೆ.

ಗುರುವಾರದ ಚಟುವಟಿಕೆ...

ಸದಾನಂದ ಗೌಡ ನಿವಾಸದಲ್ಲಿ ಕೆಲ ಸಚಿವರು, ಶಾಸಕರ ಸಮಾಲೋಚನೆ

ಖಾಸಗಿ ಹೋಟೆಲ್‌ನಲ್ಲಿ ಶಾಸಕರೊಂದಿಗೆ ಈಶ್ವರಪ್ಪ ಚರ್ಚೆ

ಸದಾನಂದಗೌಡ ನಿವಾಸಕ್ಕೆ ಈಶ್ವರಪ್ಪ ಭೇಟಿ

ಈಶ್ವರಪ್ಪ, ಸದಾನಂದಗೌಡರಿಂದ ಯಡಿಯೂರಪ್ಪ ಭೇಟಿ

ಐದು ನಿಮಿಷ ಸಮಾಲೋಚನೆ ನಂತರ ಮಂಗಳೂರಿಗೆ ತೆರಳಿದ ಸದಾನಂದಗೌಡ

ಜಗದೀಶ ಶೆಟ್ಟರ್ ನಿವಾಸದಲ್ಲಿ ಶಾಸಕರ ಸಮಾಲೋಚನೆ

ಯಡಿಯೂರಪ್ಪ ಸಭೆಯಿಂದ ದೂರವಿರಲು ಬಾಲಚಂದ್ರ ಜಾರಕಿಹೊಳಿ ಬಣದ ಶಾಸಕರ ನಿರ್ಧಾರ

ಯಡಿಯೂರಪ್ಪ ನಿವಾಸದಲ್ಲಿ ಇಡೀ ದಿನ ಚರ್ಚೆ

ಮನೆಯಿಂದ ಹೊರಬಾರದ ಯಡಿಯೂರಪ್ಪ

ಮಧ್ಯಾಹ್ನದ ನಂತರ ಸಾವಯವ ಕೃಷಿಕರೊಂದಿಗೆ ಸದಾನಂದಗೌಡ ಸಂವಾದ

ಯಡಿಯೂರಪ್ಪ ಅವರು, ಬೆಂಬಲಿಗರ ಸಭೆ ಎಂದು ಕರೆದುಕೊಂಡರೂ ಸಭೆಯಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಸೇರಿದಂತೆ  ವಿರೋಧಿ ಪಾಳೆಯದ ಬಹುತೇಕ ಸಚಿವರು, ಶಾಸಕರು ಭಾಗವಹಿಸಿದ್ದರು.

ಹೀಗಾಗಿ ಅದು ಪಕ್ಷದ ಸಭೆಯಾಗಿಯೇ ಮಾರ್ಪಟ್ಟಿತು. ಸಭೆಯಲ್ಲಿ ಭಾಗವಹಿಸಿದ್ದ 68 ಶಾಸಕರ ಪೈಕಿ ಹಲವರು ನಾಯಕತ್ವ ಬದಲಾವಣೆ ಸೇರಿದಂತೆ ಇತರ ವಿಷಯಗಳಿಗೆ ಸಂಬಂಧಿಸಿದಂತೆ ಪಕ್ಷದ ತೀರ್ಮಾನವೇ ಅಂತಿಮ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಆಗಬೇಕು ಎಂದು ಕೆಲವರು ಆಗ್ರಹಪಡಿಸಿದರು.

ಸಭೆಯಲ್ಲಿ ಭಾಗವಹಿಸುವಂತೆ ಯಡಿಯೂರಪ್ಪ ಅವರು ಎಲ್ಲ ಶಾಸಕರು, ಸಂಸದರಿಗೆ ಆಹ್ವಾನ ನೀಡಿದ್ದರು. ಹೀಗಾಗಿ ಇದು `ಬಣ~ ರಾಜಕೀಯಕ್ಕೆ ಹೊರತಾದ ಸಭೆಯಾಯಿತು. ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಕಾನೂನು ಸಚಿವ ಎಸ್.ಸುರೇಶ್‌ಕುಮಾರ್ ಅವರು ಸಭೆ ಆರಂಭಕ್ಕೂ ಮೊದಲೇ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಇದು ಕೆಲವರಲ್ಲಿ ಅಚ್ಚರಿ ಕೂಡ ಮೂಡಿಸಿತು. ಆದರೆ, ಅನ್ಯ ಕಾರ್ಯನಿಮಿತ್ತ ಈ ಇಬ್ಬರೂ ಸಭೆಯಲ್ಲಿ ಇರಲಿಲ್ಲ.

ಸಿ.ಎಂ ಬದಲಾವಣೆ ಬೇಡ: ನಾಯಕತ್ವ ಬದಲಾವಣೆಗೆ ಸಭೆಯಲ್ಲಿ ಕೆಲ ಶಾಸಕರು ಆಗ್ರಹಪಡಿಸಿದ ತಕ್ಷಣ ಆರ್‌ಎಸ್‌ಎಸ್ ಹಿನ್ನೆಲೆಯ ರಾಜ್ಯಸಭಾ ಸದಸ್ಯ ರಾಮಾ ಜೋಯಿಸ್, ವಿಧಾನ ಪರಿಷತ್ ಸದಸ್ಯರಾದ ನಾರಾಯಣ ಸಾ ಭಾಂಡಗೆ ಮತ್ತು ಡಿ.ಕೃಷ್ಣಭಟ್ ಅದಕ್ಕೆ ವಿರೋಧ ವ್ಯಕ್ತಪಡಿಸಿದರು.

ಗಡುವಿನ ಆಟ

ಮುಂದೆಯೂ ನಾನೇ ಸಿ.ಎಂ
ಮಂಗಳೂರು: `ನಾನು ಪಕ್ಷದ ಶಿಸ್ತುಬದ್ಧ ನಾಯಕ. ಆದ ಕಾರಣವೇ ನನ್ನ ಮೇಲೆ ವಿಶ್ವಾಸವಿರಿಸಿ ಮುಖ್ಯಮಂತ್ರಿ ಮಾಡಿದ್ದಾರೆ. ಮುಂದಿನ ಒಂದೂವರೆ ವರ್ಷ ಮುಖ್ಯಮಂತ್ರಿಯಾಗಿ ನಾನೇ ಮುಂದುವರಿಯುವೆ, ಮುಂಗಡಪತ್ರವನ್ನೂ ಮಂಡಿಸುವೆ~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯ ಘಟಿಕೋತ್ಸವಕ್ಕೆ ಬುಧವಾರ ಮಧ್ಯಾಹ್ನ ಆಗಮಿಸಿದ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಪಕ್ಷದ ರಾಜ್ಯ ಘಟಕದಲ್ಲಿ ಸಣ್ಣಪುಟ್ಟ ಗೊಂದಲಗಳಿವೆಯೇ ಹೊರತು ಯಾವುದೇ ಗುಂಪುಗಾರಿಕೆ ಇಲ್ಲ. ಪಕ್ಷದಲ್ಲೇನೂ ಅಲ್ಲೋಲ ಕಲ್ಲೋಲ ಆಗಿಲ್ಲ. ಪಕ್ಷದ ಮುಖಂಡರನ್ನು ಮಾಜಿ ಮುಖ್ಯಮಂತ್ರಿ ಭೋಜನಕ್ಕೆ ಕರೆದಿದ್ದರು. ನಾನೂ ಹೋಗಿದ್ದು ಬಂದೆ. ರಾಜ್ಯಪಾಲರು ಭಾಗವಹಿಸಲಾಗದ ಕಾರಣ, ಉನ್ನತ ಶಿಕ್ಷಣ ಸಚಿವ ಹುದ್ದೆಯೂ ತಮ್ಮದೇ ಆಗಿರುವ ಕಾರಣ ಈ ಘಟಿಕೋತ್ಸವಕ್ಕೆ ಬರಬೇಕಾಯಿತು. ಇಲ್ಲದಿದ್ದರೆ ಔತಣಕೂಟದಲ್ಲಿಯೇ ಇರುತ್ತಿದ್ದೆ ಎಂದರು. ಅಷ್ಟೇನೂ ಉತ್ಸಾಹದಲ್ಲಿದ್ದಂತೆ ಕಂಡುಬರದ ಮುಖ್ಯಮಂತ್ರಿ, `ಹಿಂದಿನಿಂದಷ್ಟೇ ಅಲ್ಲ, ಈಗಲೂ ನಾವು ಒಗ್ಗಟ್ಟಿನಿಂದ ಇದ್ದೇವೆ. ಶಾಸಕಾಂಗ ಪಕ್ಷದ ನಾಯಕ ನಾನೆ. ಶಾಸಕಾಂಗ ಪಕ್ಷದ ಸಭೆ ಕರೆದಿಲ್ಲ. ಎರಡು ದಿನ ಪಕ್ಷದಲ್ಲಿ ಚಿಂತನ-ಮಂಥನ ನಡೆಯಲಿದೆ~ ಎಂದರು.

ಸೂಕ್ತ ಸ್ಥಾನಮಾನಕ್ಕೆ ಒತ್ತಾಯಿಸಿ ಈ ಹಿಂದೆ ಸಂಕ್ರಾಂತಿ ಗಡುವು ವಿಧಿಸಿದ್ದ ಬಿ.ಎಸ್.ಯಡಿಯೂರಪ್ಪ ಈ ಸಲ ಹುಟ್ಟುಹಬ್ಬವನ್ನು (ಇದೇ 27) `ಗಡು ಗೆರೆ~ ಮಾಡಿಕೊಂಡಿದ್ದಾರೆ.

ಪದತ್ಯಾಗದ ಜತೆಗೇ ಒಂದು ರೀತಿ `ಗಡುವಿನ ಆಟ~ ಶುರುವಾಯಿತು ಎನ್ನಬಹುದು. ಬಳಿಕ ಅದು ವಿಸ್ತರಣೆಯಾಗುತ್ತಲೇ ಇದೆ. ಸಂಕ್ರಾಂತಿಯನ್ನು ನಿರ್ಣಾಯಕ ಎಂದು ಒಂದು ಹಂತದಲ್ಲಿ ಘೋಷಿಸಿ ಅದಕ್ಕೆ ವಿಶೇಷ ಮಹತ್ವ ತಂದಿದ್ದರು. ಆದರೆ, ಸಂಕ್ರಾಂತಿ ದಿನ ರಾಜಕೀಯವಾಗಿ ಏನೂ `ಸಿಡಿಯಲಿಲ್ಲ~. 

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಮರುದಿನವೇ ಸರ್ಕಾರದ ಹಿರಿಯ ಅಧಿಕಾರಿಗಳಿಗೆ ಆಯೋಜಿಸಿದ್ದ ಔತಣಕೂಟದಲ್ಲಿ `ಮತ್ತೆ ಆರು ತಿಂಗಳಲ್ಲಿ ಮುಖ್ಯಮಂತ್ರಿಯಾಗುವೆ~ ಎಂದು ಯಡಿಯೂರಪ್ಪ ಘೋಷಿಸಿದ್ದರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry