ಭಾನುವಾರ, ಜನವರಿ 19, 2020
28 °C

ಯದ್ವಾತದ್ವಾ ಬಸ್ ಚಲಾವಣೆ: 9 ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುಣೆ (ಪಿಟಿಐ): ರೊಚ್ಚಿಗೆದ್ದ ಬಸ್ ಚಾಲಕನೊಬ್ಬ ಇಲ್ಲಿನ ಜನದಟ್ಟಣೆಯ ಬೀದಿಯಲ್ಲಿ ಯದ್ವಾತದ್ವಾ ಬಸ್ ನುಗ್ಗಿಸಿದ್ದರಿಂದ ಪಾದಚಾರಿಗಳು ಸೇರಿದಂತೆ 9 ಮಂದಿ ಸಾವಿಗೀಡಾಗಿ, 27 ಜನ ಗಾಯಗೊಂಡ ಘಟನೆ ಬುಧವಾರ ನಡೆದಿದೆ.ಪುಣೆ- ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರವೇಶ ಅನುಮತಿ ಇಲ್ಲದ ಕಡೆಯಿಂದ ಬಸ್ ಚಲಾಯಿಸಿಕೊಂಡು ಬಂದ ಮಹಾರಾಷ್ಟ್ರ ರಾಜ್ಯ ನಿಗಮಕ್ಕೆ ಸೇರಿದ ಬಸ್ ಚಾಲಕ, ಏಕಾಏಕಿ ನಗರದ ಹೃದಯಭಾಗದ ಸ್ವರ್ಗೇಟ್ ಪ್ರದೇಶಕ್ಕೆ ನುಗ್ಗಿದ. ಆಗ ಎದುರಿನಿಂದ ಬರುತ್ತಿದ್ದ ವಾಹನಗಳು, ಪಾದಚಾರಿಗಳು ಎಲ್ಲರ ಮೇಲೂ ಬಸ್ ಹರಿಯಿತು. ಈ ದಿಢೀರ್ ಘಟನೆಯಿಂದ ಆಘಾತಗೊಂಡ ಜನ ದಿಕ್ಕಾಪಾಲಾಗಿ ಓಡಿದರು. ಹತ್ತಾರು ವಾಹನಗಳು ಜಖಂಗೊಂಡವು, ಕೆಲವರು ಸ್ಥಳದಲ್ಲೇ ಸಾವಿಗೀಡಾದರು.ಕೆಲವು ಗಂಟೆಗಳ ಪ್ರಯತ್ನದ ಬಳಿಕ, 30 ವರ್ಷದ ಚಾಲಕ ಸಂತೋಷ್ ಮಾನೆಯನ್ನು ಪೊಲೀಸರು ಬಂಧಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಹತ್ತು ಸುತ್ತು ಗುಂಡು ಹಾರಿಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.ಚಾಲಕ ಆ ಸಂದರ್ಭದಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ ಎಂದು ಹೇಳಲಾಗಿದೆಯಾದರೂ, ಆತನನ್ನು ವಿಚಾರಣೆಗೆ ಒಳಪಡಿಸಿದ ಬಳಿಕವಷ್ಟೇ ನಿಜ ಸ್ಥಿತಿ ತಿಳಿಯಲಿದೆ ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಸತ್‌ಪಾಲ್ ಸಿಂಗ್ ಹೇಳಿದ್ದಾರೆ.ಈ ಕೃತ್ಯದ ಹಿಂದೆ ಭಯೋತ್ಪಾದನೆ ಶಂಕೆಯನ್ನು ಪುಣೆ ಪೊಲೀಸ್ ಆಯುಕ್ತ ಮೀರನ್ ಬೊರ‌್ವಾಂಕರ್ ಅಲ್ಲಗಳೆದಿದ್ದಾರೆ. ಸಂತೋಷ್ ವಾಹನ ಚಾಲನೆಯ ಪರವಾನಗಿ ಹೊಂದಿದ್ದ, ಅಲ್ಲದೆ ಆತ ಕೆಲಸದಿಂದ ವಜಾಗೊಂಡಿರಲಿಲ್ಲ. ಮಂಗಳವಾರ ಸಂಜೆ 7.30ಕ್ಕೆ ಕೆಲಸ ಮುಗಿಸಿದ್ದ ಆತ ಬುಧವಾರ ಬೆಳಗಿನ ಜಾವ 8.15ಕ್ಕೆ ಸತಾರಾ ಡಿಪೊದಿಂದ ಬಸ್ ಏರಿದ್ದ ಎಂದು ಅವರು ಮಾಹಿತಿ ನೀಡಿದ್ದಾರೆ.

ಪ್ರತಿಕ್ರಿಯಿಸಿ (+)