ಮಂಗಳವಾರ, ನವೆಂಬರ್ 19, 2019
27 °C
ಸಾಯಿಬ್ರಕಟ್ಟೆ ಕುಡಿಯುವ ನೀರಿನ ಪೂರೈಕೆಗೆ ಆಗ್ರಹ

ಯಡ್ತಾಡಿ ಗ್ರಾಮ ಪಂಚಾಯಿತಿಗೆ ಗ್ರಾಮಸ್ಥರ ಮುತ್ತಿಗೆ

Published:
Updated:

ಬ್ರಹ್ಮಾವರ: ಯಡ್ತಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಲ್ತಾರು ಮತ್ತು ಸಾಯಿಬ್ರಕಟ್ಟೆ  ಪರಿಸರದಲ್ಲಿ ಕುಡಿಯುವ ನೀರಿಗೆ ತೀವ್ರ ಅಭಾವವಿದ್ದು, ಪಂಚಾಯಿತಿ ಈ ಕುರಿತು ಸ್ಪಂದಿಸುತ್ತಿಲ್ಲವೆಂದು ಆರೋಪಿಸಿ ಗ್ರಾಮಸ್ಥರು ಮಂಗಳವಾರ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.ಬೇಸಿಗೆ ಬಂತೆಂದರೆ ಎ್ಲ್ಲಲೆಡೆ ಕುಡಿಯುವ ನೀರಿಗೆ ಹಾಹಾಕಾರ. ಕೆಲವೊಂದು ಕಡೆ ಜನಪ್ರತಿನಿಧಿಗಳು ಕುಡಿಯುವ ನೀರು ಸರಬರಾಜು ಮಾಡುತ್ತಿದ್ದರಾದರೂ ಇದೀಗ ಚುನಾವಣೆಯ ನೀತಿ ಸಂಹಿತೆ ಇದಕ್ಕೆ ಅಡ್ಡಗಾಲು ಹಾಕುತ್ತಿದೆ. ಆದರೆ ಈ ನೀತಿ ಸಂಹಿಂತೆಯಿಂದ ಗ್ರಾಮಸ್ಥರು ಕುಡಿಯುವ ನೀರಿಗೆ ಹಾತೊರೆಯುತ್ತಿದ್ದಾರೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಿದ್ದರೂ ಪಂಚಾಯಿತಿ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ ಸ್ಪಂದಿಸುತ್ತಿಲ್ಲ. ಕಿಡಿಯುವ ನೀರಿನ ಸಮಸ್ಯೆಯಿದ್ದಾಗ ನೀರು ಪೂರೈಕೆಯಲ್ಲಿ ನಿರ್ಲಕ್ಷ್ಯ, ತಾರತಮ್ಯ ತೋರುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.ಉಡುಪಿ ಜಿಲ್ಲೆ ಜಯಕರ್ನಾಟಕ ಸಂಘಟನೆ ಗ್ರಾಮಸ್ಥರ ಈ ಪ್ರತಿಭಟನೆಗೆ ಬೆಂಬಲಿಸಿ ಕೂಡಲೇ ಸಮಸ್ಯೆ ಪರಿಹರಿಸಿಕೊಡುವಂತೆ ಪಂಚಾಯಿತಿ ಸಿಬ್ಬಂದಿಗಳಲ್ಲಿ ಮನವಿ ಮಾಡಿತು. ಇದಕ್ಕೆ ಸ್ಪಂದಿಸಿದ ಪಂಚಾಯಿತಿಯ ಅಧ್ಯಕ್ಷರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಸ್ತುತ ಎಲ್ಲೆಡೆ ನೀರಿನ ಕೊರತೆ ಇರುವುದಲ್ಲದೆ ಪೈಪ್‌ಲೈನ್ ಹಾಗೂ ವಿದ್ಯುತ್ ಸಂಪರ್ಕದ ಸಮಸ್ಯೆಯಿಂದ ನೀರಿನ ಸಮರ್ಪಕ ಪೂರೈಕೆಗೆ ಅಡಚಣೆಯಾಗುತ್ತಿದೆ. ಇದೇ 22ರ ಒಳಗೆ ವ್ಯವಸ್ಥೆಯನ್ನು ಸರಿಪಡಿಸುವುದಾಗಿ ಭರವಸೆ ನೀಡಿದರು.ಸಂಘಟನೆಯ ಜಿಲ್ಲಾಧ್ಯಕ್ಷ ಜನನಿ ದಿವಾಕರ ಜೆ. ಶೆಟ್ಟಿ, ಕಾರ್ಯದರ್ಶಿ ಉದಯ ಕುಮಾರ್ ಶೆಟ್ಟಿ ಇನ್ನಾ, ಗೌರವ ಸಲಹೆಗಾರರಾದ ಬಿ.ಸುಧಾಕರ ರಾವ್, ಶ್ರೀನಿವಾಸ ಶೆಟ್ಟಿ ಗಾರ್, ಮಾರ್ಕ್ ಡಿಸೋಜ, ಕರುಣಾಕರ ಪೂಜಾರಿ, ಅಣ್ಣಪ್ಪ ಕುಲಾಲ್, ರಾಜೇಶ್ ಶೇಟ್, ಶರತ್ ಕುಮಾರ್ ಶೆಟ್ಟಿ, ನಿತ್ಯಾನಂದ ಅಮೀನ್, ಸಾಯಿಬ್ರಕಟ್ಟೆ ಘಟಕದ ರವೀಂದ್ರನಾಥ ಕಿಣಿ, ಅಚ್ಯುತ ಪ್ರಭು ಮತ್ತು ನೂರಾರು ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)