ಯತ್ನಕ್ಕೆ ಸಿಕ್ಕ ಫಲ: ಸುಬ್ಬಯ್ಯ

7
ಕಾಡಿಗೆ ಆನೆ ಅಟ್ಟುವ ಕಾರ್ಯಾಚರಣೆ

ಯತ್ನಕ್ಕೆ ಸಿಕ್ಕ ಫಲ: ಸುಬ್ಬಯ್ಯ

Published:
Updated:

ಮಡಿಕೇರಿ:  ಕೊಡಗು ಜಿಲ್ಲೆಯಲ್ಲಿ ಕಂಡುಬರುವ ಆನೆ–ಮಾನವ ಸಂಘರ್ಷ ತಡೆಗಟ್ಟಲು ಕ್ರಮಕೈಗೊಳ್ಳುವಂತೆ ನಾವು ಹೈಕೋರ್ಟ್‌ಗೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಪರಿಣಾಮವಾಗಿ ಕ್ಷಿಪ್ರ  ಕಾರ್ಯಾಚರಣೆಯಲ್ಲಿ ಕೊಡಗು ಜಿಲ್ಲೆಯನ್ನೂ ಸೇರಿಸಲಾಗಿದೆ ಎಂದು ಹೈಕೋರ್ಟ್‌ ಹಿರಿಯ ವಕೀಲ ಎ.ಕೆ. ಸುಬ್ಬಯ್ಯ ಹೇಳಿದರು.ನಗರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನ ಖಾಸಗಿ ತೋಟಗಳಲ್ಲಿ 300ಕ್ಕೂ ಹೆಚ್ಚು ಆನೆಗಳು ಬೀಡುಬಿಟ್ಟಿವೆ. ಇವುಗಳನ್ನು ಮರಳಿ ಕಾಡಿಗೆ ಅಟ್ಟಬೇಕು ಹಾಗೂ ಆನೆ ದಾಳಿಯಿಂದ ನಷ್ಟವಾಗಿರುವ ಬೆಳೆಗೆ ತಕ್ಷಣ ಪರಿಹಾರ ವಿತರಿಸಬೇಕೆಂದು ಕೋರಿ ನಾವು ಪಿಐಎಲ್‌ ಸಲ್ಲಿಸಿದ್ದೇವು ಎಂದು ಅವರು ಹೇಳಿದರು.ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು, ಜನರಿಗೂ ಯಾವುದೇ ತೊಂದರೆಯಾಗಬಾರದು ಹಾಗೂ ಆನೆಗಳ ಜೀವಕ್ಕೂ ಕುತ್ತು ಬರಬಾರದು ಅಂತಹ ಯೋಜನೆಯೊಂದನ್ನು ರೂಪಿಸಬೇಕೆಂದು ಅರಣ್ಯ ಇಲಾಖೆಗೆ ಸೂಚನೆ ನೀಡಿತು. ಇದರ ಪರಿಣಾಮವಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಕ್ಷಿಪ್ರ  ಕಾರ್ಯಾಚರಣೆ ಪಡೆ ಯೋಜನೆಯನ್ನು ರೂಪಿಸಿದರು. ಆರಂಭದಲ್ಲಿ ಈ ಯೋಜನೆಯ ವ್ಯಾಪ್ತಿಯೊಳಗೆ ಚಾಮರಾಜ ನಗರ, ಮೈಸೂರು, ಹಾಸನ ಜಿಲ್ಲೆಗಳಿದ್ದವು. ಆದರೆ, ಕೊಡಗು ಜಿಲ್ಲೆಯನ್ನು ಕೈಬಿಡಲಾಗಿತ್ತು. ಇದಕ್ಕೆ ನಾವು ಆಕ್ಷೇಪ ವ್ಯಕ್ತಪಡಿಸಿದಾಗ, ಕ್ಷಿಪ್ರ  ಕಾರ್ಯಾಚರಣೆ ಪಡೆ ಯೋಜನೆಯಲ್ಲಿ ಕೊಡಗು ಜಿಲ್ಲೆಯನ್ನೂ ಸೇರಿಸಲಾಯಿತು ಎಂದು ಅವರು ವಿವರಣೆ ನೀಡಿದರು.ಜಿಲ್ಲೆಯ ಬೆಳೆಗಾರರಿಗೆ ಹಾಗೂ ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಆನೆಗಳನ್ನು ವಾಪಸ್‌ ಕಾಡಿಗೆ ಅಟ್ಟಲು ಕ್ಷಿಪ್ರ  ಕಾರ್ಯಾಚರಣೆ ಪಡೆ ಸಮರ್ಪಕವಾಗಿ ಕಾರ್ಯನಿರ್ವಹಿಸಲಿ. ಇಲ್ಲದಿದ್ದರೆ ಜನರ ಆಕ್ರೋಶ ಅರಣ್ಯ ಇಲಾಖೆ ವಿರುದ್ಧ ತಿರುಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.ಆನೆ ಸಂಘರ್ಷದ ನೆಪದಲ್ಲಿ ಆನೆ ಕಾರಿಡಾರ್ ನಿರ್ಮಾಣ, ಸ್ಥಳೀಯ ಜನರ ಒಕ್ಕಲೆಬ್ಬಿಸಲು ಹಾಗೂ  ಕೊಡಗು ಜಿಲ್ಲೆಯನ್ನು ಸಂಪೂರ್ಣವಾಗಿ ಅರಣ್ಯ ಪ್ರದೇಶವೆಂದು ಘೋಷಿಸಲು ಪ್ರಯತ್ನಿಸುತ್ತಿರುವ ಢೋಂಗಿ ಪರಿಸರವಾದಿಗಳ ಪ್ರಯತ್ನಕ್ಕೆ ಕ್ಷಿಪ್ರ  ಕಾರ್ಯಾಚರಣೆ ಪಡೆ ರಚನೆಯಿಂದಾಗಿ ಹಿನ್ನಡೆಯುಂಟಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.ಪಟ್ಟಿ ನೀಡಲಿ: ದೇವರಕಾಡು ಪ್ರದೇಶದ ಒತ್ತುವರಿಯನ್ನು ತೆರವುಗೊಳಿಸುವಂತೆ ಅರಣ್ಯಾ­ಧಿಕಾರಿಗಳಿಗೆ ನೋಟಿಸ್‌ ನೀಡಿರುವ ವಾಲ್ನೂರು ಬಸವಣ್ಣ ದೇವರ ಬನದ ಪದಾಧಿಕಾರಿಗಳ ವಿರುದ್ಧ ಹರಿಹಾಯ್ದ ಎ.ಕೆ.ಸುಬ್ಬಯ್ಯ,  ದೇವರಕಾಡು ಪ್ರದೇಶ ಒತ್ತುವರಿಯಾಗಿದ್ದರೆ ಒತ್ತುವರಿದಾರರ ಪಟ್ಟಿ ನೀಡಲಿ. ಆದರೆ, ಪಟ್ಟಿಯನ್ನು ನೀಡದೇ ಕೇವಲ ಅರಣ್ಯಾಧಿಕಾರಿಗಳಿಗೆ ನೋಟಿಸ್‌ ಕೊಡುವುದರಿಂದ ಏನು ಪ್ರಯೋಜನ? ಎಂದು ಪ್ರಶ್ನಿಸಿದರು.ಮೇಲ್ನೋಟಕ್ಕೆ ಇದು ಢೋಂಗಿ ಪರಿಸರವಾದಿಗಳು ಹಾಗೂ ಅರಣ್ಯಾಧಿಕಾರಿಗಳ ಷಡ್ಯಂತ್ರದಂತೆ ಕಾಣುತ್ತಿದೆ. ಬಡವರನ್ನು, ನಿರಾಶ್ರಿತರನ್ನು  ಜಿಲ್ಲೆಯಿಂದ ಓಡಿಸುವ ತಂತ್ರವಾಗಿ ಕಾಣುತ್ತಿದೆ ಎಂದು ಅವರು ತಿಳಿಸಿದರು.ಕೊಡಗು ಸಣ್ಣ ಬೆಳೆಗಾರರ ಸಂಘದ ಅಧ್ಯಕ್ಷ ಚೇರಂಡ ನಂದ ಸುಬ್ಬಯ್ಯ, ವಕೀಲರಾದ ಕೆ.ಆರ್‌. ವಿದ್ಯಾಧರ್‌, ಕುಂಇ ಅಬ್ದುಲ್ಲಾ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry