ಶುಕ್ರವಾರ, ಮಾರ್ಚ್ 5, 2021
23 °C
ವಿಜಾಪುರ ಗಲಭೆ– 26 ಜನರ ಸೆರೆ

ಯತ್ನಾಳ ಕಾರಣ, ಬಂಧನಕ್ಕೆ ಕ್ರಮ– ಐಜಿಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯತ್ನಾಳ ಕಾರಣ, ಬಂಧನಕ್ಕೆ ಕ್ರಮ– ಐಜಿಪಿ

ವಿಜಾಪುರ: ಗುಂಪು ಘರ್ಷಣೆಯಿಂದ ನಲುಗಿ­ರುವ ವಿಜಾಪುರದಲ್ಲಿ ಮಂಗಳ­ವಾರ ಪರಿಸ್ಥಿತಿ ನಿಯಂತ್ರಣ­ದಲ್ಲಿ­ದ್ದರೂ, ಭಯದ ವಾತಾವರಣ ಮುಂದು­ವರಿದಿದೆ.ಸೋಮವಾರ ತಡರಾತ್ರಿ ಎರಡು ಬೈಕ್‌ಗಳಿಗೆ ಬೆಂಕಿ ಹಚ್ಚಲಾಗಿದೆ. ವದಂತಿಗಳ ಮೇಲಾಟದಿಂದ ನಗರದಲ್ಲಿ ಮಂಗಳವಾರ ಅಘೋಷಿತ ಬಂದ್‌ ಸ್ಥಿತಿ ನಿರ್ಮಾಣವಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಈವರೆಗೆ 26 ಜನರನ್ನು ಬಂಧಿಸಲಾಗಿದೆ.ಮಂಗಳವಾರ ಬೆಳಿಗ್ಗೆ ವ್ಯಾಪಾರಿ­ಗಳು ಅಂಗಡಿ­ಗಳನ್ನು ತೆರೆಯ­ಲಾರಂ­ಭಿಸಿ­ದ್ದರು. ಅಷ್ಟೊತ್ತಿ­ಗಾಗಲೇ ವದಂತಿ­ಗಳು ಹಬ್ಬಲಾರಂಭಿಸಿದವು. ಪೊಲೀಸ್‌ ಗಸ್ತು ವಾಹನಗಳು ತಿರುಗು­ತ್ತಿರು­ವು­ದನ್ನು ಕಂಡ ವರ್ತಕರು ಅಂಗಡಿಗಳನ್ನು ಮುಚ್ಚಿ­ಕೊಂಡು ಮನೆಗೆ ಹೋದರು. ಜನ ಮನೆಯಿಂದ ಹೊರಗೆ ಬರಲಿಲ್ಲ.ಬಾಗಲಕೋಟೆ, ಗದಗ, ಧಾರವಾಡ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಐಜಿಪಿ ಭಾಸ್ಕರ್‌­ರಾವ್‌ ನಗರದಲ್ಲಿ ಮೊಕ್ಕಾಂ ಹೂಡಿ­ದ್ದಾರೆ. 10 ಕೆಎಸ್‌ಆರ್‌ಪಿ, 10 ಡಿಎಆರ್‌ ತುಕಡಿ­ಗಳು ಹಾಗೂ ನೆರೆ ಜಿಲ್ಲೆಗಳ ಪೊಲೀಸ್‌ ಬಲವನ್ನು ಭದ್ರ­ತೆಗೆ ನಿಯೋಜಿಸಲಾಗಿದೆ.ಯತ್ನಾಳ ಕಾರಣ: ‘ಈ ಘರ್ಷಣೆಗೆ ಬಿಜೆಪಿ ಮುಖಂಡ ಬಸನಗೌಡ ಪಾಟೀಲ ಯತ್ನಾಳ ಅವರೇ ನೇರ ಹೊಣೆ. ಸಿಸಿ ಟಿವಿ ಮತ್ತು ವಿಡಿಯೊ ಚಿತ್ರೀಕರಣ ಪರಿಶೀಲಿಸಿದಾಗ ಯತ್ನಾಳ ಅವರ ಪಾತ್ರದ ಬಗ್ಗೆ ಪುರಾವೆ ಲಭ್ಯವಾಗಿವೆ. ಅವರ ವಿರುದ್ಧ ಗಂಭೀರ ಸ್ವರೂಪದ ಅಪರಾಧ ಪ್ರಕರಣ­ಗಳು ದಾಖಲಾಗಿವೆ. ತಲೆಮರೆಸಿ­ಕೊಂಡಿ­ರುವ ಅವರನ್ನು ಬಂಧಿಸ­ಲಾಗು­ವುದು’ ಎಂದು ಉತ್ತರ ವಲಯ ಐಜಿಪಿ ಭಾಸ್ಕರ್‌ ರಾವ್‌ ಹೇಳಿದರು.ಘರ್ಷಣೆಯಲ್ಲಿ ಪಾಲ್ಗೊಂಡ 100 ಜನರನ್ನು ಗುರುತಿಸಲಾಗಿದ್ದು,  ಐದು ಪೊಲೀಸ್‌ ತಂಡ ರಚಿಸಿ  26 ಜನರನ್ನು ಬಂಧಿ­ಸ­ಲಾಗಿದೆ. ಘಟನೆಗೆ ಸಂಬಂ­ಧಿ­ಸಿ­ದಂತೆ ಏಳು ಪ್ರಕರಣಗಳು ದಾಖ­ಲಾಗಿದ್ದು, ಅವುಗಳಲ್ಲಿ ನಾಲ್ಕು ಪ್ರಕ­ರಣ­ಗಳಲ್ಲಿ ಯತ್ನಾಳ ಅವರೇ ಮುಖ್ಯ ಆರೋಪಿಯಾಗಿದ್ದಾರೆ. ಅವರ ವಿರುದ್ಧ ಕೋಮು­ಗಲಭೆಗೆ ಪ್ರಚೋ­ದನೆ, ಪೊಲೀಸ್‌ ಕರ್ತವ್ಯಕ್ಕೆ ಅಡ್ಡಿ, ಕೊಲೆಗೆ ಯತ್ನ ಮತ್ತಿತರ ಪ್ರಕರಣಗಳ ಅಡಿ ಮೊಕ­­ದ್ದಮೆ ದಾಖಲಿಸಲಾಗಿದೆ ಎಂದರು.ಸಚಿವರ ಭೇಟಿ: ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಮಂಗಳವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ­ದರು. ಅಲ್ಲಿದ್ದ ತರಕಾರಿ ಮಾರುವ ಮಹಿಳೆ­ಯರು ಘಟನೆಯ ಮಾಹಿತಿ ನೀಡಿ ತಪ್ಪಿತಸ್ಥರ ಬಂಧನಕ್ಕೆ ಒತ್ತಾಯಿಸಿದರು.ಬಸನಗೌಡ ಪಾಟೀಲ ಯತ್ನಾಳರನ್ನು ಬಂಧಿಸುವಂತೆ ಒತ್ತಾಯಿಸಿ ಮಹಾನಗರ ಪಾಲಿಕೆಯ ಸದಸ್ಯರೊಬ್ಬರು ಸಚಿವರ ಕಾರಿನ ಎದುರು ಧರಣಿ ನಡೆಸಿದರು. ನಂತರ ಅಧಿಕಾರಿಗಳ ಸಭೆ ನಡೆಸಿದ ಸಚಿವರು, ನಗರದ ವರ್ತಕರ ಸಂಘಗಳ ಪದಾಧಿಕಾರಿಗಳನ್ನು ಸಂಪರ್ಕಿಸಿ ಶಾಂತಿ ಕಾಪಾಡುವಂತೆ ಮನವಿ ಮಾಡಿದರು.‘ಇದು ಕೋಮು ಗಲಭೆ ಅಲ್ಲವೇ ಅಲ್ಲ. ರಾಜಕೀಯ ಕಾರಣಗಳಿಂದಾಗಿ ಯತ್ನಾಳ ಅವರು ಒಂದು ಕೋಮಿನ ವಿರುದ್ಧ ನಿರಂತರವಾಗಿ ದ್ವೇಷದ ಮಾತುಗಳನ್ನಾಡುತ್ತಿದ್ದರು. ಯತ್ನಾಳ ಅವರ 7–8 ಜನ ಹಿಂಬಾಲಕರು ಈ ಕೃತ್ಯವೆಸಗಿದ್ದು, ಇಲ್ಲಿ ಕ್ರಿಯೆ ಮತ್ತು ಪ್ರತಿಕ್ರಿಯೆ ಎರಡೂ ಘಟಿಸಿವೆ. ಘಟನೆಗೆ ಯತ್ನಾಳ ಅವರೇ  ನೇರ ಹೊಣೆಗಾರರು. ತಪ್ಪಿತಸ್ಥರು ಯಾರೇ ಇದ್ದರೂ ಬಂಧಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.