ಗುರುವಾರ , ಮೇ 13, 2021
24 °C

ಯಡಿಯೂರಪ್ಪ ಮತ್ತೆ ಜೈಲಿಗೆ: ಮಧು ಭವಿಷ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: `ಭ್ರಷ್ಟಾಚಾರ ಹಗರಣದಲ್ಲಿ ಸಿಲುಕಿ ಒಮ್ಮೆ ಜೈಲಿಗೆ ಹೋಗಿಬಂದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮತ್ತೆ ಜೈಲು ಮುಖ ನೋಡಲಿದ್ದಾರೆ~ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಭವಿಷ್ಯ ನುಡಿದರು.ನಗರದ ಜಗನ್ಮೋಹನ ಅರಮನೆಯಲ್ಲಿ ಜೆಡಿಎಸ್ ನಗರ ಮತ್ತು ಗ್ರಾಮಾಂತರ ಘಟಕ ಬುಧವಾರ ಏರ್ಪಡಿಸಿದ್ದ ಯುವ ಚೇತನ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ಗಣಿ ಹಣದ ಶಾಪ ಬಿಜೆಪಿಗೆ ತಟ್ಟಿದೆ. ಹಾಗಾಗಿ ಯಡಿಯೂರಪ್ಪ ಅವರು ಜೈಲಿಗೆ ಹೋಗಬೇಕಾಯಿತು. ಬಿಜೆಪಿ ಶಾಸಕರು ಮತ್ತು ಸಚಿವರು ಭ್ರಷ್ಟಾಚಾರದಲ್ಲಿ ತೊಡ ಗುವ ಮೂಲಕ ರಾಜ್ಯವನ್ನು ಭ್ರಷ್ಟಾಚಾರದ ಕೂಪಕ್ಕೆ ತಳ್ಳಿದ್ದಾರೆ. ಭ್ರಷ್ಟಾಚಾರ ಎಂದರೆ ಬಿಹಾರ ಮತ್ತು ಉತ್ತರ ಪ್ರದೇಶದ ಹೆಸರು ಹಿಂದೆ ಕೇಳಿಬರುತ್ತಿತ್ತು.

 

ಆದರೆ ಈಗ ಉತ್ತರ ಭಾರತದ ಜನ ರಾಜ್ಯದತ್ತ ಬೊಟ್ಟು ಮಾಡಿ ತೋರಿಸು ತ್ತಿದ್ದಾರೆ~ ಎಂದು ಭ್ರಷ್ಟಾಚಾರದ ವಿರುದ್ಧ ಗುಡುಗಿದರು.`ನಂಬಿಕೆ, ವಿಶ್ವಾಸವನ್ನು ಬಿಜೆಪಿ ಉಳಿಸಿಕೊಂಡಿಲ್ಲ. ಅಧಿಕಾರದಲ್ಲಿ ಇದ್ದಾಗ ಯಡಿಯೂರಪ್ಪ ಅವರು ಕೊಟ್ಟ ಮಾತಿಗೆ ತಕ್ಕಂತೆ ನಡೆದುಕೊಂಡಿಲ್ಲ. ಕುಮಾರಸ್ವಾಮಿ ರಾಜ್ಯದಲ್ಲಿ 20 ತಿಂಗಳ ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದರೂ ಶಾಲಾ ಮಕ್ಕಳಿಗೆ ಸೈಕಲ್ ವಿತರಣೆ ಸೇರಿದಂತೆ ಇತರೆ ಕಾರ್ಯಕ್ರಮಗಳು ಯಶಸ್ವಿಯಾಗಿವೆ.ಬಡವರ ಮತ್ತು ರೈತರ ಪರವಾಗಿ ಕುಮಾರಸ್ವಾಮಿ ದುಡಿದಿದ್ದಾರೆ. ರಾಜ್ಯಕ್ಕೆ ಅಂಟಿಕೊಂಡಿರುವ ಭ್ರಷ್ಟಾಚಾರ ಶಾಪ ಹೋಗಬೇಕಾದರೆ ರಾಜ್ಯದಲ್ಲಿ ಮತ್ತೆ ಜೆಡಿಎಸ್ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು~ ಎಂದು ತಿಳಿಸಿದರು.`ಶಿವಮೊಗ್ಗದಲ್ಲಿ ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರು ತಮಗೆ ಬೇಕಾದ ಅಭಿವೃದ್ಧಿ ಮಾಡಿಕೊಂಡಿದ್ದಾರೆ. ಆದರೆ ಬಡ ಜನತೆಯ ಅಭಿವೃದ್ಧಿ ಮಾಡಿಲ್ಲ. ತಂದೆ ಬಂಗಾರಪ್ಪ ಅವರನ್ನು ಕಳೆದುಕೊಂಡ ದುಃಖದಲ್ಲಿದ್ದಾಗ ಜೆಡಿಎಸ್ ರಾಜ್ಯ ಯುವ ಘಟಕದ ಜವಾಬ್ದಾರಿಯನ್ನು ನೀಡ ಲಾಯಿತು. ನನಗೆ ಆಗ ಹೊಸ ಚೈತನ್ಯ ಬಂದಿತು.ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಗ್ರಾಮೀಣ ಕೃಪಾಂಕ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಅವು ಇಂದಿಗೂ ಜನಜನಿತವಾಗಿವೆ. ತಂದೆಯ ಆದರ್ಶ, ಅವರು ಹಾಕಿಕೊಟ್ಟ ಪಥದಲ್ಲಿ ನಡೆಯುತ್ತೇನೆ. ರಾಜ್ಯದ ಎಲ್ಲೆಡೆ ಪ್ರವಾಸ ಮಾಡಿ ಜೆಡಿಎಸ್ ಮತ್ತೆ ಅಧಿಕಾರಕ್ಕೆ ತರಲು ಎಲ್ಲರು ಒಗ್ಗಟ್ಟಾಗಿ ಶ್ರಮಿಸಬೇಕಾಗಿದೆ~ ಎಂದು ಹೇಳಿದರು.ಶಾಸಕ ಸಾ.ರಾ.ಮಹೇಶ್ ಮಾತನಾಡಿ, `ರಾಜ್ಯದಲ್ಲಿ ಜಾತಿ ತಾಂಡವವಾಡುತ್ತಿದೆ. ಅಧಿಕಾರ ಹಸ್ತಾಂತರ ಮಾಡುವುದನ್ನು ಬಿಟ್ಟರೆ ಕುಮಾರಸ್ವಾಮಿ ಅವರು ಬೇರೆ ಯಾವ ತಪ್ಪನ್ನು ಮಾಡಲಿಲ್ಲ. ನಾವು ಎಲ್ಲಿ ಎಡವಿದ್ದೇವೆ ಎಂದು ಗೊತ್ತಾಗುತ್ತಿಲ್ಲ. ಕುಮಾರಸ್ವಾಮಿ ಬಂದಾಗ ಎಲ್ಲರು ಅವರನ್ನು ಮುತ್ತಿಕೊಳ್ಳುತ್ತೇವೆ. ಅವರು ಹೋದ ನಂತರ ಚದುರುತ್ತೇವೆ. ಗೊಂದಲ, ಭಿನ್ನಾಭಿಪ್ರಾಯಗಳನ್ನು ತೊರೆದು ಎಲ್ಲರು ಒಗ್ಗಟ್ಟಿನಿಂದ ಪಕ್ಷ ಕಟ್ಟಬೇಕಾಗಿದೆ~ ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.ಮಾಜಿ ಸಚಿವ ಶಿವಣ್ಣ ಅವರು ಮಾತನಾಡಿ, `ಕುಮಾರ ಸ್ವಾಮಿ ಅವರು ಎಲ್ಲೇ ಹೋದರು ಅವರಿಗೆ ಸ್ಟಾರ್ ಮೌಲ್ಯ ಇದೆ. ಇದೀಗ ಮತ್ತೊಬ್ಬ ಸ್ಟಾರ್ ಮಧು ಪಕ್ಷಕ್ಕೆ ಬಂದಿದ್ದಾರೆ. ನಯ-ವಿನಯತೆಯನ್ನು ಮೈಗೂಡಿಸಿಕೊಂಡಿರುವ ಮಧು ಬಂಗಾರಪ್ಪ ಅವರು ರಾಜ್ಯದ ಎಲ್ಲೆಡೆ ಪ್ರವಾಸ ಮಾಡಿ ಯುವ ಕಾರ್ಯಕರ್ತರನ್ನು ಸಂಘಟಿಸುತ್ತಿದ್ದಾರೆ. ಇವರ ಆಗಮನ ದಿಂದ ಪಕ್ಷಕ್ಕೆ ದೊಡ್ಡ ಶಕ್ತಿ ಬಂದಿದೆ~ ಎಂದು ಬಣ್ಣಿಸಿದರು.ವಿಧಾನ ಪರಿಷತ್ ಸದಸ್ಯ ಚಿಕ್ಕಮಾದು, ಕೊಳ್ಳೇಗಾಲ ಕ್ಷೇತ್ರದ ಮಾಜಿ ಶಾಸಕ ಬಾಲರಾಜ್, ಜೆಡಿಎಸ್ ಉಪಾಧ್ಯಕ್ಷ ಪಿ.ಗೋವಿಂದರಾಜು, ನಗರ ಘಟಕ ಅಧ್ಯಕ್ಷ ರಾಜಣ್ಣ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಟಿ.ಕುಮಾರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುನೀತಾ ವೀರಪ್ಪಗೌಡ, ಮಾಜಿ ಮೇಯರ್ ಸಂದೇಶ್‌ಸ್ವಾಮಿ, ಉಪ ಮೇಯರ್ ಎಂ.ಜೆ.ರವಿಕುಮಾರ್, ಪಾಲಿಕೆ ಸದಸ್ಯರಾದ ಕೆ.ಟಿ.ಚೆಲುವೇಗೌಡ, ಖಮರುಲ್ಲಾ ಇಸ್ಲಾಂ, ಮಹದೇವಪ್ಪ, ಶಿವಣ್ಣ, ಕೆ.ವಿ.ಮಲ್ಲೇಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನೇತ್ರಾವತಿ ವೆಂಕಟೇಶ್, ಮಹಿಳಾ ಘಟಕದ ಸರಸ್ವತಿ, ಶರಾವತಿ ವೆಂಕಟೇಶ್, ನಾಗನಹಳ್ಳಿ ದಿನೇಶ್, ಎಸ್‌ಬಿಎಂ ಮಂಜು, ಹರೀಶ್‌ಗೌಡ, ಲಕ್ಷ್ಮಣರಾವ್, ಬಂಡಿಪಾಳ್ಯ ಗಿರೀಶ್, ಆಲನಹಳ್ಳಿ ಮಹದೇವ್, ಸಾತಗಳ್ಳಿ ಜಯಣ್ಣ, ಶ್ರೀರಾಮ್, ಸಂತೋಷ್, ಪದ್ಮಾ ಬಸವರಾಜು, ಬೀರಿಹುಂಡಿ ಬಸವಣ್ಣ ಇತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.