ಭಾನುವಾರ, ಜೂನ್ 20, 2021
28 °C

ಯಡ್ಯೂರಪ್ಪ ಎಂ.ಬಿ.ಬಿ.ಎಸ್!

ಬಿ.ಎನ್.ಮಲ್ಲೆೀಶ್ Updated:

ಅಕ್ಷರ ಗಾತ್ರ : | |

ಯಡ್ಯೂರಪ್ಪ ಎಂ.ಬಿ.ಬಿ.ಎಸ್!

`ಯಡ್ಯೂರಪ್ಪ ಈ ಸಲ ಸದಾನಂದಗೌಡ್ರ ಕುರ್ಚಿಗೆ ಗ್ಯಾರಂಟಿ ಸರ್ಜರಿ ಮಾಡ್ತಾರೆ ಅಂದ್ಕೊಂಡಿದ್ದೆ ಕಣ್ರಲೆ, ಸ್ವಲ್ಪದರಲ್ಲಿ ಮಿಸ್ಸಾಗೋಯ್ತು...~ ಪರಮೇಶಿ ಬೇಸರ ವ್ಯಕ್ತಪಡಿಸುತ್ತಲೇ ಹರಟೆಕಟ್ಟೆಯ ಚರ್ಚೆಗೆ ಚಾಲನೆ ನೀಡಿದ.`ಅವರು ಕತ್ತರಿ, ಚಾಕು ಸರಿಯಾಗಿ ಮಸ್ಕಂಡಿರ‌್ಲಿಲ್ಲ ಅನ್ಸುತ್ತೆ. ಆಪರೇಶನ್ ಫೇಲು, ಪೇಶಂಟ್ ಬಚಾವ್!...~ ದುಬ್ಬೀರ ನಕ್ಕ.`ಯಡ್ಯೂರಪ್ಪ ಎಂ.ಬಿ.ಬಿ.ಎಸ್. ಓದಿದ್ರೆ ಸರಿಯಾಗಿ ಆಪರೇಶನ್ ಮಾಡಿರೋರು. ಬಿ.ಎ. ಓದಿ ಆಪರೇಶನ್ ಮಾಡ್ತೀನಿ ಅಂದ್ರೆ ಆಗುತ್ತಾ?~ ಗುಡ್ಡೆಗೂ ನಗು.`ಬಿ.ಎ. ಓದಿರೋರು ಮತ್ತೆ ಬಿ.ಎ. ಓದ್ತೀನಿ ಅಂತ ಬರಬಾರದು. ಮುಂದಕ್ಕೋಗಿ ಎಂ.ಎ. ಓದಬೇಕು ಅಂತ ಯಡ್ಯೂರಪ್ಪ ವಿರೋಧಿ ಬಣದ ಮಂತ್ರಿ ಒಬ್ರು ಹೇಳಿದಾರಂತೆ?~

`ಅಂದ್ರೆ ಮುಖ್ಯಮಂತ್ರಿ ಆಗಿದ್ದೋರು ಮತ್ತೆ ಮುಖ್ಯಮಂತ್ರಿ ಆಗ್ತೀನಿ ಅಂತ ಬರಬಾರದು.

 

ಕೇಂದ್ರಕ್ಕೆ ಹೋಗಬೇಕು ಅಂತ ಅರ್ಥನಾ?~`ಮತ್ತಿನ್ನೇನು? ಆದ್ರೆ ಯಡ್ಯೂರಪ್ಪ ನಾನು ಬಿ.ಎ. ಸರಿಯಾಗಿ ಓದ್ಲಿಲ್ಲ, ಇನ್ನೊಂದ್ಸಲ ಓದ್ತೀನಿ ಅಂದ್ರೆ?~`ಓದಬಹುದು, ಆದ್ರೆ ಗಡ್ಕರಿ ಪ್ರಿನ್ಸಿಪಾಲ್‌ರು ಬಿಡಬೇಕಲ್ಲ. ಸದಾನಂದಗೌಡ್ರು ಈಗ ಒಳ್ಳೆ ಬಜೆಟ್ ಬೇರೆ ಕೊಟ್ಟು ಸೈ ಅನ್ನಿಸ್ಕಂಡಿದಾರೆ?~`ಏನು? ಒಳ್ಳೆ ಬಜೆಟ್ಟಾ? ಎಣ್ಣೆ ರೇಟು ಜಾಸ್ತಿ ಮಾಡಿ ನಮ್ಮ ಹೊಟ್ಟೆ ಉರಿಸಿದಾರೆ. ದುಡಿದಿದ್ನೆಲ್ಲ ಎಣ್ಣೆ ಅಂಗಡಿಗೆ ಇಟ್ಟು ವಾಲಾಡ್ತಾ ಮನೆಗೆ ಬಂದ್ರೆ ಹೆಂಡ್ತೀರು ಪೊರಕೆ ತಗಂಡು ಮುಖಕ್ಕೆ ಮೂತಿಗೆ ಇಕ್ತಾರೆ ಅಷ್ಟೆ...~ ಗುಡ್ಡೆ ಕೋಪ ಪ್ರದರ್ಶಿಸಿದ.`ಎಣ್ಣೆ ಹಾಕಿದ ಮೇಲೆ ಮನುಷ್ಯ ದೇವರಿದ್ದಂಗೆ ಕಣೋ, ಸತ್ಯ ಹೇಳ್ತಾನೆ. ಸ್ವಲ್ಪ ವಾಲಾಡ್ತಾನೆ ಅಷ್ಟೆ. ವಾಲಾಡೋ ದೇವರು ಅನ್ನಬಹುದು. ಆ ಟೈಮಲ್ಲಿ ಹೊಡೆದ್ರೆ ದೇವರಿಗೆ ಹೊಡೆದಂಗೆ ಅಂತ ಹೆಂಡ್ತೀರಿಗೆ ತಿಳಿ ಹೇಳಬೇಕಪ್ಪ...~ ತೆಪರೇಸಿ ಸಮಾಧಾನಪಡಿಸಿದ.`ನನಗೆ ಈ ದೇವರು ಅಂತ ಕರಿಯೋರ‌್ನ ಕಂಡ್ರೆ ಉರಿಯುತ್ತಪ್ಪ. ಕ್ರಿಕೆಟ್ ದೇವರು, ನಡೆದಾಡೋ ದೇವರು... ಏನಿದೆಲ್ಲ? ಬದುಕಿದ್ದಾಗ್ಲೇ ಇವರೆಲ್ಲ ದೇವರಾಗಿಬಿಟ್ರೆ ಸತ್ತ ಮೇಲೆ ಏನಾಗ್ತಾರೆ?~`ಸತ್ತ ಮೇಲೆ ಮನುಷ್ಯರಾಗ್ತಾರೆ!~ ಎಂದ ತೆಪರೇಸಿ, `ಅದಿರ‌್ಲಿ, ಕುರ್ಚಿ ನೋಡ್ಕಂಡಿರು ಅಂದ್ರೆ ಕುರ್ಚಿನೇ ನಂದು ಅಂತ ಹೊಂಟಿದಾರಲ್ಲ, ಸದಾನಂದಗೌಡ್ರು ಈ ಬ್ಯಾಟಿಂಗ್ನ ಎಲ್ಲಿಂದ ಕಲಿತ್ರು ಅಂತ. ಯಡ್ಯೂರಪ್ಪ ಫಾಸ್ಟ್ ಬಾಲು, ಸ್ಪಿನ್ನು, ಗೂಗ್ಲಿ, ಬೌನ್ಸರು, ಏನೇ ಹಾಕಿದ್ರು ಔಟೇ ಆಗ್ತಿಲ್ಲವಲ್ಲ ಏನ್ ಕತೆ?~ ಎಂದು ನಕ್ಕ.`ಎಲ್ಲೆತಂಕ ಅಂಪೈರ್ ಆಗಿ ಈಶ್ವರಪ್ಪ, ಥರ್ಡ್ ಅಂಪೈರ್ ಆಗಿ ಗಡ್ಕರಿ ಸದಾನಂದಗೌಡ್ರ ಪರ ಇರ‌್ತಾರೋ ಅಲ್ಲೆತಂಕ ಅವರು ಔಟ್ ಆಗೋದೇ ಇಲ್ಲ ಅನ್ಸುತ್ತೆ~ ಪರಮೇಶಿ ರಾಜಕೀಯ ವಿಶ್ಲೇಷಣೆ ಮಾಡಿದ.`ಅಂದ್ರೆ ಅಂತೂ ಇಂತೂ ಕುಂತಿ ಮಗನಿಗೆ ರಾಜ್ಯ ಇಲ್ಲ ಅಂದಂಗಾತು. ಪಾಂಡವರಿಗೆ ವನವಾಸ, ಯಡ್ಯೂರಪ್ಪ ಅಂಡ್ ಕಂಪೆನಿಗೆ ರೆಸಾರ್ಟ್ ವಾಸ ಖಾಯಂ!~`ಅದೇನರೆ ಆಗ್ಲಿ, ಈ ನಡೆದಾಡೋ ದೇವರುಗಳೆಲ್ಲ ತಮ್ಮ ತಮ್ಮ ಜಾತಿ ರಾಜಕಾರಣಿಗಳ ಪರ ಬ್ಯಾಟಿಂಗ್ ಮಾಡೋಕೆ ಫೀಲ್ಡಿಗೆ ಇಳಿದುಬಿಟ್ಟಿದಾವಲ್ಲ, ಹಿಂಗಾದ್ರೆ ದೇಶ ಉಳಿಯುತ್ತಾ?~ ಪರಮೇಶಿಗೆ ಆತಂಕ.`ಅವರು ಬ್ಯಾಟ್ಸ್‌ಮನ್‌ಗಳಲ್ಲ ಕಣಲೆ, ರನ್ನರ್‌ಗಳು. ಬ್ಯಾಟ್ಸ್‌ಮನ್‌ಗಳು ಸುಸ್ತಾದಾಗ ಅವರ ಪರವಾಗಿ ಓಡೋಕೆ ಅಂತ ಇರ‌್ತಾರಲ್ಲ, ಆ ತರ. ಬ್ಯಾಟ್ ಮಾಡದಿದ್ರು ಕೈಯಲ್ಲಿ ಬ್ಯಾಟ್ ಹಿಡ್ಕಂಡಿರ‌್ತಾರೆ. ರಾಜ್ಯ ಆಳದಿದ್ರು ಸೂತ್ರ ತಮ್ಮ ಕೈಲಿ ಹಿಡ್ಕಂಡಿರ‌್ತಾರೆ!~ ದುಬ್ಬೀರ ವಿವರಿಸಿದ.`ಸರಿಯಪ್ಪ, ಮುಂದೇನೀಗ? ಬೆಲ್ಲ ತಿಂದ ಸದಾನಂದಗೌಡ್ರೇ ಬುಸುಗುಡ್ತಿರೋವಾಗ ಬೇವು ತಿಂದಿರೋ ಯಡ್ಯೂರಪ್ಪ ಸುಮ್ನಿರ‌್ತಾರಾ?~ ಪರಮೇಶಿ ಪ್ರಶ್ನೆ.ತಕ್ಷಣ ಗುಡ್ಡೆ `ನೀನು ಹೇಳೋದು ಕರೆಕ್ಟ್. ಅವರು ಸುಮ್ನಿರಲ್ಲ ಅನ್ನೋದಕ್ಕೆ ಒಂದು ಚುಟುಕ ಹೇಳ್ತೀನಿ ಕೇಳು~ ಎಂದವನೇ ಶುರು ಮಾಡಿದ. ಹಾವ ತಿಂದವರ ನುಡಿಸಲುಬಹುದು

ಅಧಿಕಾರವಿಲ್ಲದೆ

ಬೇವ ತಿಂದವರ

ನುಡಿಸಲು ಬಾರದೋ ಪರಮೇಶಾ...

`ಹೆಂಗೆ?~ ಎಂದ ಗುಡ್ಡೆ. `ನಿನ್ತೆಲಿ, ಇದೊಂದು ಚುಟುಕ, ನೀನೊಬ್ಬ ಕವಿ. ಈಗ ಯಾರು ಏನೇ ಹೇಳಲಿ, ಇನ್ನು ಕೆಲವೇ ದಿನದಲ್ಲಿ ರಾಜ್ಯ ರಾಜಕೀಯದಲ್ಲಿ ಪ್ರಳಯ ಆಗೋದಂತೂ ಗ್ಯಾರಂಟಿ. ಬೇಕಾದ್ರೆ ಬೆಟ್ಸ್ ಕಟ್ತೀನಿ~ ಪರಮೇಶಿ ಸವಾಲು ಹಾಕಿದ.`ಅಂದ್ರೆ ಯಡ್ಯೂರಪ್ಪ ಎಂ.ಬಿ.ಬಿ.ಎಸ್ ಸರ್ಜರಿ ಮಾಡ್ತಾರೆ ಅಂತೀಯ? ಪಾಪ, ಸದಾನಂದಗೌಡ್ರು ಲೋಕಸಭೇಲಿದ್ದೋರು ಆರ್ಡಿನರಿ ಎಂಎಲ್ಸಿ ಆಗಿಬಿಡ್ತಾರಲ್ಲೋ~ ಗುಡ್ಡೆ ಕನಿಕರ ವ್ಯಕ್ತಪಡಿಸಿದ.`ಅದೇನ್ ಪ್ರಳಯ ಪ್ರಳಯ ಅಂತೀರಪ್ಪ, ಈ ವರ್ಷ ಪ್ರಪಂಚಕ್ಕೇ ಪ್ರಳಯ ಅಂತ ಹೇಳ್ತಾರೆ. ಅದರ ಮುಂದೆ ಈ ರಾಜಕೀಯ ಪ್ರಳಯ ಯಾವ ಲೆಕ್ಕ?~ ಮಿಸ್ಸಮ್ಮ ಹೋಲ್‌ಸೇಲ್ ಮಾತನಾಡಿದಳು.`ನೀ ಹೇಳೋದೂ ನಿಜ. ರಾಜಕೀಯ ಪ್ರಳಯ ಏನಾದ್ರು ಆಗ್ಲಿ. ಈ ಪ್ರಪಂಚ ಪ್ರಳಯಾನ ಹೇಗೆ ತಪ್ಪಿಸೋದು?~ ದುಬ್ಬೀರನಿಗೆ ಚಿಂತೆ ಶುರುವಾುತು.`ಚಿಂತೆ ಮಾಡಬೇಡ ದುಬ್ಬೀರ, ನಮ್ಮ ನಿತ್ಯಾನಂದ ಮಹಾಪ್ರಭುಗಳು ಪ್ರಳಯ ಆದ್ರೂ ಗೊತ್ತಾಗದೇ ಇರೋ ಹಾಗೆ ಒಂದು ಸೂತ್ರ ಕಂಡು ಹಿಡಿದಿದಾರಂತೆ...~ ಗುಡ್ಡೆ ಹೇಳಿದಾಗ `ಹೌದಾ? ಏನಂತೆ?~ ಎಲ್ಲರೂ ಒಟ್ಟಿಗೇ ಕೇಳಿದರು.`ಪ್ರಣಯದಲ್ಲಿ ಮುಳುಗಿ ಹೋದ್ರೆ ಪ್ರಳಯ ಆಗೋದು ಗೊತ್ತಾಗೋದೇ ಇಲ್ಲವಂತೆ!...~ ಗುಡ್ಡೆ ಮಾತಿಗೆ ಎಲ್ಲರೂ ಗೊಳ್ಳಂತ ನಕ್ಕರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.