ಯದುಗಿರಿಗೆ ಇಲ್ಲ ಕನ್ನಡ ಭವನದ ಭಾಗ್ಯ

7

ಯದುಗಿರಿಗೆ ಇಲ್ಲ ಕನ್ನಡ ಭವನದ ಭಾಗ್ಯ

Published:
Updated:

ಯಾದಗಿರಿ: ರಾಜ್ಯದ 30 ನೇ ಜಿಲ್ಲೆಗೆ ಇದು ಎರಡನೇ ರಾಜ್ಯೋತ್ಸವದ ಸಂಭ್ರಮ. ಎರಡು ವರ್ಷ ಕಳೆದು ಮೂರನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಜಿಲ್ಲೆಯಲ್ಲಿ ಇದುವರೆಗೂ ಕನ್ನಡದ ಕಾರ್ಯಕ್ರಮಗಳಿಗೆ ಒಂದೇ ಒಂದು ವೇದಿಕೆಯೂ ಇಲ್ಲದಾಗಿದೆ!ರಾಜ್ಯೋತ್ಸವದ ಸಂಭ್ರಮ ಎಲ್ಲೆಡೆ ಮನೆ ಮಾಡುತ್ತಿದೆ. ಇದಕ್ಕಾಗಿಯೇ ಪೂರ್ವ ಸಿದ್ಧತಾ ಸಭೆಗಳೂ ನಡೆಯುತ್ತಿವೆ. ಕನ್ನಡ ತಾಯಿ ಭುವನೇಶ್ವರಿಯನ್ನು ಸ್ಮರಿಸುವ ಸಂಭ್ರಮದ ಕ್ಷಣವನ್ನು ವಿಜೃಂಭಣೆಯಿಂದ ಆಚರಿಸಲು ಕನ್ನಡದ ಜನರು ಸಜ್ಜಾಗುತ್ತಿದ್ದಾರೆ. ಆದರೆ ಯದುಗಿರಿಯಲ್ಲಿ ಮಾತ್ರ ಕನ್ನಡದ ರಾಜ್ಯೋತ್ಸವ ಎಂದಿನಂತೆ ಔಪಚಾರಿಕವಷ್ಟೇ ಎನ್ನುವಂತಾಗಿದೆ.ಕರ್ನಾಟಕದ 30 ನೇ ಜಿಲ್ಲೆಯಾಗಿರುವ ಯಾದಗಿರಿಯ ಜಿಲ್ಲಾ ಕೇಂದ್ರದಲ್ಲಿ ಇದುವರೆಗೂ ಕನ್ನಡದ ಕಾರ್ಯಕ್ರಮಗಳಿಗಾಗಲಿ, ಕನ್ನಡ ಪರ ಚಟುವಟಿಕೆಗಳನ್ನು ನಡೆಸಲು ಸುಸಜ್ಜಿತವಾದ ಒಂದು ವೇದಿಕೆಯೂ ಇಲ್ಲದಾಗಿದೆ. ಕನ್ನಡ ಭವನವಾಗಲಿ, ಕನ್ನಡ ಸಾಹಿತ್ಯ ಪರಿಷತ್ ಭವನವಾಗಲಿ ಇನ್ನೂ ತಲೆ ಎತ್ತದೇ ಇರುವುದು ಕನ್ನಡದ ಅಭಿಮಾನಿಗಳಲ್ಲಿ ತೀವ್ರ ನಿರಾಸೆಯನ್ನು ಉಂಟು ಮಾಡಿದೆ.ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ಯಾದಗಿರಿಯಲ್ಲಿ ಕನ್ನಡವನ್ನು ಕಟ್ಟಿ ಬೆಳೆಸುವ ಕೆಲಸ ಆಗಬೇಕು. ಆದರೆ ಕನ್ನಡಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಜಿಲ್ಲಾ ಕೇಂದ್ರದಲ್ಲಿಯೇ ಒಂದು ಸೂರು ಇಲ್ಲದಂತಾಗಿದೆ.

ಯಾವುದೇ ಸಂಘಟನೆಗಳು ಕನ್ನಡದ ಕಾರ್ಯಕ್ರಮ ಹಮ್ಮಿಕೊಂಡರೂ, ಖಾಸಗಿ ಕಲ್ಯಾಣ ಮಂಟಪಗಳಿಗೆ ಸಾವಿರಾರು ರೂಪಾಯಿ ಬಾಡಿಗೆ ನೀಡಬೇಕಾಗುತ್ತಿದೆ. ಹೀಗಾಗಿ ಕೆಲ ಸಂಘಟನೆಗಳು ಮಾತ್ರ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ಬಹುತೇಕ ಕನ್ನಡಪರ ಕಾರ್ಯಕ್ರಮಗಳು ಇಲ್ಲದಂತಾಗಿದೆ ಎಂದು ನಗರದ ಕನ್ನಡಾಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.ಶಂಕು ಸ್ಥಾಪನೆಯೂ ಇಲ್ಲ:

ಜಿಲ್ಲೆಯಾಗಿ ಎರಡು ವರ್ಷ ಕಳೆಯುತ್ತ ಬಂದಿದೆ. ಇದುವರೆಗೆ ಜಿಲ್ಲೆಯ ಅಭಿವೃದ್ಧಿಗಾಗಿ ವಿಶೇಷ ಅನುದಾನಗಳೂ ಬಿಡುಗಡೆ ಆಗಿವೆ. ವಿವಿಧ ಭವನಗಳ ಶಂಕುಸ್ಥಾಪನೆಯೂ ನೆರವೇರಿದೆ. ಆದರೆ ಕನ್ನಡ ಭವನದ ಶಂಕುಸ್ಥಾಪನೆ ನೆರವೇರುವುದಿರಲಿ, ಅದಕ್ಕೆ ನಿವೇಶನವನ್ನೂ ಹುಡುಕಿಲ್ಲ ಎಂದು ಜನರು ದೂರುತ್ತಿದ್ದಾರೆ.ಕಳೆದ ತಿಂಗಳಷ್ಟೇ ಜಿಲ್ಲೆಗೆ ಆಗಮಿಸಿದ್ದ ಮುಖ್ಯಮಂತ್ರಿ ಜಗದೀಶ ಶೆಟ್ಟರ, ವಾಲ್ಮೀಕಿ ಭವನ, ಬಾಬು ಜಗಜೀವನರಾಮ ಭವನ, ಪತ್ರಿಕಾ ಭವನ, ಆಡಳಿತ ಸಂಕೀರ್ಣಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಆದರೆ ಅಲ್ಲಿ ಕನ್ನಡ ಭವನದ ಮಾತೇ ಕೇಳಿ ಬರಲಿಲ್ಲ.ಈ ಬಗ್ಗೆ ಕೇಳಬೇಕಾದವರೂ ಮೌನ ವಹಿಸಿದರು. ಜಿಲ್ಲೆಯಲ್ಲಿ ಕನ್ನಡದ ಏಳ್ಗೆಗೆ ಶ್ರಮಿಸಬೇಕಾದ ಕನ್ನಡ ಸಾಹಿತ್ಯ ಪರಿಷತ್ತೂ ಇಲ್ಲಿಯವರೆಗೆ ಕನ್ನಡ ಭವನದ ಬಗ್ಗೆ ಚಕಾರ ಎತ್ತದೇ ಇರುವುದು ನಿಜಕ್ಕೂ ದುರದೃಷ್ಟಕರ ಎನ್ನುತ್ತಾರೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ ಅಧ್ಯಕ್ಷ ಟಿ.ಎನ್. ಭೀಮುನಾಯಕ.ಕನ್ನಡ ನಾಡಿನ ಗತ ವೈಭವವನ್ನು ಸಾರುವ ಜಿಲ್ಲೆಯಲ್ಲಿ ಕನ್ನಡಕ್ಕಾಗಿ ಒಂದೇ ಒಂದು ಕಟ್ಟಡ ಇಲ್ಲದಿರುವುದು ನಿಜಕ್ಕೂ ಖೇದದ ಸಂಗತಿ. ತಾಲ್ಲೂಕು ಕೇಂದ್ರವಾದ ಶಹಾಪುರ, ಯಾದಗಿರಿ ತಾಲ್ಲೂಕಿನ ಸೈದಾಪುರದಲ್ಲಿ ಕನ್ನಡದ ಕಾರ್ಯಕ್ರಮಗಳಿಗಾಗಿ ಕಟ್ಟಡಗಳು ತಲೆ ಎತ್ತುತ್ತಿವೆ.ಆದರೆ ಜಿಲ್ಲಾ ಕೇಂದ್ರದಲ್ಲಿ ಕನ್ನಡ ಭವನ ನಿರ್ಮಾಣಕ್ಕಾಗಿಯೇ ರೂ. ಒಂದು ಕೋಟೆ ಮೀಸಲಿಡಲಾಗಿದೆ. ಆದರೆ ಆ ಅನುದಾನವನ್ನು ಖರ್ಚು ಮಾಡುತ್ತಿಲ್ಲ ಏಕೆ ಎಂದು ಕೇಳುವವರಿಲ್ಲ. ಈ ಬಗ್ಗೆ ಶಾಸಕರೂ ಮೌನ ವಹಿಸಿರುವುದು ಸರಿಯಲ್ಲ ಎಂದು ಹೇಳುತ್ತಾರೆ.ಗಡಿ ಭಾಗದ ನಾಡಿನಲ್ಲಿ ಕನ್ನಡವನ್ನು ಕಟ್ಟಿ ಬೆಳೆಸುವ ಕೆಲಸವನ್ನು ಸರ್ಕಾರ ಮಾಡಬೇಕು. ಸೈದಾಪುರ ನಿಲ್ದಾಣದಲ್ಲಿರುವ ನಾರಾಯಣಪೇಟ್ ರೈಲು ನಿಲ್ದಾಣವೆಂಬ ನಾಮಫಲಕ ತೆಗೆದುಹಾಕುವಂತೆ ಪದೇ ಪದೇ ಮನವಿ ಮಾಡಲಾಗುತ್ತಿದೆ. ಅದೂ ಆಗುತ್ತಿಲ್ಲ. ಇನ್ನು ಜಿಲ್ಲಾ ಕೇಂದ್ರದಲ್ಲಿ ಕನ್ನಡಕ್ಕಾಗಿಯೇ ಒಂದು ಸೂರು ಒದಗಿಸುವುದಕ್ಕೂ ಸರ್ಕಾರ ಮುಂದಾಗುತ್ತಿಲ್ಲ.ಹೀಗಾಗಿ ಈ ನಾಡಿನಲ್ಲಿ ಕನ್ನಡ ಉಳಿಯಲು ಸಾಧ್ಯವೇ? ಅತ್ತ ತೆಲಗಿನ ಪ್ರಭಾವಕ್ಕೆ ಒಳಗಾಗಿ ಈಗಾಗಲೇ ಹಲವಾರು ಹಳ್ಳಿಗಳಲ್ಲಿ ಕನ್ನಡ ಮಾಯವಾಗಿದೆ. ಹೀಗೆ ಬಿಟ್ಟರೆ ಯಾದಗಿರಿಯಲ್ಲೂ ತೆಲುಗು ಭಾಷೆಯೇ ಕೇಳಿ ಬರಲಿದೆ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಸಾಹಿತ್ಯ ಪರಿಷತ್ತಿನವರು ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಬೇಕು ಎನ್ನುತ್ತಾರೆ ಕರ್ನಾಟಕ ರಕ್ಷಣಾ ವೇದಿಕೆ (ಶೆಟ್ಟಿಬಣ) ಉತ್ತರ ಕರ್ನಾಟಕ ಘಟಕದ ಅಧ್ಯಕ್ಷ ಶರಣು ಗದ್ದುಗೆ.ಈ ಬಾರಿಯ ರಾಜ್ಯೋತ್ಸವ ಸಮಾರಂಭದಲ್ಲಿ ಕನ್ನಡ ಭವನದ ಬಗ್ಗೆ ಒಂದು ನಿರ್ಧಾರವನ್ನು ಸರ್ಕಾರ, ಜಿಲ್ಲಾಡಳಿತ ಪ್ರಕಟಿಸಲೇಬೇಕು. ಇಲ್ಲವಾದರೇ ಸರ್ಕಾರದ ಮಟ್ಟದಲ್ಲಿಯೇ ಕನ್ನಡಪರ ಸಂಘಟನೆಗಳು ಹೋರಾಟಕ್ಕೆ ಸಿದ್ಧವಾಗಬೇಕಾಗುತ್ತದೆ ಎಂದು ಹೇಳುತ್ತಾರೆ.ಕನ್ನಡಿಗರ ಆಶಯಗಳನ್ನು ವ್ಯಕ್ತಪಡಿಸುವ ಒಂದು ವೇದಿಕೆ ಒದಗಿಸುವ ಕೆಲಸವನ್ನು ಸರ್ಕಾರ ಕೂಡಲೇ ಮಾಡಬೇಕು. ಈ ಬಾರಿ ರಾಜ್ಯೋತ್ಸವದ ಸಮಾರಂಭದಲ್ಲಾದರೂ ಈ ಕಾರ್ಯ ಆರಂಭವಾಗಲಿ ಎನ್ನುವುದು ನಗರದ ಜನತೆಯ ಮನವಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry