ಯಥಾಸ್ಥಿತಿವಾದಿಗಳಿಂದ ಶ್ರೇಣೀಕೃತ ಸಮಾಜದ ಪೋಷಣೆ

7

ಯಥಾಸ್ಥಿತಿವಾದಿಗಳಿಂದ ಶ್ರೇಣೀಕೃತ ಸಮಾಜದ ಪೋಷಣೆ

Published:
Updated:

ಕಡೂರು: ಮನುಸ್ಮೃತಿಯ ಆಧಾರದಲ್ಲಿ ವರ್ಗಗಳನ್ನು ಸೃಷ್ಟಿಸಿದ ಪಟ್ಟಭದ್ರ ಹಿತಾಸಕ್ತಿಗಳು ಇಂದಿಗೂ ಶ್ರೇಣೀಕೃತ ,ಸಮಾಜವನ್ನು ಪೋಷಿಸುತ್ತಿವೆ ಎಂದು ವಿಧಾನಸಭೆ ಮಾಜಿ ಅಧ್ಯಕ್ಷ ರಮೇಶ್‌ಕುಮಾರ್ ಹೇಳಿದರು.ಕಡೂರಿನಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ನಾಲ್ಕನೇ ದಿನ ಗುರುವಾರ ಅವರು ಮಾತನಾಡಿದರು.ಸಮಾಜವನ್ನು ತಮ್ಮ ಅನುಕೂಲಕ್ಕೆ ತಿದ್ದಿಕೊಂಡವರು ಸಮಾಜ ಸುಧಾರಕರಾಗಲು ಸಾಧ್ಯವಿಲ್ಲ. ಇನ್ನೊಬ್ಬರ ಬೆವರಿನಿಂದ ಬದುಕುವ ಸ್ಥಾಪಿತ ಹಿತಾಸಕ್ತಿಗಳ ಬುನಾದಿ ಭದ್ರವಾಗಿದೆ.ಈ ಮೌಢ್ಯದಿಂದ ಜನರನ್ನು ಹೊರಗೆ ತರುವ ಕೆಲಸ ಗುರುಗಳ ಮಾರ್ಗದರ್ಶನದಲ್ಲಿ ನಡೆಯಬೇಕಿದೆ ಎಂದರು.

ಬಸವಣ್ಣ ಅಂದಿನ ರಾಜಕೀಯ ಮುತ್ಸದ್ದಿ. ತನ್ನ ಸಮಕಾಲೀನ ಸಮಾಜದ ಹೊಸ ಆಯಾಮ ನೀಡಿದವರು. ಇಂದೂ ಬಸವ, ಗಾಂಧಿ, ಲೋಹಿಯಾವಾದ ಪ್ರಸ್ತುತ ಎಂದು ನುಡಿದರು.12ನೇ ಶತಮಾನದಲ್ಲಿ ಸಂಕುಚಿತ ಸಂಪ್ರದಾಯ ಮತ್ತು ಸಂಪ್ರದಾಯ ವಾದಿಗಳ ವಿರುದ್ಧ ಹೋರಾಡಿದ ಶರಣರ ಪಂಥವನ್ನು ಅನುಸರಿಸಿ ಬೆಳೆದವರು, ಇಂದು ಅದೇ ವೈದಿಕಶಾಹಿಯ ಮೊರೆ ಹೋಗಿರುವುದು ಸೋಜಿಗದ ಸಂಗತಿಯಾಗಿದೆ. ಕೆಸರಿನಲ್ಲಿ ಕಮಲದಂತೆ ಹುಟ್ಟಿದ ಬಸವ ಅಂದೇ ತನ್ನ ಸುತ್ತಲಿನ ಪರಿಸರದಿಂದ ಅಸಹ್ಯಗೊಂಡು ಹೊರಬಂದ.

 

ಆದರೆ, ಪಂಥಗಳನ್ನು ಮೆಟ್ಟಿಲಾಗಿಸಿಕೊಂಡವರ ಜತೆಯಲ್ಲಿ ಅವರ ಅನುಯಾಯಿಗಳು ಗುರುತಿಸಿಕೊಳ್ಳುತ್ತಿರುವುದು ವಿಪರ್ಯಾಸ ಎಂದು ವಿಷಾದಿಸಿದರು.ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮಾತನಾಡಿ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಕನ್ನಡ ಭಾಷೆಗೆ ಕುತ್ತು ಬಂದಿದೆ. ಆದರೆ, ಗ್ರಾಮೀಣ ಜನರ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಕಾರಣದಿಂದ ಕನ್ನಡ ಅಳಿಸಲಾಗದ ಭಾಷೆಯಾಗಿದೆ.ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ಆಧಾರದಲ್ಲಿ ಭಾಷಾವಾರು ಪ್ರಾಂತ್ಯಗಳು ರಚನೆಯಾದವು. ಆದರೆ, ಇಂದು ಕನ್ನಡ ಆಡಳಿತ ಭಾಷೆಯಾಗಲು ಸಾದ್ಯವಾಗಿಲ್ಲ. ಶಿಕ್ಷಣ ರಾಷ್ಟ್ರೀಯ ನೀತಿಯಾಗಲಿ. ಗಡಿನಾಡಿನ ಪರ ಭಾಷಿಕರು ಅವರ ಭಾಷೆಯನ್ನೂ ಕಲಿಯಲಿ ಮತ್ತು ತಾವು ಎಲ್ಲಿ ಬದುಕು ಕಟ್ಟಿಕೊಂಡಿದ್ದಾರೋ ಆ ಭಾಷೆಗೆ ಗೌರವ ನೀಡಿ ಒಂದು ವಿಷಯವಾಗಿ ಕಲಿಯಲಿ ಎಂದರು.ಭಾಷೆ ಹೆಸರಿನಲ್ಲಿ ದಬ್ಬಾಳಿಕೆ ನಡೆದಿದ್ದು, ಜಗತ್ತಿನ 6ಸಾವಿರ ಭಾಷೆಗಳಲ್ಲಿ 15 ದಿನಕ್ಕೊಂದು ಭಾಷೆ ಇಂಗ್ಲಿಷ್ ವ್ಯಾಮೋಹದಿಂದ ನಾಶವಾಗುತ್ತಿದೆ. ಇದು ತಪ್ಪಬೇಕು. ರಾಜ್ಯದಲ್ಲಿ ಮಕ್ಕಳ ಕೊರತೆಯಿಂದ ಕನ್ನಡ ಶಾಲೆಗಳು ಮುಚ್ಚುವುದು ಅನಿವಾರ್ಯ. ಆದರೆ, ಅದೇ ಪರಿಹಾರವಲ್ಲ. ಸರ್ಕಾರ ಮೊದಲು ಮೂಲಸೌಕರ್ಯ ಅಭಿವೃದ್ಧಿಗೊಳಿಸಿ ನಂತರ ಗುಣಾತ್ಮಕ ಶಿಕ್ಷಣ ನೀಡುವತ್ತ ಗಮನ ಹರಿಸಲಿ ಎಂದು ಸಲಹೆ ನೀಡಿದರು.ಭದ್ರಾವತಿಯ ಪ್ರವಚನಕಾರ್ತಿ ಗಂಗಾಂಬಿಕಾ ಬಸವರಾಜ್ ಮಾತನಾಡಿ, ಶರಣರು ಜಾತಿ ಮತ ಪಂಥಗಳನ್ನು ಒಂದೆಡೆ ಸಮಾವೇಶಗೊಳಿಸಿ ವೈಚಾರಿಕ ಕ್ರಾಂತಿ ನಡೆಸಿದ್ದು ಅನುಭವ ಮಂಟಪದ ಸಾಧನೆ. ವಚನಗಳೆಂದರೆ ತನ್ನ ಆತ್ಮದ ಬೆಳಕನ್ನು ಸಾಹಿತ್ಯವಾಗಿಸಿದ ಸಾಧಕರ ನುಡಿ ಎಂದರು.ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ, ನಾಟಕ ಅಕಾಡೆಮಿ ಅಧ್ಯಕ್ಷ ಬಿ.ವಿ. ರಾಜಾರಾಂ, ಪತ್ರಕರ್ತ ರಾಜಶೇಖರ ಕೋಟಿ, ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿದರು.

ತರಳಬಾಳು ಪೀಠದ ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಯಳನಾಡು ಮಠದ ಜ್ಞಾನಪ್ರಭು ಸಿದ್ದರಾಮ ಸ್ವಾಮೀಜಿ, ಮಂಗಳೂರು ರಾಮಕೃಷ್ಣಾಶ್ರಮದ ಕ್ಷಿತೀಶಾನಂದ ಸ್ವಾಮಿ ಇತರರು  ಹಾಜರಿದ್ದರು.    

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry